ನಿಮ್ಮ ವೇತನಕ್ಕೆ ಎಷ್ಟು ಆದಾಯ ತೆರಿಗೆ ಬೀಳುತ್ತೆ? ಲೆಕ್ಕಾಚಾರ ಹೇಗೆ? ಇಲ್ಲಿದೆ ಮಾಹಿತಿ
ತಮಗೆ ಬರುವ ವೇತನಕ್ಕೆ ಎಷ್ಟು ಆದಾಯ ತೆರಿಗೆ ಪಾವತಿಸಬೇಕು ಎಂಬ ಲೆಕ್ಕಾಚಾರ ಬಹುತೇಕರಿಗೆ ಗೊತ್ತಿಲ್ಲ.ಆದ್ರೆ, ಈ ಮಾಹಿತಿ ತಿಳಿದ್ರೆ ಆದಾಯ ತೆರಿಗೆ ಲೆಕ್ಕ ಹಾಕೋದು ಬಹಳ ಸರಳ.
Business Desk: 2024ನೇ ಸಾಲಿಗೆ ಈಗಾಗಲೇ ಕಾಲಿಟ್ಟಿದ್ದೇವೆ. ಹೀಗಾಗಿ ಆದಾಯ ತೆರಿಗೆ ಬಗ್ಗೆ ಯೋಚಿಸಲು ಇದು ಸರಿಯಾದ ಸಮಯ. ಈಗಾಗಲೇ ಆದಾಯತೆರಿಗೆ ಇಲಾಖೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಫಾರಂಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ 2023-24ನೇ ಸಾಲಿನಲ್ಲಿ ಗಳಿಸಿದ ಆದಾಯಕ್ಕೆ ರಿಟರ್ನ್ಸ್ ಸಲ್ಲಿಕೆ ಮಾಡಲು ಈಗಲೇ ತಯಾರಿ ನಡೆಸಬಹುದು. ವೇತನ ಪಡೆಯುವ ಬಹುತೇಕ ಜನರಿಗೆ ಆದಾಯ ತೆರಿಗೆ ಲೆಕ್ಕ ಹಾಕೋದು ಸ್ವಲ್ಪ ಕಷ್ಟದ ಕೆಲಸವಾಗಿಯೇ ಕಾಣಿಸುತ್ತದೆ. ಇದೇ ಕಾರಣಕ್ಕೆ ಕೆಲವರು ಐಟಿಆರ್ ರಿಟರ್ನ್ ಸಲ್ಲಿಕೆ ಮಾಡುವ ಕಾರ್ಯವನ್ನು ಅಂತಿಮ ಗಡುವಿನ ತನಕ ಮುಂದೂಡುತ್ತಾರೆ. ಬಹುತೇಕರಿಗೆ ಆದಾಯ ತೆರಿಗೆ ಲೆಕ್ಕಾಚಾರ ಅಂದ್ರೆ ಕಬ್ಬಿಣದ ಕಡಲೆಯೆಂದೇ ಹೇಳಬಹುದು. ಆದರೆ, ನಿಮ್ಮ ವೈಯಕ್ತಿಕ ಹಣಕಾಸನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಹಾಗೂ ತೆರಿಗೆ ನಿಯಮಗಳನ್ನು ಪಾಲಿಸಲು ತೆರಿಗೆ ಲೆಕ್ಕಾಚಾರದ ಪ್ರಕ್ರಿಯೆಯನ್ನು ಅರಿಯೋದು ಅತ್ಯವಶ್ಯಕ. ಹಾಗಾದ್ರೆ ವೇತನದ ಮೇಲೆ ಆದಾಯ ತೆರಿಗೆ ಲೆಕ್ಕ ಹಾಕೋದು ಹೇಗೆ?
ಆದಾಯ ತೆರಿಗೆ ಲೆಕ್ಕಾಚಾರದ ಗೈಡ್ ಹೀಗಿದೆ:
ಹಂತ1: ಒಟ್ಟು ವೇತನ ನಿರ್ಧರಿಸಿ
ಮೊದಲಿಗೆ ನಿಮ್ಮ ಒಟ್ಟು ವೇತನವನ್ನು ಗುರುತಿಸಿ. ಗ್ರಾಸ್ ಸ್ಯಾಲರಿ ಅಥವಾ ಒಟ್ಟು ವೇತನದಲ್ಲಿ ಮೂಲ ವೇತನ ( Basic salary, ಭತ್ಯೆಗಳು ( allowances), ಬೋನಸ್ (bonuses) ಹಾಗೂ ತೆರಿಗೆ ವ್ಯಾಪ್ತಿಗೊಳಪಡುವ ಇತರ ವಿಷಯಗಳು ಇರುತ್ತವೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಈಗಿನಿಂದಲೇ ಅವಕಾಶ: ಫಾರಂ ಬಿಡುಗಡೆ ಮಾಡಿದ ತೆರಿಗೆ ಇಲಾಖೆ
ಹಂತ 2: ವಿನಾಯ್ತಿಗಳನ್ನು ಗುರುತಿಸಿ
ನಿಮ್ಮ ವೇತನದ ನಿರ್ದಿಷ್ಟ ಭಾಗಗಳು ಆದಾಯ ತೆರಿಗೆಯಿಂದ ವಿನಾಯ್ತಿ ಪಡೆದಿವೆ. ಈ ವಿನಾಯ್ತಿಗಳಲ್ಲಿ ಮನೆ ಬಾಡಿಗೆ ಭತ್ಯೆ (ಎಚ್ ಆರ್ ಎ), ರಜೆ ಪ್ರಯಾಣ ಭತ್ಯೆ (ಎಲ್ ಟಿಎ) ಹಾಗೂ ಸ್ಟ್ಯಾಂಡರ್ಡ್ ಕಡಿತಗಳು ಸೇರಿವೆ. ಈ ವಿನಾಯ್ತಿಗಳನ್ನು ನಿಮ್ಮ ಒಟ್ಟು ವೇತನದಿಂದ ಕಡಿತಗೊಳಿಸಿ. ಆಗ ನಿಮಗೆ ತೆರಿಗೆ ವ್ಯಾಪ್ತಿಗೊಳಪಡುವ ವೇತನ ಎಷ್ಟೆಂದು ತಿಳಿಯುತ್ತದೆ.
