ಇರಾನ್ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಅಮೆರಿಕವು 3 ಸಾವಿರ ಹೆಚ್ಚುವರಿ ಯೋಧರನ್ನು ನಿಯೋಜಿಸಿದೆ. ಬಾಗ್ದಾದ್‌ನಲ್ಲಿರುವ ಅಮೆರಿಕ ದೂತಾವಾಸದ ಆವರಣ ಹಾಗೂ 2 ವಾಯುನೆಲೆಗಳ ಮೇಲೆ ಶನಿವಾರ 5 ಕ್ಷಿಪಣಿಗಳಿಂದ ಪ್ರತ್ಯೇಕ ದಾಳಿ ನಡೆಸಲಾಗಿದೆ
ವಾಷಿಂಗ್ಟನ್/ಟೆಹ್ರಾನ್ [ಜ.05]: ಇರಾನ್ ರಕ್ಷಣಾ ಪಡೆ ದಂಡನಾಯಕ ಖಾಸಿಂ ಸುಲೈಮಾನಿಯನ್ನು ಅಮೆರಿಕವು ಡ್ರೋನ್ ದಾಳಿ ನಡೆಸಿ ಇರಾಕ್‌ನಲ್ಲಿ ಹತ್ಯೆ ಮಾಡುತ್ತಿದ್ದಂತೆಯೇ, ಅಮೆರಿಕದ ಮೇಲೆ ‘ಕಠೋರ ಪ್ರತೀಕಾರ’ ತೀರಿಸಿಕೊಳ್ಳುವ ಬೆದರಿಕೆಯನ್ನು ಇರಾನ್ ಹಾಕಿದೆ. ಇದರ ನಡುವೆಯೇ ಇರಾನ್ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಅಮೆರಿಕವು 3 ಸಾವಿರ ಹೆಚ್ಚುವರಿ ಯೋಧರನ್ನು ನಿಯೋಜಿಸಿದೆ.
ಏತನ್ಮಧ್ಯೆ, ಬಾಗ್ದಾದ್‌ನಲ್ಲಿರುವ ಅಮೆರಿಕ ದೂತಾವಾಸದ ಆವರಣ ಹಾಗೂ 2 ವಾಯುನೆಲೆಗಳ ಮೇಲೆ ಶನಿವಾರ 5 ಕ್ಷಿಪಣಿಗಳಿಂದ ಪ್ರತ್ಯೇಕ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಕ್ಷಿಪಣಿ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ಶ್ವೇತಭವನ, ಭಯೋತ್ಪಾದನೆ ಪ್ರಯತ್ನಗಳ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮ ತಂಟೆಗೆ ಬಂದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತಿದೆ ಎಂದು ಕಟ್ಟೆಚ್ಚರಿಕೆ ನೀಡಿದೆ. ಈ ಎಲ್ಲ ಬೆಳವಣಿಗೆಗಳು 3ನೇ ವಿಶ್ವಯುದ್ಧಕ್ಕೆ ಮುನ್ನುಡಿ ಬರೆಯುವ ಆತಂಕ ತೀವ್ರಗೊಂಡಿದೆ.
ಇರಾನ್ ಪ್ರತೀಕಾರ?: ಏತನ್ಮಧ್ಯೆ, ಅಮೆರಿಕದ ಮೇಲೆ ಇರಾನ್ ಪ್ರತೀಕಾರ ಬೆದರಿಕೆಯನ್ನು ರಕ್ಷಣೆ ಮತ್ತು ರಾಜಕೀಯ ಚಿಂತಕರು ಮೂರು ಅಂಶಗಳಿಂದ ವಿಶ್ಲೇಷಿದ್ದಾರೆ. 1. ಅಮೆರಿಕದ ಮೇಲೆ ಸೈಬರ್ ದಾಳಿ ನಡೆಸುವುದು. 2. ಉಗ್ರರನ್ನು ಬಳಸಿ ಅಮೆರಿಕ ಹಾಗೂ ಅದರ ಮಿತ್ರ ದೇಶಗಳ ಮೇಲೆ ಪರೋಕ್ಷ ಸಮರ ಸಾರುವುದು. 3. ಅಮೆರಿಕ ವಿರೋಧಿ ದೇಶಗಳನ್ನು ಒಗ್ಗೂಡಿಸಿ ಯುದ್ಧ ಘೋಷಣೆ ಮಾಡುವುದು.
