ಚೀನಾಗೆ ಲಾಸಾ ಆಕ್ರಮಣ ತಯಾರಿಯಾದ್ರೆ, ನೆಹರೂಗೆ ಚೀನಾಗೆ ವಿಟೋ ಕೊಡಿಸುವ ತಯಾರಿ.!

By Kannadaprabha NewsFirst Published Jun 20, 2020, 9:35 AM IST
Highlights

ಅಂದು ಅಕ್ಸಾಯ್‌ಚಿನ್‌ ನಮ್ಮಲ್ಲೇ ಉಳಿಯಬೇಕೆಂಬ ಆಗ್ರಹ ಸ್ವಯಂ ಪ್ರಧಾನಿಗೆ ಇರದೇ ಇದ್ದುದರಿಂದ ಅದು ಇವತ್ತು ಸಂಪೂರ್ಣ ಚೀನಾದ ಬಳಿಯಿದೆ. ಈಗ ಚೀನಾ ಅದಕ್ಕೆ ತಾಗಿಕೊಂಡಿರುವ ಗಲ್ವಾನ್‌ ಕಣಿವೆಗೂ ಬಂದು ಕುಳಿತಿದೆ. ಚೀನಾದ ತಂತ್ರವೇ ಹಾಗೆ; ಮೂರು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ. ಅಂದರೆ ಒಂದು ಸಲಕ್ಕೆ ಒಂದು ಹೆಜ್ಜೆಯ ಲಾಭ ನಿಶ್ಚಿತ.

ಇತಿಹಾಸದ ತಪ್ಪುಗಳಿಂದ ವರ್ತಮಾನದಲ್ಲಿ ಪಾಠ ಕಲಿಯಬೇಕು ಹೌದು. ಆದರೆ ಇತಿಹಾಸದಲ್ಲಿ ಮಾಡಿದ ಮಹಾ ಪ್ರಮಾದದಿಂದ ವರ್ತಮಾನ ಮತ್ತು ಭವಿಷ್ಯದ ತಲೆಮಾರುಗಳು ಮುಜುಗರ, ಅವಮಾನ, ಹಿಂಸೆ ಅನುಭವಿಸುತ್ತಲೇ ಇರಬೇಕಾಗುತ್ತದೆ ಎನ್ನುವುದಕ್ಕೆ ಚೀನಾ ಗಡಿಯಲ್ಲಿ ಆಗಾಗ ನಡೆಯುತ್ತಿರುವ ಕ್ಯಾತೆಗಳೇ ಸಾಕ್ಷಿ.

ಪಂಡಿತ್‌ ನೆಹರು ವಿಶ್ವದ ನಾಯಕನಾಗುವ ಕನಸು ಕಾಣುತ್ತಾ, ಪಕ್ಕದಲ್ಲೇ ಬೆಳೆಯುತ್ತಿದ್ದ ಶತ್ರುವನ್ನು ಮಿತ್ರನೆಂದು ಭ್ರಮಿಸಿ ಮೈಮರೆತಿದ್ದರಿಂದ 70 ವರ್ಷಗಳ ನಂತರವೂ ಚೀನಾ ಜೊತೆ ಸ್ಪಷ್ಟಗಡಿ ಗುರುತಿಸಲಾಗದೆ ಒದ್ದಾಡುತ್ತಿದ್ದೇವೆ.

ಯಾವುದೇ ನೆರೆಹೊರೆಯವರು ಇನ್ನೊಬ್ಬ ಶಕ್ತಿಶಾಲಿ, ಪ್ರಬಲ, ಕಠಿಣ ನಿರ್ಣಯ ಸಾಮರ್ಥ್ಯದ ರಾಷ್ಟ್ರವನ್ನು ಗೌರವದಿಂದ ಕಾಣುತ್ತಾರೆಯೇ ಹೊರತು, ತನ್ನದೇ ಆದ ಸಿದ್ಧಾಂತದ ಭ್ರಮಾತ್ಮಕ ರೋಮ್ಯಾಂಟಿಸಿಸಂನಲ್ಲಿ ಮುಳುಗಿದ ವ್ಯಕ್ತಿಗಳು ಮತ್ತು ರಾಷ್ಟ್ರವನ್ನಲ್ಲ.

