ಬ್ಯಾಂಕ್ ಲಾಕರ್ ಬೇಕಿದೆಯಾ? ಯಾವ ಬ್ಯಾಂಕ್ ಎಷ್ಟು ಶುಲ್ಕ ವಿಧಿಸುತ್ತದೆ? ಇಲ್ಲಿದೆ ಮಾಹಿತಿ
ಚಿನ್ನ, ಬೆಳ್ಳಿ, ಆಸ್ತಿ ದಾಖಲೆಗಳಂತಹ ಅಮೂಲ್ಯ ವಸ್ತುಗಳನ್ನು ಜೋಪಾನ ಮಾಡುವುದೇ ದೊಡ್ಡ ಸವಾಲಿನ ಕೆಲಸ. ಮನೆಯಲ್ಲಿ ಇಂಥ ವಸ್ತುಗಳನ್ನಿಟ್ಟುಕೊಂಡಿದ್ರೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಸದಾ ಭಯ, ಆತಂಕ ಇದ್ದೇಇರುತ್ತದೆ. ಇದೇ ಕಾರಣಕ್ಕೆ ಬಹುತೇಕರು ಇಂಥ ಅಮೂಲ್ಯ ವಸ್ತುಗಳನ್ನು ಬ್ಯಾಂಕ್ ಲಾಕರ್ ಗಳಲ್ಲಿಡುತ್ತಾರೆ. ಹಾಗಾದ್ರೆ ಯಾವ ಬ್ಯಾಂಕ್ ನಲ್ಲಿ ಲಾಕರ್ ಗೆ ಎಷ್ಟು ಶುಲ್ಕವಿದೆ? ಇಲ್ಲಿದೆ ಮಾಹಿತಿ.
Business Desk:ಚಿನ್ನ ಸೇರಿದಂತೆ ಕೆಲವೊಂದು ಅಮೂಲ್ಯ ವಸ್ತುಗಳನ್ನು ಮನೆಯಲ್ಲಿಟ್ಟುಕೊಂಡು ಜೋಪಾನ ಮಾಡೋದು ತುಸು ಕಷ್ಟದ ಕೆಲಸ. ಮನೆಯಲ್ಲಿ ಬೆಲೆಬಾಳುವ ವಸ್ತುವಿದ್ರೆ ಮನೆಬಿಟ್ಟು ಹೊರಗೆ ಹೋಗುವಾಗ ಮನಸ್ಸಿನಲ್ಲಿ ಸಣ್ಣ ಭಯ ಮನೆ ಮಾಡಿರುತ್ತದೆ. ಇನ್ನು ಮನೆಯಲ್ಲಿ ಒಬ್ಬರೋ ಇಲ್ಲ ಇಬ್ಬರೋ ನೆಲೆಸಿರೋದಾದ್ರೆ ಇಂಥದೊಂದು ಭಯ ಸದಾ ಕಾಡುತ್ತದೆ. ಇದೇ ಕಾರಣಕ್ಕೆ ಬಹುತೇಕರು ಅಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿಡಲು ಆಯ್ದುಕೊಳ್ಳುವುದು ಬ್ಯಾಂಕ್ ಲಾಕರ್ ಸೌಲಭ್ಯಗಳನ್ನು. ಬಹುತೇಕ ಬ್ಯಾಂಕ್ ಗಳು ಗ್ರಾಹಕರಿಗೆ ಲಾಕರ್ ಸೌಲಭ್ಯವನ್ನು ಒದಗಿಸುತ್ತವೆ. ಚಿನ್ನದ ಆಭರಣಗಳು, ಆಸ್ತಿ ದಾಖಲೆಗಳು ಹಾಗೂ ವಿಮಾ ಪಾಲಿಸಿಗಳನ್ನು ಲಾಕರ್ ಗಳಲ್ಲಿ ಸುರಕ್ಷಿತವಾಗಿಡಬಹುದು. ಬ್ಯಾಂಕ್ ಲಾಕರ್ ಗಳಲ್ಲಿ ಅತ್ಯಮೂಲ್ಯ ವಸ್ತುಗಳನ್ನಿಟ್ಟರೆ ಅವು ಸುರಕ್ಷಿತವಾಗಿರುತ್ತವೆ. ಈ ಸೇವೆಗೆ ಬ್ಯಾಂಕ್ ಗಳು ಶುಲ್ಕವನ್ನು ಕೂಡ ವಿಧಿಸುತ್ತವೆ. ಬ್ಯಾಂಕ್ ಲಾಕರ್ ವಿವಿಧ ಗಾತ್ರದಲ್ಲಿ ಲಭ್ಯವಿರುತ್ತದೆ. ಗ್ರಾಹಕರು ಅಗತ್ಯಕ್ಕೆ ಅನುಗುಣವಾಗಿ ಇದನ್ನು ಬಳಸಿಕೊಳ್ಳಬಹುದು. ಇನ್ನು ಈ ಲಾಕರ್ ಸೌಲಭ್ಯಗಳಿಗೆ ಬ್ಯಾಂಕ್ ಗಳು ವಿಧಿಸುವ ಶುಲ್ಕ ಕೂಡ ಬೇರೆ ಬೇರೆಯಾಗಿರುತ್ತದೆ. ಹಾಗಾದ್ರೆ ಐಸಿಐಸಿಐ ಬ್ಯಾಂಕ್, ಪಿಎನ್ ಬಿ, ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಗಳು ಲಾಕರ್ ಸೇವೆಗೆ ಎಷ್ಟು ಶುಲ್ಕ ವಿಧಿಸುತ್ತವೆ? ಇಲ್ಲಿದೆ ಮಾಹಿತಿ.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ಸಣ್ಣ ಗಾತ್ರದ ಲಾಕರ್ ಮೇಲೆ ವಾರ್ಷಿಕ 1,200ರೂ.ನಿಂದ 5,000 ರೂ. ತನಕ ಚಾರ್ಜ್ ಮಾಡುತ್ತದೆ. ಇನ್ನು ಮಧ್ಯಮ ಗಾತ್ರದ ಲಾಕರ್ ಗಳ ಮೇಲೆ 2,500ರೂ.-9,000 ರೂ. ಶುಲ್ಕ ವಿಧಿಸುತ್ತದೆ. ಹಾಗೆಯೇ ದೊಡ್ಡ ಗಾತ್ರದ ಲಾಕರ್ ಗಳ ಮೇಲೆ 4,000ರೂ.-15,000ರೂ. ಚಾರ್ಜ್ ಮಾಡುತ್ತದೆ. ಇನ್ನು ತುಂಬಾ ದೊಡ್ಡ ಲಾಕರ್ ಗಳಿಗೆ 10,000ರೂ.-22,000ರೂ. ತನಕ ಚಾರ್ಜ್ ಮಾಡುತ್ತವೆ. ಇನ್ನು ಈ ಶುಲ್ಕದ ಮೇಲೆ ಜಿಎಸ್ ಟಿ ಕೂಡ ವಿಧಿಸಲಾಗುತ್ತದೆ. ಐಸಿಐಸಿಐ ಬ್ಯಾಂಕ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಲಾಕರ್ ಬಾಡಿಗೆ ಅಥವಾ ಶುಲ್ಕವನ್ನು ವರ್ಷಕ್ಕೊಮ್ಮೆ ಪಾವತಿಸಬಹುದು. ಮುಂಗಡವಾಗಿ ಕೂಡ ಲಾಕರ್ ಶುಲ್ಕ ಪಾವತಿಸಲು ಅವಕಾಶವಿದೆ.
