ಮ್ಯೂಚುವಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡೋ ಬಹುತೇಕರಿಗೆ ತಿಳಿದಿಲ್ಲ ಈ 5 SIPs;ಇವುಗಳ ವಿಶೇಷತೆಯೇನು?

ಮ್ಯೂಚುವಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡೋ ಬಹುತೇಕರು ಕೆಲವು ಎಸ್ ಐಪಿಗಳ ಬಗ್ಗೆ ಮಾಹಿತಿ ಹೊಂದಿರೋದಿಲ್ಲ. ಅಂಥ ಜಾಸ್ತಿ ಜನಪ್ರಿಯತೆ ಗಳಿಸದ 5 ಎಸ್ ಐಪಿಗಳ ವಿವರ ಇಲ್ಲಿದೆ. 

5 Types Of Mutual Fund SIPs You Probably Did not Know About anu

Business Desk:ಇತ್ತೀಚಿನ ದಿನಗಳಲ್ಲಿ ಹೂಡಿಕೆ ಮಾಡೋರು ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಿಲ್ಲ. ಕಳೆದ ಒಂದು ದಶಕದಲ್ಲಿ ಎಸ್ ಐಪಿ ಮೂಲಕ ಹೂಡಿಕೆ ಮಾಡೋರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಎಸ್ಐಪಿ ಮೂಲಕ ಹೂಡಿಕೆ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆದರೆ, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡೋರು ಜನಪ್ರಿಯ ವಿಧಾನಗಳನ್ನು ಮಾತ್ರ ಆಯ್ದುಕೊಳ್ಳುತ್ತಾರೆ. ಹೀಗಾಗಿ ಬಹುತೇಕ ಹೂಡಿಕೆದಾರರು ನಾನ್ ರೆಗ್ಯುಲರ್ ವಿಧದ ಮ್ಯೂಚುವಲ್ ಫಂಡ್ ಎಸ್ ಐಪಿ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿಲ್ಲ. ಈ ಮ್ಯೂಚುವಲ್ ಫಂಡ್ ಗಳ ಬಗ್ಗೆ ಬಹುತೇಕರಿಗೆ ಮಾಹಿತಿ ಕೂಡ ಇಲ್ಲ. ಹಾಗಾದ್ರೆ ಹೆಚ್ಚು ಜನಪ್ರಿಯತೆ ಹೊಂದಿರದ ಐದು ಮ್ಯೂಚುವಲ್ ಫಂಡ್ ಗಳು ಯಾವುವು? ಇಲ್ಲಿದೆ ಮಾಹಿತಿ.

1.ಸೆಟ್ ಅಪ್/ಟಾಪ್ ಅಪ್ ಎಸ್ಐಪಿ
ಟಾಪ್ ಅಪ್ ಎಸ್ ಐಪಿಯನ್ನು ಸೆಟ್ -ಅಪ್ ಎಸ್ ಐಪಿ ಎಂದು ಕೂಡ ಕರೆಯಲಾಗುತ್ತದೆ. ಈ ವಿಧಾನದಲ್ಲಿ ನೀವು ನಿಮ್ಮ ಎಸ್ ಐಪಿ ಕೊಡುಗೆಯನ್ನು ಕಾಲಕ್ರಮೇಣವಾಗಿ ಹೆಚ್ಚಿಸುತ್ತೀರಿ. ಉದಾಹರಣೆಗೆ ಪ್ರಸ್ತುತ ನೀವು ಮಾಸಿಕ 10,000ರೂ. ಎಸ್ಐಪಿ ಮಾಡುತ್ತಿದ್ದೀರ ಹಾಗೂ ವಾರ್ಷಿಕ ಟಾಪ್ ಅಪ್ ದರ ಶೇ.10ರಷ್ಟಿದೆ. ಮುಂದಿನ ವರ್ಷ ನಿಮ್ಮ ಎಸ್ ಐಪಿ ಮೊತ್ತ 11,000ರೂ. ಆಗಿರುತ್ತದೆ. ಹೀಗಾಗಿ ಸೆಟ್ -ಅಪ್ ಎಸ್ ಐಪಿ ಮೂಲಕ ನೀವು ನಿಮ್ಮ ಎಸ್ ಐಪಿಯನ್ನು ವಾರ್ಷಿಕ ಆಧಾರದಲ್ಲಿ ಹೆಚ್ಚಿಸಬಹುದು. ಟಾಪ್ ಅಪ್ ಎಸ್ಐಪಿಯ ಯೋಜನೆಯೇನೆಂದರೆ ನೀವು ನಿಮ್ಮ ಎಸ್ ಐಪಿ ಮೊತ್ತವನ್ನು ನಿಮ್ಮ ವಾರ್ಷಿಕ ಏರಿಕೆಗೆ ಅನುಗುಣವಾಗಿ ಹೆಚ್ಚಿಸಬೇಕು. ರೆಗ್ಯುಲರ್ ಎಸ್ ಐಪಿಗೆ ಹೋಲಿಸಿದರೆ ಟಾಪ್ -ಅಪ್ ಎಸ್ ಐಪಿ ನಿಮಗೆ ಹೆಚ್ಚಿನ ಸಂಪತ್ತು ಸಂಗ್ರಹಿಸಲು ನೆರವು ನೀಡುತ್ತದೆ.

ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡ್ಬೇಕಾ? ಈ 5 ಅಂಶಗಳನ್ನು ಮಿಸ್‌ ಮಾಡ್ಲೇಬೇಡಿ..

2.ಫ್ಲೆಕ್ಸಿಬಲ್ ಎಸ್ ಐಪಿ
ಫ್ಲೆಕ್ಸಿಬಲ್ ಎಸ್ಐಪಿ ನಿಮ್ಮ ಎಸ್ ಐಪಿ ಹೂಡಿಕೆಗೆ ಬದಲಾವಣೆಗಳನ್ನು ಮಾಡಲು ನೆರವು ನೀಡುತ್ತದೆ. ಈ ಬದಲಾವಣೆ ಎಸ್ ಐಪಿ ಮೊತ್ತಕ್ಕೆ ಸಂಬಂಧಿಸಿದ್ದಾಗಿರಬಹುದು ಅಥವಾ ಎಸ್ ಐಪಿ ಅವಧಿಗೆ ಸಂಬಂಧಿಸಿದ್ದಾಗಿರಬಹುದು. ಒಂದು ವೇಳೆ ನೀವು ನಿಮ್ಮ ಎಸ್ ಐಪಿ ಟರ್ಮ್ಸ್ ನಲ್ಲಿ ಬದಲಾವಣೆ ಮಾಡಲು ಬಯಸಿದ್ದರೆ ನಿಮ್ಮ ಫಂಡ್ ಹೌಸ್ ಗೆ ಈ ಬಗ್ಗೆ ಮಾಹಿತಿ ನೀಡಬಹುದು. ಆದರೆ, ಈ ಬದಲಾವಣೆ ಕುರಿತು ಎಸ್ ಐಪಿಯ ಮುಂದಿನ ಪಾವತಿ ದಿನಾಂಕ್ಕಿಂತ ಒಂದು ವಾರ ಮುಂಚೆ ಮಾಹಿತಿ ನೀಡಬೇಕು. 
ಮಾರುಕಟ್ಟೆ ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮ ಎಸ್ ಐಪಿ ಕೊಡುಗೆಯನ್ನು ಹೆಚ್ಚಿಸಲು ಅಥವಾ ತಗ್ಗಿಸಲು ಫ್ಲೆಕ್ಸಿಬಲ್ ಎಸ್ಐಪಿ ಅವಕಾಶ ನೀಡುತ್ತದೆ. ಉದಾಹರಣೆಗೆ ಮಾರುಕಟ್ಟೆ ಅಧಿಕ ಮಟ್ಟದಲ್ಲಿರುವಾಗ ನೀವು ನಿಮ್ಮ ಎಸ್ ಐಪಿ ತಗ್ಗಿಸಬಹುದು. ಇನ್ನು ಮಾರುಕಟ್ಟೆ ಕುಸಿತದ ಹಂತದಲ್ಲಿರುವಾಗ ನೀವು ನಿಮ್ಮ ಎಸ್ ಐಪಿ ಮೊತ್ತ ಏರಿಕೆ ಮಾಡಬಹುದು. ಅದೇರೀತಿ ನಿಮ್ಮ ಆದಾಯದಲ್ಲಿ ಯಾವುದೇ ಬದಲಾವಣೆಗಳಾದ್ರೆ ಆಗ ನೀವು ನಿಮ್ಮ ಎಸ್ ಐಪಿಯನ್ನು ಅದಕ್ಕೆ ಅನುಗುಣವಾಗಿ ಏರಿಕೆ ಅಥವಾ ಇಳಿಕೆ ಮಾಡಬಹುದು.

