ಸಹಕಾರ ಮತ್ತು ಸಂಘರ್ಷ: ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಯ ಪರಿಣಾಮಗಳು

By Suvarna News  |  First Published Nov 8, 2024, 8:56 AM IST

ಭಾರತ ಮತ್ತು ಅಮೆರಿಕಾ ನಡುವೆ ಬಲವಾದ ಸಹಯೋಗ ಹೊಂದುವುದನ್ನು ಟ್ರಂಪ್ ನಿರಂತರವಾಗಿ ಬೆಂಬಲಿಸಿದ್ದಾರೆ. ಟ್ರಂಪ್ ಹಿಂದಿನ ಅವಧಿಯಲ್ಲಿ ಕ್ವಾಡ್ ಒಕ್ಕೂಟ ಸ್ಥಾಪನೆಯೂ ಸೇರಿದಂತೆ, ಭಾರತದೊಡನೆ ವಿವಿಧ ಮುಖ್ಯ ಒಪ್ಪಂದಗಳಿಗೆ ಸಹಿ ಹಾಕಿದ್ದರು.


ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಡೊನಾಲ್ಡ್ ಟ್ರಂಪ್ ಅವರು 2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶ ಅಮೆರಿಕಾ - ಭಾರತದ ಸಂಬಂಧದ ಭವಿಷ್ಯವನ್ನು ರೂಪಿಸುವ ಸಾಧ್ಯತೆಗಳಿರುವುದರಿಂದ, ಟ್ರಂಪ್ ಪುನರಾಗಮನ ಭಾರತಕ್ಕೆ ಸಂಭಾವ್ಯ ಪ್ರಯೋಜನಗಳು ಮತ್ತು ಅಡೆತಡೆಗಳನ್ನೂ ತಂದೊಡ್ಡಬಹುದು. ಟ್ರಂಪ್ ಅವರ ಗೆಲುವು ಭಾರತ - ಅಮೆರಿಕಾ ಸಹಯೋಗಕ್ಕೆ ಹೊಸ ಅವಕಾಶಗಳನ್ನು ತೆರೆಯುವುದರೊಡನೆ, ಬಲವಾದ ಬಂಧವನ್ನು ಕಾಪಾಡಿಕೊಳ್ಳಲು ಬರುವ ಅಡೆತಡೆಗಳನ್ನೂ ನಿವಾರಿಸಬೇಕಾಗುತ್ತದೆ.

Latest Videos

undefined

ಟ್ರಂಪ್ ಅಧ್ಯಕ್ಷೀಯ ಅವಧಿಯಲ್ಲಿ ಭಾರತಕ್ಕೆ ಪ್ರಯೋಜನವಾಗುವ ಅಂಶಗಳು
1. ಉತ್ತಮ ರಾಜತಾಂತ್ರಿಕ ಸಂಬಂಧ

i) ಭಾರತ ಮತ್ತು ಅಮೆರಿಕಾ ನಡುವೆ ಬಲವಾದ ಸಹಯೋಗ ಹೊಂದುವುದನ್ನು ಟ್ರಂಪ್ ನಿರಂತರವಾಗಿ ಬೆಂಬಲಿಸಿದ್ದಾರೆ. ಟ್ರಂಪ್ ಹಿಂದಿನ ಅವಧಿಯಲ್ಲಿ ಕ್ವಾಡ್ ಒಕ್ಕೂಟ ಸ್ಥಾಪನೆಯೂ ಸೇರಿದಂತೆ, ಭಾರತದೊಡನೆ ವಿವಿಧ ಮುಖ್ಯ ಒಪ್ಪಂದಗಳಿಗೆ ಸಹಿ ಹಾಕಿದ್ದರು. 2017-2021ರ ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಅವರು ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ತಗ್ಗಿಸುವ ಸಲುವಾಗಿ ಅಮೆರಿಕಾ, ಭಾರತ, ಜಪಾನ್, ಮತ್ತು ಆಸ್ಟ್ರೇಲಿಯಾಗಳನ್ನು ಒಳಗೊಂಡ ಕ್ವಾಡ್ ಒಕ್ಕೂಟದ ಬಲವರ್ಧನೆಗೆ ನೆರವಾಗಿದ್ದರು. ಈ ಒಕ್ಕೂಟವನ್ನು 2007ರಲ್ಲಿ ಸ್ಥಾಪಿಸಲಾಗಿತ್ತಾದರೂ, ಅದು ಕ್ರಮೇಣ ನಿಷ್ಕ್ರಿಯವಾಗಿತ್ತು. ಕಾರ್ಯತಂತ್ರದ ಸವಾಲುಗಳು ಹೆಚ್ಚುತ್ತಿರುವ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ, ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ಸಹಕಾರವನ್ನು ಹೆಚ್ಚಿಸುವ ಸಲುವಾಗಿ ಕ್ವಾಡ್ ಒಕ್ಕೂಟವನ್ನು ಸ್ಥಾಪಿಸಲಾಗಿತ್ತು.

