ಸೆಮಿಕಂಡಕ್ಟರ್ ಕನಸಿಗೆ ಭಾರೀ ಪೆಟ್ಟು, ವೇದಾಂತ ಜತೆಗಿನ 1.5 ಲಕ್ಷ ಕೋಟಿಯ ಒಪ್ಪಂದ ರದ್ದುಮಾಡಿದ ಫಾಕ್ಸ್‌ಕಾನ್
ವೇದಾಂತ ಕಂಪನಿಯ ಜೊತೆ ಗುಜರಾತ್‌ನಲ್ಲಿ ಜಂಟಿಯಾಗಿ ಸೆಮಿಕಂಡಕ್ಟರ್ ಪ್ಲ್ಯಾಂಟ್ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ತೈವಾನ್ ಕಂಪನಿ ಫಾಕ್ಸ್‌ಕಾನ್ ಮಾಡಿಕೊಂಡಿದ್ದ ಒಪ್ಪಂದ ರದ್ದಾಗಿದೆ. ಯಾವುದೇ ಮಾಹಿತಿ ನೀಡದೇ ಫಾಕ್ಸ್‌ಕಾನ್ ಈ ಒಪ್ಪಂದ ರದ್ದಾಗಿದೆ ಎಂದು ತಿಳಿಸಿದೆ.
ನವದೆಹಲಿ (ಜು.10): ಭಾರತದ ವೇದಾಂತ ಕಂಪನಿಯ ಜೊತೆಗೂಡಿ ಗುಜರಾತ್‌ನಲ್ಲಿ ಆರಂಭಿಸಬೇಕಿದ್ದ ಜಂಟಿ ಸೆಮಿಕಂಡಕ್ಟರ್ ಪ್ಲ್ಯಾಂಟ್ ಒಪ್ಪಂದವನ್ನು ತೈವಾನ್ ಕಂಪನಿ ಫಾಕ್ಸ್‌ಕಾನ್ ರದ್ದು ಮಾಡಿದೆ. ಭಾರತದಲ್ಲಿ ವೇದಾಂತ ಜೊತೆ ಜಂಟಿ ಉದ್ಯಮವಾಗಿ ಸೆಮಿ ಕಂಡಕ್ಟರ್ ತಯಾರಿಸುವುದಿಲ್ಲ ಎಂದು ಫಾಕ್ಸ್‌ಕಾನ್ ಹೇಳಿದೆ. ಕಳೆದ ವರ್ಷ ಎರಡೂ ಕಂಪನಿಗಳು ಗುಜರಾತ್ ರಾಜ್ಯ ಸರ್ಕಾರದ ಸಮ್ಮುಖದಲ್ಲಿ ಗುಜರಾತ್‌ನಲ್ಲಿ 1.54 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಸೆಮಿಕಂಡಕ್ಟರ್ ಪ್ಲ್ಯಾಂಟ್‌ಅನ್ನು ಸ್ಥಾಪನೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದವು. ಎರಡೂ ಕಂಪನಿಗಳು ಜಂಟಿಯಾಗಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಿತ್ತು. ಈಗ ಈ ಒಪ್ಪಂದ ರದ್ದಾಗುವುದರೊಂದಿಗೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ಭಾರತದ ಕನಸಿಗೆ ಭಾರೀ ಪೆಟ್ಟು ಬಿದ್ದಂತಾಗಿದೆ. ಪ್ರಸ್ತುತ ಈ ಒಪ್ಪಂದಿಂದ ವೇದಾಂತ ಕಂಪನಿಯ ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಇರುವುದಾಗಿ ಫಾಕ್ಸ್‌ಕಾನ್ ಹೇಳಿದೆ. ಇದರ ನಡುವೆ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಗುರಿಗಳನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದೆ. ಇನ್ನು ಸೆಮಿಕಂಡಕ್ಟರ್‌ಗಳ ಪೂರೈಕೆಗೆ ಸ್ಥಳೀಯ ಪಾಲುದಾರರ ಮೂಲಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಈ ನಡುವೆ ಒಪ್ಪಂದವನ್ನು ಮುರಿಯಲು ಫಾಕ್ಸ್‌ಕಾನ್ ಕಾರಣವನ್ನು ನೀಡಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಭಿನ್ನಾಭಿಪ್ರಾಯಗಳಿಂದಾಗಿ ಎರಡೂ ಕಂಪನಿಗಳು ಬೇರೆಯಾಗಲು ನಿರ್ಧರಿಸಿವೆ.