ಹಂತ 3: ಕಡಿತಗಳನ್ನುಲೆಕ್ಕ ಹಾಕಿ
ಆದಾಯ ತೆರಿಗೆ ಕಾಯ್ದೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಲಭ್ಯವಿರುವ ಕಡಿತಗಳ ( Deductions)ಬಗ್ಗೆ ಮಾಹಿತಿ ಪಡೆಯಿರಿ. ಉದಾಹರಣೆಗೆ ಸೆಕ್ಷನ್ 80ಸಿ (ಪ್ರಾವಿಡೆಂಟ್ ಫಂಡ್, ಪಿಪಿಎಫ್ ಅಥವಾ ಜೀವ ವಿಮ ಹೂಡಿಕೆ), ಸೆಕ್ಷನ್ 80ಡಿ (ಆರೋಗ್ಯ ವಿಮಾ ಪ್ರೀಮಿಯಂ) ಹಾಗೂ ಸೆಕ್ಷನ್ 24ಬಿ (ಗೃಹ ಸಾಲ ಬಡ್ಡಿದರ) ಅಡಿಯಲ್ಲಿ ತೆರಿಗೆ ಕಡಿತಗಳು ಲಭ್ಯವಿವೆ. ಈ ಕಡಿತಗಳನ್ನು ನಿಮ್ಮ ತೆರಿಗೆ ವ್ಯಾಪ್ತಿಗೊಳಪಡುವ ವೇತನದಿಂದ ಕಳೆಯಿರಿ. ಆಗ ನಿಮೆ ನಿವ್ವಳ ತೆರಿಗೆಗೊಳಪಡುವ ಆದಾಯ (net taxable income) ಲಭ್ಯವಾಗುತ್ತದೆ.
ಹಂತ 4: ತೆರಿಗೆಗೊಳಪಡುವ ಆದಾಯ ನಿರ್ಧರಿಸಿ
ವಿನಾಯ್ತಿಗಳು ಹಾಗೂ ಕಡಿತಗಳನ್ನು ಪರಿಗಣಿಸಿದ ಬಳಿಕ ತೆರಿಗೆ ವ್ಯಾಪ್ತಿಗೊಳಪಡುವ ಆದಾಯ ಸಿಗುತ್ತದೆ.
ಹಂತ 5: ಆದಾಯ ಸ್ಲಾಬ್ ಗಳು ಹಾಗೂ ತೆರಿಗೆ ದರಗಳು
ಭಾರತ ಪ್ರಗತಿಪರ ತೆರಿಗೆ ವ್ಯವಸ್ಥೆಯನ್ನು ಅನುಸರಿಸುತ್ತದೆ. ವಿವಿಧ ಆದಾಯ ಸ್ಲಾಬ್ ಗಳು ಹಾಗೂ ಸಂಬಂಧಪಟ್ಟ ತೆರಿಗೆ ದರಗಳನ್ನು ನಿರ್ಧರಿಸಿ. ಆ ಬಳಿಕ ನಿಮ್ಮ ತೆರಿಗೆಗೊಳಪಡುವ ಆದಾಯಕ್ಕೆ ಯಾವ ಸ್ಲಾಬ್ ಅನ್ವಯಿಸುತ್ತದೋ ಅದಕ್ಕೆ ಅನುಗುಣವಾಗಿ ತೆರಿಗೆ ಲೆಕ್ಕ ಹಾಕಿ.
