35 ಲಕ್ಷ ತೆರಿಗೆ ರೀಫಂಡ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ, ಶೀಘ್ರ ಬಗೆಹರಿಸಲು ಕ್ರಮ: ಸಿಬಿಡಿಟಿ ಮುಖ್ಯಸ್ಥ
ಐಟಿಆರ್ ಸಲ್ಲಿಕೆ ಮಾಡಿರುವ ಕೆಲವರಿಗೆ ಇನ್ನೂ ತೆರಿಗೆ ರೀಫಂಡ್ ಬಂದಿಲ್ಲ. ಬ್ಯಾಂಕ್ ಖಾತೆ ಮಾಹಿತಿ ತಪ್ಪಾಗಿರೋದು ಸೇರಿದಂತೆ ಕೆಲವು ಕಾರಣಗಳಿಂದ ಸುಮಾರು 35 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್ ಗುಪ್ತಾ ಮಾಹಿತಿ ನೀಡಿದ್ದಾರೆ.
ನವದೆಹಲಿ (ಅ.11): ತೆರಿಗೆ ರೀಫಂಡ್ ಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆಯಲ್ಲಿ ಸುಮಾರು 35 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ತೆರಿಗೆದಾರರು ಐಟಿಆರ್ ನಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿಗಳನ್ನು ಸರಿಯಾಗಿ ನಮೂದಿಸಿದೆ ಇರೋದು ಹಾಗೂ ಅವುಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ತೆರಿಗೆ ರೀಫಂಡ್ ವಿತರಿಸಲು ಆದಾಯ ತೆರಿಗೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ತೆರಿಗೆ ಅಧಿಕಾರಿಗಳು ವಿಶೇಷ ಕಾಲ್ ಸೆಂಟರ್ ಮೂಲಕ ತೆರಿಗೆದಾರರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್ ಗುಪ್ತಾ ಮಾಹಿತಿ ನೀಡಿದ್ದಾರೆ. ಇಂಥ ತೆರಿಗೆದಾರರ ಜೊತೆಗೆ ಇಲಾಖೆ ಸಂಪರ್ಕದಲ್ಲಿದೆ ಹಾಗೂ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವ ಗುರಿಯನ್ನು ಹೊಂದಿರೋದಾಗಿ ಅವರು ತಿಳಿಸಿದ್ದಾರೆ. ರೀಫಂಡ್ ಅನ್ನು ಖಾತೆದಾರರ ಸರಿಯಾದ ಬ್ಯಾಂಕ್ ಖಾತೆಗೆ ಶೀಘ್ರವಾಗಿ ಕ್ರೆಡಿಟ್ ಮಾಡಲು ನಾವು ಬಯಸಿದ್ದೇವೆ ಎಂದು ಗುಪ್ತಾ ಹೇಳಿದ್ದಾರೆ.
2010-11ನೇ ಸಾಲಿಗೆ ಸಂಬಂಧಿಸಿ ಹಳೆಯ ಬೇಡಿಕೆಗಳನ್ನು ಈಗಲೂ ಕೂಡ ತೆರಿಗೆದಾರರ ಖಾತೆಯಲ್ಲಿ ಹಾಗೆಯೇ ಬಾಕಿ ಉಳಿದಿರುವ ಬಗ್ಗೆ ಸ್ಪಷ್ಟನೆ ನೀಡಿರುವ ಗುಪ್ತಾ, 2011ನೇ ಸಾಲಿನಲ್ಲಿ ಇಲಾಖೆ ತಾಂತ್ರಿಕ ಬದಲಾವಣೆಗೊಳಪಟ್ಟಿತು. ಕಾಗದದಿಂದ ಕಂಪ್ಯೂಟರ್ ಬಳಕೆಗೆ ನಾವು ಶಿಫ್ಟ್ ಆದೆವು. ಹೀಗಾಗಿ ಹಳೆಯ ಬಾಕಿಗಳು ತೆರಿಗೆದಾರರ ಖಾತೆಯಲ್ಲಿ ಇನ್ನೂ ಹಾಗೆಯೇ ಇದೆ ಎಂಬ ಮಾಹಿತಿ ನೀಡಿದ್ದಾರೆ.
