ಕಂಪ್ಲಿ[ಅ.24]: ಇಲ್ಲಿನ ತುಂಗಭದ್ರಾ ನದಿಗೆ ತುಂಗಭದ್ರಾ ಜಲಾಶಯದಿಂದ ಹರಿಬಿಟ್ಟಿರುವ ನೀರಿನ ಪ್ರಮಾಣ ಅಧಿಕವಾಗಿದ್ದು, ಕಂಪ್ಲಿ- ಗಂಗಾವತಿ ಸೇತುವೆ ಮಂಗಳವಾರಕ್ಕಿಂತ ಬುಧವಾರ ಹೆಚ್ಚಿನ ಪ್ರಮಾಣದಲ್ಲಿ ಮುಳುಗಡೆಯಾಗಿದೆ. ಜನ, ಜಾನುವಾರು, ವಾಹನಗಳ ಸಂಚಾರವು ಸ್ಥಗಿತಗೊಂಡಿದೆ. ನದಿಗೆ ಇನ್ನು ಹೆಚ್ಚಿನ ಪ್ರಮಾಣ ನೀರು ಹರಿದು ಬರಲಿದೆಯೆನ್ನುವ ಸುದ್ದಿಗೆ ನದಿ ಪಾತ್ರದ ಜನತೆ ಭಯಭೀತರಾಗಿದ್ದಾರೆ.

ಮಂಗಳವಾರ 1.27 ಲಕ್ಷ ಕ್ಯುಸೆಕ್ ನೀರನ್ನು ಹರಿಬಿಡಲಾಗಿತ್ತು. ಬುಧವಾರ 1.56 ಲಕ್ಷ ಕ್ಯುಸೆಕ್‌ನೀರನ್ನು ಹರಿಬಿಡಲಾಗಿದೆ. ಇಂದು ಹೆಚ್ಚಿನ ಪ್ರಮಾಣದ ನೀರು ಬಂದಿದ್ದರಿಂದ ಇಲ್ಲಿನ ಕೋಟೆಯ ಮೀನುಗಾರರ ಕಾಲನಿಯಲ್ಲಿ ಹೆಚ್ಚಿನ ನೀರು ಹೊಕ್ಕಿವೆ. ಹೀಗಾಗಿ ಮೀನುಗಾರರು ನದಿಗೆ ಇಳಿದಿಲ್ಲ. ತಮ್ಮ ಮೀನು ಹಿಡಿಯುವ ಕಸುಬು ಮಾಡಲಾಗಿಲ್ಲ. ದಿನದ ದುಡಿಮೆ ಇಲ್ಲದಂತಾಗಿದೆ. ಪಂಪಾಪತಿ ದೇವಸ್ಥಾನ ರಸ್ತೆ, ಕೋಟೆ ಆಂಜನೇಯ ದೇವಸ್ಥಾನ ಮತ್ತು ರಸ್ತೆ, ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮತ್ತು ರಸ್ತೆ, ಕೋಟೆಯ ಮಾಧವ ತೀರ್ಥರ ಬೃಂದಾವನ ಮತ್ತು ರಸ್ತೆ ಮುಳುಗಡೆಯಾಗಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿನ್ನೆಯಿಂದ ದೇವರಿಗೆಪೂಜೆ ನಡೆದಿಲ್ಲ. ಭಕ್ತರಿಗೆ ಈ ದೇವರದರ್ಶನ ವಿಲ್ಲದಂತಾಗಿದೆ. ಬನವಾಸಿ ರಸ್ತೆಯ ಸೇತುವೆ ಜಲಾವೃತಗೊಂಡಿದ್ದು, ರೈತರ ಕಬ್ಬು, ಬಾಳೆ, ಭತ್ತದ ತೋಟಗಳ ಕೃಷಿ ಚಟುವಟಿಕೆ ನಿಂತಿದೆ. ತುಂಗಭದ್ರಾ ನದಿಪಾತ್ರದ ಗ್ರಾಮಗಳಾದ ಕಂಪ್ಲಿ,ಕೋಟೆ, ನಂ. 5 ಬೆಳಗೋಡುಹಾಳ್, ನಂ. 3 ಸಣಾಪುರ, ಇಟಿಗಿ, ನಂ. 2 ಮುದ್ದಾಪುರ ಗ್ರಾಮಗಳತಗ್ಗು ಪ್ರದೇಶದ ಕೃಷಿ ಭೂಮಿಗೆ ಇನ್ನು ಹೆಚ್ಚಿನಪ್ರಮಾಣದ ನೀರು ನುಗ್ಗಿದ್ದು, ಕಬ್ಬು, ಭತ್ತ, ಬಾಳೆ ಬೆಳೆಗಳು, ರೈತರ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ. 