ಯುದ್ಧೋನ್ಮಾದ: 12 ಸುಖೋಯ್‌, 21 ಮಿಗ್‌ ವಿಮಾನ ಖರೀದಿಗೆ ಭಾರತ ನಿರ್ಧಾರ..!

ಭಾರತದ ಬಾಗಿಲಿಗೆ ಚೀನಾಕ್ಕೆ ‘ಸ್ವಾಗತ’

1949ರಲ್ಲಿ ಪೀಕಿಂಗ್‌ನಲ್ಲಿ ಶಕ್ತಿ ಪ್ರಯೋಗದ ಮೂಲಕ ಅಧಿಕಾರ ಹಿಡಿದ ನಂತರ ಕಮ್ಯುನಿಸ್ಟ್‌ ಚೀನಾದ ಮುಖ್ಯಸ್ಥನಾದ ಮಾವೋ ಮಾಡಿದ ಮೊದಲ ಘೋಷಣೆ ಟಿಬೆಟ್‌ ಮೇಲಿನ ಆಕ್ರಮಣ. ಆದರೆ ದೆಹಲಿಯಲ್ಲಿ ಕುಳಿತಿದ್ದ ಪಂಡಿತ್‌ ನೆಹರು ಸ್ವತಃ ಟಿಬೆಟ್‌ನಲ್ಲಿದ್ದ ರಾಯಭಾರಿ ಹೇಳಿದರೂ ಸಹ ಇದನ್ನು ಒಪ್ಪಲು ತಯಾರಿರಲಿಲ್ಲ. ಸಹಾಯ ಮಾಡಿ ಎಂದು ಕೇಳಲು ಟಿಬೆಟ್‌ನ ನಿಯೋಗ ದಿಲ್ಲಿಗೆ ಬರಲು ಸಮಯ ಕೇಳಿದರೆ, 8 ತಿಂಗಳು ಕಾಯಿಸಿದ ನೆಹರು ನಂತರ ನಿಯೋಗಕ್ಕೆ ಹೇಳಿದ್ದೇನು? ‘ಬೀಜಿಂಗ್‌ಗೆ ಹೋಗಿ ಸ್ವಾಯತ್ತೆ ಕೇಳಿ.’ 2 ವರ್ಷ ಪೂರ್ತಿ ಚೀನಾ ಮತ್ತು ಕೊರಿಯಾ ನಡುವಿನ ಯುದ್ಧ ಬಿಡಿಸುವಲ್ಲಿ ನಿರತರಾಗಿದ್ದ ಪಂಡಿತ್‌ಜೀ ಅವರಿಗೆ ಚೀನಾ ಟಿಬೆಟ್ಟನ್ನು ಆಕ್ರಮಿಸಿಕೊಂಡರೆ ಭಾರತದ ಬಾಗಿಲಿಗೆ ಬಂದು ನಿಲ್ಲುತ್ತದೆ ಎಂಬ ಬಗ್ಗೆ ಎಳ್ಳಷ್ಟೂಚಿಂತೆ ಇರಲಿಲ್ಲ.