ತುಕ್ಕು ನಿರೋಧಕ ಉಕ್ಕು: ಜನಜೀವನದಲ್ಲಿ ಸ್ಟೇನ್‌ಲೆಸ್ ಸ್ಟೀಲಿನ ಮಹತ್ವ

ii) ಚೀನಾದ ಕುರಿತಂತೆ ಟ್ರಂಪ್ ಅವರ ದೃಢವಾದ ನಿಲುವು ಭಾರತದ ಹಿತಾಸಕ್ತಿಗಳಿಗೆ ಪೂರಕವಾಗಿದೆ. ಟ್ರಂಪ್ ಈ ಅವಧಿಯಲ್ಲೂ ಅಂತಹ ಕಾರ್ಯತಂತ್ರವನ್ನೇ ಮುಂದುವರಿಸುವ ಸಾಧ್ಯತೆಗಳಿವೆ. ಟ್ರಂಪ್ ಅವರ ನಿಲುವು ಚೀನಾಗೆ ಸಂಬಂಧಿಸಿದ ವಿಚಾರಗಳನ್ನು ನೇರವಾಗಿ ನಿಭಾಯಿಸುವುದರಿಂದ, ಅದು ಭಾರತಕ್ಕೆ ಹೆಚ್ಚು ಅನುಕೂಲಕರವಾಗಿದೆ.

iii) ಭಾರತ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ತಟಸ್ಥ ನಿಲುವು ಹೊಂದಿ, ರಷ್ಯಾದೊಡನೆ ಆತ್ಮೀಯ ಒಡನಾಟ ಮುಂದುವರಿಸಿತ್ತು. ಇದರ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳು ಭಾರತದ ಮೇಲೆ ಒತ್ತಡ ಹೇರಿದ್ದವು. ಆದರೆ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಉತ್ತಮ ಸಂಬಂಧ ಹೊಂದಿರುವುದರಿಂದ, ರಷ್ಯಾ ಜೊತೆಗಿನ ಸಂಬಂಧದ ಕುರಿತು ಭಾರತದ ಮೇಲಿನ ಒತ್ತಡ ಕಡಿಮೆಯಾಗಬಹುದು. ಈ ಮೂಲಕ, ಭಾರತ ಹೆಚ್ಚಿನ ಬಾಹ್ಯ ಒತ್ತಡವಿಲ್ಲದೆ, ಇನ್ನಷ್ಟು ಸ್ವತಂತ್ರವಾಗಿ ರಷ್ಯಾದ ಜೊತೆಗಿನ ಸಂಬಂಧವನ್ನು ನಿರ್ವಹಿಸಬಹುದು.