ಹಂತ 6: ತೆರಿಗೆ ಎಷ್ಟೆಂದು ಲೆಕ್ಕ ಹಾಕಿ
ಪ್ರತಿ ಸ್ಲಾಬ್ ಗೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ಲೆಕ್ಕ ಮಾಡಿ ಹಾಗೂ ಆ ಬಳಿಕ ನಿಮ್ಮ ಒಟ್ಟು ತೆರಿಗೆ ವ್ಯಾಪ್ತಿಗೊಳಪಡುವ ಆದಾಯಕ್ಕೆ ಎಷ್ಟು ತೆರಿಗೆ ಎಂಬುದರ ಲೆಕ್ಕಾಚಾರ ಮಾಡಿ. ಆಗ ನಿಮಗೆ ಒಟ್ಟು ಎಷ್ಟು ಆದಾಯ ತೆರಿಗೆ ಪಾವತಿಸಬೇಕು ಎಂಬುದರ ಲೆಕ್ಕ ಸಿಗುತ್ತದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಈಗಿನಿಂದಲೇ ಅವಕಾಶ: ಫಾರಂ ಬಿಡುಗಡೆ ಮಾಡಿದ ತೆರಿಗೆ ಇಲಾಖೆ
ಹಂತ 7: ರಿಯಾಯ್ತಿಗಳು ಹಾಗೂ ಸರ್ಚಾರ್ಜ್
ನಿಮ್ಮ ಆದಾಯಕ್ಕೆ ಅನುಗುಣವಾಗಿ ರಿಯಾಯ್ತಿಗಳು ಅಥವಾ ಸರ್ಚಾರ್ಜ್ ಗಳನ್ನು ಅನ್ವಯಿಸಿ ನೋಡಿ. ಉದಾಹರಣೆಗೆ 7ಲಕ್ಷ ರೂ. ತನಕ ತೆರಿಗೆ ವ್ಯಾಪ್ತಿಗೊಳಪಡುವ ಆದಾಯ ಹೊಂದಿರೋರಿಗೆ ಸೆಕ್ಷನ್ 87ಎ ಅಡಿಯಲ್ಲಿ ರಿಯಾಯ್ತಿ ಸಿಗುತ್ತದೆ.
ಹಂತ 8: ಆರೋಗ್ಯ ಹಾಗೂ ಶಿಕ್ಷಣ ಸುಂಕ
ನೀವು ಪಾವತಿಸಬೇಕಾದ ಒಟ್ಟು ತೆರಿಗೆಗೆ ಆರೋಗ್ಯ ಹಾಗೂ ಶಿಕ್ಷಣ ಸುಂಕ (ಪ್ರಸ್ತುತ ಶೇ.4) ಸೇರ್ಪಡೆಗೊಳಿಸಿ.
ಹಂತ 9: ಅಂತಿಮ ತೆರಿಗೆ ಜವಾಬ್ದಾರಿ
ಈ ಮೇಲಿನ ಎಲ್ಲ ಅಂಶಗಳನ್ನು ಪರಿಗಣಿಸಿ ಅಂತಿಮವಾಗಿ ನೀವು ಎಷ್ಟು ತೆರಿಗೆ ಪಾವತಿಸಬೇಕು ಎಂಬುದನ್ನು ಲೆಕ್ಕ ಹಾಕಿ.
ಹಂತ 10: ಟಿಡಿಎಸ್ ಹಾಗೂ ಅಡ್ವಾನ್ಸ್ ತೆರಿಗೆ
ಒಂದು ವೇಳೆ ನೀವು ವೇತನ ಪಡೆಯುವ ಉದ್ಯೋಗಿಯಾಗಿದ್ದರೆ ಕಂಪನಿ ನಿಮ್ಮ ವೇತನದಿಂದ ಪ್ರತಿ ತಿಂಗಳು ಟಿಡಿಎಸ್ ಕಡಿತ ಮಾಡುತ್ತದೆ. ಈ ಟಿಡಿಎಸ್ ಅನ್ನು ನೀವು ಅಂತಿಮವಾಗಿ ಪಾವತಿಸಬೇಕಾದ ತೆರಿಗೆಗೆ ಸರಿ ಹೊಂದಿಸಿ. ಒಂದು ವೇಳೆ ಒಂದು ಆರ್ಥಿಕ ವರ್ಷದಲ್ಲಿ ನೀವು ಪಾವತಿಸಬೇಕಾದ ತೆರಿಗೆ 10 ಸಾವಿರ ರೂ.ಗಿಂತ ಹೆಚ್ಚಿದ್ದರೆ ಆಗ ನೀವು ಕಂತುಗಳಲ್ಲಿ ಅಡ್ವಾನ್ಸ್ ತೆರಿಗೆ ಪಾವತಿಸಬೇಕಾಗುತ್ತದೆ.
ಹಂತ 11: ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಿ
ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಆದಾಯ ತೆರಿಗೆ ಇಲಾಖೆಗೆ ಸಲ್ಲಿಕೆ ಮಾಡಿ. ಇದರಲ್ಲಿ ನಿಮ್ಮ ಆದಾಯ, ಕಡಿತಗಳು ಹಾಗೂ ತೆರಿಗೆ ಪಾವತಿಗಳ ಮಾಹಿತಿ ಇರಬೇಕು.
ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ (https://incometaxindia.gov.in/pages/tools/income-tax-calculator.aspx) ಅಗತ್ಯ ಮಾಹಿತಿಗಳನ್ನು ನೀಡುವ ಮೂಲಕ ಆದಾಯ ತೆರಿಗೆ ಲೆಕ್ಕ ಹಾಕಬಹುದು.