ಜಂಟಿ ಉದ್ಯಮದಿಂದ ಬೇರೆ ಬೇರೆಯಾದ ನಂತರ, ವೇದಾಂತವು ಈಗ ಸೆಮಿಕಂಡಕ್ಟರ್ ಪ್ಲ್ಯಾಂಟ್ ಸ್ಥಾಪಿಸಲು ಇತರ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದೆ. ಮತ್ತೊಂದೆಡೆ, ಜಂಟಿ ಉದ್ಯಮದ ಸ್ಥಗಿತವು ಭಾರತವನ್ನು ಸೆಮಿಕಂಡಕ್ಟರ್ ಚಿಪ್ ಹಬ್ ಮಾಡುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಒಪ್ಪಂದದ ಪ್ರಕಾರ ಅಹಮದಾಬಾದ್‌ನಲ್ಲಿ 1 ಸಾವಿರ ಎಕರೆ ಜಾಗದಲ್ಲಿ ಈ ಪ್ಲ್ಯಾಂಟ್ ನಿರ್ಮಾಣವಾಗಬೇಕಿತ್ತು. ಈ ಯೋಜನೆನೆಯಿಂದ ಕನಿಷ್ಠ 1 ಲಕ್ಷ ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇಡಲಾಗಿತ್ತು. ಪ್ರಸ್ತಾವಿತ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಫ್ಯಾಬ್ರಿಕೇಶನ್ ಘಟಕವು 28ಎನ್‌ಎಂ ತಂತ್ರಜ್ಞಾನದ ನೋಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಡಿಸ್ಪ್ಲೇ ತಯಾರಿಕಾ ಘಟಕವು ಸಣ್ಣ, ಮಧ್ಯಮ ಮತ್ತು ದೊಡ್ಡ ಅಪ್ಲಿಕೇಶನ್‌ಗಳಿಗಾಗಿ ಜನರೇಷನ್ 8 ಡಿಸ್ಪ್ಲೇಗಳನ್ನು ತಯಾರಿಸುತ್ತದೆ.
ಜಂಟಿ ಉದ್ಯಮದಲ್ಲಿ 60% ಪಾಲು ಹೊಂದಿದ್ದ ವೇದಾಂತ: ಕಳೆದ ವರ್ಷ ಫೆಬ್ರವರಿಯಲ್ಲಿ, ವೇದಾಂತವು ಜಂಟಿ ಉದ್ಯಮಕ್ಕಾಗಿ ಫಾಕ್ಸ್‌ಕಾನ್‌ನೊಂದಿಗೆ ಕೈಜೋಡಿಸಿತು ಮತ್ತು ಭಾರತ ಸರ್ಕಾರದ ಸೆಮಿಕಂಡಕ್ಟರ್ ಉತ್ಪಾದನಾ ಯೋಜನೆಗೆ ಅರ್ಜಿ ಸಲ್ಲಿಸಿತು. ಈ ಉದ್ಯಮದಲ್ಲಿ ವೇದಾಂತ 60% ಮತ್ತು ಫಾಕ್ಸ್‌ಕಾನ್ 40% ಪಾಲನ್ನು ಹೊಂದಿತ್ತು. ಎರಡೂ ಕಂಪನಿಗಳು ಒಟ್ಟಾಗಿ ಮುಂದಿನ ಎರಡು ವರ್ಷಗಳಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಬಯಸಿದ್ದವು.
1.6 ಲಕ್ಷ ಕೋಟಿ Semiconductor ಹೂಡಿಕೆ ಗುಜರಾತ್ ಪಾಲು; ರೇಸ್‌ನಲ್ಲಿದ್ದ ಕರ್ನಾಟಕಕ್ಕೆ ಸೋಲು
ಜುಲೈ 2022, ಗುಜರಾತ್ ಸರ್ಕಾರವು ಸೆಮಿಕಂಡಕ್ಟರ್ ನೀತಿ 2022-27 ಅನ್ನು ಘೋಷಿಸಿತ್ತು, ಅದರ ಅಡಿಯಲ್ಲಿ ರಾಜ್ಯದಲ್ಲಿ ಸೆಮಿಕಂಡಕ್ಟರ್ ಅಥವಾ ಡಿಸ್ಪ್ಲೇ ಫ್ಯಾಬ್ರಿಕೇಶನ್ ಉತ್ಪಾದನೆಯಲ್ಲಿ ಹೂಡಿಕೆ ಮಾಡಲು ಸಿದ್ಧರಿರುವವರಿಗೆ ಸರ್ಕಾರವು ವಿದ್ಯುತ್, ನೀರು ಮತ್ತು ಭೂಮಿ ಶುಲ್ಕವನ್ನು ಸಬ್ಸಿಡಿ ಮಾಡುವುದಾಗಿ ಘೋಷಿಸಿದ್ದಲ್ಲದೆ, ಸಹಾಯಧನವನ್ನು ಪ್ರಸ್ತಾಪಿಸಲಾಯಿತು. ಭಾರತವನ್ನು ಎಲೆಕ್ಟ್ರಾನಿಕ್ಸ್ ಹಬ್ ಮಾಡಲು ಸೆಮಿಕಂಡಕ್ಟರ್‌ಗಳು ಮತ್ತು ಡಿಸ್‌ಪ್ಲೇಗಳು ಅತ್ಯಗತ್ಯವಾಗಿದೆ.
ರಾಜ್ಯದಲ್ಲಿ ಬೃಹತ್ ಐಫೋನ್ ಘಟಕ: ತೈವಾನ್ ಮೂಲದ ಫಾಕ್ಸ್‌ಕಾನ್ ಜತೆ ಸಿಎಂ ಬೊಮ್ಮಾಯಿ ಸಮ್ಮುಖ ಒಪ್ಪಂದ