40 ಡಿ.ಸೆ ಉಷ್ಣಾಂಶಕ್ಕೆ ತತ್ತರಿಸಿದ ಬ್ರಿಟನ್‌: 13 ಮಂದಿ ಸಾವು

By Kannadaprabha News  |  First Published Jul 21, 2022, 9:57 AM IST

ನಾವಿಲ್ಲಿ ಮಳೆಯಿಂದ ತತ್ತರಿಸುತ್ತಿದ್ದರೆ ಬ್ರಿಟನ್‌ನಲ್ಲಿ ಬಿಸಿಲ ತಾಪಕ್ಕೆ ಲಂಡನ್‌ ನಗರ ಕೆಂಡವಾಗಿದೆ. ಲಂಡನ್‌ ನಗರದಲ್ಲಿ ಎಲ್ಲೆಲ್ಲೂ ಬೆಂಕಿ, ಹೊಗೆಯ ಭೀಕರ ದೃಶ್ಯ ಕಾಣಿಸುತ್ತಿದ್ದು, ಬಿಸಿಲ ತಾಪಕ್ಕೆ ಸಂಚಾರ ಸಿಗ್ನಲ್‌ಗಳು ಕರಗಿ ಹೋಗಿದೆ. ಜತೆಗೆ, ರಸ್ತೆ, ರೈಲು ಸಂಚಾರ, ವಿದ್ಯುತ್‌, ನೀರು ಪೂರೈಕೆಯಲ್ಲೂ ವ್ಯತ್ಯಯವಾಗಿದೆ.


ಸದಾ ಮಳೆ ಮತ್ತು ಚಳಿಯ ವಾತಾವರಣ ಹೊಂದಿರುವ ಬ್ರಿಟನ್‌ನಲ್ಲಿ ಮಂಗಳವಾರ ದಾಖಲೆಯ 40.3 ಡಿ.ಸೆ ಉಷ್ಣಾಂಶ ದಾಖಲಾಗಿದೆ. ಇತಿಹಾಸದಲ್ಲೇ ಕಂಡುಕೇಳರಿಯದ ಈ ಉಷ್ಣಾಂಶದ ಪರಿಣಾಮ ಬ್ರಿಟನ್‌ ಅಕ್ಷರಶಃ ತತ್ತರಿಸಿ ಹೋಗಿದೆ. ಮಂಗಳವಾರ ರಾಜಧಾನಿ ಲಂಡನ್‌ನ ಹೊರವಲಯ ಮತ್ತು ದೇಶದ ಇತರೆ ಹಲವು ಭಾಗಗಳಲ್ಲಿ ಉಷ್ಣಾಂಶ 40 ಡಿ.ಸೆ ದಾಟಿದ ಪರಿಣಾಮ, ಹುಲ್ಲಿಗೆ ಬೆಂಕಿ ಹತ್ತಿಕೊಂಡು ಅದು ನೂರಾರು ಮನೆಗಳನ್ನು ಆಹುತಿ ಪಡೆದಿದೆ. ಜೊತೆಗೆ ದೇಶದ ಮೂಲಸೌಕರ್ಯವು 40 ಡಿ.