ಬೆಂಗಳೂರಿನ ಈ ಮೆಟ್ರೋ ನಿಲ್ದಾಣಕ್ಕೆ ತನ್ನ ಹೆಸರಿಡಲು BMRCLಗೆ 65 ಕೋಟಿ ರೂ ಕೊಟ್ಟ ಕಂಪನಿ
ಈ ಮೆಟ್ರೋ ನಿಲ್ದಾಣಕ್ಕೆ ಕಂಪನಿಯೊಂದು 65 ಕೋಟಿ ರೂ. ಪಾವತಿಸಿ 30 ವರ್ಷಗಳ ಕಾಲ ನಾಮಕರಣ ಹಕ್ಕು ಪಡೆದಿದೆ. ಹಳದಿ ಮಾರ್ಗದಲ್ಲಿ ಇದು ಮೂರನೇ ನಾಮಕರಣ ಒಪ್ಪಂದವಾಗಿದ್ದು, 13 ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳಿಗೆ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರು: ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಡುವೆ ಸೋಮವಾರ ಒಪ್ಪಂದವಾಗಿದ್ದು, ಕಂಪನಿಯು ಬಿಎಂಆರ್‌ಸಿಎಲ್‌ಗೆ ₹55 ಕೋಟಿ ಪಾವತಿಸಿದೆ. ಈ ಮೂಲಕ ಮುಂದಿನ 30 ವರ್ಷದವರೆಗೆ ಈ ನಿಲ್ದಾಣಕ್ಕೆ ತನ್ನ ಹೆಸರನ್ನು ನಾಮಕರಣ ಮಾಡಿಕೊಳ್ಳುವ ಹಕ್ಕು ಪಡೆದಿದೆ.
ಇದು ಹಳದಿ ಮಾರ್ಗದಲ್ಲಿ 3ನೇ ಒಪ್ಪಂದವಾಗಿದ್ದು, ಇನ್ಫೋಸಿಸ್ ಫೌಂಡೇಶನ್ ಜೊತೆ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಮತ್ತು ಬಯೋಕಾನ್ ಫೌಂಡೇಶನ್ ಜೊತೆಗೆ ಹೆಬ್ಬಗೋಡಿ ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ ಈಗಾಗಲೇ ಒಪ್ಪಂ ದ ಮಾಡಿಕೊಳ್ಳಲಾಗಿದೆ. ಮೆಟ್ರೋ ನಿಗಮಕ್ಕೆ ಡೆಲ್ಟಾ ಒಟ್ಟೂ 65 ಕೋಟಿ ನೀಡಬೇಕಿದ್ದು, ಈ ಹಿಂದೆ ಈ 10 ಕೋಟಿ ಕೊಟ್ಟಿತ್ತು.
ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದ 16 ನಿಲ್ದಾಣಗಳ ಪೈಕಿ 13ರಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮವು ಮುಂದಾಗಿದೆ. ಆದರೆ, ಇವುಗಳಲ್ಲಿ ದ್ವಿಚಕ್ರ ವಾಹನಕ್ಕೆ ಮಾತ್ರ ಪಾರ್ಕಿಂಗ್ ಸೌಲಭ್ಯ ಒದಗಿಸುತ್ತಿದೆ. ಟೆಕ್ಕಿಗಳೇ ಹೆಚ್ಚಾಗಿ ಈ ಮೆಟ್ರೋ ಮಾರ್ಗದ ಬಳಕೆದಾರರಾಗಿದ್ದು, ಕಾರು ನಿಲುಗಡೆಗೆ ಅವಕಾಶ ನೀಡದಿರುವುದು ಭವಿಷ್ಯದಲ್ಲಿ ಸಮಸ್ಯೆಗೆ ಕಾರಣವಾಗಲಿದೆ. 13 ನಿಲ್ದಾಣಗಳಲ್ಲಿ ಒಟ್ಟು 2,690 ಬೈಕ್‌ಗಳಿಗೆ ಮಾತ್ರ ಪಾರ್ಕಿಂಗ್ ಅವಕಾಶವಿದೆ. 3 ಇಂಟರ್‌ಚೇಂಜ್ ನಿಲ್ದಾಣಗಳು ಈ ಮಾರ್ಗದಲ್ಲಿದ್ದು, ಮುಂದಿನ ದಿನಗಳಲ್ಲಿ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಪಾರ್ಕಿಂಗ್ ನದ್ದೇ ದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರಿನ 8 ಮೆಟ್ರೋ ಗೋಡೆಗಳ ಮೇಲೆ ಚಿತ್ತಾರ ಮೂಡಿಸಲಿರುವ 10 ಕಲಾವಿದರು!
ಹಸಿರು ಮಾರ್ಗದ ಆರ್.ವಿ.ರಸ್ತೆ ನಿಲ್ದಾಣ, ಗುಲಾಬಿ ಮಾರ್ಗದ (ಕಾಳೇನ ಅಗ್ರಹಾರ- ನಾಗವಾರ) ಜಯದೇವ ನಿಲ್ದಾಣ ಮತ್ತು ನೀಲಿ ಮಾರ್ಗದ (ರೇಷ್ಮೆ ಮಂಡಳಿ-ಕೆ.ಆರ್.ಪುರ-ವಿಮಾನ ನಿಲ್ದಾಣ) ರೇಷ್ಮೆ ಮಂಡಳಿ ನಿಲ್ದಾಣಗಳು ಇಂಟರ್‌ಚೇಂಜ್ ನಿಲ್ದಾಣಗಳಾಗಿವೆ. ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ 980 ಬೈಕ್ ನಿಲುಗಡೆಗೆ ಅವಕಾಶ ಕಲಿಸಲಾಗಿದೆ. ಈ ಮಾರ್ಗದ ಇಂಟರ್ ಚೇಂಜ್ ನಿಲ್ದಾಣ ಆರ್.ವಿ. ರಸ್ತೆ ನಿಲ್ದಾಣದಲ್ಲಿ 223 ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಮೆಟ್ರೋದಲ್ಲಿ ಒಂದೇ ದಿನ 9.20 ಲಕ್ಷ ಜನ ಸಂಚಾರ, ಹೊಸ ದಾಖಲೆ