ಅಮೆರಿಕ, ಇರಾನ್ ನಡುವೆ ಯುದ್ಧಾತಂಕ: ವಿಶ್ವ ತಲ್ಲಣ!.
ಕೊನೆಗೂ ಯುದ್ಧ ಘೋಷಣೆಯಾಗಿ ಬಿಟ್ಟರೆ, ಮಧ್ಯಪ್ರಾಚ್ಯದ ಇಸ್ರೇಲ್ ಹಾಗೂ ಕೊಲ್ಲಿ ದೇಶವಾದ ಯುಎಇಯನ್ನು ಬಳಸಿ ಕೊಂಡು ಇರಾನ್ ಹಾಗೂ ಅದರ ಮಿತ್ರ ದೇಶಗಳ ಮೇಲೆ ಅಮೆರಿಕ ಪ್ರತಿದಾಳಿಗೆ ಮುಂದಾಗುವ ಸಾಧ್ಯತೆಯೂ ಇದೆ.
ಇರಾನ್ ಮೊದಲ ಆಯ್ಕೆ ಸೈಬರ್ ದಾಳಿ:
ಆಧುನಿಕ ಯುದ್ಧ ವಿಧಾನಗಳಲ್ಲಿ ‘ಸೈಬರ್ ದಾಳಿ’ ಇತ್ತೀಚಿನ ದಿನಗಳಲ್ಲಿ ಮುಂಚೂಣಿಗೆ ಬಂದು ನಿಂತಿದೆ. ಅಮೆರಿಕದ ಸೈಬರ್ ವ್ಯವಸ್ಥೆಯನ್ನು ಹಾಳು ಮಾಡಲು ಇರಾನ್ ಹಾಗೂ ಅದರ ಮಿತ್ರದೇಶಗಳು ತಂತ್ರ ಹೆಣೆಯಬಹುದು. ಇದಕ್ಕಾಗಿ ತನ್ನಲ್ಲಿನ ಸೈಬರ್ ವಿಜ್ಞಾನಿಗಳು ಹಾಗೂ ಹ್ಯಾಕರ್‌ಗಳನ್ನು ಬಳಸಿಕೊಂಡು ಅಮೆರಿಕದ ಕಂಪ್ಯೂಟರ್ ಜಾಲಗಳನ್ನು ಬುಡಮೇಲು ಮಾಡಬಹುದು. ಅಮೆರಿಕಕ್ಕೆ ಕೂಡ ಈ ಸಾಮರ್ಥ್ಯ ಇದ್ದು, ಇದೇ ವಿಧಾನ ಅನುಸರಿಸಿ ಅದು ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ.