2. ರಾಜಕೀಯ ಪ್ರಭಾವ ಇಳಿಮುಖ: ಟ್ರಂಪ್ ಅಧ್ಯಕ್ಷೀಯ ಅವಧಿಯಲ್ಲಿ ಅವರು ಭಾರತಕ್ಕೆ ಅಹಿತಕರವಾಗುವಂತಹ ಭಾರತದ ಆಂತರಿಕ ವಿಚಾರಗಳ ಕುರಿತು ಹೇಳಿಕೆ ನೀಡಿರಲಿಲ್ಲ. ಭಾರತ ಅಮೆರಿಕಾ ತನ್ನ ವಿಚಾರಗಳಲ್ಲಿ ಮಧ್ಯ ಪ್ರವೇಶಿಸುವ ಬದಲು, ಪ್ರಮುಖ ವಿಚಾರಗಳಲ್ಲಿ ಆಸಕ್ತಿ ತೋರಬೇಕೆಂದು ಬಯಸಿತ್ತು. ಹಿಂದಿನ ಅಮೆರಿಕಾ ಅಧ್ಯಕ್ಷರಂತೆ ಟ್ರಂಪ್ ಅವರು ಕಾಶ್ಮೀರದ 370ನೇ ವಿಧಿಯ ರದ್ದತಿಯ ಬಗ್ಗೆ ಯಾವುದೇ ಟೀಕೆ ಮಾಡಿರಲಿಲ್ಲ. ಟ್ರಂಪ್ ಅವರ ಈ ನಿಲುವು ಭಾರತಕ್ಕೆ ತನ್ನ ಆಂತರಿಕ ವಿಚಾರಗಳನ್ನು ಬಾಹ್ಯ ಒತ್ತಡಗಳಿಲ್ಲದೆ, ಸ್ವತಂತ್ರವಾಗಿ ನಿಭಾಯಿಸಲು ಅನುಕೂಲ ಕಲ್ಪಿಸಿದೆ.

3. ಮೋದಿ - ಟ್ರಂಪ್ ಸಹಯೋಗ: ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿದ್ದು, ಇದು ಉಭಯ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನೆರವಾಗಲಿದೆ. ಅವರಿಬ್ಬರ ಭೇಟಿಯ ಸಂದರ್ಭದಲ್ಲಿ, ಟೆಕ್ಸಾಸ್‌ನಲ್ಲಿ ನಡೆದ 'ಹೌಡಿ ಮೋದಿ!' ಮತ್ತು ಅಹಮದಾಬಾದಿನ 'ನಮಸ್ತೇ ಟ್ರಂಪ್' ನಂತಹ ಆತ್ಮೀಯತೆಯ ಕಾರ್ಯಕ್ರಮಗಳು ಭವಿಷ್ಯದಲ್ಲೂ ಭಾರತ - ಅಮೆರಿಕಾ ಮಾತುಕತೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಹಕಾರವನ್ನು ಸುಲಭವಾಗಿಸುವ ಸಂಕೇತ ನೀಡಿವೆ.

ಭವಿಷ್ಯದಲ್ಲಿ ತಲೆದೋರಬಲ್ಲ ಸವಾಲುಗಳು
1. ವ್ಯಾಪಾರ ಬಿಕ್ಕಟ್ಟು

ಟ್ರಂಪ್ ಅವರು ಅನುಸರಿಸುವ 'ಅಮೆರಿಕಾ ಫಸ್ಟ್' ಧೋರಣೆ ಭಾರತ ಮತ್ತು ಅಮೆರಿಕಾಗಳ ನಡುವೆ ವ್ಯಾಪಾರ ಸಂಬಂಧಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಅಮೆರಿಕಾದ ಉತ್ಪನ್ನಗಳ ಮೇಲೆ ಭಾರತ ಹೆಚ್ಚಿನ ತೆರಿಗೆ ವಿಧಿಸುವುದನ್ನು ಟ್ರಂಪ್ ಟೀಕಿಸಿದ್ದು, ಅವರ ಭಾರತವನ್ನು 'ತೆರಿಗೆ ದೊರೆ' ಎಂದು ಕರೆದಿದ್ದಾರೆ. ಒಂದು ವೇಳೆ ಟ್ರಂಪ್ ಆಗ್ರಹಿಸಿರುವ ಪ್ರಮಾಣದ ಸುಂಕವನ್ನು ಜಾರಿಗೆ ತಂದರೆ, ಅದರ ಪರಿಣಾಮವಾಗಿ 2028ರ ವೇಳೆಗೆ ಭಾರತದ ಜಿಡಿಪಿ 0.1% ಕುಸಿತ ಕಾಣುವ ಅಪಾಯವಿದೆ. ಇದು ಅಮೆರಿಕಾದ ಮಾರುಕಟ್ಟೆಯ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವ ಐಟಿ ಮತ್ತು ಔಷಧ ವಲಯಗಳ ಮೇಲೆ ಪರಿಣಾಮ ಬೀರಬಹುದು.

