*   ಬ್ಯಾಂಕಿನ ಒಟ್ಟು ವ್ಯವಹಾರ 1,31,389.92 ಕೋಟಿಗೆ ವೃದ್ಧಿ*   ದ್ವಿತೀಯ ತ್ರೈಮಾಸಿಕದ ಹಾಗೂ ಪ್ರಥಮ ಅರ್ಧ ವಾರ್ಷಿಕದ ಹಣಕಾಸು ವರದಿ ಅಂಗೀಕಾರ*   ಡಿಜಿಟಲ್‌ ಬ್ಯಾಂಕ್‌ ಆಗಿ ಹೊರ ಹೊಮ್ಮುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ ಕರ್ಣಾಟಕ ಬ್ಯಾಂಕ್‌  

ಮಂಗಳೂರು(ಅ.29):  ಕರ್ಣಾಟಕ ಬ್ಯಾಂಕಿನ(Karnataka Bank) ನಿವ್ವಳ ಲಾಭ(Net Profit) ಪ್ರಸಕ್ತ ತ್ರೈಮಾಸಿಕ ಅಂತ್ಯಕ್ಕೆ (ಸೆಪ್ಟೆಂಬರ್‌ 2021) ಶೇ 5.17ರ ದರದಲ್ಲಿ ವೃದ್ಧಿ ಕಂಡಿದ್ದು, 125.61 ಕೋಟಿ ರು.ಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಸೆಪ್ಟೆಂಬರ್‌ 2020) 119.44 ಕೋಟಿ ರು. ಆಗಿತ್ತು.

ಮಂಗಳೂರಿನಲ್ಲಿ(Mangaluru) ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸಕ್ತ ವರ್ಷದ ದ್ವಿತೀಯ ತ್ರೈಮಾಸಿಕದ ಹಾಗೂ ಪ್ರಥಮ ಅರ್ಧ ವಾರ್ಷಿಕದ (30-09-2021) ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು.

ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ ಸೆಪ್ಟೆಂಬರ್‌ 2021ರ ತ್ರೈಮಾಸಿಕ(Quarterly) ಅಂತ್ಯಕ್ಕೆ ಶೇ. 10.83ರ ದರದಲ್ಲಿ ಹೆಚ್ಚಳಗೊಂಡು 637.10 ಕೋಟಿ ರು.ಗೆ ತಲುಪಿದೆ. ಇದೇ ಸಾಲಿನ ಜೂನ್‌ ತ್ರೈಮಾಸಿಕ ಅಂತ್ಯಕ್ಕೆ ಅದು 574.87 ಕೋಟಿ ರು.ಗಳಾಗಿತ್ತು. ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳು ಗಮನಾರ್ಹ ರೀತಿಯಲ್ಲಿ ಇಳಿಕೆ ಕಂಡಿವೆ. ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು ಶೇ. 4.50 ಕ್ಕೆ ಇಳಿಕೆಯಾಗಿದ್ದು, ಅವು ಈ ಹಿಂದಿನ ತ್ರೈಮಾಸಿಕದಲ್ಲಿ ಅಂದರೆ ಜೂನ್‌ 2021ರ ವೇಳೆಗೆ ಶೇ. 4.82 ಆಗಿದ್ದವು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಕೂಡ ಉತ್ತಮತೆ ಸಾಧಿಸಿ, ಶೇ. 2.84 ಆಗಿದ್ದು, ಅವು ಈ ಮುಂಚೆ ಶೇ.3.00 ಆಗಿತ್ತು.