ಟಿಬೆಟ್‌ ಆಕ್ರಮಣದ ಬಗ್ಗೆ ನೋಟ್‌ ಬರೆದು ಪ್ರಧಾನಿಗೆ ಕಳುಹಿಸಿದ್ದ, ಮೊದಲು ಬೀಜಿಂಗ್‌ನಲ್ಲಿ ಕೆಲಸ ಮಾಡಿ ಬಂದಿದ್ದ ಸಿನ್ಹಾ ಎಂಬ ವಿದೇಶಾಂಗ ಇಲಾಖೆ ಅಧಿಕಾರಿಗೆ ನೆಹರು, ‘ನಿಮಗೆ ವಿಶ್ವ ರಾಜಕೀಯ ಗೊತ್ತಿಲ್ಲ. ಚೀನಾ ಫೋಬಿಯಾ ಇದೆ’ ಎಂದು ಬೈದು ಪತ್ರ ಬರೆಯುತ್ತಾರೆ. ಆ ಕಡೆ ಚೀನಾ ಟಿಬೆಟ್‌ನ ಲಾಸಾಗೆ 40 ಸಾವಿರ ಸೈನಿಕರನ್ನು ಕಳುಹಿಸಿ ಆಕ್ರಮಣದ ತಯಾರಿ ನಡೆಸುತ್ತಿದ್ದರೆ, ನೆಹರು ವಿಶ್ವಸಂಸ್ಥೆಯಲ್ಲಿ ಚೀನಾಕ್ಕೆ ಮಾನ್ಯತೆ ಕೊಡಿಸಿ ವಿಟೋ ಸಹಿತ ಭದ್ರತಾ ಸದಸ್ಯತ್ವ ಕೊಡಿಸಲು ಓಡಾಡುತ್ತಿದ್ದರು.

1950ರ ಟಿಬೆಟ್‌ ಆಕ್ರಮಣ

ಒಂದು ವರ್ಷ ಪೂರ್ತಿ ಚೀನಾ ಟಿಬೆಟ್‌ ಮೇಲೆ ದಾಳಿ ಮಾಡಲಿಕ್ಕಿಲ್ಲ ಎಂಬ ಭ್ರಮೆಯಲ್ಲೇ ಕಾಲ ಕಳೆದ ನೆಹರು, 1950ರಲ್ಲಿ ಚೀನಾ ಲಾಸಾವನ್ನು ಕಬಳಿಸಿದಾಗ 1913ಕ್ಕಿಂತ ಮೊದಲು ಟಿಬೆಟ್‌ ಚೀನಾ ಬಳಿಯೇ ಇತ್ತು. ಬ್ರಿಟಿಷರದೇ ತಪ್ಪು, ಅವರು ವಶಪಡಿಸಿಕೊಂಡಿದ್ದರು. ಈಗ ಏಷ್ಯಾದಲ್ಲಿ ಸಮಾಜವಾದದ ಹೊಸ ಗಾಳಿ ಬೀಸುತ್ತಿದೆ ಎಂದು ಬೀಜಿಂಗ್‌ನಲ್ಲಿದ್ದ ಭಾರತೀಯ ರಾಯಭಾರಿ ಕೆ.ಎಂ.ಪಣಿಕ್ಕರ್‌ಗೆ ಪತ್ರ ಬರೆಯುತ್ತಾರೆ. ಜೊತೆಗೆ ಚೀನಾ ಯಾವ ಕಾರಣಕ್ಕೂ ಲಡಾಖ್‌, ಉತ್ತರಾಂಚಲ, ಸಿಕ್ಕಿಂ, ಅರುಣಾಚಲದ ಮೇಲೆ ದಾಳಿ ಮಾಡಲಿಕ್ಕಿಲ್ಲ ಎಂಬ ತಮ್ಮ ಹೊಸ ಭ್ರಮೆಯ ಬಗ್ಗೆ ಹೇಳಿಕೊಳ್ಳುತ್ತಾರೆ.

