Quad Countries: ಚೀನಾ ಕಳ್ಳಾಟಕ್ಕೆ ಕ್ವಾಡ್‌ ಕಟ್ಟೆಚ್ಚರಿಕೆ

Published : May 25, 2022, 04:36 AM IST
Quad Countries: ಚೀನಾ ಕಳ್ಳಾಟಕ್ಕೆ ಕ್ವಾಡ್‌ ಕಟ್ಟೆಚ್ಚರಿಕೆ

ಸಾರಾಂಶ

*   ಭಾರತ, ಅಮೆರಿಕ, ಜಪಾನ್‌, ಆಸೀಸ್‌ನಿಂದ ಡ್ರ್ಯಾಗನ್‌ ದೇಶಕ್ಕೆ ವಾರ್ನಿಂಗ್‌ *  ಮೋದಿಗೆ ಕ್ವಾಡ್‌ ನಾಯಕರ ಹೊಗಳಿಕೆ *  ಸಮುದ್ರದಲ್ಲಿ ಕಣ್ಗಾವಲು  

ಟೋಕಿಯೋ(ಮೇ.25): ಮಂಗಳವಾರ ಇಲ್ಲಿ ಮುಕ್ತಾಯಗೊಂಡ ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಪ್ರೇಲಿಯಾ ದೇಶಗಳನ್ನು ಒಳಗೊಂಡ ‘ಕ್ವಾಡ್‌ ಶೃಂಗಸಭೆ’, ಏಷ್ಯಾ-ಪೆಸಿಫಿಕ್‌ ವಲಯದಲ್ಲಿ ಅನಗತ್ಯ ಉಪದ್ರವಕಾರಿ ಚಟುವಟಿಕೆ ನಡೆಸುತ್ತಿರುವ ಚೀನಾಗೆ ಬಲವಾದ ಎಚ್ಚರಿಕೆ ನೀಡಿದೆ.

‘ಇಂಡೋ-ಪೆಸಿಫಿಕ್‌ ವಲಯದಲ್ಲಿನ ಯಥಾಸ್ಥಿತಿ ಬದಲಾವಣೆಗೆ ಯಾವುದೇ ಪ್ರಚೋದನಾಕಾರಿ ಅಥವಾ ಏಕಪಕ್ಷೀಯ ಯತ್ನವನ್ನು ಬಲವಾಗಿ ವಿರೋಧಿಸುತ್ತೇವೆ’ ಎಂದು ಹೇಳಿರುವ ಕ್ವಾಡ್‌ ದೇಶಗಳು, ವಿವಾದವನ್ನು ಯಾವುದೇ ಬಲ ಪ್ರಯೋಗ ಅಥವಾ ಬೆದರಿಕೆ ಬದಲಾಗಿ ಶಾಂತಿಯುತ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿವೆ. ‘ಕ್ವಾಡ್‌’ನ ಈ ಸಂದೇಶ, ಕಳೆದ ಕೆಲ ವರ್ಷಗಳಿಂದ ಇಂಡೋ-ಪೆಸಿಫಿಕ್‌ ವಲಯದಲ್ಲಿ ತನ್ನ ಅಧಿಪತ್ಯ ಸ್ಥಾಪನೆಗೆ ಯತ್ನಿಸುತ್ತಿರುವ ಚೀನಾಕ್ಕೆ ರವಾನಿಸಿರುವ ಸ್ಪಷ್ಟಸಂದೇಶವಾಗಿದೆ.

ಜಪಾನ್‌ನಲ್ಲಿ ಮೊಳಗಿತು ಜೈ ಹೋ ಮೋದಿ, ಚೀನಾಗೆ ಪುಕಪುಕ!

ಈ ಎಚ್ಚರಿಕೆಯ ಜೊತೆಜೊತೆಗೆ, ಇಂಡೋ-ಪೆಸಿಫಿಕ್‌ ವಲಯದಲ್ಲಿನ ಸಮುದ್ರದಲ್ಲಿ ಚೀನಾ ನಡೆಸುವ ‘ಅಕ್ರಮ ಚಟುವಟಿಕೆ’ಗಳ ಮೇಲೆ ತಂತ್ರಜ್ಞಾನದ ಸಹಕಾರದಿಂದ ಕಣ್ಗಾವಲು ಇಡಲು ತೀರ್ಮಾನಿಸಿವೆ. ಇದಕ್ಕೆಂದು ‘ಇಂಡೋ-ಪೆಸಿಫಿಕ್‌ ಡೊಮೇನ್‌ ಅವೇರ್‌ನೆಸ್‌’ ಎಂಬ ವೇದಿಕೆ ಸ್ಥಾಪನೆಗೂ ಕ್ವಾಡ್‌ ದೇಶಗಳು ನಿರ್ಧರಿಸಿವೆ. ಈ ಎರಡೂ ನಿರ್ಧಾರಗಳು ಈಗಾಗಲೇ ಕ್ವಾಡ್‌ ಒಕ್ಕೂಟವನ್ನು ಬಲವಾಗಿ ವಿರೋಧಿಸುತ್ತಿರುವ ಚೀನಾವನ್ನು ಮತ್ತಷ್ಟು ಕೆರಳಿಸುವ ಸಾಧ್ಯತೆ ಇದೆ.

ಚೀನಾಕ್ಕೆ ಎಚ್ಚರಿಕೆ:

ಮಂಗಳವಾರ ಇಲ್ಲಿ ನಡೆದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಭಾರತದ ಪ್ರಧಾನಿ ನರೇಂದ್ರ ಮೋದಿ, ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಮತ್ತು ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ನಡುವಿನ ಸುದೀರ್ಘ ಚರ್ಚೆಯ ಬಳಿಕ ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ‘ಇಂಡೋ-ಪೆಸಿಫಿಕ್‌ ವಲಯದಲ್ಲಿ ಯಾವುದೇ ಆಕ್ರಮಣಕಾರಿ, ಪ್ರಚೋದನಾಕಾರಿ ಅಥವಾ ಏಕಪಕ್ಷೀಯ ಕ್ರಮಗಳ ಮೂಲಕ ಯಥಾಸ್ಥಿತಿ ಬದಲಾವಣೆಗೆ ಯತ್ನಿಸುವ ಮತ್ತು ವಿವಾದಿತ ಪ್ರದೇಶಗಳಲ್ಲಿ ಸೇನಾ ಜಮಾವಣೆ, ಕರಾವಳಿ ಪಡೆಯ ಅಪಾಯಕಾರಿ ಬಳಕೆ ಮತ್ತು ನೌಕಾಪಡೆ ಬಳಕೆ ಮೂಲಕ ಉದ್ವಿಗ್ನಕಾರಿ ಪರಿಸ್ಥಿತಿ ನಿರ್ಮಾಣ ಹಾಗೂ ಕರಾವಳಿಯಲ್ಲಿ ಸಂಪನ್ಮೂಲ ಉತ್ಖನನದಂಥ ಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ’ ಎಂದು ಚೀನಾಕ್ಕೆ ಸ್ಪಷ್ಟವಾಗಿ ಸಂದೇಶ ರವಾನಿಸಲಾಗಿದೆ.

ಜೊತೆಗೆ ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರ ವಲಯ ಸೇರಿದಂತೆ ವಿವಾದಿತ ಸಮುದ್ರ ವಲಯದಲ್ಲಿ ಅಂತಾರಾಷ್ಟ್ರೀಯ ಕಾನೂನುಗಳನ್ನು ಪಾಲಿಸುವ ಮೂಲಕ, ಸಮುದ್ರ ಮತ್ತು ಆಗಸದಲ್ಲಿ ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ಕಾಪಾಡಲು ಕ್ವಾಡ್‌ ದೇಶಗಳು ಬದ್ಧ ಎಂದು ಜಂಟಿ ಹೇಳಿಕೆಯಲ್ಲಿ ಕ್ವಾಡ್‌ ದೇಶಗಳು ಸ್ಪಷ್ಟಪಡಿಸಿವೆ.

ಸಮುದ್ರದಲ್ಲಿ ಕಣ್ಗಾವಲು:

ಇದೇ ವೇಳೆ ಇಂಡೋ-ಪೆಸಿಫಿಕ್‌ ವಲಯದ ಸಮುದ್ರದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಕಣ್ಗಾವಲಿಗಾಗಿ ಪಾಲುದಾರ ದೇಶಗಳು ಒಂದಾಗಲು ನಿರ್ಧರಿಸಿವೆ. ಈ ಯೋಜನೆ ಅನ್ವಯ ಇಡೀ ವಲಯದಲ್ಲಿ ಸ್ಥಿರತೆ ಮತ್ತು ಸಮೃದ್ಧಿಗಾಗಿ ಪರಸ್ಪರ ತಂತ್ರಜ್ಞಾನ ಹಂಚಿಕೆ, ಮಾಹಿತಿ ಹಂಚಿಕೆ ಮತ್ತು ತರಬೇತಿ ಮೂಲಕ ಚೀನಾದ ಹಡಗುಗಳ ಚಟುವಟಿಕೆ ಮೇಲೆ ನಿಗಾ ಇಡಲು ಕ್ವಾಡ್‌ ದೇಶಗಳು ನಿರ್ಧರಿಸಿವೆ.