ಕೆಲವು ರೈತರು ಪಂಪ್‌ಸೆಟ್‌ಗಳನ್ನು ಬಿಚ್ಚಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ನಂ.3  ಸಣಾಪುರಮತ್ತು ಇಟಿಗಿ ಗ್ರಾಮದ ಮಧ್ಯೆ ಬರುವ ನಾರಿಹಳ್ಳಸೇತುವೆವರೆಗೆ ತುಂಗಭದ್ರಾ ಹಿನ್ನೀರು ಬಂದು ಜನ, ಜಾನುವಾರು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಇಟಿಗಿ ಗ್ರಾಮದ ನಾಡ ದೋಣಿ(ತೆಪ್ಪ) ಹಾಕುವಬೆಸ್ತರ ಹುಲಿಗೇಶ್, ಬೆಸ್ತರ ಭೋಗೇಶ್ ಈ ಮಾರ್ಗವಾಗಿ ಸಿರುಗುಪ್ಪ ಹಾಗೂ ಕಂಪ್ಲಿಗೆ ವ್ಯಾಪಾರ, ವ್ಯವಹಾರಕ್ಕೆ ಓಡಾಡುವವರನ್ನು ಮತ್ತು ಅವರ ದ್ವಿಚಕ್ರ ವಾಹನಗಳನ್ನು ತಮ್ಮ ತೆಪ್ಪದಲ್ಲಿ ಏರಿಸಿಕೊಂಡುಗಾಡಿಗೆ 20, ಮನುಷ್ಯರಿಗೆ 10 ಪಡೆದುಕೊಂಡುಈ ಕಡೆಯವರನ್ನು ಆ ಕಡೆಗೆ, ಆ ಕಡೆಯವರನ್ನು ಈಕಡೆಗೆ ಸಾಗಿಸುತ್ತಿದ್ದಾರೆ. 

ಇಲ್ಲಿಗೆ ಹಂಪಿ ವಿಭಾಗದಎಎಸ್‌ಪಿ ಡಾ. ಸಿಮಿ ಮರಿಯಮ್ ಜಾರ್ಜ್, ಸಿಪಿಐಡಿ. ಹುಲುಗಪ್ಪ, ಪಿಎಸ್‌ಐ ಮೌನೇಶ್ ರಾಥೋಡ್‌ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಹಸೀಲ್ದಾರ್ ಗೌಸಿಯಾಬೇಗಂ, ಉಪತಹಸೀಲ್ದಾರ್ ಬಿ. ರವೀಂದ್ರಕುಮಾರ್, ನದಿಗೆ ಇನ್ನಷ್ಟು ಪ್ರಮಾಣದ ನೀರು ಹರಿದು ಬಂದಲ್ಲಿ ಕಂಪ್ಲಿಕೋಟೆಯ ಮೀನುಗಾರ ಕಾಲನಿಯ 10-12 ಮನೆಗಳಲ್ಲಿ ನೀರು ಹೊಕ್ಕುವ ಸಾಧ್ಯತೆಗಳಿದ್ದು, ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ಸ್ಥಳಾಂತರಗೊಂಡಲ್ಲಿ ಪರಿಹಾರ ಕೇಂದ್ರ ತೆರೆದು ಸೂಕ್ತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದುತಿಳಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಪ್ಪ ಮಾತನಾಡಿ, ಕೋಟೆಯ ನದಿ ಪಾತ್ರದ ಮನೆಗಳ ಮುಂದೆ ಬೀದಿ ದೀಪದ ವ್ಯವಸ್ಥೆ ಮಾಡಲಾಗಿದೆ. ನೀರು ನಿಲ್ಲುವ ಸ್ಥಳದಲ್ಲಿ ಬ್ಲಿಚಿಂಗ್ ಪೌಡರ್‌ ಎರಚಲಾಗಿದೆ. ಕಿರಿಯ ಆರೋಗ್ಯ ನೈರ್ಮಲ್ಯ ನಿರೀಕ್ಷಕಿ ಸೇರಿದಂತೆ ಇಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

