ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 8ನೇ ತಿಂಗಳಿಗೆ ಕಾಲಿಟ್ಟಿರುವ ನಡುವೆಯೇ, ಯುದ್ಧವನ್ನು ಕೊನೆಗಾಣಿಸಲು ಭಾರತ ಹಿಂಬಾಗಿಲು ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 8ನೇ ತಿಂಗಳಿಗೆ ಕಾಲಿಟ್ಟಿರುವ ನಡುವೆಯೇ, ಯುದ್ಧವನ್ನು ಕೊನೆಗಾಣಿಸಲು ಭಾರತ ಹಿಂಬಾಗಿಲು ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ದ್ವಿಪಕ್ಷೀಯ ವ್ಯಾಪಾರ, ವಹಿವಾಟು ವೃದ್ಧಿಗೆ ಮಾತುಕತೆ ನಡೆಸಲೆಂದು ಸದ್ಯ ಮಾಸ್ಕೋಕ್ಕೆ ಭೇಟಿ ನೀಡಿರುವರಾದರೂ, ಭೇಟಿ ಹಿಂದಿನ ಮುಖ್ಯ ಉದ್ದೇಶ ಸಂಧಾನ ಮಾತುಕತೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಉಭಯ ದೇಶಗಳ ನಡುವಿನ ಯುದ್ಧ ಕೊನೆಗೊಳ್ಳಬೇಕು ಎಂದು ಭಾರತ (India) ಆರಂಭದಿಂದಲೂ ಹೇಳುತ್ತಲೇ ಬಂದಿದೆ. ಜೊತೆಗೆ ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಶೃಂಗದಲ್ಲೂ (Shanghai Cooperation Summit) ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ನೇರವಾಗಿ ರಷ್ಯಾ ಅಧ್ಯಕ ವ್ಲಾದಿಮಿರ್ ಪುಟಿನ್‌ಗೆ (Russian President Vladimir Putin)ಇದು ಯುದ್ಧದ ಸಮಯವಲ್ಲ ಎಂದಿದ್ದರು. ಮತ್ತೊಂದೆಡೆ ಭಾರತದಲ್ಲಿನ ಉಕ್ರೇನ್ ರಾಯಭಾರಿ (ambassador of Ukraine), ಮೆಕ್ಸಿಕೋ ಅಧ್ಯಕ್ಷರು ಕೂಡಾ ಮೋದಿ ಮಧ್ಯಪ್ರವೇಶ ಮಾಡಿದರೆ ಯುದ್ಧ ನಿಲ್ಲಬಲ್ಲದು ಎಂದು ಹೇಳಿದ್ದರು. ಇನ್ನು ಅ.4ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿಗೆ (Volodymyr Zelensky) ದೂರವಾಣಿ ಕರೆ ಮಾಡಿದ ವೇಳೆಯೂ ಮೋದಿ ಶಾಂತಿ ಮಾತುಕತೆಗೆ ನೆರವು ನೀಡುವ ಆಫರ್ ನೀಡಿದ್ದರು. ಅದರ ಬೆನ್ನಲ್ಲೇ ಇದೀಗ ಸಂಧಾನಕ್ಕೆಂದೇ ಜೈಶಂಕರ್ ಅಲ್ಲಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಪತ್ರಿಕೆ ವರದಿ ಮಾಡಿದೆ.
ಮೋದಿಗೆ ಮಾತಿಗೆ ಮನ್ನಣೆ:
ಭಾರತವನ್ನ ಕೆಣಕುವವರ ಪಾಲಿಗೆ ಫಿಯರ್ಲೆಸ್ ಫಾರಿನ್ ಮಿನಿಸ್ಟರ್ ಎಸ್ ಜೈ ಶಂಕರ್!