ಹವಾಮಾನ ಬದಲಾವಣೆ:

ಹವಾಮಾನ ಬದಲಾವಣೆ ತಡೆಯ ತುರ್ತು ಅಗತ್ಯವನ್ನು ಮನಗಂಡಿರುವ ಕ್ವಾಡ್‌ ದೇಶಗಳು ಇದಕ್ಕಾಗಿ ಕ್ಯೂ-ಚಾಂಪ್‌ (ಕ್ವಾಡ್‌ ಕ್ಲೈಮ್ಯಾಟ್‌ ಚೇಂಜ್‌ ಅಡಾಪ್ಟೇಷನ್‌ ಆ್ಯಂಡ್‌ ಮಿಟಿಗೇಷನ್‌ ಪ್ಯಾಕೇಜ್‌) ಘೋಷಣೆ ಮಾಡಿವೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಮತ್ತು ಅಳವಡಿಕೆ ವಿಷಯದಲ್ಲಿ ವೈಯಕ್ತಿವಾಗಿ ಮತ್ತು ಸಾಮುದಾಯಿಕವಾಗಿ ಹೋರಾಡಲು ಪರಸ್ಪರ ಕೈಜೋಡಿಸಲು ಕ್ವಾಡ್‌ ದೇಶಗಳು ಒಪ್ಪಿಕೊಂಡಿವೆ.

ಆರೋಗ್ಯ ಸಹಕಾರ:

ಕೋವಿಡ್‌ ನಿರ್ಮೂಲನೆಯಲ್ಲಿ ಯಾವುದೇ ಹೊಸ ತಳಿಗಳಿಂದ ಎದುರಾಗಬಹುದಾದ ಅಪಾಯಗಳನ್ನು ನಿಗ್ರಹಿಸಲು, ಅದಕ್ಕೆ ಅನುಗುಣವಾದ ಲಸಿಕೆ ಅಭಿವೃದ್ಧಿ, ಪರೀಕ್ಷೆ, ಚಿಕಿತ್ಸೆ ವಿಷಯದಲ್ಲಿ ಪರಸ್ಪರ ಸಹಕಾರ ನೀಡಿ ಮುಂದುವರೆಯಲು ಕ್ವಾಡ್‌ ದೇಶಗಳು ಸಮ್ಮತಿಸಿವೆ.

ಮೋದಿ ಸರ್ಕಾರದ ಈ ನಡೆಗೆ ಅಮೆರಿಕಾ ಕಿಡಿ, ಭಾರತದ ಬೆಂಬಲಕ್ಕೆ ನಿಂತ ಚೀನಾ!

ಮೂಲಸೌಕರ್ಯ:

ಇಂಡೋ-ಪೆಸಿಫಿಕ್‌ ವಲಯದ ಸಮೃದ್ಧಿಯದಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಸೌಕರ್ಯ ವಲಯದಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸಲೂ ಕ್ವಾಡ್‌ ದೇಶಗಳು ಸಮ್ಮತಿಸಿವೆ.

ಮೋದಿಗೆ ಕ್ವಾಡ್‌ ನಾಯಕರ ಹೊಗಳಿಕೆ

ಟೋಕಿಯೋ: ಕೋವಿಡ್‌ ಸಾಂಕ್ರಾಮಿಕದ ವೇಳೆ ದೇಶವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿ, ಜಾಗತಿಕ ಮಟ್ಟದಲ್ಲೂ ಕೋವಿಡ್‌ ನಿರ್ಮೂಲನೆಗೆ ಶ್ರಮಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌, ಆಸ್ಪ್ರೇಲಿಯಾ ಪ್ರಧಾನಿ ಅಲ್ಬನೀಸ್‌, ಜಪಾನ್‌ ಪ್ರಧಾನಿ ಕಿಶಿದಾ ಬಹುವಾಗಿ ಹೊಗಳಿದ್ದಾರೆ. ಕ್ವಾಡ್‌ ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಸೇರಿದಂತೆ ಎಲ್ಲಾ ವಿಶ್ವ ನಾಯಕರಿಗಿಂತ ಮುಂದೆ ಇರುವ ಫೋಟೋ ‘ವಿಶ್ವಗುರು ಮೋದಿ’ ಎಂದು ವೈರಲ್‌ ಆಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!