536 ಮನೆ, 150 ಹೆಕ್ಟೇರ್ ಬೆಳೆಹಾನಿ

ಹೂವಿನಹಡಗಲಿಮೂರು ದಿನಗಳ ಕಾಲ ಸುರಿದ ಭಾರಿ ಮಳೆಗೆ ತಾಲೂಕಿನಲ್ಲಿ 536  ಮನೆಗಳು ಕುಸಿದಿದ್ದು, 150 ಹೆಕ್ಟೇರ್‌ಗೂ ಹೆಚ್ಚು ಬೆಳೆನಾಶವಾಗಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಜನರೋಸಿ ಹೋಗಿದ್ದು, ವಾಸಕ್ಕೆ ಮನೆ ಮನೆ ಇಲ್ಲದೇ ಜನ ಪರದಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಗುಡಿಗುಂಡಾರಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ದೊಡ್ಡದಾಗಿರುವ ಮಣ್ಣಿನ ಮನೆಗಳಗೋಡೆಗಳು ನೆಂದು ಬಿರುಕು ಬಿಟ್ಟಿವೆ. ಇದರಿಂದ ಮನೆಯಲ್ಲಿ ಕುಳಿತುಕೊಳ್ಳಲು ಜಾಗ ಇಲ್ಲದಂತಾಗಿದ್ದು, ಪಕ್ಕದ ತಗಡಿನ ಮನೆಯ ಕಟ್ಟೆಗಳ ಮೇಲೆ ಇಡೀ ರಾತ್ರಿ ಜಾಗರಣೆ ಮಾಡುತ್ತಿದ್ದಾರೆ.

ದೀಪಾವಳಿ ಹಬ್ಬ ಮುಗಿಸಿ ಕೊಯ್ಲು ಮಾಡಬೇಕಿದ್ದ ಮೆಕ್ಕೆಜೋಳ, ಸಜ್ಜೆ ಹಾಗೂ ಭತ್ತದ ಬೆಳೆಗೆ ಮಳೆರಾಯನ ಹೊಡೆತಕ್ಕೆ ನಾಶವಾಗಿವೆ. ರಸ್ತೆಯ ಮೇಲೆ ಒಣಗಿಸಲು ಹಾಕಿದ್ದ ಮೆಕ್ಕೆಜೋಳ, ಸಜ್ಜೆ ಧಾನ್ಯಗಳು ಮಳೆಗೆ ನೆಂದು ಮೊಳಕೆ ಒಡೆದಿದೆ. ಇತ್ತ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಅಪಾರ ಮಳೆಗೆನೆಲಕ್ಕೆ ಬಿದ್ದಿದೆ.  ಜತೆಗೆ ಕೆಲವು ಕಡೆಗಳಲ್ಲಿ ಭತ್ತದಗದ್ದೆಯಲ್ಲಿನ ಒಡ್ಡುಗಳು ಒಡೆದು ಬೆಳೆಯ ಮೇಲೆಮಣ್ಣು ಹರಡಿಕೊಂಡು ಅಪಾರ ಪ್ರಮಾಣದ ಬೆಳೆನಾಶವಾಗಿದೆ. ರೈತರು ಜಮೀನುಗಳನ್ನು ಬಿತ್ತನೆ ಮಾಡಲು ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತ ಇತರೆ ವೆಚ್ಚಗಳಿಗೆ ಮಾಡಿರುವ ಸಾಲವನ್ನು ತೀರಿಸಲು ಆಗದಂತಹ ಪರಿಸ್ಥಿತಿ ರೈತರಿಗೆ ಎದುರಾಗಿದ್ದು,ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ.

