Foreign Policy: ವಿದೇಶ ನೀತಿಯನ್ನು ಮೋದಿ ಬದಲಿಸಿದ್ದು ಹೇಗೆ?

By Kannadaprabha News  |  First Published Jan 31, 2022, 9:16 AM IST

ಈಗಿನ ವಿದೇಶಾಂಗ ನೀತಿ (Foreign Policy)  3ಡಬ್ಲ್ಯುನಿಂದ 3ಟಿಗೆ ಬದಲಾಗಿದೆ. 3ಟಿ ಅಂದರೆ ಟ್ರೇಡ್‌, ಟೆಕ್ನಾಲಜಿ, ಟೂರಿಸಂ. ಈಗ ಮೋಜು ಮಾಡುತ್ತಾ ವಿದೇಶದಲ್ಲಿ ಕಾಲಹರಣ ಮಾಡಲು ಮೋದಿ ಸರ್ಕಾರ ಯಾವುದೇ ರಾಜತಾಂತ್ರಿಕರಿಗೆ ಬಿಡುತ್ತಿಲ್ಲ. 


ವಿಶ್ವದ ಯಾವುದೇ ದೇಶದ ವಿದೇಶಾಂಗ ನೀತಿ ((Foreign Policy) ಆ ದೇಶದ ರಾಷ್ಟ್ರೀಯ ಹಿತಾಸಕ್ತಿಯ ಸುತ್ತಲೇ ಕೇಂದ್ರೀಕೃತವಾಗಿರುತ್ತದೆ ಮತ್ತು ಅದು ಹಾಗೇ ಇರಬೇಕು ಕೂಡ. ಭಾರತದಲ್ಲಿ ಕಾಂಗ್ರೆಸ್‌ ಪಕ್ಷದ ಸುದೀರ್ಘ 70 ವರ್ಷಗಳ ಅಧಿ​ಕಾರದ ಕಾಲದಲ್ಲಿ, ಅದರಲ್ಲೂ ಯುಪಿಎ-1 ಮತ್ತು 2ನೇ ಅವ​ಧಿಯಲ್ಲಿ ಇದ್ದ ವಿದೇಶಾಂಗ ನೀತಿಯು ರಾಷ್ಟ್ರೀಯ ಹಿತಾಸಕ್ತಿಗಿಂತ ಹೆಚ್ಚಾಗಿ ಪಕ್ಷದ ಹಿತಾಸಕ್ತಿಯನ್ನು ಕೇಂದ್ರವಾಗಿರಿಸಿಕೊಂಡಿತ್ತು. ಅದು ನಮಗೆ ಸ್ಪಷ್ಟವಾಗಿ ಗೋಚರಿಸಿದ್ದು ಎರಡು ಸಂದರ್ಭದಲ್ಲಿ.

26/11 ಮುಂಬೈ ದಾಳಿಯ ಸಮಯದಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ದಾಳಿ ಮಾಡಲು ಸಜ್ಜಾಗಿ ನಿಂತಿದ್ದ ವಾಯಪಡೆಯನ್ನು ಅಂದಿನ ಸರ್ಕಾರ ತಡೆಯಿತು. ಜೊತೆಗೆ ಸೆರೆ ಸಿಕ್ಕ ಪಾಕಿಸ್ತಾನದ ಉಗ್ರ ಅಜ್ಮಲ್‌ ಕಸಬ್‌ನನ್ನು ಬೆಂಗಳೂರು ಮೂಲದ ಹಿಂದೂ ಉಗ್ರ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಇದನ್ನು ಸ್ವತಃ ಮುಂಬೈ ದಾಳಿಯ ಕಾಲದಲ್ಲಿ ಮುಂಬೈ ಪೊಲೀಸ್‌ ಕಮಿಷನರ್‌ ಆಗಿದ್ದ ರಾಕೇಶ್‌ ಮಾರಿಯಾ ತಮ್ಮ ಜೀವನ ಚರಿತ್ರೆ ‘ಲೆಟ್‌ ಮಿ ಸೇ ಇಟ್‌ ನೌ’ ಪುಸ್ತಕದಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್‌ ಪಕ್ಷದ ದಿಗ್ವಿಜಯ್‌ ಸಿಂಗ್‌ ಪಾಕಿಸ್ತಾನಿ ಉಗ್ರರು ನಡೆಸಿದ ಈ ಸಂಚನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ಆರೋಪಿಸಿ ಒಂದು ಪುಸ್ತಕವನ್ನೂ ಬರೆದರು.