ಸೆ ಉಷ್ಣಾಂಶವನ್ನು ತಡೆಯುವ ಸಾಮರ್ಥ್ಯ ಹೊಂದಿಲ್ಲದ ಕಾರಣ, ಬಿಸಿಲಿನ ತಾಪಕ್ಕೆ ರೈಲ್ವೆ ಸಿಗ್ನಲ್‌, ವಿದ್ಯುತ್‌ ವಾಹಕ ವೈರ್‌, ನೀರು ಸಾಗಿಸುವ ಪೈಪ್‌, ರೈಲ್ವೆ ಹಳಿಗಳು ಕರಗಿ ಹಾನಿಗೆ ಒಳಗಾಗಿದ್ದು, ಸಾಮಾನ್ಯ ಜನಜೀವನದ ಮೇಲೆ ಭಾರಿ ವ್ಯತ್ಯಯ ಬೀರಿದೆ. ಕಳೆದ ಮೂರು ದಿನಗಳಿಂದಲೂ ರೈಲ್ವೆ ಸಂಪರ್ಕದಲ್ಲಿ ಭಾರಿ ವ್ಯತ್ಯಯವಾಗಿದ್ದು, ಹಳಿ ಮತ್ತು ಸಿಗ್ನಲ್‌ ವ್ಯವಸ್ಥೆ ದುರಸ್ತಿಗೆ ಇನ್ನಷ್ಟು ಸಮಯ ಬೇಕಾದ ಕಾರಣ, ಇನ್ನಷ್ಟು ದಿನ ರೈಲು ಮತ್ತು ಇತರೆ ಸಂಚಾರದಲ್ಲಿ ವ್ಯತ್ಯಯ ಮುಂದುವರೆದಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶವನ್ನು ಕಳೆದ ಒಂದು ತಿಂಗಳಿನಿಂದ ಆವರಿಸಿಕೊಂಡಿರುವ ಉಷ್ಣ ಅಲೆ ಇಷ್ಟು ದಿನ ಭಾರಿ ಪ್ರಮಾಣದಲ್ಲಿ ಅರಣ್ಯ ಪ್ರದೇಶವನ್ನು ಬಲಿ ತೆಗೆದುಕೊಂಡಿತ್ತು. ಆದರೆ ಮಂಗಳವಾರ ಅದು ನಗರ ಪ್ರದೇಶಗಳನ್ನೂ ವ್ಯಾಪಿಸಿದ ಕಾರಣ ಭಾರಿ ನಷ್ಟ ಸಂಭವಿಸಿದೆ. ಕಳೆದ 20 ದಿನಗಳಲ್ಲಿ ಉಷ್ಣ ಅಲೆಗೆ 13 ಜನರು ಸಾವನ್ನಪ್ಪಿದ್ದಾರೆ. ಆದರೆ ಬುಧವಾರ ದೇಶದ ಹಲವು ಪ್ರದೇಶಗಳಲ್ಲಿ ಮಳೆಯಾಗಿರುವ ಕಾರಣ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ.