2. ವಲಸೆ ಕುರಿತ ನೀತಿಗಳು
ಟ್ರಂಪ್ ಅವರ ಅಧ್ಯಕ್ಷೀಯ ಅವದಿಯಲ್ಲಿ, ವಲಸೆಗೆ ಸಂಬಂಧಿಸಿದ ಕಾನೂನುಗಳು ಕಟ್ಟುನಿಟ್ಟಾಗಿ ಜಾರಿಗೆ ಬರುವ ಸಾಧ್ಯತೆಗಳಿವೆ. ಅದರಲ್ಲೂ ಭಾರತದ ತಾಂತ್ರಿಕ ಉದ್ಯೋಗಿಗಳಿಗೆ ಅವಶ್ಯಕವಾದ ಎಚ್-1ಬಿ ವೀಸಾದಲ್ಲಿ ಬದಲಾವಣೆ ಬರಬಹುದು. ಟ್ರಂಪ್ ಈ ಹಿಂದಿನ ಅವಧಿಯಲ್ಲಿ ಜಾರಿಗೆ ತರಲು ಪ್ರಯತ್ನಿಸಿದ್ದ ಕಟ್ಟುನಿಟ್ಟಿನ ವೀಸಾ ನಿಯಮಗಳು ಈ ಅವಧಿಯಲ್ಲಿ ಜಾರಿಗೆ ಬಂದರೆ, ಅಮೆರಿಕಾದಲ್ಲಿ ಉದ್ಯೋಗ ಹೊಂದಲು ಬಯಸುತ್ತಿರುವ ಭಾರತದ ಸಾವಿರಾರು ಜನರಿಗೆ ಕಷ್ಟವಾಗಲಿದೆ. ತಾನು ವಲಸೆ ನೀತಿಯನ್ನು ಸುಲಭವಾಗಿಸುವುದಾಗಿ ಟ್ರಂಪ್ ಹೇಳುತ್ತಿದ್ದರೂ, ಅವರ ಅನಿಶ್ಚಿತ ನಿಲುವುಗಳು ಭಾರತೀಯ ವಲಸಿಗರ ಪರಿಸ್ಥಿತಿಯನ್ನು ಅನಿಶ್ಚಿತವಾಗಿಸಲಿದೆ.

3. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಅನಿಶ್ಚಿತತೆ
ಟ್ರಂಪ್ ಅವರ ಊಹಿಸಲು ಅಸಾಧ್ಯವಾಗುವಂತಹ ಕಾರ್ಯ ಶೈಲಿ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಸವಾಲಾಗುವಂತಿದೆ. ಈ ಹಿಂದೆ, ಟ್ರಂಪ್ ತಾನು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಧ್ಯಸ್ಥಿಕೆ ವಹಿಸಬಲ್ಲೆ ಎಂದಿದ್ದರು. ಆದರೆ ಅವರ ಈ ಮಾತನ್ನು ಭಾರತ ಪುರಸ್ಕರಿಸಲಿಲ್ಲ. ಅದರೊಡನೆ, ಅಮೆರಿಕಾದ ಸಹಯೋಗಿಗಳ ಜೊತೆಗೂ ಟ್ರಂಪ್ ನಡೆ ವಿವಾದಾತ್ಮಕವಾಗಿದೆ. ಟ್ರಂಪ್ ಅವರ ವಿದೇಶಾಂಗ ನೀತಿಗಳು ಏಷ್ಯಾದಲ್ಲಿ ಅಮೆರಿಕಾದ ಬದ್ಧತೆಗಳನ್ನು ದುರ್ಬಲಗೊಳಿಸಿ, ಅಂತಿಮವಾಗಿ ಚೀನಾಗೆ ಮೇಲುಗೈ ಒದಗಿಸಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಈ ಪ್ರದೇಶದಲ್ಲಿ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿರಲಿದೆ.