Tap to resize

Latest Videos

undefined

ಕಾಂಗ್ರೆಸ್‌ನ ಸ್ವ ಹಿತಾಸಕ್ತಿ

ಯುಪಿಎ 2ನೇ ಅವ​ಧಿಯಲ್ಲಿ ಚೀನಾ ಭಾರತದ ಗಡಿಯುದ್ದಕ್ಕೂ ಪದೇಪದೇ ದಾಂಧಲೆ ಮಾಡುತ್ತಿತ್ತು. ಭಾರತದ ಸೈನ್ಯ ಚೀನಾದ ಗಡಿಯಲ್ಲಿ ಸೈನ್ಯದ ತ್ವರಿತ ಓಡಾಟಕ್ಕೆ ಸಹಾಯಕವಾಗಲು ಉತ್ತಮ ರಸ್ತೆಗಳ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ಹೇಳುತ್ತಾ ಬಂದಿತ್ತು. ಸರ್ಕಾರ ಅವರ ಒತ್ತಡಕ್ಕೆ ಮಣಿಯಿತಾದರೂ ಯಾವ ವೇಗದಿಂದ ಆ ಕೆಲಸಗಳನ್ನು ಮಾಡಬೇಕಿತ್ತೋ ಆ ವೇಗದಲ್ಲಿ ಮಾಡಲಿಲ್ಲ.

Padmashree Mahalinga Naik: ಮಹಾಲಿಂಗ ನಾಯ್ಕರ ಗುಣಗಾನ ಮಾಡಿದ ಪಿಎಂ ಮೋದಿ

ಆರಂಭವಾದ ಒಂದಿಷ್ಟುಯೋಜನೆಗಳು ಕುಂಟು ನೆಪಗಳಿಗೆ ನಿಂತರೆ, ಒಂದಿಷ್ಟುಯೋಜನೆಗಳು ಕುಂಟುತ್ತಾ ಸಾಗಿದವು. ಇದರಿಂದಾಗಿ ಚೀನಾಕ್ಕೆ ಸಹಾಯವಾಯಿತು. ಆ ವೇಳೆ, ಅಕ್ಸೈ ಚಿನ್‌ ಮತ್ತು ಸಿಯಾಚಿನ್‌ಗೆ ಹತ್ತಿರದಲ್ಲಿರುವ ದೌಲತ್‌ ಬೇಗ್‌ ಓಲ್ಡಿ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆ ತನ್ನ ಸರಕು ವಿಮಾನ ಸಿ-130ಜೆ ಇಳಿಸಲು ಸರ್ಕಾರದ ಅನುಮತಿ ಕೇಳಿತು. ಅಂದಿನ ಸರ್ಕಾರ ಅನುಮತಿ ಕೊಡಲಿಲ್ಲ. ಆಗಿನ ವಾಯುಪಡೆ ಅ​ಧಿಕಾರಿಯಾಗಿದ್ದ ಬೊರ್ಬರ ಅವರು ಸರ್ಕಾರಕ್ಕೆ ಹೇಳದೇ ಅಲ್ಲಿ ಯುದ್ಧ ವಿಮಾನ ಇಳಿಸಿ ದೇಶದ ಗಡಿಯ ರಕ್ಷಣೆ ಮಾಡಿದ್ದರು.

ಚೀನಾ ದೇಶಕ್ಕೆ ಪರೋಕ್ಷ ನೆರವು

ಡೋಕ್ಲಾಂ ಬಿಕ್ಕಟ್ಟಿನ ಸಮಯದಲ್ಲಿ ರಾಹುಲ್‌ ಗಾಂಧಿ​ ಚೀನಾದ ರಾಯಭಾರಿಯನ್ನು ಗುಪ್ತವಾಗಿ ಭೇಟಿಯಾಗಿದ್ದು ಈಗ ದೇಶಕ್ಕೇ ಗೊತ್ತಿರುವ ವಿಚಾರ. ಗಡಿಯ ವಿಚಾರದಲ್ಲಿ ಚೀನಾ ಭಾರತದ ವಿರುದ್ಧ ಏನೆಲ್ಲಾ ಸುಳ್ಳುಗಳನ್ನು ಹರಡಲು ಬಯಸುತ್ತದೆಯೋ, ಕಾಂಗ್ರೆಸ್‌ ಬೆಂಬಲಿಗರು ಭಾರತದೊಳಗೆ ಅಂತಹ ಕತೆಗಳನ್ನು ಹಬ್ಬಿಸಿದರು. ಗಲ್ವಾನ್‌ ಗಲಾಟೆ ಆದಾಗ ಚೀನಾ ಭಾರತದ ಗಡಿ ದಾಟಿ ನೂರಾರು ಕಿಲೋಮೀಟರ್‌ ಭೂಭಾಗವನ್ನು ಆಕ್ರಮಿಸಿತು ಎಂದು ಕಾಂಗ್ರೆಸ್‌ ಬೆಂಬಲಿಗರು ಚೀನಾದ ಪರವಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದು ನೋಡಿದ್ದೇವೆ. ಭಾರತ ಸರ್ಜಿಕಲ್‌ ದಾಳಿ ನಡೆಸಿದಾಗಲೂ ಇದೇ ವ್ಯವಸ್ಥೆ ಭಾರತದ ಸೈನ್ಯದ ಬಳಿ ಸಾಕ್ಷಿ ಕೇಳಿ ದೇಶಕ್ಕೆ ಮುಜುಗರ ಉಂಟುಮಾಡಿತ್ತು.