Tap to resize

Latest Videos

ಬ್ರಿಟನ್‌ ಪ್ರಧಾನಿ ರೇಸ್‌: 5ನೇ ಸುತ್ತಲ್ಲೂ ರಿಷಿ ಸುನಕ್‌ಗೆ ಮುನ್ನಡೆ: ಗೆಲುವಿಗೆ ಇನ್ನೊಂದೇ ಹೆಜ್ಜೆ

ಅಗ್ನಿ ಅನಾಹುತ: 
ಹವಾಮಾನ ಬದಲಾವಣೆಯ ಅಡ್ಡಪರಿಣಾಮಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಬ್ರಿಟನ್‌ನಲ್ಲಿ ಮಂಗಳವಾರ ದಾಖಲೆಯ 40.3 ಡಿ.ಸೆ ಉಷ್ಣಾಂಶ ದಾಖಲಾಗಿದೆ. ಇದು ದೇಶದ ಇತಿಹಾಸದಲ್ಲೇ ಇದುವರೆಗೆ ದಾಖಲಾದ ಗರಿಷ್ಠ ಉಷ್ಣಾಂಶವಾಗಿದೆ. ಮಂಗಳವಾರ ದಾಖಲೆ ಪ್ರಮಾಣ ಉಷ್ಣಾಂಶ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜೀವಹಾನಿಗೂ ಕಾರಣವಾಗಬಹುದಾದ ರೆಡ್‌ ಅಲರ್ಚ್‌ ಅನ್ನು ಹವಾಮಾನ ಇಲಾಖೆ ನೀಡಿತ್ತು. ಅಂತೆಯೇ ಮಂಗಳವಾರ ಮಧ್ಯ, ಕೇಂದ್ರ, ಅಗ್ನೇಯ ಇಂಗ್ಲೆಂಡ್‌, ರಾಜಧಾನಿ ಲಂಡನ್‌ ಸೇರಿದಂತೆ ಹಲವು ಕಡೆ ಉಷ್ಣಾಂಶ 40 ಡಿ.ಸೆ. ದಾಟುವ ಮೂಲಕ ಜನರನ್ನು ಹೈರಾಣು ಮಾಡಿತು. ಪೂರ್ವ ಇಂಗ್ಲೆಂಡ್‌ನ ಲಿಂಕೋಲನ್‌ಶೈರ್‌ನಲ್ಲಿ ದಾಖಲೆಯ 40.3 ಡಿ.ಸೆ ಉಷ್ಣಾಂಶ ದಾಖಲಾಯಿತು. 2019ರಲ್ಲಿ ಕೇಂಬ್ರಿಡ್ಜ್‌ ಬೊಟಾನಿಕ್‌ ಗಾರ್ಡನ್‌ನಲ್ಲಿ ದಾಖಲಾಗಿದ್ದ 38.7 ಡಿ.ಸೆ ಉಷ್ಣಾಂಶವೇ ಇದುವರೆಗಿನ ದಾಖಲೆಯಾಗಿತ್ತು.

ಕಳೆದ ಒಂದು ತಿಂಗಳಿನಿಂದಲೂ ಬ್ರಿಟನ್‌ನಾದ್ಯಂತ ಮಳೆ ಸುರಿಯದ ಕಾರಣ, ಮಳೆಗೆ ಚೆನ್ನಾಗಿ ಚಿಗುರಿದ್ದ ಹುಲ್ಲು ಒಣಗಿತ್ತು. ಅದರ ಬೆನ್ನಲ್ಲೇ ಉಷ್ಣ ಅಲೆ ಬೀಸಿದ ಕಾರಣ ಒಣಗಿದ ಹುಲ್ಲಿಗೆ ಬೆಂಕಿ ಬಿದ್ದು ಅದು ಭಾರೀ ವೇಗವಾಗಿ ಎಲ್ಲೆಡೆ ಹಬ್ಬಿ ಅನಾಹುತಕ್ಕೆ ಕಾರಣವಾಗಿದೆ. ನೋಡನೋಡುತ್ತಿದ್ದಂತೆ ಬೆಂಕಿ ಹಲವು ಮನೆಗಳನ್ನು ಸುಟ್ಟುಭಸ್ಮ ಮಾಡಿದೆ. ಜೊತೆಗೆ ರೈಲ್ವೆ ಸಿಗ್ನಲ್‌, ವಿದ್ಯುತ್‌ ಜಾಲ, ನೀರು ಪೂರೈಕೆ ಜಾಲ, ರಸ್ತೆ, ರೈಲು ಹಳಿಗಳ ಮೇಲೂ ಭಾರೀ ಉಷ್ಣಾಂಶ ಪರಿಣಾಮ ಈ ಎಲ್ಲಾ ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಮಂಗಳವಾರ ಒಂದೇ ದಿನ ಅಗ್ನಿಶಾಮಕ ಕಚೇರಿಗೆ 2600ಕ್ಕೂ ಹೆಚ್ಚು ಬೆಂಕಿ ಅನಾಹುತದ ಕರೆಗಳು ಬಂದಿವೆ.