ಮೆಕ್ಕೆಜೋಳಕ್ಕೆ ಬಂಪರ್ ಬೆಲೆ ಇದೆ ಎಂದು ಖುಷಿಪಟ್ಟಿದ್ದ ರೈತರಿಗೆ ಆ ಸಂತೋಷದ ಘಳಿಗೆ ಬಹಳ ದಿನಉಳಿಯದೇ ಬೆಳೆದಿದ್ದ ಬೆಳೆಯೆಲ್ಲಾ ಮಳೆರಾಯನ ಕೋಪಕ್ಕೆ ತುತ್ತಾಗಿದೆ. ತಾಲೂಕಿನಲ್ಲಿ ಸುರಿದ ಮಳೆಗೆ ಸಾವಿರಾರು ಮಣ್ಣಿನ ಮನೆಗಳು ಸೋರುತ್ತಿವೆ. ಜತೆಗೆ ತಾಲೂಕಿನಮಾಗಳ, ಮೀರಾಕೂರ‌್ನಹಳ್ಳಿ ಸೇರಿದಂತೆ ಈ ಎರಡು ಗ್ರಾಮಗಳಲ್ಲಿ ಮನೆಯೊಳಗೆ ಬಸಿನೀರು ಹೆಚ್ಚಾಗಿದೆ. ಇದರಿಂದ ಮನೆಯಲ್ಲಿ ಯಾರು ವಾಸ ಮಾಡದಂತಹ ಸ್ಥಿತಿ ಇದೆ.  ಮನೆಯೊಳಗಿನ ನೀರನ್ನು ಹೊರಗೆ ಹಾಕಲು ಹರಸಾಹಸ ಪಡುವಂತಾಗಿದೆ. ತುಂಗಭದ್ರಾ ನದಿ ತೀರದ ಸಾವಿರಾರು ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆ ಕೆಸರು ಗದ್ದೆಗಳಲ್ಲಿ ನೆಲಕ್ಕೆ ಬಿದ್ದಿವೆ.

ಎಕರೆಯೊಂದಕ್ಕೆ 30-40  ಸಾವಿರ ವೆಚ್ಚ ಮಾಡಿ ಬೆಳೆಸಿದ ಭತ್ತ ಕೈಗೆ ಸಿಗದಂತಾಗಿದೆ. ಮಳೆ- ಗಾಳಿಹೊಡೆತಕ್ಕೆ ಭತ್ತ ಗದ್ದೆಗಳಲ್ಲಿ ಉದುರಿದೆ. ಕೆಲವು ಕಡೆಗಳಲ್ಲಿ ಮಳೆ ನೀರಿಗೆ ಕೊಚ್ಚಿ ಹೋಗಿದೆ. ತಾಲೂಕಿನ ಬೆಳೆ150 ಹೆಕ್ಟೇರ್‌ ಪ್ರದೇಶದಲ್ಲಿನ ವಿವಿಧ ಬೆಳೆಗಳ ನಾಶ ಉಂಟಾಗಿದೆ. ಜತೆಗೆ 536 ಮನೆಗಳು ಕುಸಿದು ಬಿದ್ದಿವೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾಹಿತಿ ನೀಡಿದರು.

ಮಾಗಳ ಗ್ರಾಮದಲ್ಲಿ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಹಾಗೂ ಗ್ರಾಪಂ ಪಿಡಿಒ ಮಂಜುನಾಥ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಗಳ ಗ್ರಾಮವನ್ನು ಸಿಂಗಟಾಲೂರು ಏತನೀರಾವರಿ ಯೋಜನೆಯ ಹಿನ್ನೀರಿನ ಯೋಜನೆಯಲ್ಲಿ ಮುಳುಗಡೆ ಎಂದು ನಿರ್ಧರಿಸಿ ಸ್ಥಳಾಂತರ ಮಾಡಬೇಕು. ಗ್ರಾಮಠಾಣ ಹತ್ತಿರವೇ ನೀರು ಬರುತ್ತಿದೆ. ಆದರೂ ಮುಳುಗಡೆ ಪಟ್ಟಿಗೆ ಸೇರ್ಪಡೆಮಾಡಿಲ್ಲ. ಪುನರ್ ವಸತಿ ಮತ್ತು ಪುನರ್ ನಿರ್ಮಾಣಯೋಜನೆಯಡಿ ನಿಯಮಗಳ ಪ್ರಕಾರ ೧ ಕಿಮೀವ್ಯಾಪ್ತಿಯ ಪ್ರದೇಶವನ್ನು ಸ್ಥಳಾಂತರ ಮಾಡಬೇಕೆಂಬಗೆಜೆಟ್ ನೋಟಿಫಿಕೇಷನ್ ಆಗಿದ್ದರೂ, ನೀರಾವರಿ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದು,ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೂಲ ಗ್ರಾಮದ ಮನೆಗಳಿಗೆ ಪರಿಹಾರ ನೀಡುವಜತೆಗೆ ಬೇರೆ ಕಡೆಗಳಲ್ಲಿ ನಿವೇಶನ ನೀಡಬೇಕೆಂದುಗ್ರಾಮಸ್ಥರು ಅಧಿಕಾರಿಗಳಿಗೆ ತಮ್ಮ ಬೇಡಿಕೆಇಟ್ಟಿದ್ದಾರೆ.

