ವಿಕೃತ ಆನಂದಕ್ಕೆ ನವಜಾತ ಶಿಶುಗಳ ಕೊಲ್ಲುತ್ತಿದ್ದ ಬ್ರಿಟನ್‌ ನರ್ಸ್‌!, ಸಿಕ್ಕಿ ಬೀಳಲು ಕಾರಣ ಭಾರತೀಯ ವೈದ್ಯ

By Kannadaprabha News  |  First Published Aug 20, 2023, 10:56 AM IST

7 ಮಕ್ಕಳ ಹತ್ಯೆ, ಇನ್ನೂ 6 ಮಕ್ಕಳ ಹತ್ಯೆಗೆ ಸಂಚಿನ ಕೇಸಲ್ಲಿ ಬ್ರಿಟನ್‌ ನರ್ಸ್‌ ದೋಷಿ. ನರ್ಸ್‌ ದುಷ್ಕೃತ್ಯ ಮೊದಲು ಪತ್ತೆ ಮಾಡಿ, ಆಕೆ ಸಿಕ್ಕಿ ಬೀಳುವಂತೆ ಮಾಡಿದ್ದು ಭಾರತೀಯ ಮೂಲದ ವೈದ್ಯ.  ರಕ್ತನಾಳಕ್ಕೆ ಗಾಳಿ ಚುಚ್ಚಿ ಕೊಲ್ಲುತ್ತಿದ್ದ ಕ್ರೂರ ಪಾತಕಿ.


ಲಂಡನ್‌ (ಆ.20): ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್‌ ಒಬ್ಬಳು ವಿಕೃತ ಸಂತೋಷಕ್ಕಾಗಿ ಏಳು ನವಜಾತ ಶಿಶುಗಳನ್ನು ಕೊಂದು, ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ ಭೀಕರ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ. 33 ವರ್ಷದ ಲೂಸಿ ಲೆಟ್ಬಿ ಎಂಬ ಈ ನರ್ಸ್‌ ವಿರುದ್ಧ ವಿಚಾರಣೆ ನಡೆಸಿದ ನ್ಯಾಯಾಲಯ, ಮಕ್ಕಳ ‘ನಿಗೂಢ ಸಾವಿನ’ ಪ್ರಕರಣದಲ್ಲಿ ಆಕೆ ದೋಷಿ ಎಂದು ತೀರ್ಪು ನೀಡಿದೆ.

2015 ಹಾಗೂ 2016ರ ನಡುವೆ ಇಂಗ್ಲೆಂಡ್‌ನ ಕೌಂಟೆಸ್‌ ಚೆಸ್ಟರ್‌ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ನಿಗೂಢ ಸರಣಿ ಸಾವು ಸಂಭವಿಸಿತ್ತು. ಈ ಸಂಬಂಧ 2018ರಲ್ಲಿ ಲೂಸಿ ವಿರುದ್ಧ ದೂರು ದಾಖಲಾಗಿತ್ತು. ಬಳಿಕ ಪೊಲೀಸರು ತನಿಖೆ ನಡೆಸಿದಾಗ ನರ್ಸ್‌ ಮನೆಯಲ್ಲಿ ‘ನಾನು ದುಷ್ಟೆ. ಅವರನ್ನು ನೋಡಿಕೊಳ್ಳುವ ಯೋಗ್ಯತೆ ನನಗಿಲ್ಲ. ನಾನು ಕ್ರೂರಿ’ ಎಂದು ಆಕೆ ಬರೆದಿಟ್ಟಿದ್ದ ನೋಟ್‌ಗಳು ಪತ್ತೆಯಾಗಿದ್ದವು. ಕೋರ್ಚ್‌ನಲ್ಲಿ ಕಳೆದ 10 ತಿಂಗಳು ನಿರಂತರ ವಿಚಾರಣೆ ನಡೆದು, ಕೊನೆಗೆ ಜೂರಿಗಳು ಲೂಸಿ ದೋಷಿ ಎಂದು ಒಮ್ಮತದ ತೀರ್ಪು ನೀಡಿದ್ದಾರೆ.

Tap to resize

Latest Videos

ಬಿಹಾರದಲ್ಲಿ ಬೆಳ್ಳಂಬೆಳಗ್ಗೆ ಪತ್ರಕರ್ತನ ಗುಂಡಿಕ್ಕಿ ಹತ್ಯೆ!