ತೆರಿಗೆ ರೀಫಂಡ್ ತಡವಾಗಲು ಈ ಹಿಂದಿನ ಬಾಕಿ ಕಾರಣ, ಬೇಗ ಪ್ರತಿಕ್ರಿಯಿಸಿ: ತೆರಿಗೆದಾರರಿಗೆ ಐಟಿ ಇಲಾಖೆ ಸೂಚನೆ
ಒಂದು ವರ್ಷದಿಂದ ಬಾಕಿ ಉಳಿದಿರುವ ರೀಫಂಡ್ ಪಾವತಿಗೆ ಸಂಬಂಧಿಸಿ ಹೊಸ ವ್ಯವಸ್ಥೆಯೊಂದನ್ನು ಪ್ರಾರಂಭಿಸಿರೋದಾಗಿ ಗುಪ್ತಾ ತಿಳಿಸಿದ್ದಾರೆ. ಇದರಡಿಯಲ್ಲಿ ತೆರಿಗೆದಾರರಿಗೆ ಇ-ಮೇಲ್ ಕಳುಹಿಸಲಾಗುತ್ತದೆ. ಹಾಗೂ ಅದರಲ್ಲಿ ಮೇಲ್ ಕಳುಹಿಸಿದ ಮೂರು ದಿನಗಳಲ್ಲಿ ನಿರ್ದಿಷ್ಟ ಸಂಖ್ಯೆಯಿಂದ ಕರೆ ಬರೋದಾಗಿ ತಿಳಿಸಲಾಗುತ್ತಿದೆ. ಆ ಬಳಿಕ ಆ ತೆರಿಗೆದಾರರಿಗೆ ಇ-ಮೇಲ್ ನಲ್ಲಿ ನಮೂದಿಸಿರುವ ಸಂಖ್ಯೆಯಿಂದ ಕರೆ ಮಾಡಿ ಮಾತನಾಡಿ ಸಮಸ್ಯೆ ಬಗೆಹರಿಸಲಾಗುತ್ತಿದೆ' ಎಂದು ಗುಪ್ತಾ ತಿಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇಂಥ 1.4 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ.
ಮೈಸೂರು ಮೂಲದ ಕಾಲ್ ಸೆಂಟರ್ ಈ ಕಾರ್ಯವನ್ನು ಮಾಡುತ್ತಿದೆ. ಕರೆ ಮಾಡಿದ ಸಂದರ್ಭದಲ್ಲಿ ತೆರಿಗೆದಾರರು ತೆರಿಗೆ ಬೇಡಿಕೆಯನ್ನು ಒಪ್ಪಿಕೊಳ್ಳಬಹುದು ಇಲ್ಲವೇ ಅದನ್ನು ಒಪ್ಪದ ಪ್ರತಿವಾದ ಮಂಡಿಸಬಹುದು ಎಂದು ನಿತಿನ್ ಗುಪ್ತಾ ಹೇಳಿದ್ದಾರೆ. ಪ್ರಾರಂಭದಲ್ಲಿ ಈ ಕಾಲ್ ಸೆಂಟರ್ ಕರ್ನಾಟಕ, ಗೋವಾ, ಮುಂಬೈ, ದೆಹಲಿ ಹಾಗೂ ವಾಯುವ್ಯ ಭಾಗಗಳಿಗೆ ಸಂಬಂಧಿಸಿದ ಪ್ರಕರಣಗಳನ್ನಷ್ಟೇ ನಿರ್ವಹಿಸುತ್ತಿತ್ತು. ಆದರೆ, ಈಗ ಅದನ್ನು ಇತರ ಪ್ರದೇಶಗಳು ಹಾಗೂ ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಲಾಖೆ ಅಥವಾ ಮೌಲ್ಯಮಾಪನ ಅಧಿಕಾರಿ ಕೊನೆಯಲ್ಲಿ ದಾಖಲೆಗಳನ್ನು ಅಪ್ಡೇಟ್ ಮಾಡೋದನ್ನು ಹೊರತುಪಡಿಸಿ ರೀಫಂಡ್ ತಡವಾಗಲು ಇನ್ನೂ ಎರಡು ಕಾರಣಗಳಿವೆ. ಕೆಲವು ಪ್ರಕರಣಗಳಲ್ಲಿ ತೆರಿಗೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಮೌಲ್ಯೀಕರಿಸದ ಕಾರಣ ರೀಫಂಡ್ ತಡೆ ಹಿಡಿಯಲಾಗುತ್ತದೆ. ಇನ್ನು ಬ್ಯಾಂಕ್ ವಿಲೀನಗೊಂಡ ಕಾರಣ ಅಥವಾ ನಗರ ಅಥವಾ ಎಫ್ ಎಸ್ ಸಿ ಬದಲಾವಣೆ ಕಾರಣದಿಂದ ಕೂಡ ತೆರಿಗೆ ರೀಫಂಡ್ ತಡವಾಗುತ್ತದೆ ಎಂದು ಗುಪ್ತಾ ತಿಳಿಸಿದ್ದಾರೆ.
ತೆರಿಗೆದಾರರೇ ಗಮನಿಸಿ, ಅಧಿಕ ಪ್ರೀಮಿಯಂ ಹೊಂದಿರುವ ಜೀವ ವಿಮಾ ಪಾಲಿಸಿಗಳ ಆದಾಯ ಲೆಕ್ಕಾಚಾರಕ್ಕೆ ಹೊಸ ನಿಯಮ
2023-24ನೇ ಮೌಲ್ಯಮಾಪನ ವರ್ಷದಲ್ಲಿ ಒಟ್ಟು 7.27 ಕೋಟಿ ಐಟಿಆರ್ ಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 7.15 ಕೋಟಿ ಅರ್ಜಿಗಳನ್ನು ತೆರಿಗೆದಾರರು ದೃಢೀಕರಿಸಿದ್ದಾರೆ. ಇದರಲ್ಲಿ 6.80 ಕೋಟಿ ಐಟಿಆರ್ ಗಳ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಇಲ್ಲಿಯ ತನಕ ದೃಢೀಕರಿಸದ ಐಟಿಆರ್ ಗಳಲ್ಲಿ ಶೇ.93.5ರಷ್ಟು ಅರ್ಜಿಗಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.