ಉಕ್ರೇನ್ ಅನ್ನು ರಷ್ಯಾ ಪೂರ್ಣವಾಗಿ ಸುತ್ತುವರೆದ ಬಳಿಕ ರಫ್ತು ಉದ್ದೇಶದ ಆಹಾರ ಉತ್ಪನ್ನಗಳು ಹಾಗೆಯೇ ಉಳಿದುಕೊಂಡು ಭಾರೀ ಸಮಸ್ಯೆಯಾಗಿತ್ತು. ಈ ಹಂತದಲ್ಲಿ ಭಾರತ ನಡೆಸಿದ ಹಿಂಬಾಗಿಲ ಮಾತುಕತೆ ಪರಿಣಾಮ, ಉಕ್ರೇನ್‌ನ ಆಹಾರ ಪದಾರ್ಥಗಳ ರಫ್ತಿಗೆ ರಷ್ಯಾ ಅವಕಾಶ ಮಾಡಿಕೊಟ್ಟಿತ್ತು. ಬಳಿಕ ಕಳೆದ ಸೆಪ್ಟೆಂಬರ್‌ನಲ್ಲಿ ಉಕ್ರೇನ್‌ನ ಝಪೋಝಿಝಿಯಾ ಪರಮಾಣು ಸ್ಥಾವರದ ಮೇಲೆ ರಷ್ಯಾ ಸೇನೆ ಭಾರೀ ಪ್ರಮಾಣದ ಶೆಲ್ ದಾಳಿ ಆರಂಭಿಸಿ ಭಾರೀ ಅನಾಹುತದ ಭೀತಿ ಎದುರಾದಾಗಲೂ ಭಾರತದ ಸಲಹೆಯಂತೆ ರಷ್ಯಾ ಹಿಂದೆ ಸರಿದಿತ್ತು. ಅದರ ಬೆನ್ನಲ್ಲೇ ಇದೀಗ ಉಭಯ ದೇಶಗಳ ನಡುವೆ ಭಾರತ ಸಂಧಾನ ಮಾತುಕತೆ ನಡೆಸುತ್ತಿರುವ ಸಾಧ್ಯತೆ ಇದೆ. ಹೀಗಾಗಿಯೇ ಜೈಶಂಕರ್ ಅವರ ರಷ್ಯಾ ಭೇಟಿಯನ್ನು ವಿವಿಧ ದೇಶಗಳ ರಾಜತಾಂತ್ರಿಕರು, ವಿದೇಶಾಂಗ ತಜ್ಞರು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್‘ ವರದಿ ಮಾಡಿದೆ.
ಏನೇ ಒತ್ತಡ ಎದುರಾದರೂ ರಷ್ಯಾ ತೈಲ ಖರೀದಿ ನಿಲ್ಸಲ್ಲ
ನವದೆಹಲಿ: ಪಾಶ್ಚಿಮಾತ್ಯ ದೇಶಗಳಿಂದ ಏನೇ ವಿರೋಧ ಎದುರಾದರೂ, ರಷ್ಯಾದಿಂದ ತೈಲ (Russia oil) ಖರೀದಿಯನ್ನು ನಾವು ನಿಲ್ಲಿಸುವುದಿಲ್ಲ. ಏಕೆಂದರೆ ಭಾರತೀಯ ಗ್ರಾಹಕರಿಗೆ ಗರಿಷ್ಠ ಲಾಭ ಸಿಗುವಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ರಷ್ಯಾ ಭೇಟಿಯ ವೇಳೆ ಮಾತನಾಡಿದ ಜೈಶಂಕರ್, ‘ಇಂಧನ ಮಾರುಕಟ್ಟೆಯಲ್ಲಿ (energy market)ಸದ್ಯ ಸಾಕಷ್ಟು ಒತ್ತಡವಿದೆ. ಈ ಒತ್ತಡಕ್ಕೆ ಸಾಕಷ್ಟುಕಾರಣಗಳಿವೆ. ಹೀಗಿರುವಾಗ ವಿಶ್ವದಲ್ಲೇ ಮೂರನೇ ಅತಿದೊಡ್ಡ ತೈಲ, ಅನಿಲ ಬಳಕೆದಾರ ದೇಶವಾಗಿ ಮತ್ತು ಗ್ರಾಹಕರ ಸರಾಸರಿ ಆದಾಯ ಅತ್ಯಂತ ಹೆಚ್ಚಿಗೆ ಇಲ್ಲದೇ ಇರುವ ಸಂದರ್ಭದಲ್ಲಿ ಭಾರತೀಯ ಗ್ರಾಹಕರಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಗರಿಷ್ಠ ಲಾಭ ಸಿಗುವಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಬಾಧ್ಯತೆ. ಹೀಗಾಗಿ ಪಾಶ್ಚಿಮಾತ್ಯ ದೇಶಗಳಿಂದ ಏನೇ ವಿರೋಧ ಇದ್ದರೂ ಭಾರತ, ರಷ್ಯಾದಿಂದ ತೈಲ ಖರೀದಿ ಮುಂದುವರೆಸಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ ಯುದ್ಧದ ಬಳಿಕ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ತೈಲ, ಅನಿಲ ಖರೀದಿ ಸ್ಥಗಿತಗೊಳಿಸಿವೆ. ಹೀಗಾಗಿ ರಷ್ಯಾ ಅಗ್ಗದ ದರದಲ್ಲಿ ತೈಲ, ಅನಿಲ ರಫ್ತು ಮಾಡುತ್ತಿದ್ದು ಅದನ್ನು ಭಾರತ ಭಾರೀ ಪ್ರಮಾಣದಲ್ಲಿ ಖರೀದಿ ಮಾಡುತ್ತಿದೆ. ಇದನ್ನು ಅಮೆರಿಕ ಸೇರಿದಂತೆ ಹಲವು ದೇಶಗಳು ಖಂಡಿಸಿದ್ದವು.
