* ಒಮಿಕ್ರೋನ್ ವೇಗವಾಗಿ ಹಬ್ಬುತ್ತೆ, ಡೇಂಜರ್ ಅಲ್ಲ: ಜಾಗತಿಕ ತಜ್ಞರು
* ಮಾನವರ ರೋಗ ನಿರೋಧಕ ಶಕ್ತಿಯನ್ನು ಭೇದಿಸದು: ಅಮೆರಿಕ, ಇಸ್ರೇಲ್, ಆಫ್ರಿಕಾ ತಜ್ಞರು
* ಸೋಂಕು ತಗುಲಿದರೂ ರೋಗಿಗಳಿಗೆ ಆಕ್ಸಿಜನ್ ಬೇಕಿಲ್ಲ, ಹಿಂದಿಗಿಂತ ಬಹುಬೇಗನೆ ಚೇತರಿಕೆ
* ಒಮಿಕ್ರೋನ್ ಸೋಂಕಿತರು 2.8 ದಿನದಲ್ಲಿ ಗುಣಮುಖರಾಗುತ್ತಿದ್ದಾರೆ
* ಹಿಂದಿನ ರೂಪಾಂತರಿಗಳ ಅವಧಿಯಲ್ಲಿ ಈ ಸಮಯ 8.5 ದಿನ ಇತ್ತು
ನ್ಯೂಯಾರ್ಕ್ (ಡಿ. 07): ಒಮಿಕ್ರೋನ್ (Omicron Variant) ರೂಪಾಂತರಿ ಕೊರೋನಾ ವೈರಸ್ (Coronavirus)ಕುರಿತು ನಾನಾ ರೀತಿಯ ಆತಂಕಗಳು ವ್ಯಕ್ತವಾಗುತ್ತಿರುವುದರ ನಡುವೆಯೇ, ‘ಒಮಿಕ್ರೋನ್ ತಳಿ ಹೆಚ್ಚು ಸಾಂಕ್ರಾಮಿಕ (transmission) ಇರಬಹುದು. ಆದರೆ ಮನುಷ್ಯನ ದೇಹದಲ್ಲಿರುವ ಇನ್ನೂ ಕೆಲವು ರೋಗನಿರೋಧಕ ಶಕ್ತಿಗಳ ಕೋಟೆಯನ್ನು ಅದರಿಂದ ಭೇದಿಸಲಾಗದು. ಹೀಗಾಗಿ ಈ ಹಿಂದಿನ ಕೊರೋನಾ ರೂಪಾಂತರಿಗಳಂತೆ ಗಂಭೀರ ಕಾಯಿಲೆ ಹಾಗೂ ಸಾವು-ನೋವನ್ನು ಅದು ಸೃಷ್ಟಿಸುವುದಿಲ್ಲ’ ಎಂದು ಹಲವು ತಜ್ಞರು ಶುಭ ಸುದ್ದಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಂಥ ದೇಶಗಳಲ್ಲಿ ಇರುವ ಒಮಿಕ್ರೋನ್ ಸೋಂಕಿತರ ಆರೋಗ್ಯ ಗುಣಲಕ್ಷಣಗಳನ್ನು ಅವಲೋಕಿಸಲಾಗಿದೆ. ಇದರ ಜತೆಗೆ ಪ್ರಯೋಗಾಲಯಗಳಲ್ಲಿ ರೂಪಾಂತರಿಯ ಕೆಲವು ಹೆಚ್ಚುವರಿ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಈ ಅಂಶಗಳು ಕಂಡುಬಂದಿವೆ ಎಂದು ದಕ್ಷಿಣ ಆಫ್ರಿಕಾದ ಕೇಪ್‌ಟೌನ್, ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯ ಹಾಗೂ ಇಸ್ರೇಲ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಉನ್ನತ ಸಂಸ್ಥೆಗಳ ತಜ್ಞರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇದಕ್ಕೆ ಪೂರಕವೆಂಬಂತೆ ದಕ್ಷಿಣ ಆಫ್ರಿಕಾದಲ್ಲಿ (South Africa)ಬಹುತೇಕ ಒಮಿಕ್ರೋನ್ ಸೋಂಕಿತರು, ಈ ಹಿಂದಿನ ಅಲೆಗಳಲ್ಲಿ ಕಂಡುಬಂದಂತೆ ಆಕ್ಸಿಜನ್ ಮೇಲೆ ಅವಲಂಬಿತರಾಗಿಲ್ಲ. ಸಾಮಾನ್ಯ ಚಿಕಿತ್ಸೆಯಿಂದಲೇ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇನ್ನೊಂದು ವರದಿ ಹೇಳಿದೆ.