ವಾಟ್ಸ್ಆ್ಯಪ್ ಮೂಲಕ ಎಲ್ ಐಸಿ ಸೇವೆಗಳು; ಈ ಸಂಖ್ಯೆ ಬಳಸಿ ಟ್ರೈ ಮಾಡಿ
ಪಂಜಾಬ್ ನ್ಯಾಷನಲ್ ಬ್ಯಾಂಕ್
ಈ ಬ್ಯಾಂಕ್ ನಲ್ಲಿ ಲಾಕರ್ ಬಳಕೆಗೆ ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳಲ್ಲಿ ವಾರ್ಷಿಕ 1,250ರೂ. ಶುಲ್ಕ ವಿಧಿಸಲಾಗುತ್ತದೆ. ಇನ್ನು ಪಟ್ಟಣ ಹಾಗೂ ಮೆಟ್ರೋ ಪ್ರದೇಶಗಳಲ್ಲಿ 2,000ರೂ. ನಿಂದ 10,000ರೂ. ತನಕ ಶುಲ್ಕ ವಿಧಿಸಲಾಗುತ್ತದೆ.
ಎಸ್ ಬಿಐ ಲಾಕರ್ ಶುಲ್ಕ
ಎಸ್ ಬಿಐ ಬ್ಯಾಂಕ್ ನಲ್ಲಿ ಲಾಕರ್ ಬಳಕೆ ಮೇಲೆ 500ರೂ.ನಿಂದ 3,000ರೂ. ತನಕ ಶುಲ್ಕ ವಿಧಿಸಲಾಗುತ್ತದೆ. ಮೆಟ್ರೋ ಹಾಗೂ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಸಣ್ಣ, ಮಧ್ಯಮ, ದೊಡ್ಡ ಹಾಗೂ ಅತ್ಯಂತ ದೊಡ್ಡ ಗಾತ್ರದ ಲಾಕರ್ ಗಳ ಬಳಕೆ ಮೇಲೆ ಕ್ರಮವಾಗಿ 2,000ರೂ., 4,000ರೂ., 8,000ರೂ. ಹಾಗೂ 12,000ರೂ. ಶುಲ್ಕ ವಿಧಿಸಲಾಗುತ್ತದೆ. ಅರೆನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ, ಮಧ್ಯಮ, ದೊಡ್ಡ ಹಾಗೂ ಅತ್ಯಂತ ದೊಡ್ಡ ಗಾತ್ರದ ಲಾಕರ್ ಗಳ ಮೆಲೆ ಕ್ರಮವಾಗಿ 1,500ರೂ., 3,000ರೂ., 6,000ರೂ. ಹಾಗೂ 9,000ರೂ. ಶುಲ್ಕ ವಿಧಿಸಲಾಗುತ್ತದೆ.
ರಿಟೇಲ್ ಮಾರುಕಟ್ಟೆ ಪ್ರವೇಶಿಸಿದ ಡಿಜಿಟಲ್ ರೂಪಾಯಿ; ಈಗಲೇ ಬಳಕೆಗೆ ಲಭ್ಯವಾ?
ಎಚ್ ಡಿಎಫ್ ಸಿ ಬ್ಯಾಂಕ್ ಲಾಕರ್ ಚಾರ್ಜ್
ಎಚ್ ಡಿಎಫ್ ಸಿ ಬ್ಯಾಂಕ್ ಲಾಕರ್ ಶುಲ್ಕ ವಾರ್ಷಿಕ 550ರೂ.-20,000ರೂ. ತನಕ ಇರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಗಾತ್ರದ ಲಾಕರ್ ಮೇಲೆ 550ರೂ. ವಿಧಿಸಲಾಗುತ್ತದೆ. ಇನ್ನು ದೊಡ್ಡ ಗಾತ್ರದ ಲಾಕರ್ ಮೇಲೆ ಮೆಟ್ರೋ ನಗರಗಳಲ್ಲಿ 20,000ರೂ. ಶುಲ್ಕ ವಿಧಿಸಲಾಗುತ್ತದೆ.