ಒಂದೇ ದಿನದಲ್ಲಿ 1000 ರಷ್ಯಾ ಸೈನಿಕರ ಹತ್ಯೆಗೈದ Ukraine..! 8 ತಿಂಗಳಲ್ಲಿ 71,200 ಯೋಧರು ಬಲಿ
ಇದು ಯುದ್ಧದ ಕಾಲವಲ್ಲ: ಜೈಶಂಕರ್
ನವದೆಹಲಿ: ಉಕ್ರೇನ್ ರಷ್ಯಾ ಯುದ್ಧದ ಬಳಿಕ ಮೊದಲ ಬಾರಿ ರಷ್ಯಾ ಪ್ರವಾಸ ಕೈಗೊಂಡಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಇದು ಯುದ್ಧ ಮಾಡುವ ಕಾಲವಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಈ ಹಿಂದೆ ರಷ್ಯಾ ಅಧ್ಯಕ್ಷ ಪುಟಿನ್ ಎದುರು, ಭಾರತದ ಪ್ರಧಾನಿ ನರೇಂದ್ರ ಮೋದಿ ಆಡಿದ್ದ ಮಾತುಗಳನ್ನು ಪುನರುಚ್ಚರಿಸಿದ್ದಾರೆ.
2 ದಿನಗಳ ಭೇಟಿಯಲ್ಲಿ ಅವರು ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೋವ್ ಅವರೊಂದಿಗೆ ಜಾಗತಿಕ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಸಿದ್ದಾರೆ. ಜಾಗತಿಕ ಆರ್ಥಿಕತೆ ಮೇಲೆ ಕಳೆದ ಕೆಲವು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ, ಆರ್ಥಿಕ ಬಿಕ್ಕಟ್ಟು ಮತ್ತು ವ್ಯಾಪಾರದಲ್ಲಿನ ಸವಾಲುಗಳು ಕೆಟ್ಟಪರಿಣಾಮವನ್ನು ಬೀರಿವೆ. ಈಗ ಉಕ್ರೇನ್ ಮತ್ತು ರಷ್ಯಾ ಬಿಕ್ಕಟ್ಟಿನ ಪರಿಣಾಮವನ್ನು ನಾವು ನೋಡುತ್ತಿದ್ದೇವೆ. ಹಾಗಾಗಿ ಇದು ಯುದ್ಧ ಮಾಡುವ ಸಮಯವಲ್ಲ. ಯುದ್ಧವನ್ನು ತೊರೆದು ಮಾತುಕತೆ ನಡೆಸಬೇಕು ಎಂಬ ಮಾತನ್ನು ಭಾರತ ಪುನರುಚ್ಚರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತ ವಿರೋಧಿ ಚಟುವಟಿಕೆಗೆ ಅಫ್ಘಾನ್ ಬಳಕೆಯಾಗಬಾರದು: ಜೈಶಂಕರ್!
ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಗಳು ದೀರ್ಘಕಾಲೀನ ಪರಿಣಾಮವನ್ನು ಹೊಂದಿವೆ. ಇವು ಪ್ರಗತಿ ಮತ್ತು ಸಮೃದ್ಧಿಯ ಮೇಲೆ ಕೆಟ್ಟಪರಿಣಾಮವನ್ನು ಬೀರುತ್ತವೆ. ನಮ್ಮ ಮಾತುಕತೆಯಲ್ಲಿ ಇಂತಹ ಜಾಗತಿಕ ವಿಚಾರಗಳು ಸೇರಿದಂತೆ ಪ್ರಾದೇಶಿಕ ವಿಚಾರಗಳನ್ನು ಚರ್ಚಿಸಲಾಗಿದೆ. ಭಾರತ ಮತ್ತು ರಷ್ಯಾಗಳೆರಡೂ ಮರು ಸಮತೋಲಿತ ಜಗತ್ತಿನ ನಿರ್ಮಾಣದಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದರು.