ಬ್ಯಾಂಕ್ ಆಫ್ ಬರೋಡಾ ವರ್ಲ್ಡ್ ಆ್ಯಪ್ ಹಗರಣ;ಸೈಬರ್ ವಂಚನೆ ತಡೆಗೆ ಬಿಗಿ ಕ್ರಮಕ್ಕೆ ಮುಂದಾದ ಹಣಕಾಸು ಸಚಿವಾಲಯ
ಬ್ಯಾಂಕ್ ಆಫ್ ಬರೋಡಾ ವರ್ಲ್ಡ್ ಆ್ಯಪ್ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಹಣಕಾಸು ಸಚಿವಾಲಯ ಸೈಬರ್ ವಂಚನೆ ತಡೆಗೆ ಕಠಿಣ ನಿಯಮ ಜಾರಿಗೆ ಪ್ರಸ್ತಾವನೆ ಸಿದ್ಧಪಡಿಸಿದೆ.
ನವದೆಹಲಿ (ಏ.15): ಬ್ಯಾಂಕ್ ಆಫ್ ಬರೋಡಾದ 'ಬಿಒಬಿ ವರ್ಲ್ಡ್ ಆ್ಯಪ್' ವಂಚನೆ ಬೆಳಕಿಗೆ ಬಂದ ಬಳಿಕ ಆ ಮೊಬೈಲ್ ಆ್ಯಪ್ ಗೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಆರ್ ಬಿಐ ನಿರ್ಬಂಧ ವಿಧಿಸಿತು. ಇದರ ಬೆನ್ನಲ್ಲೇ ಸೈಬರ್ ವಂಚನೆಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಹಣಕಾಸು ಸಚಿವಾಲಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ. ಬ್ಯಾಂಕ್ ಆಫ್ ಬರೋಡಾದ ವಲ್ಡ್ ಆ್ಯಪ್ ವಂಚನೆ ಸೇರಿದಂತೆ ಸೈಬರ್ ವಂಚನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವ ಬೆನ್ನಲ್ಲೇ ಇಂಥ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಸೈಬರ್ ಭದ್ರತೆ ಹೆಚ್ಚಿಸುವ ಹಾಗೂ ವಂಚನೆ ಪ್ರಕರಣಗಳಿಗೆ ತಡೆ ಹಾಕುವ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಅಂತರ ಸಚಿವಾಲಯಗಳ ಸಭೆಯಲ್ಲಿ ಚರ್ಚಿಸಲಾಗಿದೆ.
ಸೈಬರ್ ವಂಚನೆಗಳಿಗೆ ತಡೆ ಹಾಕಬೇಕಾದ ಅವಶ್ಯಕತೆ ಈಗ ಹೆಚ್ಚಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಗಳು ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿವೆ. 2023ರಲ್ಲಿ ಭಾರತದಲ್ಲಿ 1.1 ಮಿಲಿಯನ್ ಗೂ ಅಧಿಕ ಸೈಬರ್ ವಂಚನೆ ಪ್ರಕರಣಗಳು ವರದಿಯಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ದಳದ ವರದಿ ಪ್ರಕಾರ 7,488.63 ಕೋಟಿ ರೂ. ( 8.9 ಬಿಲಿಯನ್ ಅಮೆರಿಕನ್ ಡಾಲರ್) ಮೊತ್ತದ ವಂಚನೆ ನಡೆದಿದೆ. ಹೆಚ್ಚುತ್ತಿರುವ ಈ ಸವಾಲುಗಳನ್ನು ಎದುರಿಸಲು ಗೃಹ ವ್ಯವಹಾರಗಳ ಸಚಿವಾಲಯ ಭಾರತೀಯ ಸೈಬರ್ ಅಪರಾಧ ಸಹಭಾಗಿತ್ವ ಕೇಂದ್ರ (14ಸಿ) ಸ್ಥಾಪಿಸಿದೆ. ರಾಷ್ಟ್ರಾದ್ಯಂತ ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯಲು ಇದು ಕೇಂದ್ರೀಯ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ.