3 ಡಬ್ಲ್ಯು, 3ಟಿ ಅಂದರೇನು?

ಕಾಂಗ್ರೆಸ್‌ ಪಕ್ಷ ಅಧಿ​ಕಾರದಲ್ಲಿದ್ದಾಗ ದೇಶದ ವಿದೇಶಾಂಗ ವ್ಯವಹಾರಗಳು 3 ಡಬ್ಲ್ಯು ಸುತ್ತ ಇರುತ್ತಿದ್ದವು. ಅದುವೇ ವಲ್ಡ್‌ರ್‍ ಟೂರ್‌, ವೈನ್‌ ಆ್ಯಂಡ್‌ ವುಮನ್‌. ದೇಶದ ಬಹುತೇಕ ರಾಜತಾಂತ್ರಿಕರು ಮತ್ತು ಸರ್ಕಾರವನ್ನು ಮೆಚ್ಚಿಸುತ್ತಿದ್ದ ಪತ್ರಕರ್ತರಿಗೆ ಸರ್ಕಾರದ ಖರ್ಚಿನಲ್ಲಿ ಇವು ದೊರಕುತ್ತಿದ್ದವು. ಬಡತನ, ಜಾತಿಗಳ ನಡುವಿನ ತಿಕ್ಕಾಟ ಇವುಗಳ ನಡುವೆಯೇ ಭಾರತವನ್ನು ವ್ಯಸ್ತ ಮಾಡಿಟ್ಟಿದ್ದ ಕಾಂಗ್ರೆಸ್‌ ಪಕ್ಷ ವಿದೇಶ ನೀತಿ, ವಿದೇಶಿ ವ್ಯವಹಾರ ದೇಶದ ಶ್ರೀಮಂತ ವರ್ಗದವರ ವಿಷಯ. ದೇಶದ ಜನಸಾಮಾನ್ಯರಿಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನುವಂತೆ ಬಿಂಬಿಸಿತ್ತು. ವಿದೇಶಾಂಗ ಸೇವೆಯಲ್ಲಿರುವುದು ಯಾವುದೋ ದೇವಲೋಕದ ಕೆಲಸ, ಅದೊಂದು ತರಹದಲ್ಲಿ ಜವಾಬ್ದಾರಿಗಳೇ ಇಲ್ಲದ ಅ​ಧಿಕಾರ ಅನ್ನುವಂತೆ ಇತ್ತು. ಮೋದಿ ಸರ್ಕಾರ ಬಂದಮೇಲೆ ಈ ಪದ್ಧತಿ ಬದಲಾಯಿತು.

ಈಗಿನ ವಿದೇಶಾಂಗ ನೀತಿ 3 ಡಬ್ಲ್ಯುನಿಂದ 3ಟಿಗೆ ಬದಲಾಗಿದೆ. 3ಟಿ ಅಂದರೆ ಟ್ರೇಡ್‌, ಟೆಕ್ನಾಲಜಿ, ಟೂರಿಸಂ. ಈಗ ವಿದೇಶದಲ್ಲಿ ಕಾಲಹರಣ ಮಾಡಲು ಮೋದಿ ಸರ್ಕಾರ ಯಾವುದೇ ರಾಜತಾಂತ್ರಿಕರಿಗೆ ಬಿಡುತ್ತಿಲ್ಲ. ಮೋದಿ ಕೂಡ ತಮ್ಮ ಯಾವುದೇ ವಿದೇಶ ಪ್ರವಾಸದಲ್ಲಿ ಈ ಮೂರು ವಿಷಯಗಳನ್ನು ಅಂದರೆ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರವಾಸಗಳ ಸುತ್ತಲೇ ವ್ಯವಹರಿಸುತ್ತಾರೆ. ಅದಕ್ಕೆ ಮೋದಿಯವರ ಇತ್ತೀಚಿನ ಅಮೆರಿಕ ಪ್ರವಾಸವನ್ನೇ ಗಮನಿಸಿ. ಅಲ್ಲಿ ಅವರು ಅಮೆರಿಕದ ಪ್ರಖ್ಯಾತ ಉದ್ಯೋಗಪತಿಗಳ ಜೊತೆ ಮಾತನಾಡುತ್ತಾರೆ. ಭಾರತದಲ್ಲಿ ಬಂಡವಾಳದ ಹೂಡಿಕೆ ಮತ್ತು ತಂತ್ರಜ್ಞಾನದ ಕೊಡುಕೊಳ್ಳುವಿಕೆಯ ಕುರಿತೂ ಮಾತನಾಡುತ್ತಾರೆ.