ರಕ್ತನಾಳಕ್ಕೆ ಗಾಳಿ ಚುಚ್ಚಿ ಹತ್ಯೆ: ನವಜಾತ ಶಿಶುಗಳ ರಕ್ತನಾಳಕ್ಕೆ ಖಾಲಿ ಇಂಜೆಕ್ಷನ್‌ ಚುಚ್ಚಿ ಅಥವಾ ಇನ್ಸುಲಿನ್‌ ಓವರ್‌ಡೋಸ್‌ ನೀಡಿ ಅಥವಾ ಹೊಟ್ಟೆಗೆ ನ್ಯಾಸೋಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಹಾಲು ಅಥವಾ ಗಾಳಿಯನ್ನು ತುಂಬಿ ಲೂಸಿ ಕ್ರೂರವಾಗಿ ಕೊಲ್ಲುತ್ತಿದ್ದಳು. ಆದರೆ ತನಿಖೆಯಲ್ಲಿ ಹಾಗೂ ಕೋರ್ಚ್‌ನಲ್ಲಿ ಆಕೆ ತಾನು ಯಾರನ್ನೂ ಕೊಂದಿಲ್ಲ ಎಂದೇ ವಾದಿಸಿದ್ದಳು. ಹೀಗಾಗಿ ಸರಣಿ ಶಿಶುಗಳ ಹತ್ಯೆಯ ಕಾರಣ ಇನ್ನೂ ನಿಗೂಢವಾಗಿದೆ.

ತಾನು ನರ್ಸ್‌ ಆಗಿದ್ದ ಆಸ್ಪತ್ರೆಯಲ್ಲಿ ಲೂಸಿ ಐದು ಗಂಡು ಶಿಶು, ಎರಡು ಹೆಣ್ಣು ಶಿಶುಗಳನ್ನು ಕೊಂದಿದ್ದಾಳೆ. ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ್ದಾಳೆ. ಈಕೆಯಿಂದ ಕೊಲ್ಲಲ್ಪಟ್ಟಶಿಶುಗಳಲ್ಲಿ ಒಂದು ದಿನದ ಹಿಂದಷ್ಟೇ ಹುಟ್ಟಿದ ಶಿಶು ಕೂಡ ಸೇರಿದೆ.

ಎಚ್ಚರಿಸಿದ್ದ ಭಾರತೀಯ ಮೂಲದ ಡಾಕ್ಟರ್‌: ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿರುವ ಬಗ್ಗೆ ಆಡಳಿತ ಮಂಡಳಿ ಸಭೆ ನಡೆಸಿದಾಗ ಅಲ್ಲಿನ ಮಕ್ಕಳ ವೈದ್ಯರಲ್ಲಿ ಒಬ್ಬರಾದ ಭಾರತೀಯ ಮೂಲದ ಡಾ.ರವಿ ಜಯರಾಮ್‌ ಎಂಬುವರು ಲೂಸಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾಹಿತಿ ನೀಡಿದ್ದರು. ಬಳಿಕ ಪೊಲೀಸ್‌ ತನಿಖೆಯಲ್ಲೂ ಆಕೆಯ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿಯು ಡಾ.ರವಿ ಅವರ ಹೇಳಿಕೆಯನ್ನು ಆಕ್ಷೇಪಿಸಿ, ‘ಕಿಲ್ಲರ್‌ ನರ್ಸ್‌’ ಬಳಿಯೇ ಕ್ಷಮೆ ಕೇಳುವಂತೆ ಅವರಿಗೆ ಸೂಚಿಸಿತ್ತು.