ಟಿಬೆಟ್‌ನಲ್ಲಿ ಚೀನಾ ವಿರುದ್ಧದ ಚಟುವಟಿಕೆಗೆ ಯುವ ದಲೈಲಾಮಾ ಕಡೆಯ ಜನ 2 ಲಕ್ಷ ರುಪಾಯಿ ಸಹಾಯ ಕೇಳಿದರೆ, ‘ಇಲ್ಲ ನಾವು ಬಂಡುಕೋರರಿಗೆ ಸಹಾಯ ಮಾಡೋದಿಲ್ಲ. ಬೇಕಿದ್ದಲ್ಲಿ ರಾಜತಾಂತ್ರಿಕ ಸಹಾಯ ಮಾಡುತ್ತೇವೆ’ ಎನ್ನುತ್ತಾರೆ. ಕೊನೆಗೆ ವಿಶ್ವಸಂಸ್ಥೆಯಲ್ಲಿ ಟಿಬೆಟ್‌ ಆಕ್ರಮಣ ಖಂಡಿಸಿ ನಿರ್ಣಯ ತೆಗೆದುಕೊಳ್ಳಲು ಅಮೆರಿಕ ಮತ್ತು ಬ್ರಿಟನ್‌ ಮುಂದಾದಾಗ ನೆಹರು, ‘ಭಾರತ ಇದನ್ನು ಬೆಂಬಲಿಸುವುದಿಲ್ಲ’ ಎನ್ನುತ್ತಾರೆ.

ನಂತರ 1952ರಲ್ಲಿ ಚೀನಾದ ಪ್ರಧಾನಿ ಚೌ ಎನ್‌ ಲಾಯ… ರಾಯಭಾರಿ ಪಣಿಕ್ಕರ್‌ ಅವರನ್ನು ಕರೆದು ಟಿಬೆಟ್‌ನಲ್ಲಿರುವ ಚೀನಾದ ಸೈನಿಕರಿಗೆ ಆಹಾರ ಪೂರೈಸಲು ನೆರವು ಕೇಳಿದಾಗ 1 ಸಾವಿರ ಟನ್‌ ಅಕ್ಕಿ ಪೂರೈಸಲೂ ಒಪ್ಪಿಕೊಳ್ಳುತ್ತಾರೆ. 1953ರಲ್ಲಿ ಹಿಂದಿ-ಚೀನಿ ಭಾಯಿ ಭಾಯಿ ಎಂದು ಟಿಬೆಟ್‌ಗೆ ಪೆಟ್ರೋಲ್, -ಡೀಸೆಲ್ ಕಳಿಸುತ್ತಾರೆ. ಇದನ್ನು ಮಾಡಬೇಡಿ ಎಂದು ಸಲಹೆ ನೀಡಲು ಬಂದ ವಿದೇಶಾಂಗ ಇಲಾಖೆ ಅಧಿಕಾರಿಗಳಿಗೆ ನೆಹರು, ‘ಟಿಬೆಟ್‌ವರೆಗೆ ಆಹಾರ ಪೂರೈಸುವುದು ಚೀನಾಕ್ಕೆ ಕಷ್ಟ. ಹೀಗಾಗಿ ನಾವು ಸಹಾಯ ಮಾಡಬೇಕು. ಮುಂದೆ ನಮ್ಮ ಸಂಬಂಧಗಳ ದೃಷ್ಟಿಯಿಂದ ಇದನ್ನು ಮಾಡಬೇಕು’ ಎಂದು ಹೇಳುತ್ತಾರೆ. ಟಿಬೆಟ್‌ ಕಬಳಿಸಿ ಲಡಾಖ್‌ ಮೇಲೆ ಕಣ್ಣು ಹಾಕಿ ಅಲ್ಲಿಯವರೆಗೆ ರಸ್ತೆ ನಿರ್ಮಿಸಲು ಶುರುಮಾಡಿದ್ದ ಚೀನಾದ ಸೈನಿಕರಿಗೆ ಆಹಾರ ಪೂರೈಸಿ ‘ಮಾನವೀಯತೆ ಮೆರೆದಿದ್ದರು’ ನೆಹರು.

 - ಪ್ರಶಾಂತ್ ನಾತು, ಸುವರ್ಣ ನ್ಯೂಸ್

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!