2023ರ ಅಕ್ಟೋಬರ್ ನಲ್ಲಿ ಬ್ಯಾಂಕ್ ಆಫ್ ಬರೋಡಾದ ಮೊಬೈಲ್ ಆ್ಯಪ್ 'ಬಿಒಬಿ ವರ್ಲ್ಡ್ ಆ್ಯಪ್' ಯಾವುದೇ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಆದೇಶಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿರೋದಾಗಿ ಬ್ಯಾಂಕ್ ಮಾಹಿತಿ ನೀಡಿತ್ತು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 35A ಅಡಿಯಲ್ಲಿ ಅಧಿಕಾರ ಚಲಾಯಿಸಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 'ಬಿಒಬಿ ವರ್ಲ್ಡ್' ಮೊಬೈಲ್ ಅಪ್ಲಿಕೇಷನ್ ಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಯಾವುದೇ ಗ್ರಾಹಕರನ್ನು ಸೇರಿಸಿಕೊಳ್ಳದಂತೆ ಆದೇಶಿಸಿತ್ತು.
ನಿಮ್ಗೆ ಸೆಂಟ್ರಲ್ ಕೆವೈಸಿ ಬಗ್ಗೆ ಗೊತ್ತಾ? ಒಮ್ಮೆ ಮಾಡಿಸಿದ್ರೆ ಸಾಕು, ಬ್ಯಾಂಕಿಗೆ ಪದೇಪದೆ ದಾಖಲೆ ನೀಡೋ ರಗಳೆ ಇಲ್ಲ!
ಹಣಕಾಸು ಸಚಿವಾಲಯದ ಪ್ರಸ್ತಾವನೆಯಲ್ಲಿ ಏನಿದೆ?
ಸೈಬರ್ ವಂಚನೆ ತಡೆಗೆ ಹಣಕಾಸು ಸಚಿವಾಲಯ ಕಠಿಣ ಕ್ರಮಕ್ಕೆ ಮುಂದಾಗಿದೆ. ಸೈಬರ್ ವಂಚನೆ ಅಪಾಯ ತಪ್ಪಿಸುವ ಉದ್ದೇಶದಿಂದ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವ ಸಮಯದಲ್ಲಿ ಕಟ್ಟುನಿಟ್ಟಿನ ನೋ ಯುವರ್ ಕಸ್ಟಮರ್ (ಕೆವೈಸಿ) ಪ್ರಕ್ರಿಯೆಗಳನ್ನು ಅನುಸರಿಸುವಂತೆ ಹಣಕಾಸು ಸಚಿವಾಲಯ ಸೂಚಿಸಿದೆ. ಈ ರೀತಿಯ ಪ್ರಬಲವಾದ ಪರಿಶೀಲನೆ ಉದ್ಯಮ ಪ್ರತಿನಿಧಿಗಳಿಗೆ ಮುಖ್ಯವಾಗಿದೆ. ಗ್ರಾಮೀಣ ಬ್ಯಾಂಕಿಂಗ್ ನಲ್ಲಿ ಉದ್ಯಮ ಪ್ರತಿನಿಧಿಗಳು ಗಮನಾರ್ಹ ಪಾತ್ರ ವಹಿಸುತ್ತಾರೆ. ಹೀಗಾಗಿ ಇದವರಿಗೆ ಕೆವೈಸಿ ನಿಯಮಗಳನ್ನು ಪ್ರಬಲಗೊಳಿಸೋದ್ರಿಂದ ಸೈಬರ್ ವಂಚನೆ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಲಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಎಐ ಜಗತ್ತಿನ ದಿಗ್ಗಜ ಸ್ಯಾಮ್ ಅಲ್ಟಮ್ಯಾನ್ ಮೆಚ್ಚುಗೆ ಗಳಿಸಿದ ಭಾರತೀಯ ಯುವಕರ ಸ್ಟಾರ್ಟಪ್; ಇದರ ವಿಶೇಷತೆಯೇನು ಗೊತ್ತಾ?
ಡೇಟಾ ಭದ್ರತೆಯ ಮಹತ್ವವನ್ನು ಮನಗಂಡಿರುವ ಹಣಕಾಸು ಸಚಿವಾಲಯ, ಗ್ರಾಹಕ ಹಾಗೂ ಉದ್ಯಮ ಪ್ರತಿನಿಧಿಗಳ (BC levels) ಮಟ್ಟದಲ್ಲಿ ಡೇಟಾ ಸಂರಕ್ಷಣೆಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇದರಿಂದ ಸೈಬರ್ ಕ್ರಿಮಿನಲ್ ಗಳ ಕೃತ್ಯಕ್ಕೆ ತಡೆ ಹಾಕಲು ಸರ್ಕಾರ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ವಂಚನೆಗೆ ಹೊಸ ವಿಧಾನಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಈ ಮೂಲಕ ಅಮಾಯಕರ ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ದೋಚುತ್ತಿದ್ದಾರೆ.