Budget 2022: 700 ಜಿಲ್ಲೆಗಳನ್ನು ರಫ್ತು ಕೇಂದ್ರ ಮಾಡಲು ವಿಶಿಷ್ಟ ಯೋಜನೆ: ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ!

*ಜಿಲ್ಲೆಗಳ ವಿಶಿಷ್ಟಕೃಷಿ ಉತ್ಪನ್ನ, ಉದ್ಯಮ ಗುರ್ತಿಸಿ ಯೋಜನೆ ಜಾರಿ
*ವಿದೇಶಗಳ ಬೇಡಿಕೆಗೆ ಅನುಗುಣವಾಗಿ ಜಿಲ್ಲೆಗಳಿಂದ ರಫ್ತು
*10 ಸಾವಿರ ಕೋಟಿ ರು. ಯೋಜನೆಗೆ ಸಿದ್ಧತೆ
*ರಾಜ್ಯ ಸರ್ಕಾರಗಳೂ 5-6 ಸಾವಿರ ಕೋಟಿ ಹೆಚ್ಚುವರಿ ಹಣ ನೀಡಬೇಕು

Rs10000 crore scheme to develop 700 districts as export hubs announcement likely in Budget 2022 mnj

ನವದೆಹಲಿ (ಜ. 30): ‘ಜಿಲ್ಲೆಗಳು ರಫ್ತು ಕೇಂದ್ರಗಳು’ ಎಂಬ ಮಹತ್ವದ 10 ಸಾವಿರ ಕೋಟಿ ರು. ಯೋಜನೆಯನ್ನು ಕೇಂದ್ರ ಸರ್ಕಾರ ಫೆ.1ರಂದು ಮಂಡನೆಯಾಗುವ ಬಜೆಟ್‌ನಲ್ಲಿ (Budget 2022) ಘೋಷಿಸುವ ಸಾಧ್ಯತೆ ಇದೆ. ಯೋಜನೆಯಡಿ 700 ಜಿಲ್ಲೆಗಳನ್ನು ‘ಜಾಗತಿಕ ರಫ್ತು ಕೇಂದ್ರ’ಗಳನ್ನಾಗಿ ಪರಿವರ್ತಿಸಿ ಅವನ್ನು ಮುಂಚೂಣಿಗೆ ತರಲು ನಿರ್ಧರಿಸಲಾಗಿದೆ. ದೇಶದ ಹಲವು ಜಿಲ್ಲೆಗಳು ಕೃಷಿಯಲ್ಲಿ, ಕೆಲವು ಜಿಲ್ಲೆಗಳು ತೋಟಗಾರಿಕೆಯಲ್ಲಿ ಹಾಗೂ ಕೆಲವು ಜಿಲ್ಲೆಗಳು ಆಟಿಕೆ ಸಾಮಾನು ತಯಾರಿಕೆಯಲ್ಲಿ ಮುಂಚೂಣಿಯಲ್ಲಿವೆ. ಉದಾ: ಕರ್ನಾಟಕದ ಕೊಪ್ಪಳ ಜಿಲ್ಲೆಯ ಕಿನ್ನಾಳ, ರಾಮನಗರ ಜಿಲ್ಲೆ ಚನ್ನಪಟ್ಟಣಗಳು ಆಟಿಕೆ ಸಾಮಾನು ತಯಾರಿಕೆಗೆ ಪ್ರಸಿದ್ಧಿ.

ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿಗೆ ಹಾಗೂ ದಕ್ಷಿಣ ಕನ್ನಡ/ಉಡುಪಿ ಜಿಲ್ಲೆಗಳು ಕಚಲಕ್ಕಿಗೆ ಪ್ರಸಿದ್ಧಿ. ದೇಶದಲ್ಲಿನ ಇಂಥ 700 ಜಿಲ್ಲೆಗಳನ್ನು ಗುರುತಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಭಾರತವನ್ನು ಆತ್ಮನಿರ್ಭರ ಮಾತ್ರವಲ್ಲ, ವಿಶ್ವದಲ್ಲಿ ಬೃಹತ್‌ ರಫ್ತು ಕೇಂದ್ರ (Export Hub) ಮಾಡಬೇಕು ಎಂಬ ದೊಡ್ಡ ಇರಾದೆ. ಅದಕ್ಕೆ ಅನುಗುಣವಾಗಿ ರಾಜ್ಯದ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Budget 2022:ಬಜೆಟ್ ಅಧಿವೇಶನದ ಮೊದಲೆರಡು ದಿನ ಶೂನ್ಯ, ಪ್ರಶ್ನೋತ್ತರ ಅವಧಿ ಇಲ್ಲ