ತಜ್ಞರು ನೀಡುವ ಈ ಎಲ್ಲ ಎಚ್ಚರಿಕೆ ಪಾಲಿಸಲೇಬೇಕು
2ನೇ ಹಂತದಲ್ಲಿ ಭೇದಿಸಲಾಗದು: ಮೊದಲ ಹಂತದಲ್ಲಿ ಲಸಿಕೆಯ ರಕ್ಷಣಾ ಕವಚವನ್ನು ಕೆಲ ಮಟ್ಟಿಗೆ ಭೇದಿಸಿ ಒಮಿಕ್ರೋನ್ ರೂಪಾಂತರಿ ದೇಹದೊಳಗೆ ಪ್ರವೇಶಿಸುತ್ತದೆ. ಇದಾದ ನಂತರ 2ನೇ ಹಂತದ ರಕ್ಷಣಾ ಕವಚವಾದ ‘ಟಿ-ಸೆಲ್’ ಅನ್ನು ಭೇದಿಸಲು ಒಮಿಕ್ರೋನ್ ಯತ್ನಿಸುತ್ತದೆ. ಆದರೆ ಇದನ್ನು ಪ್ರವೇಶಿಸಲು ಒಮಿಕ್ರೋನ್‌ಗೆ ಆಗುವುದಿಲ್ಲ. ಲಸಿಕೆಯ ಕವಚ ಭೇದಿಸಿ ಒಮಿಕ್ರೋನ್ ಮುನ್ನುಗ್ಗಿದರೂ ‘ಟಿ-ಸೆಲ್‌ಗಳು’ ಸೋಂಕಿನಿಂದ ಬಾಧಿತವಾದ ಕೋಶಗಳಲ್ಲಿನ ವೈರಾಣುಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ. ಹೀಗಾಗಿ ಈ ಹಿಂದಿನ ರೂಪಾಂತರಿ ವೈರಾಣುಗಳಂತೆ ಹೆಚ್ಚು ಸೋಂಕು ಹಾಗೂ ಸಾವು-ನೋವು ಸೃಷ್ಟಿಸುವ ಶಕ್ತಿ ಒಮಿಕ್ರೋನ್‌ಗಿಲ್ಲ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ.
ಆಕ್ಸಿಜನ್ ಅವಲಂಬನೆ ಇಲ್ಲ: ಈ ನಡುವೆ ಕಳೆದ 2 ವರ್ಷದಲ್ಲಿ ಕಂಡುಬಂದಿದ್ದ ಸೋಂಕಿನ ತೀವ್ರ ಸ್ವರೂಪವು ‘ಒಮಿಕ್ರೋನ್’ ಸೋಂಕಿತರಲ್ಲಿ ಕಂಡುಬರುತ್ತಿಲ್ಲ. ಒಮಿಕ್ರೋನ್‌ನ ಕೇಂದ್ರಸ್ಥಾನ ಎಂದು ಗುರುತಿಸಲಾಗಿರುವ ದಕ್ಷಿಣ ಆಫ್ರಿಕಾದ ಶ್ವಾನೆ ಪಟ್ಟಣದ ಜಿಲ್ಲಾ ಆಸ್ಪತ್ರೆಯಲ್ಲಿ ಒಮಿಕ್ರೋನ್‌ನಿಂದ ಪೀಡಿತರಾದ 42 ರೋಗಿಗಳು ದಾಖಲಾಗಿದ್ದಾರೆ. ಇವರಲ್ಲಿ ಶೇ.70ರಷ್ಟುರೋಗಿಗಳಿಗೆ ‘ಆಕ್ಸಿಜನ್ ಸಪೋರ್ಟ್’ ಬೇಕಿಲ್ಲ. ಸಾಮಾನ್ಯ ಚಿಕಿತ್ಸೆಯಿಂದ ಗುಣವಾಗುತ್ತಿದ್ದಾರೆ. ಹಿಂದಿನ 18 ತಿಂಗಳಲ್ಲಿ ಕೋವಿಡ್ ರೋಗಿಗಳು ಸರಾಸರಿ 8.5 ದಿನ ಆಸ್ಪತ್ರೆಗಳಲ್ಲಿ ಇದ್ದು ಗುಣವಾಗುತ್ತಿದ್ದರು. ಆದರೆ ಈಗ ಕೇವಲ ಸರಾಸರಿ 2.8 ದಿನದಲ್ಲಿ ಗುಣಮುಖರಾಗುತ್ತಿದ್ದಾರೆ ಎಂದು ಆಫ್ರಿಕಾ ವೈದ್ಯಕೀಯ ಸಂಶೋಧನಾ ಪರಿಷತ್ ನಿರ್ದೇಶಕ ಡಾ. ಫರೀದ್ ಅಬ್ದುಲ್ಲಾ ಹೇಳಿದ್ದಾರೆ.