ಜೊತೆಗೆ ಭಾರತದ ಕಲೆ ಮತ್ತು ಸಂಸ್ಕೃತಿಯ ಅನಾವರಣ ಮಾಡಿ ಭಾರತಕ್ಕೆ ಹೆಚ್ಚು ಹೆಚ್ಚು ಪ್ರವಾಸಕ್ಕೆ ಬರುವಂತೆಯೂ ಪ್ರೋತ್ಸಾಹಿಸುತ್ತಾರೆ. ಮೋದಿಯವರು ತಾವು ನಡೆಸುವ ಪ್ರತಿ ರಾಜತಾಂತ್ರಿಕರ ಸಭೆಯಲ್ಲಿ ಈ ಮೂರು ‘ಟಿ’ ಬಗ್ಗೆ ಪ್ರಸ್ತಾಪಿಸುತ್ತಾರೆ ಮತ್ತು ವಿದೇಶದಲ್ಲಿರುವ ಪ್ರತಿಯೊಬ್ಬ ಭಾರತದ ರಾಜತಾಂತ್ರಿಕರಿಗೆ ಒಂದು ಟಾರ್ಗೆಟ್‌ ಕೊಟ್ಟು ನಿಮ್ಮಿಂದ ವರ್ಷಕ್ಕೆ ಭಾರತಕ್ಕೆ ಇಷ್ಟುಪ್ರಮಾಣದ ಬಂಡವಾಳ ಹರಿದು ಬರಲೇಬೇಕು ಎಂದು ತಾಕೀತು ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಈಗ ಭಾರತಕ್ಕೆ ವಿದೇಶಿ ಬಂಡವಾಳ ಹರಿದು ಬರುತ್ತಿರುವುದು. ಭಾರತದ ರಫ್ತು ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು.

PM Modi NCC Rally: ರಾಷ್ಟ್ರ ಮೊದಲೆಂದು ದುಡಿವ ಯುವಕರು ಇಲ್ಲಿದ್ದಾರೆ: ದೇಶವನ್ನು ಯಾರೂ ತಡೆಯಲಾರರು!

ಭಾರತದಿಂದ ಶಸ್ತ್ರಾಸ್ತ್ರ ರಫ್ತು

ಮೋದಿಯವರ ‘ಆ್ಯಕ್ಟ್ ಈಸ್ಟ್‌’ ಪಾಲಿಸಿ ಈಗ ಭಾರತದ ರಕ್ಷಣಾ ಉತ್ಪನ್ನಗಳಿಗೆ ಬೃಹತ್‌ ಮಾರುಕಟ್ಟೆಯನ್ನೇ ತೆರೆದಿದೆ. ದಕ್ಷಿಣ ಚೀನಾ ಸಾಗರ ಪ್ರದೇಶದಲ್ಲಿ ಇರುವ ಎಲ್ಲ ದೇಶಗಳಿಗೆ ಚೀನಾದಿಂದ ಅಭದ್ರತೆ ಕಾಡುತ್ತಿದೆ. ಅದನ್ನು ಸಮರ್ಥವಾಗಿ ಎದುರಿಸಲು ಅವುಗಳಿಗೆ ಸೂಕ್ತವಾದ ಶಸ್ತ್ರಾಸ್ತ್ರಗಳ ಅಭಾವ ಇದೆ. ಹೀಗಾಗಿ ಅವು ಭಾರತದ ಕಡೆ ಮುಖ ಮಾಡಿವೆ. ಇತ್ತೀಚೆಗೆ ಚೀನಾ ಫಿಲಿಪ್ಪೀನ್ಸ್‌ನ ಕಡಲ ತೀರದಲ್ಲಿ ಅದರ ಮೀನುಗಾರಿಕಾ ಹಡಗುಗಳಿಗೆ ತೊಂದರೆ ಕೊಟ್ಟಿತ್ತು. ಚೀನಾದ ಯುದ್ಧ ನೌಕೆಗಳನ್ನು ಸಮರ್ಥವಾಗಿ ಎದುರಿಸಲು ಭಾರತದ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಗಿಂತ ಉತ್ತಮವಾದ ಆಯುಧ ಜಗತ್ತಿನಲ್ಲೇ ಇಲ್ಲ. ಹಾಗಾಗಿ ಫಿಲಿಪ್ಪೀನ್ಸ್‌ ಅದನ್ನು ಭಾರತದಿಂದ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ.