ಉಗ್ರರ ಬಳಸಿ ಪರೋಕ್ಷ ಸಮರ:
ಇರಾನ್‌ಗೆ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು, ಯೆಮೆನ್‌ನ ಹುತಿ ಉಗ್ರರು ಹಾಗೂ ಇರಾಕ್‌ನಲ್ಲಿನ ಉಗ್ರ ಸಂಘಟನೆಗಳ ಶ್ರೀರಕ್ಷೆ ಇದೆ. ಇವರ ಜತೆಗೆ ಅಮೆರಿಕದ ವಿರೋಧ ಕಟ್ಟಿಕೊಂಡಿರುವ ಸಿರಿಯಾದ ಅಧ್ಯಕ್ಷ ಬಷರ್ ಅಲ್ ಅಸಾದ್ ಕೂಡ ಇರಾನ್‌ಗೆ ಮಿತ್ರರು. ಇವರನ್ನು ಇರಾನ್ ಬಳಸಿಕೊಳ್ಳುವ ಸಾಧ್ಯತೆ ಇದೆ. ಈ ಉಗ್ರರ ಮೂಲಕ ಇರಾಕ್, ಮಧ್ಯಪ್ರಾಚ್ಯ ಮತ್ತು ಅದರ ಅಂಚಿನ ಆಫ್ರಿಕಾ ಖಂಡದಲ್ಲಿ ಅಮೆರಿಕ ಹಾಗೂ ಅದರ ಮಿತ್ರದೇಶಗಳು ಹೊಂದಿರುವ ನೆಲೆಗಳ ಮೇಲೆ ದಾಳಿ ನಡೆಸುವುದು, ಸಮುದ್ರದಲ್ಲಿ ಸಾಗುವ ಅಮೆರಿಕದ ಹಡಗುಗಳ ಮೇಲೆ ದಾಳಿ ಮಾಡಿಸುವುದು, ಅಮೆರಿಕ ಮಿತ್ರದೇಶಗಳಾದ ಇಸ್ರೇಲ್ ಹಾಗೂ ಸೌದಿ ಅರೇಬಿಯಾಗಳಲ್ಲಿ ವಿಧ್ವಂಸಕ ಕೃತ್ಯ ಎಸಗುವುದು, ಈ ದೇಶಗಳಲ್ಲಿನ ಅಮೆರಿಕ ಪ್ರವಾಸಿಗರ ಮೇಲೆ ದಾಳಿ ಮಾಡಿಸುವುದು- ಇತ್ಯಾದಿ ರಣನೀತಿಯನ್ನು ಇರಾನ್ ಹೆಣೆಯುವ ಸಂಭವಗಳಿವೆ.
ಅಮೆರಿಕ ವಿರೋಧಿಗಳ ಒಗ್ಗೂಡಿಸಿ ದಾಳಿ:
ವಿಶ್ವದ 13ನೇ ಅತಿ ದೊಡ್ಡ ಸೇನೆ ಹೊಂದಿರುವ ಇರಾನ್ ಒಂದು ವೇಳೆ ನೇರವಾಗಿ ಯುದ್ಧ ಸಾರಿದ್ದೇ ಆದಲ್ಲಿ, ಅಮೆರಿಕ ವಿರೋಧಿ ದೇಶಗಳಾದ ಚೀನಾ, ರಷ್ಯಾ, ಟರ್ಕಿ, ಯೆಮೆನ್, ಸಿರಿಯಾ, ಲೆಬನಾನ್, ಯೆಮೆನ್‌ಗಳ ಸಹಕಾರ ಪಡೆದು ದಾಳಿ ನಡೆಸಬಹುದು. ರಷ್ಯಾ ದೇಶವು ಸಿರಿಯಾದಲ್ಲಿ ತನ್ನ ಸೇನಾ ನೆಲೆಗಳನ್ನು ಹೊಂದಿದ್ದು, ಅಮೆರಿಕದ ದಾಳಿಯಲ್ಲಿ ಆ ನೆಲೆಗಳಿಗೇನಾದರೂ ಹಾನಿಯಾದರೆ ಅಮೆರಿಕದ ಮೇಲೆ ನೇರವಾಗಿ ಸಮರ ಸಾರಬಹುದು. ಒಮಾನ್ ಕೊಲ್ಲಿಯಲ್ಲಿ ಚೀನಾ ಯುದ್ಧ ನೌಕೆಗಳನ್ನು ಹೊಂದಿದ್ದು, ಇತ್ತೀಚೆಗೆ ರಷ್ಯಾ ಹಾಗೂ ಇರಾನ್ ಜತೆ ಜಂಟಿ ತಾಲೀಮು ನಡೆಸಿತ್ತು. ಈ ಯುದ್ಧನೌಕೆಗಳನ್ನು ಬಳಸಿಕೊಂಡು ಚೀನಾ ಸಮರ ಸಾರಬಹುದು. ಹೀಗಾದಲ್ಲಿ ಯುದ್ಧ ವಿಕೋಪಕ್ಕೆ ತಲುಪಲಿದೆ.
