ತೆರಿಗೆದಾರರೇ ಗಮನಿಸಿ, ವಿಳಂಬ, ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿ.31 ಅಂತಿಮ ಗಡುವು
2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಅಂತಿಮ ಗಡುವಾದ ಜುಲೈ 31ರೊಳಗೆ ಫೈಲ್ ಮಾಡದವರಿಗೆ ವಿಳಂಬ ಐಟಿಆರ್ ಸಲ್ಲಿಸಲು ಡಿ.31 ಕೊನೆಯ ದಿನವಾಗಿದೆ.
ನವದೆಹಲಿ (ಡಿ.19): 2022-23ನೇ ಹಣಕಾಸು ಸಾಲಿನ (2023-24ನೇ ಮೌಲ್ಯಮಾಪನ ವರ್ಷ) ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವಾಗಿದೆ. ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅನ್ನು ಅಂತಿಮ ಗಡುವಾದ ಜುಲೈ 31ರೊಳಗೆ ಫೈಲ್ ಮಾಡದವರು ವಿಳಂಬ ಐಟಿಆರ್ ಸಲ್ಲಿಕೆ ಮಾಡಬೇಕು. ಇನ್ನು ಅಂತಿಮ ಗಡುವಿನ ಮುನ್ನ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಅದರಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಪರಿಷ್ಕೃತ ಐಟಿಆರ್ ಸಲ್ಲಿಸಲು ಕೂಡ ಡಿ.31 ಕೊನೆಯ ದಿನವಾಗಿದೆ. ಐಟಿಆರ್ ಸಲ್ಲಿಕೆ ಮಾಡೋದ್ರಿಂದ ಅನೇಕ ವೈಯಕ್ತಿಕ ಪ್ರಯೋಜನಗಳು ಕೂಡ ಇವೆ. ವಿದೇಶಿ ಪ್ರಯಾಣಕ್ಕೆ ವೀಸಾ ಮಾಡಿಸೋದ್ರಿಂದ ಹಿಡಿದು ತೆರಿಗೆ ರೀಫಂಡ್ ಸಮಯದಲ್ಲಿ ಒಂದಿಷ್ಟು ನಗದು ಹಿಂಪಡೆಯುವ ತನಕ ಕೆಲವು ಪ್ರಯೋಜನಗಳಿವೆ. ಹೀಗಾಗಿ ನೀವು ಇನ್ನೂ ವಿಳಂಬ ಐಟಿಆರ್ ಸಲ್ಲಿಕೆ ಮಾಡದಿದ್ರೆ ತಕ್ಷಣ ಆ ಕೆಲಸವನ್ನು ಮಾಡಿ ಮುಗಿಸಿ.
ವಿಳಂಬ ಐಟಿಆರ್ ಸಲ್ಲಿಕೆ ಹೇಗೆ?
ಈ ಪ್ರಕ್ರಿಯೆ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ ಮಾದರಿಯಲ್ಲೇ ಇರುತ್ತದೆ. ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ವಿಳಂಬ ಅಥವಾ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದು. ತೆರಿಗೆದಾರರು ಆದಾಯ ತೆರಿಗೆ ಇಲಾಖೆ ಇ- ಫೈಲ್ಲಿಂಗ್ ಪೋರ್ಟಲ್ ನಲ್ಲಿ ತಮ್ಮ ಖಾತೆಗೆ ಲಾಗಿನ್ ಆಗಿ ಸಲ್ಲಿಕೆ ಮಾಡಬಹುದು. ವಿಳಂಬ ಐಟಿಆರ್ ಸಲ್ಲಿಕೆ ಮಾಡುವಾಗ ಕೆಲವೊಂದು ವಿಚಾರಗಳನ್ನು ನೆನಪಿಟ್ಟುಕೊಳ್ಳೋದು ಅಗತ್ಯ. *ವಿಳಂಬ ಐಟಿಆರ್ ಸಲ್ಲಿಕೆಗೆ ಯಾವುದೇ ಪ್ರತ್ಯೇಕ ಐಟಿಆರ್ ಅರ್ಜಿ ಇಲ್ಲ.
*ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 139(4) ಅಡಿಯಲ್ಲಿ ಐಟಿಆರ್ ಸಲ್ಲಿಕೆ ಮಾಡಬೇಕು.
*ಪ್ರತಿ ಹಣಕಾಸು ಸಾಲೊಗೆ ಐಟಿಆರ್ ಸಲ್ಲಿಕೆಗೆ ಆದಾಯ ತೆರಿಗೆ ಇಲಾಖೆ ಏಪ್ರಿಲ್ ನಲ್ಲಿ ಅಧಿಸೂಚನೆ ಹೊರಡಿಸುತ್ತದೆ.