ಪರಿಗಣಿಸಬೇಕಾದ ಇತರ ಅಂಶಗಳು
1. ಪ್ರಾದೇಶಿಕ ಭದ್ರತಾ ಚಿತ್ರಣ

ಡೊನಾಲ್ಡ್ ಟ್ರಂಪ್ ಅವರ ನೀತಿಗಳು ದಕ್ಷಿಣ ಏಷ್ಯಾದ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಲ್ಲವು. ಭಾರತ ತನ್ನ ಮಿಲಿಟರಿ ಬೆಂಬಲ ಮತ್ತು ಆಯುಧ ವ್ಯಾಪಾರಕ್ಕಾಗಿ ಅಮೆರಿಕಾ ಮೇಲೆ ಅವಲಂಬನೆ ಹೊಂದಿದೆ. ಆದರೆ, ಪಾಕಿಸ್ತಾನ ಮತ್ತು ಚೀನಾ ಕುರಿತಂತೆ ಟ್ರಂಪ್ ನಿಲುವುಗಳು ಭಾರತದ ಭದ್ರತಾ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

2. ಪರಿಸರ ನೀತಿಗಳು ಮತ್ತು ಹವಾಮಾನ ಬದಲಾವಣೆ
 ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಟ್ರಂಪ್ ನಿಲುವುಗಳು ಬೈಡನ್ ನೀತಿಗಳಿಂದ ಸಂಪೂರ್ಣ ಭಿನ್ನವಾಗಿದ್ದು, ಹವಾಮಾನ ಸಮಸ್ಯೆಗಳನ್ನು ನಿರ್ವಹಿಸುವ ಜಾಗತಿಕ ಪ್ರಯತ್ನಗಳ ಮೇಲೆ ಪ್ರಭಾವ ಬೀರಬಹುದು. ಭಾರತ ತನ್ನದೇ ಆದ ಪಾರಿಸರಿಕ ಸವಾಲುಗಳನ್ನು ಹೊಂದಿದ್ದು, ಅವುಗಳನ್ನು ಸರಿಪಡಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಅವಲಂಬಿಸಿದೆ. ಹಾಗಿರುವಾಗ ಟ್ರಂಪ್ ನಿಲುವುಗಳು ಭಾರತಕ್ಕೆ ಮುಖ್ಯವಾಗಲಿವೆ.

3. ತಂತ್ರಜ್ಞಾನ ಮತ್ತು ಸೈಬರ್ ಭದ್ರತೆಯಲ್ಲಿ ಸಹಯೋಗ
ಟ್ರಂಪ್ ಅವರ ಆಡಳಿತ ಅವಧಿಯಲ್ಲಿ, ಭಾರತ ಮತ್ತು ಅಮೆರಿಕಾಗಳ ನಡುವೆ ತಂತ್ರಜ್ಞಾನ ಮತ್ತು ಸೈಬರ್ ಭದ್ರತಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರ ಏರ್ಪಡುವ ಸಾಧ್ಯತೆಗಳಿವೆ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ತಂತ್ರಜ್ಞಾನ ಬಹಳ ದೊಡ್ಡ ಪಾತ್ರ ನಿರ್ವಹಿಸುವುದರಿಂದ, ಎರಡೂ ದೇಶಗಳಿಗೂ ಈ ಕ್ಷೇತ್ರಗಳಲ್ಲಿ ಜೊತೆಯಾಗಿ ಕಾರ್ಯಾಚರಿಸುವುದು ಮುಖ್ಯವಾಗಿದೆ.