ಅಮೆರಿಕದ ಪ್ರತಿತಂತ್ರ:
ಅಮೆರಿಕವು ಇದಕ್ಕೆ ಪ್ರತಿತಂತ್ರ ಹೆಣೆಯುವ ಸಾಧ್ಯತೆ ನಿಶ್ಚಿತ. ತನ್ನ ಮಿತ್ರದೇಶಗಳಾದ ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಕತಾರ್‌ಗಳೊಂದಿಗೆ ಆ ದೇಶ ಸತತ ಸಂಪರ್ಕದಲ್ಲಿದೆ. ಇಸ್ರೇಲ್ ಈಗಾಗಲೇ ಇರಾನ್ ಮೇಲೆ ಸಾಕಷ್ಟುದ್ವೇಷ ಹೊಂದಿದ್ದು, ಅಣ್ವಸ್ತ್ರ ಬಲ ಹಾಗೂ ಅತ್ಯಾಧುನಿಕ ಯುದ್ಧ ವಿಮಾನ ಹೊಂದಿದೆ. ಇನ್ನು ತನ್ನ ತೈಲ ಬಾವಿಗಳ ಮೇಲೆ ಅಥವಾ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ ಮಾಡಿದರೆ ಅಥವಾ ತನ್ನ ತೈಲ ಪೂರೈಕೆ ಸಮುದ್ರ ಮಾರ್ಗಗಳಿಗೆ ಅಡ್ಡಿಪಡಿಸಿದರೆ, ಸೌದಿ ಅರೇಬಿಯಾ ಸುಮ್ಮನಿರದು. ದುಬೈ ಹಾಗೂ ಕತಾರ್‌ನಲ್ಲಿ ಅಮೆರಿಕದ ವಾಯುನೆಲೆಗಳು ಇವೆ. ಇವುಗಳ ಮೂಲಕ ಅಮೆರಿಕವು ಇರಾನ್ ಮೇಲೆ ಪ್ರತಿಸಮರ ಹೂಡಬಹುದು.
ಗೊಂದಲದಲ್ಲಿ ಇರಾಕ್, ಆಫ್ಘನ್:
ಆದರೆ, ಇತ್ತ ಅಮೆರಿಕದ ಜತೆಗೂ ಉತ್ತಮ ಸಂಬಂಧ ಹೊಂದಿರುವ ಅತ್ತ ಇರಾನ್ ಜತೆಗೂ ನಂಟು ಹೊಂದಿರುವ ಇರಾಕ್ ಹಾಗೂ ಆಷ್ಘಾನಿಸ್ತಾನಗಳು ಇಕ್ಕಟ್ಟಿನಲ್ಲಿವೆ. ಯುದ್ಧ ಆರಂಭವಾದರೆ ಯಾರನ್ನು ಬೆಂಬಲಿಸಬೇಕು ಎಂಬ ಗೊಂದಲದಲ್ಲಿ ಅವು ಸಿಲುಕಿಬೀಳಲಿವೆ.
ಈಗಾಗಲೇ ಅಮೆರಿಕ, ರಷ್ಯಾ, ಚೀನಾ ಹಾಗೂ ಇಸ್ರೇಲ್‌ಗಳು ಅಣ್ವಸ್ತ್ರಸಜ್ಜಿತ ದೇಶಗಳಾಗಿದ್ದು, 3ನೇ ವಿಶ್ವಯುದ್ಧ ಆರಂಭವಾದರೆ ಪ್ರಪಂಚಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸುವ ಭೀತಿಯೂ ಇದೆ.