ITR: ತೆರಿಗೆದಾರರಿಗೆ ಹೊಸ ಆಯ್ಕೆ ನೀಡಿದ ಆದಾಯ ತೆರಿಗೆ ಇಲಾಖೆ; ಏನಿದು'ಡಿಸ್ಕಾರ್ಡ್ ರಿಟರ್ನ್'? ಸಲ್ಲಿಕೆ ಹೇಗೆ?
ವಿಳಂಬ ಐಟಿಆರ್ ಸಲ್ಲಿಕೆಗೆ ದಂಡವಿದೆಯಾ?
ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಕೆ ಮಾಡಲು ನೀವು ವಿಫಲರಾದ್ರೆ ವಿಳಂಬ (Belated)ಐಟಿಅರ್ ಸಲ್ಲಿಕೆಗೆ ದಂಡ ಶುಲ್ಕ ಕಟ್ಟಬೇಕು. ಹಣಕಾಸು ಕಾಯ್ದೆ ಅನ್ವಯ ಈ ದಂಡವನ್ನು ನಿಗದಿಪಡಿಸಲಾಗಿದ್ದು, 1,000ರೂ.ನಿಂದ 5,000ರೂ. ತನಕ ಇರುತ್ತದೆ. ವಾರ್ಷಿಕ 5ಲಕ್ಷ ರೂ. ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರೋರಿಗೆ ಈ ದಂಡ ಕೇವಲ 1000ರೂ. ಇನ್ನು ಬಾಕಿ ತೆರಿಗೆ ಪಾವತಿಗೆ ತೆರಿಗೆ ಬಾಕಿಯಿರುವ ಮೊತ್ತದ ಮೇಲೆ ಶೇ.1ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಪರಿಷ್ಕೃತ ರಿಟರ್ನ್
ಅಂತಿಮ ಗಡುವಿನ ಮುನ್ನ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಅದರಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಪರಿಷ್ಕೃತ ರಿಟರ್ನ್ (Revised return) ಸಲ್ಲಿಕೆ ಮಾಡಲು ಕೂಡ ಡಿಸೆಂಬರ್ 31 ಅಂತಿಮ ದಿನಾಂಕ. ಕಳೆದ ವರ್ಷಕ್ಕೆ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಸೆಕ್ಷನ್ 80ಸಿ ಅಡಿಯಲ್ಲಿ ನೀವು ತಪ್ಪಾಗಿ ತೆರಿಗೆ ಕಡಿತ ಕ್ಲೈಮ್ ಮಾಡಿದ್ರೆ ಆಗ ನೀವು ರಿಟರ್ನ್ ಪರಿಷ್ಕರಿಸಬಹುದು. ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ಯಾವುದೇ ಮಿತಿಯಿಲ್ಲ, ಎಷ್ಟು ಬಾರಿ ಬೇಕಾದ್ರೂ ಸಲ್ಲಿಕೆ ಮಾಡಬಹುದು. ಆದರೆ, ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವು ಅನ್ನೋದು ನೆನಪಿರಲಿ.
ಐಟಿಆರ್ ಸಲ್ಲಿಕೆ ಮಾಡಿದ್ರೆ ಸಾಲದು ವೆರಿಫೈ ಮಾಡಿ, ಇಲ್ಲವಾದ್ರೆ ಬೀಳುತ್ತೆ 5 ಸಾವಿರ ದಂಡ: ಐಟಿ ಇಲಾಖೆ
ಡಿ.31ರ ಡೆಡ್ ಲೈನ್ ಮಿಸ್ ಆದ್ರೆ ಏನಾಗುತ್ತೆ?
ಈ ಡೆಡ್ ಲೈನ್ ಮಿಸ್ ಆದ್ರೂ ವಿಳಂಬ ಐಟಿಆರ್ ಸಲ್ಲಿಕೆಗೆ ತೆರಿಗೆದಾರರಿಗೆ ಇನ್ನೊಂದು ಅವಕಾಶವಿದೆ. ಇದನ್ನು ಅಪ್ಡೇಟೆಡ್ ರಿಟರ್ನ್ಸ್ (ITR-U) ಫೈಲಿಂಗ್ ಎಂದು ಕರೆಯಲಾಗುತ್ತದೆ. ಇದನ್ನು ಸಂಬಂಧಪಟ್ಟ ಮೌಲ್ಯಮಾಪನ ವರ್ಷ ಮುಗಿದ ಬಳಿಕವಷ್ಟೇ ಫೈಲ್ ಮಾಡಬಹುದು. ಉದಾಹರಣೆಗೆ ಒಂದು ವೇಳೆ ಒಬ್ಬ ವ್ಯಕ್ತಿ 2023-24ನೇ ಮೌಲ್ಯಮಾಪನ ವರ್ಷದ ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರ ಗಡುವು ಮಿಸ್ ಮಾಡಿಕೊಂಡರೆ 2024ರ ಏಪ್ರಿಲ್ 1ರಿಂದ ಐಟಿಆರ್ -ಯು ಸಲ್ಲಿಕೆ ಮಾಡಬಹುದು.