3.ಪರ್ಪೆಚುವಲ್ ಎಸ್ ಐಪಿ
ಪರ್ಪೆಚುವಲ್ ಎಸ್ಐಪಿ ಕೂಡ ರೆಗ್ಯುಲರ್ ಎಸ್ ಐಪಿ ಮಾದರಿಯಲ್ಲೇ ಇರುತ್ತದೆ. ಈ ಎಸ್ಐಪಿ ಯಾವುದೇ ನಿಗದಿತ ಹೂಡಿಕೆ ಅವಧಿ ಹೊಂದಿಲ್ಲ. ಈ ಎಸ್ ಐಪಿ ವಿಧಾನದಲ್ಲಿ ನೀವು ನಿಮ್ಮ ಫಂಡ್ ಹೌಸ್ ಗೆ ನಿಮ್ಮ ಎಸ್ ಐಪಿ ಸ್ಥಗಿತಗೊಳಿಸುವಂತೆ ಮನವಿ ಮಾಡುವ ತನಕ ಹೂಡಿಕೆ ಮಾಡಬೇಕು. ಈ ಎಸ್ ಐಪಿ ನಿಮಗೆ ದೀರ್ಘಾವಧಿ ರಿಟರ್ನ್ಸ್  ನೀಡುತ್ತದೆ. ಎಸ್ ಐಪಿ ರಿನಿವಲ್ ಬಗ್ಗೆ ನೀವು ಯೋಚಿಸಬೇಕಾಗಿಲ್ಲ. ಆದರೆ, ನೀವು ನಿಮ್ಮ ಹೂಡಿಕೆಯನ್ನು ಯಾವುದೇ ಸಮಯದಲ್ಲಿ ರಿಡೀಮ್ ಮಾಡಬಹುದು.

ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಮಿನಿ ಘೋಷಣೆ ಗಡುವು ಜನವರಿ1ಕ್ಕೆ ವಿಸ್ತರಣೆ

4.ಮಲ್ಟಿ ಎಸ್ ಐಪಿ
ಮಲ್ಟಿ ಎಸ್ ಐಪಿ ನಿಮಗೆ ಒಂದೇ ಎಸ್ ಐಪಿ ಮೂಲಕ ಫಂಡ್ ಹೌಸ್ ಅನೇಕ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಉದಾಹರಣೆಗೆ ಒಂದು ವೇಳೆ ನೀವು 10,000 ರೂ.ನೊಂದಿಗೆ ನಾಲ್ಕು ಯೋಜನೆಗಳಲ್ಲಿ ಮಲ್ಟಿ ಎಸ್ ಐಪಿ ಪ್ರಾರಂಭಿಸಿದರೆ, ಆಗ ಪ್ರತಿಯೊಂದಕ್ಕೂ 2,500ರೂ. ಹಂಚಿಕೆ ಮಾಡಲಾಗುತ್ತದೆ.

5.ಟ್ರಿಗರ್ ಎಸ್ ಐಪಿ
ಟ್ರಿಗರ್ ಎಸ್ ಐಪಿ ಮಾರುಕಟ್ಟೆಯಲ್ಲಿ ನಿಗದಿತ ಘಟನೆ ನಡೆದಾಗ ಮಾತ್ರ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಇಂಥ ಎಸ್ ಐಪಿಯಿಂದ ಲಾಭ ಗಳಿಸಲು ನೀವು ಮಾರುಕಟ್ಟೆ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಹೀಗಾಗಿ ಈ ಎಸ್ ಐಪಿ ಅನುಭವಸ್ಥ ಹೂಡಿಕೆದಾರರಿಗೆ ಮಾತ್ರ ಅನ್ವಯಿಸುತ್ತದೆ. ಇದರಲ್ಲಿ ಹೂಡಿಕೆ ಮಾಡಲು ಸಮಯ ಹಾಗೂ ಸಾಕಷ್ಟು ಜ್ಞಾನದ ಅಗತ್ಯವಿದೆ. 


 

Latest Videos
Follow Us:
Download App:
  • android
  • ios