ಶಾಲೆಗೆ ರಜೆ, ಸಮುದ್ರದತ್ತ ಜನ:
ಭಾರಿ ಉಷ್ಣಾಂಶದ ಹಿನ್ನೆಲೆಯಲ್ಲಿ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಬಿಸಿಲ ಬೇಗೆ ತಪ್ಪಿಸಿಕೊಳ್ಳಲು ಸಾವಿರಾರು ಜನರು ಮಂಗಳವಾರ ಸ್ವಿಮ್ಮಿಂಗ್‌ ಪೂಲ್‌, ಸಮುದ್ರಗಳತ್ತ ಮುಖ ಮಾಡಿದ್ದರೆ, ಉಳಿದವರು ಮನೆಯೊಳಗೆ ಉಳಿದು ಉಷ್ಣ ಅಲೆಯ ಹೊಡೆತದಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದರು. ಇನ್ನು ಸಂಸತ್‌ ಸದಸ್ಯರಿಗೂ ಜಾಕೆಟ್‌ ಮತ್ತು ಟೈ ಧರಿಸುವುದರಿಂದ ವಿನಾಯ್ತಿ ನೀಡಲಾಗಿತ್ತು.

ರೈಲು, ಸಂಚಾರ ವ್ಯತ್ಯಯ:
ಭಾರಿ ಉಷ್ಣತೆಗೆ ರೈಲ್ವೆ ಸಿಗ್ನಲ್‌ ಲೈಟ್‌ ಮತ್ತು ರೈಲು ಹಳಿಗಳು ಕರಗಿ ಹಾನಿಗೊಳಗಾದ ಕಾರಣ ಸತತ ಮೂರನೇ ದಿನವೂ ರಾಜಧಾನಿ ಲಂಡನ್‌ ಸೇರಿದಂತೆ ಹಲವೆಡೆ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ಇನ್ನು ಹಲವೆಡೆ ಉಷ್ಣಾಂಶದ ಹೊಡೆತಕ್ಕೆ ರಸ್ತೆಗಳು ಕಿತ್ತುಬಂದ ಪರಿಣಾಮ ರಸ್ತೆ ಸಂಚಾರಕ್ಕೂ ಅಡ್ಡಿಯಾಗಿದೆ.

ಯಾರಿಗೆ ಬೇಕಾದ್ರೂ ಮತ ಕೊಡಿ, ರಿಷಿಗೆ ಕೊಡ್ಬೇಡಿ: ಇನ್ಫಿ ಮೂರ್ತಿ ಅಳಿಯನ ವಿರುದ್ಧ ಬೋರಿಸ್ ಜಾನ್ಸನ್‌ ಗರಂ!

40 ಡಿ.ಸೆ ಉಷ್ಣಾಂಶಕ್ಕೇ ಇಷ್ಟೇಕೆ ತೊಂದರೆ?
ಬ್ರಿಟನ್‌ನಲ್ಲಿ ವಾತಾವರಣ ಊಹಿಸಲು ಅಸಾಧ್ಯವಾಗದ ರೀತಿಯಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತದೆ. ಒಂದು ನಿಮಿಷ ಪೂರ್ಣ ಬಿಸಿಲಿದ್ದರೆ, ಮರು ನಿಮಿಷವೇ ಮಳೆಯ ಸಾಧ್ಯತೆ ಇರುತ್ತದೆ. ಇದು ವರ್ಷ ಪೂರ್ತಿ ಬ್ರಿಟನ್‌ನಲ್ಲಿ ಕಂಡುಬರುವ ವಿದ್ಯಮಾನ. ಆದರೆ ಏನೇ ಆದರೂ ಇಲ್ಲಿನ ಹವಾಮಾನ ಅತ್ಯಂತ ತಣ್ಣನೆಯದ್ದು. ಹೀಗಾಗಿಯೇ ಸದಾ ಹಸಿರು ಇಲ್ಲಿ ಕಾಣಸಿಗುತ್ತದೆ. ವರ್ಷದ ಎಲ್ಲಾ ಸಮಯದಲ್ಲೂ ಇಲ್ಲಿ ಮಳೆ ಬರುತ್ತಲೇ ಇರುತ್ತದೆ. ಹೀಗಾಗಿ ಇಲ್ಲಿನ ಮೂಲಸೌಕರ್ಯ ಕೂಡಾ ಭಾರಿ ಉಷ್ಣಾಂಶ ತಡೆಯುವ ರೀತಿಯಲ್ಲಿ ರೂಪುಗೊಂಡಿಲ್ಲ. ಹೀಗಾಗಿ ಭಾರತದಂಥ ದೇಶಗಳಲ್ಲಿ ಸಾಮಾನ್ಯವಾಗಿರುವ 40 ಡಿ.ಸೆ. ಉಷ್ಣಾಂಶ ಒಂದೇ ದಿನ ಕಾಣಿಸಿಕೊಂಡಿದ್ದಕ್ಕೆ ಇಡೀ ದೇಶ ತತ್ತರಿಸಿ ಹೋಗಿದೆ.