ಅಮೇರಿಕಾದಲ್ಲಿ ಕನ್ನಡದ ಕುಟುಂಬ ದಾರುಣ ಸಾವು: ಗಂಡ, ಹೆಂಡ್ತಿ ಮಗು ಮೃತ

ನರ್ಸ್‌ ಏಕೆ ಶಿಶುಗಳನ್ನು ಕೊಲ್ಲುತ್ತಿದ್ದಳು?: ಪೊಲೀಸರ ಬಳಿ ಹಾಗೂ ಕೋರ್ಚ್‌ನಲ್ಲಿ ತಾನು ತಪ್ಪು ಮಾಡಿಲ್ಲ ಎಂದೇ ಲೂಸಿ ವಾದಿಸಿದ್ದಾಳೆ. ಹೀಗಾಗಿ ಆಕೆ ಶಿಶುಗಳನ್ನು ಏಕೆ ಕೊಲ್ಲುತ್ತಿದ್ದಳು ಎಂಬುದು ಪತ್ತೆಯಾಗಿಲ್ಲ. ಆದರೆ ಮೃತ ಶಿಶುಗಳ ಪೋಷಕರ ಪರ ವಕೀಲರು ಕೋರ್ಚ್‌ನಲ್ಲಿ ಮಂಡಿಸಿದ ವಾದದಲ್ಲಿ ಕೆಲ ಸುಳಿವುಗಳು ಇಂತಿವೆ:

1. ಶಿಶುಗಳಿಗೆ ಗಾಳಿಯ ಇಂಜೆಕ್ಷನ್‌ ಚುಚ್ಚಿದ ಅಥವಾ ಇನ್ಸುಲಿನ್‌ ಓವರ್‌ಡೋಸ್‌ ನೀಡಿದ ಬಳಿಕ ಲೂಸಿಗೆ ಅವರು ಸಾಯುತ್ತಾರೆಂಬುದು ತಿಳಿಯುತ್ತಿತ್ತು. ಆಗ ಬೇರೆ ನರ್ಸ್‌ಗಳನ್ನು ಕರೆದುಕೊಂಡು ಬಂದು ‘ಈ ಮಗು ಸಾಯುತ್ತದೆ’ ಎಂದು ಹೇಳುವ ಮೂಲಕ ತನಗೆ ಎಲ್ಲವೂ ಮೊದಲೇ ತಿಳಿಯುತ್ತದೆ, ‘ತಾನು ದೇವರು’ ಎಂಬಂತೆ ಬಿಂಬಿಸಿಕೊಳ್ಳುವುದು ಆಕೆಗೆ ಇಷ್ಟವಾಗಿತ್ತು.

2. ಲೂಸಿಯ ಮನೆಯಲ್ಲಿ ‘ನಾನು ದುಷ್ಟೆ, ನಾನೇ ಇದನ್ನೆಲ್ಲ ಮಾಡಿದೆ’ ಎಂದು ಅವಳು ಬರೆದಿಟ್ಟನೋಟ್ಸ್‌ಗಳು ಪತ್ತೆಯಾಗಿವೆ. ಹೀಗಾಗಿ ಮಕ್ಕಳಿಗೆ ಘಾಸಿ ಮಾಡುವ ಮೂಲಕ ಆಕೆ ವಿಕೃತ ಆನಂದ ಅನುಭವಿಸುತ್ತಿದ್ದಳು ಎಂದು ಊಹಿಸಲಾಗಿದೆ.

3. ಲೂಸಿಗೆ ಆಸ್ಪತ್ರೆಯ ಒಬ್ಬ ಶಿಶುವೈದ್ಯನ ಜೊತೆ ಅಕ್ರಮ ಸಂಬಂಧವಿತ್ತು. ಆತನ ಗಮನ ಸೆಳೆಯುವುದಕ್ಕೆ ಆಕೆ ಬಯಸುತ್ತಿದ್ದಳು. ಯಾವುದಾದರೂ ಶಿಶುವಿಗೆ ಆರೋಗ್ಯ ಸಮಸ್ಯೆಯಾದಾಗ ಆ ವೈದ್ಯರನ್ನು ಆಕೆ ಕರೆಯಬೇಕಿತ್ತು. ಹೀಗಾಗಿ ಸದರಿ ವೈದ್ಯನ ಗಮನ ಸೆಳೆಯುವುದಕ್ಕೆ ಶಿಶುಗಳನ್ನು ಕೊಲ್ಲುತ್ತಿದ್ದಳು ಎನ್ನಲಾಗಿದೆ.

4. ಶಿಶು ಸಾವನ್ನಪ್ಪಿದ ಬಳಿಕ ವಾರ್ಡ್‌ನಲ್ಲಿ ಪೋಷಕರು ಅಳುವುದನ್ನು ನೋಡಿ ಲೂಸಿ ವಿಕೃತ ಸಂತೋಷ ಅನುಭವಿಸುತ್ತಿದ್ದಳು.

click me!