10 ಸಾವಿರ ಕೋಟಿ ರು.ಗಳನ್ನು ಕೇಂದ್ರ ಸರ್ಕಾರ 700 ಜಿಲ್ಲೆಗಳಿಗೆ ಒದಗಿಸಲಿದೆ. ಇನ್ನು ರಾಜ್ಯ ಸರ್ಕಾರಗಳು ಕೂಡ ಸುಮಾರು 5000-6000 ಕೋಟಿ ರು. ಭರಿಸಬೇಕಾಗುತ್ತದೆ. ದೇಶದ ಬಹುತೇಕ ಎಲ್ಲ ಜಿಲ್ಲೆಗಳು ಯೋಜನೆಯಲ್ಲಿ ಒಳಪಡಲಿವೆ ಎಂದು ಅವು ಮಾಹಿತಿ ನೀಡಿವೆ. ಇನ್ನು 3ರಿಂದ 5 ವರ್ಷ ಅವಧಿಯಲ್ಲಿ ಸರ್ಕಾರ, 500 ಜಿಲ್ಲೆಗಳ ರಫ್ತಿನ ಎರಡಂಕಿಯ ಪ್ರಗತಿಗೆ ಯೋಜನೆ ಹಾಕೊಕೊಂಡಿದೆ.

ಯೋಜನೆ ಜಾರಿ ಹೇಗೆ?: ಯೋಜನೆಯ ಅನುಸಾರ ಆಯಾ ಜಿಲ್ಲೆಯ ವಿಶಿಷ್ಟಉತ್ಪನ್ನಗಳನ್ನು ಗುರುತಿಸಲಾಗುತ್ತದೆ. ಆಯಾ ಉದ್ದಿಮೆಗಳು, ಕೃಷಿ ಚಟುವಟಿಕೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ರಫ್ತು ಉತ್ತೇಜನಾ ಸಮಿತಿಗಳನ್ನು ರಚಿಸಲಾಗುತ್ತದೆ. ಇವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೊಂದಿಗೆ ತಮ್ಮ ಜಿಲ್ಲೆಯ ಉತ್ಪನ್ನಗಳ ಬಗ್ಗೆ ಸಮನ್ವಯ ಸಾಧಿಸುತ್ತಾರೆ.

ನಂತರ ವಿದೇಶದಲ್ಲಿನ ಭಾರತೀಯ ದೂತಾವಾಸಗಳಿಗೆ ಅನುಕೂಲವಾಗಲೆಂದು, ಜಿಲ್ಲೆಗಳ ಉತ್ಪನ್ನಗಳ ಬಗ್ಗೆ ಸಮನ್ವಯ ಸಾಧಿಸಲು ವೇದಿಕೆಯನ್ನು ರಚಿಸಲಾಗುತ್ತದೆ. ಈ ವೇದಿಕೆಯು ಯಾವ ದೇಶಗಳಿಗೆ ಯಾವ ಉತ್ಪನ್ನ ಬೇಕೆಂಬ ಮಾಹಿತಿಯನ್ನು ರೈತರಿಗೆ/ಉದ್ದಿಮೆದಾರರಿಗೆ ನೀಡುತ್ತದೆ. ಆಗ ಆಯಾ ಜಿಲ್ಲೆಗಳ ವಿಶಿಷ್ಟಉತ್ಪನ್ನಗಳು ವಿದೇಶಕ್ಕೆ ರಫ್ತು ಆಗಲಿವೆ.

ಇದನ್ನೂ ಓದಿ: Union Budget 2022: ಆದಾಯ ತೆರಿಗೆ ಪ್ರಸಕ್ತ ಸ್ವರೂಪದ ಬಗ್ಗೆ ಶೇ.65 ಜನರಿಗೆ ಅಸಮಾಧಾನ: ಸಮೀಕ್ಷಾ ವರದಿ

ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್: 2022ನೇ ಸಾಲಿನ ಕೇಂದ್ರ ಬಜೆಟ್‌ನ್ನು ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಮಂಡಿಸಲಾಗುತ್ತದೆ. ಇದಕ್ಕೂ ಮುನ್ನ ಜನವರಿ 31 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. COVID-19 ಮಾರ್ಗಸೂಚಿಗಳ ದೃಷ್ಟಿಯಿಂದ, ಲೋಕಸಭೆ ಮತ್ತು ರಾಜ್ಯಸಭೆಗಳು ವಿವಿಧ ಸಮಯಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಕೆಳಮನೆಯು ಸಂಜೆ 4 ರಿಂದ ರಾತ್ರಿ 9 ರವರೆಗೆ ಮತ್ತು ರಾಜ್ಯಸಭೆಯು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಕಾರ್ಯನಿರ್ವಹಿಸುತ್ತದೆ.

ಆದಾಗ್ಯೂ, ಜನವರಿ 31 ಮತ್ತು ಫೆಬ್ರವರಿ 1 ರಂದು, ಎರಡೂ ಸದನಗಳ ಸಮಯವು ಬೆಳಿಗ್ಗೆ 11 ರಿಂದ ಇರುತ್ತದೆ. ಮೂಲಗಳ ಪ್ರಕಾರ, ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ಮತ್ತು ಬಜೆಟ್ ಅಧಿವೇಶನದ ಎರಡನೇ ಭಾಗವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ. ಏತನ್ಮಧ್ಯೆ, ಜನವರಿ 31 ರಂದು ಮಧ್ಯಾಹ್ನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ.

Latest Videos
Follow Us:
Download App:
  • android
  • ios