ಬೋಟ್‌ನಲ್ಲಿ 600 ಕುರಿಗಳ ರಕ್ಷಣೆ

ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ಹತ್ತಿರದ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ600  ಕುರಿಗಳನ್ನು ಮಂಗಳವಾರ ಹಾಗೂ ಬುಧವಾರ 1.55 ಲಕ್ಷ ಕ್ಯುಸೆಕ್‌ ನೀರು ನದಿಗೆ ಬಿಟ್ಟಿದ್ದರಿಂದ ಇದ್ದಕ್ಕಿದ್ದಂತೆಯೇ 600 ಕುರಿಗಳು, ಐವರು ಕುರಿಗಾಹಿಗಳು ಇದ್ದನಡುಗಡ್ಡೆಯಲ್ಲಿ ನೀರು ತುಂಬಿಕೊಳ್ಳಲಾರಂಭಿಸಿತ್ತು. ಮಾಹಿತಿ ಗೊತ್ತಾಗುತ್ತಿದ್ದಂತೆಯೇ ರಕ್ಷಣಾ ಪಡೆ ದೌಡಾಯಿಸಿ ಬೋಟ್ ಮೂಲಕ ಐವರು ಕುರಿಗಾಹಿಗಳನ್ನು ಮಂಗಳವಾರ ರಕ್ಷಣೆ ಮಾಡಿತ್ತು.

ಮಂಗಳವಾರ ಕತ್ತಲಾಗಿದ್ದರಿಂದ ಎಲ್ಲ ಕುರಿಗಳ ರಕ್ಷಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಬುಧವಾರ ಮತ್ತೆ ಕಾರ್ಯಾಚರಣೆ ನಡೆಸಿ ಎಲ್ಲ ಕುರಿಗಳನ್ನು ರಕ್ಷಣೆಮಾಡಿ ಸುರಕ್ಷಿತವಾಗಿ ದಡದ ಈ ಕಡೆ ತಂದುಬಿಡಲಾಗಿದೆ. ಈ ಸಂದರ್ಭದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಸಹಾಯಕ ಆಯುಕ್ತ ರಮೇಶ್‌ಕೋನರೆಡ್ಡಿ, ಡಿವೈಎಸ್‌ಪಿ ಅರುಣ್‌ಕೋಳೂರು,ತಹಸೀಲ್ದರ್ ಎಸ್.ಬಿ. ಕೂಡಲಗಿ, ಸಿಪಿಐಮಹಾಂತೇಶ, ಪಿಎಸ್‌ಐ ಗಂಗಪ್ಪ ಬುರ್ಲಿ, ಕಂದಾಯಅಧಿಕಾರಿ ಮಹಮ್ಮದ್ ಸಾಧಿಕ್, ಗ್ರಾಪಂ ಅಧ್ಯಕ್ಷಪಂಪನಗೌಡ, ಪಿಡಿಒ ಸುಜಾತ ಕೋರಿ, ಗ್ರಾಮಲೆಕ್ಕಾಧಿಕಾರಿಗಳಾದ ರಾಮಪ್ಪ, ಮಹಾರುದ್ರಗೌಡ,ಎನ್‌ಡಿಆರ್‌ಎಫ್ ಅಧಿಕಾರಿ ಪರಮೇಶ್ ಹಾಗೂಅಗ್ನಿಶಾಮಕ ಸಿಬ್ಬಂದಿ, ಸ್ಥಳಿಯ ನುರಿತ ಈಜುಗಾರರು ಇದ್ದರು.