ವಿಯೆಟ್ನಾಂ ಕೂಡ ಭಾರತದ ಬ್ರಹ್ಮೋಸ್‌ ಕ್ಷಿಪಣಿಗೆ ಆಸಕ್ತಿ ಹೊಂದಿದ್ದು, ಮುಂದಿನ ತಿಂಗಳು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಸೌದಿ ಅರೇಬಿಯಾ ಭಾರತದ ಬ್ರಹ್ಮೋಸ್‌ ಕ್ಷಿಪಣಿಯ ಬಗ್ಗೆ ಆಸಕ್ತಿ ತೋರಿಸಿದೆ. ಇಂಡೋನೇಷ್ಯಾ, ಮಾಲ್ಡೀವ್‌್ಸ ಮುಂತಾದ ದೇಶಗಳು ಭಾರತದಿಂದ ಬ್ರಹ್ಮೋಸ್‌, ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸುವಲ್ಲಿ ಆಸಕ್ತಿ ತೋರಿವೆ. ಇದರ ಜೊತೆಗೆ ಭಾರತದ ಲಘು ಹೆಲಿಕಾಪ್ಟರ್‌ಗಳಿಗೆ ವಿಯೆಟ್ನಾಂ ಮತ್ತು ಮಾರಿಷಸ್‌ ದೇಶಗಳು ಆಸಕ್ತಿ ತೋರಿಸಿವೆ.

2016-17ರಲ್ಲಿ ಭಾರತದ ರಕ್ಷಣಾ ಕ್ಷೇತ್ರದ ರಫ್ತು 1,521 ಕೋಟಿ ರು. ಇದ್ದದ್ದು 2020-21ರಲ್ಲಿ 8,434 ಕೋಟಿ ರು. ಆಗಿದೆ. 2025ಕ್ಕೆ ಇದನ್ನು 35 ಸಾವಿರ ಕೋಟಿ ರು.ಗೆ ತಲುಪಿಸುವುದು ಮೋದಿ ಸರ್ಕಾರದ ಗುರಿ. ಇದಕ್ಕೆ ಭಾರತ ಬ್ರಹ್ಮೋಸ್‌ನಂತೆಯೇ ಉಳಿದ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಬೇಕು. ಎಚ್‌ಎಎಲ್‌ ನಿರ್ಮಿಸಿದ ತೇಜಸ್‌ ಯುದ್ಧ ವಿಮಾನಕ್ಕೆ ಆಗ್ನೇಯ ಏಷ್ಯಾ ದೇಶಗಳಿಂದ ಬೇಡಿಕೆ ಬರುತ್ತಿದೆ.

ದುರಂತ ಅಂದರೆ ಈಗಿನ ಉತ್ಪಾದನಾ ವ್ಯವಸ್ಥೆಯಲ್ಲಿ ಎಚ್‌ಎಎಲ್‌ ಈ ವಿಮಾನವನ್ನು ಭಾರತದ ವಾಯುಪಡೆಗೆ ನಿಗದಿತ ಸಮಯದಲ್ಲಿ ಮಾಡಿ ಪೂರೈಸಲು ತಿಣುಕಾಡುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ವಿಮಾನವನ್ನು ಹೆಚ್ಚು ಪ್ರಚಾರ ಮಾಡಲು ಹೋಗುತ್ತಿಲ್ಲ. ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಭಾರತದ ಹಿತಾಸಕ್ತಿ ಕೇಂದ್ರಿತ ವಿದೇಶ ನೀತಿಯ ಕಾರಣಕ್ಕೆ ಇವತ್ತು ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ನಿಜಕ್ಕೂ ಭಾರತದ ಭವಿಷ್ಯ ಇವತ್ತು ಸುಭದ್ರವಾಗಿದೆ ಎಂಬ ಭರವಸೆ ಮೂಡುತ್ತಿದೆ.

- ಅಜಿತ್‌ ಶೆಟ್ಟಿಹೆರಂಜೆ, ಪತ್ರಕರ್ತ

click me!