ಇದು ಡೆಲ್ಟಾದಷ್ಟುಮಾರಕವಲ್ಲ. ಡೆಲ್ಟಾಗಿಂತ ವೇಗವಾಗಿ ಒಮಿಕ್ರೋನ್ ಸಾಂಕ್ರಾಮಿಕ ಆಗಬಹುದು. ಆದರೆ ಡೆಲ್ಟಾದಷ್ಟು ಪ್ರಾಣಕ್ಕೆ ಸಂಚಕಾರ ತರುವುದಿಲ್ಲ ಎಂದು ಇಸ್ರೇಲ್‌ನ ಹೀಬ್ರೂ ವಿವಿ ತಜ್ಞಡ್ರೋರ್ ಮೆವೋರಾರಯಕ್ ಹೇಳಿದ್ದಾರೆ. ಒಮಿಕ್ರೋನ್ ನಿಂದ ಟಿ-ಸೆಲ್‌ಗೆ ಏನೂ ಆಗದು. ಒಮಿಕ್ರೋನ್ ಸೋಂಕು ಲಸಿಕೆಯ ಕವಚವನ್ನು ಭೇದಿಸಿದರೂ ‘ಟಿ-ಸೆಲ್’ ಕವಚವನ್ನು ಭೇದಿಸದು ಎಂಬ ವಿಶ್ವಾಸವಿದೆ ಎಂದು ಕೇಪ್‌ಟೌನ್ ವಿವಿ ರೋಗಾಣು ತಜ್ಞೆ ವೆಂಡಿ ಬರ್ಗರ್ಸ್ ತಿಳಿಸಿದ್ದಾರೆ.
ಲಸಿಕೆಗಳು ಗಂಭೀರ ರೋಗದಿಂದ ರಕ್ಷಣೆ ನೀಡುತ್ತವೆ. ಒಮಿಕ್ರೋನ್ ಕೂಡ ಎಲ್ಲ ರೋಗನಿರೋಧಕ ಶಕ್ತಿಯ ಕೋಶಗಳನ್ನು ಭೇದಿಸದು ಎಂದು ತಿಳಿದುಬರುತ್ತಿದೆ ಎಂದು ನ್ಯೂಯಾರ್ಕ್ (New York) ರಾಕೆಫೆಲ್ಲರ್ ವಿವಿ ತಜ್ಞೆ ಥಿಯೋಡೋರಾ ಮಾಹಿತಿ ನೀಡಿದ್ದಾರೆ. ಲಸಿಕೆ ಪಡೆಯದಿದ್ದರೆ ಎಚ್ಚರ ಎಂಬುದನ್ನು ನೆನಪಿಸಿದ್ದಾರೆ.
ಮರುಸೋಂಕು: ಲಸಿಕೆ ಪಡೆಯದವರು, ಮಕ್ಕಳಿಗೆ ಹೆಚ್ಚಿನ ಅಪಾಯದ ಸಾಧ್ಯತೆ: ಡೆಲ್ಟಾರೂಪಾಂತರಿಗೆ ಹೋಲಿಸಿದರೆ ಒಮ್ಮೆ ಸೋಂಕು ತಗುಲಿದವರಿಗೆ 90 ದಿನಗಳ ಬಳಿಕ ಮರು ಸೋಂಕು ತಗುಲಿಸುವ ಸಾಮರ್ಥ್ಯವು ಡೆಲ್ಟಾವೈರಸ್‌ಗೆ ಹೋಲಿಸಿದರೆ ಒಮಿಕ್ರೋನ್ ರೂಪಾಂತರಿಗೆ ಮೂರು ಪಟ್ಟು ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಅಭಿಪ್ರಾಯ ಪಟ್ಟಿದ್ದಾರೆ.
ಒಮಿಕ್ರೋನ್ ಪ್ರಕರಣಗಳ ಏರಿಕೆ ಹಾಗೂ ಸೋಂಕಿತರು ಆಸ್ಪತ್ರೆಗೆ ದಾಖಲಾದ ಸಂಖ್ಯೆಗಳಲ್ಲಿ ಏರಿಕೆಯ ನಡುವೆ ಸಾಕಷ್ಟುದಿನಗಳ ಅಂತರ ಕಂಡುಬಂದಿದೆ. ಹೀಗಾಗಿ ಒಮಿಕ್ರೋನ್ ಪ್ರಭಾವ ಎಷ್ಟುತೀವ್ರವಾಗಿರಬಹುದು ಎಂಬುದನ್ನು ತಿಳಿದುಕೊಳ್ಳಲು ಇನ್ನೂ ಎರಡರಿಂದ ಮೂರು ವಾರಗಳ ಕಾಲ ಕಾಯಬೇಕಾಗಿದೆ ಎಂದಿದ್ದಾರೆ.
ಒಮಿಕ್ರೋನ್ ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಲಸಿಕೆಯನ್ನು ಪಡೆಯದವರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವುದು ಆಘಾತಕಾರಿ. ಬಹಳಷ್ಟುದೇಶಗಳಲ್ಲಿ ಮಕ್ಕಳಿಗೆ ಯಾವುದೇ ಲಸಿಕೆಯ ರಕ್ಷಣೆಯನ್ನು ನೀಡಲಾಗಿಲ್ಲ. ಕೆಲವೇ ದೇಶಗಳು ಮಕ್ಕಳಿಗೂ ಲಸಿಕೆ ನೀಡಲು ಮುಂದಾಗಿವೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಒಮಿಕ್ರೋನ್‌ಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.