Assassination attempt on Vladimir Putin: ರಷ್ಯಾ ಅಧ್ಯಕ್ಷ ಪುಟಿನ್ ಮೇಲೆ ಮತ್ತೊಮ್ಮೆ ಹತ್ಯೆ ಯತ್ನ ನಡೆದಿದ್ದು, ಕಾರು ಬಳಿ ಸ್ಫೋಟ ನಡೆಸಲಾಗಿದೆ. ಘಟನೆ ನಂತರ ಭದ್ರತಾ ಮುಖ್ಯಸ್ಥ ಸೇರಿ ಹಲವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಮತ್ತೊಮ್ಮೆ ಹತ್ಯೆಗೆ ಯತ್ನ ನಡೆದಿದ್ದು ಅವರು ಬಚಾವಾಗಿದ್ದಾರೆ ಎಂದು ಯೂರೊ ವೀಕ್ಲಿ ವರದಿ ಮಾಡಿದೆ. ಪುಟಿನ್ ಅದೃಷ್ಟವಶಾತ್ ಪಾರಾಗಿದ್ದಾರೆ ಮತ್ತು ಅವರಿಗೆ ಯಾವುದೇ ಗಾಯಗಳಾಗಿಲ್ಲ. ಹತ್ಯೆಗೆ ಯತ್ನಿಸಿದವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ರಷ್ಯಾದಲ್ಲಿ ಮಾಧ್ಯಮ ನಿರ್ಬಂಧ ಇರುವುದರಿಂದ ಹತ್ಯೆ ಯತ್ನ ಯಾವಾಗ ನಡೆಯಿತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಹಲವಾರು ಜನರನ್ನು ಬಂಧಿಸಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಯೂರೊ ವೀಕ್ಲಿ ಪ್ರಕಾರ ರಷ್ಯಾ ಅಧ್ಯಕ್ಷ ಪುಟಿನ್‌ರ ಭದ್ರತೆ ಈ ಘಟನೆ ನಂತರ ಇಮ್ಮಡಿಯಾಗಿದ್ದು, ಸುರಕ್ಚತೆಯ ಬಗ್ಗೆ ಭೀತಿ ಹುಟ್ಟಿದೆ ಎನ್ನಲಾಗಿದೆ. ಪುಟಿನ್‌ರ ಕಾರಿನ ಎಡ ವೀಲ್ ಬಳಿ ದೊಡ್ಡ ಸ್ಫೋಟವಾಗಿದೆ ಎಂದು ಹೇಳಲಾಗಿದೆ.
"ಪುಟಿನ್ ಅಧ್ಯಕ್ಷೀಯ ನಿವಾಸಕ್ಕೆ ತೆರಳುತ್ತಿದ್ದಾಗ ಕೆಲ ಕಿಲೋಮೀಟರ್ ಇದೆ ಎನ್ನುವಾಗ ಆಂಬುಲೆನ್ಸ್ ಒಂದು ಪುಟಿನ್ ಎಸ್ಕಾರ್ಟ್‌ಗೆ ಅಡ್ಡ ಬಂದಿದೆ. ಪುಟಿನ್ ಕಾರಿನ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನ ತಕ್ಷಣ ಕಾರು ನಿಂತಿದ್ದರಿಂದ ನಿಲ್ಲಿಸಲು ಸಾಧ್ಯವಾಗದೇ ಮುಂದೆ ಹೋಗಿದೆ. ಅದಾದ ನಂತರ ಸ್ಫೋಟ ಕೇಳಿಬಂದಿದೆ," ಎಂದು ಯೂರೊ ವೀಕ್ಲಿ ವರದಿಯಲ್ಲಿ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರ ಹೇಳಿಕೆ ದಾಖಲಿಸಿದ್ದಾರೆ.
ಇದನ್ನೂ ಓದಿ: ವ್ಲಾದಿಮಿರ್ ಪುಟಿನ್ ಆಪ್ತನ ಗುರಿಯಾಗಿಸಿ ಬಾಂಬ್ ದಾಳಿ, ಬಲಿಯಾಗಿದ್ದು ಅಮಾಯಕ ಮಗಳು!
ಈ ಘಟನೆಯ ನಂತರ ಪುಟಿನ್‌ರ ಭದ್ರತಾ ಮುಖ್ಯಸ್ಥ ಮತ್ತು ಹಲವು ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದು ಅವರನ್ನು ಜೈಲಿಗೆ ಹಾಕಲಾಗಿದೆ. ಯಾಕೆಂದರೆ ಪುಟಿನ್ ಅವರ ಮೂವ್‌ಮೆಂಟ್ಸ್ ಕೆಲವೇ ಜನರಿಗೆ ಗೊತ್ತಿತ್ತು. ಅವರಲ್ಲೇ ಯಾರೋ ಇದರ ಮಾಹಿತಿ ಹೊರ ಹಾಕಿರುವ ಸಾಧ್ಯತೆಯಿದೆ. ಆದರೆ ಈ ಮಾಹಿತಿಯ ಖಚಿತತೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ. ನನ್ನ ಮೇಲೆ ಐದು ಹತ್ಯೆ ಪ್ರಯತ್ನ ನಡೆದಿದೆ, ಎಲ್ಲಾ ಯತ್ನದಿಂದ ಬಚಾವಾಗಿದ್ದೇನೆ ಎಂದು 2017ರಲ್ಲಿ ಪುಟಿನ್ ಸಾರ್ವಜನಿಕವಾಗಿ ತಿಳಿಸಿದ್ದರು.
ಇದನ್ನೂ ಓದಿ: ಜನಸಂಖ್ಯೆ ಹೆಚ್ಚಳಕ್ಕೆ ಪುಟಿನ್ ತಂತ್ರ, 10 ಮಕ್ಕಳನ್ನು ಹೆತ್ತರೆ ಹೆಂಗಸರಿಗೆ ಲಕ್ಷ ಲಕ್ಷ ಹಣ
ಶಾಂಘಾಯ್ ಕಾರ್ಪೊರೇಷನ್ ಸದಸ್ಯ ದೇಶಗಳ ಸಮಿತಿ 22ನೇ ಸಭೆಗೆ ಪುಟಿನ್ ಹಾಜರಾಗಲಿದ್ದಾರೆ. ಉಜ್ಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ಈ ಸಭೆ ನಡೆಯಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜತೆ ಮುಖಾಮುಖಿ ಮಾತುಕತೆಯಲ್ಲಿ ಪುಟಿನ್ ಭಾಗಿಯಾಗಲಿದ್ದಾರೆ.