ರೈಲು:
ರೈಲ್ವೆ ಹಳಿಗೆ ಬಳಸುವ ಸ್ಟೀಲ್‌ ಅತ್ಯಂತ ವೇಗವಾಗಿ ಉಷ್ಣಾಂಶ ಹೀರಿಕೊಳ್ಳಬಲ್ಲದು. ವಾತಾವರಣದ ಉಷ್ಣಾಂಶಕ್ಕಿಂತ ಈ ಹಳಿಗಳು 20 ಡಿಗ್ರ ಸೆಲ್ಸಿಯಸ್‌ ಹೆಚ್ಚು ಉಷ್ಣಾಂಶ ಹೊಂದಿರುತ್ತವೆ. ಏಕಾಏಕಿ ಉಷ್ಣಾಂಶ ಹೆಚ್ಚಿದಾಗ ಹಳಿಗೆ ಬಳಸಿದ ಸ್ಟೀಲ್‌ ಹಿಗ್ಗುತ್ತದೆ. ಗರಿಷ್ಠ ಲಭ್ಯ ಸ್ಥಾನವನ್ನೂ ಮೀರಿ ಹಿಗ್ಗಿದಾಗ ಅದು ಸ್ವಸ್ಥಾನದಿಂದ ಕಳಚಿಕೊಳ್ಳುತ್ತದೆ.

ನೀರು:
ಉಷ್ಣಾಂಶ ಹೆಚ್ಚಾದಾಗ ನೀರಿನ ಬಳಕೆ ಹೆಚ್ಚಾದಾಗ ನೆಲದಾಳದಲ್ಲಿ ಹಾಕಲಾದ ಪೈಪ್‌ಗಳ ಮೇಲೆ ಒತ್ತಡ ಬೀಳುತ್ತದೆ. ಆಗ ಪೈಪ್‌ನ ಅಕ್ಕಪಕ್ಕದ ಸಡಿಲ ಮಣ್ಣು ಸಡಿಲವಾಗಿ ಪೈಪ್‌ಗೆ ಹಾಕಿದ ಬೆಂಡ್‌, ಜಾಯಿಂಟ್‌ ಪಾಯಿಂಟ್‌, ಕನೆಕ್ಟರ್‌ಗಳು ಕೂಡಾ ಸಡಿಲಗೊಂಡು ಪೈಪ್‌ ಒಡೆದು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ.

ವಿದ್ಯುತ್‌:
ಬ್ರಿಟನ್‌ನಲ್ಲಿ ವಿದ್ಯುತ್‌ ಸರಬರಾಜಿಗೆ ಹಾಕಿರುವ ವೈರ್‌ಗಳನ್ನು ಅಲ್ಯುಮಿನಿಯಂ ಇಲ್ಲವೇ ರಬ್ಬರ್‌ನಿಂದ ಮುಚ್ಚಲಾಗಿರುತ್ತದೆ. ಭಾರಿ ಉಷ್ಣತೆಗೆ ಇವು ಸುಲಭವಾಗಿ ಕರಗುವ ಕಾರಣ ವಿದ್ಯುತ್‌ ಸೇವೆಯಲ್ಲೂ ಸುಲಭವಾಗಿ ವ್ಯತ್ಯಯವಾಗುತ್ತದೆ.

click me!