ಡಿಜಿಟಲ್‌ ಬ್ಯಾಂಕ್‌ನತ್ತ ಕರ್ಣಾಟಕ ಬ್ಯಾಂಕ್‌ ಹೆಜ್ಜೆ

ಬ್ಯಾಂಕಿನ ಒಟ್ಟು ವ್ಯವಹಾರ 30.09.2021ರ ಅಂತ್ಯಕ್ಕೆ 1,31,389.92 ಕೋಟಿ ರು. ತಲುಪಿದೆ. ಬ್ಯಾಂಕಿನ ಠೇವಣಿಗಳ(Deposit) ಮೊತ್ತ 72,928.99 ಕೋಟಿ ರು.ಗಳಿಂದ 76,921.98 ಕೋಟಿ ರು.ಗಳಿಗೆ ಹಾಗೂ ಮುಂಗಡ 54,098.93 ಕೋಟಿ ರು.ಗಳಿಂದ 54,467.94 ಕೋಟಿ ರು.ಗಳಿಗೆ ತಲುಪಿದೆ. ಬ್ಯಾಂಕಿನ ಮುಂಗಡ ಮತ್ತು ಠೇವಣಿಗಳ ಅನುಪಾತ ಶೇ. 70.81ರಷ್ಟಿದೆ. ಕಳೆದ ವರ್ಷದ ದ್ವಿತೀಯ ತ್ರೈಮಾಸಿಕ ಅಂತ್ಯಕ್ಕೆ ಶೇ. 13.41ರಷ್ಟಿದ್ದ ಬಂಡವಾಳ(Investment) ಪರ್ಯಾಪ್ತತಾ ಅನುಪಾತ(ಕ್ಯಾಪಿಟಲ್‌ ಅಡೆಕ್ವೆಸಿ ರೇಶ್ಯೂ) ಈ ತ್ರೈಮಾಸಿಕ ಅಂತ್ಯಕ್ಕೆ (30-09-2021) ಇನ್ನೂ ಉತ್ತಮಗೊಂಡು ಶೇ. 14.48ರಷ್ಟಾಗಿದೆ.

ನಮ್ಮ ಬ್ಯಾಂಕ್‌ ಎಲ್ಲ ರೀತಿಯ ಸರಕಾರಿ ವ್ಯವಹಾರಗಳಿಗೆ ‘ಏಜೆನ್ಸಿ ಬ್ಯಾಂಕ್‌’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ(Reserve Bank of India) ಅನುಮೋದಿಸಲ್ಪಟ್ಟಿದೆ. ಇದರಿಂದಾಗಿ ಬ್ಯಾಂಕಿನ ವ್ಯವಹಾರಗಳು(Transaction) ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೊಳ್ಳಲಿವೆ. ಮುಖ್ಯವಾಗಿ ಚಾಲ್ತಿ ಹಾಗೂ ಉಳಿತಾಯ ಖಾತೆಗಳು(Savings Accounts) ಗಮನಾರ್ಹ ವೃದ್ಧಿಯಾಗಲಿವೆ. ಪರಿವರ್ತನೆಯ ಜೈತ್ರಯಾತ್ರೆಯಲ್ಲಿ ಬ್ಯಾಂಕಿನ ಅನೇಕ ಡಿಜಿಟಲ್‌(Digital) ಉಪಕ್ರಮಗಳಾದ ಸಾಲಗಳ ಡಿಜಿಟಲ್‌ ಅಂಡರ್‌ ರೈಟಿಂಗ್‌, ಮುಂಗಡಗಳ ಡಿಜಿಟಲ್‌ ಪರಿಶೀಲನೆ, ಡಿಜಿಟಲ್‌ ಅಪಾಯ ನಿರ್ವಹಣೆಗಳು ಕೆಬಿಎಲ್‌ ನೆಕ್ಸ್ಟ್‌(KBL Next) ಎಂಬ ನಾಮಧೇಯದಡಿಯಲ್ಲಿ ನಮ್ಮ ಯೋಚನೆ ಹಾಗೂ ಯೋಜನೆಗಳಂತೆ ಅಭಿವೃದ್ಧಿ ಕಾಣುತ್ತಿವೆ. ಈ ಬ್ಯಾಂಕ್‌ ಭವಿಷ್ಯದ ಡಿಜಿಟಲ್‌ ಬ್ಯಾಂಕ್‌(Digital Bank) ಆಗಿ ಹೊರ ಹೊಮ್ಮುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ ಅಂತ ಕರ್ಣಾಟಕ ಬ್ಯಾಂಕ್‌ ಲಿ. ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದ್ದಾರೆ.