4. ವಲಸಿಗರ ಪ್ರಭಾವ ಮತ್ತು ಸಾರ್ವಜನಿಕ ಗ್ರಹಿಕೆ
ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ, ವಲಸೆಗೆ ಸಂಬಂಧಿಸಿದಂತೆ ಅವರು ಇನ್ನಷ್ಟು ಕಠಿಣ ನೀತಿಗಳನ್ನು ಜಾರಿಗೆ ತರಬಹುದು. ಇದರ ಪರಿಣಾಮವಾಗಿ, ಅಮೆರಿಕಾದಲ್ಲಿರುವ ಭಾರತೀಯ ಸಮುದಾಯಕ್ಕೆ ವೀಸಾ ಪಡೆಯಲು ಹೆಚ್ಚಿನ ಸಮಯ ಕಾಯಬೇಕಾಗಬಹುದು. ಅದರೊಡನೆ, ಅಮೆರಿಕಾ ಪೌರತ್ವ ಪಡೆಯಲು ಹೆಚ್ಚಿನ ಸವಾಲುಗಳು ಎದುರಾಗಬಹುದು. ಅದರೊಡನೆ, ಟ್ರಂಪ್ ನಿಲುವುಗಳು ಅಮೆರಿಕಾದ ನಾಗರಿಕರು ವಲಸಿಗ ಸಮುದಾಯದೊಡನೆ ವ್ಯವಹರಿಸುವುದರ ಮೇಲೂ ಪ್ರಭಾವ ಬೀರಲಿದ್ದು, ಹೆಚ್ಚಿನ ಉದ್ವಿಗ್ನತೆ ಮತ್ತು ತಪ್ಪು ಗ್ರಹಿಕೆಗಳಿಗೆ ಹಾದಿ ಮಾಡಿಕೊಡಬಹುದು. ಒಟ್ಟಾರೆಯಾಗಿ, ಟ್ರಂಪ್ ನೀತಿಗಳು ಭಾರತೀಯ ಕುಟುಂಬಗಳಿಗೆ ಅಮೆರಿಕಾದಲ್ಲಿ ನೆಲೆಸುವುದನ್ನು ಕಷ್ಟಕರವಾಗಿಸಿ, ಔದ್ಯೋಗಿಕ ಕ್ಷೇತ್ರದಲ್ಲಿ, ನೆರೆಹೊರೆಯಲ್ಲಿ ಅವರನ್ನು ಸ್ಥಳೀಯರು ಸ್ವೀಕರಿಸುವುದರ ಮೇಲೆ ಪ್ರಭಾವ ಬೀರಬಹುದು. ಅಂದರೆ, ಕೆಲವು ರಾಜಕೀಯ ನಿರ್ಧಾರಗಳ ಪ್ರಭಾವ ಜನರ ದೈನಂದಿನ ಜೀವನದ ಮೇಲೆ ಉಂಟಾಗಲಿದೆ.

ಏರ್ ಇಂಡಿಯಾದಿಂದ 5,000 ಕೋಟಿಯ ಖರೀದಿ: ರತನ್ ಟಾಟಾ ವೈಮಾನಿಕ ಕನಸಿನತ್ತ ಹೆಜ್ಜೆಯೇ?

5. ಹೂಡಿಕೆ ಮತ್ತು ‌ಆರ್ಥಿಕ ಅಭಿವೃದ್ಧಿ
ಅಮೆರಿಕಾ ಭಾರತದಲ್ಲಿ ಎಷ್ಟರಮಟ್ಟಿಗೆ ಹೂಡಿಕೆ ಮಾಡಲಿದೆ ಎನ್ನುವುದರ ಮೇಲೆ ಟ್ರಂಪ್ ಆರ್ಥಿಕ ನೀತಿಗಳು ಪ್ರಭಾವ ಬೀರಲಿವೆ. ಟ್ರಂಪ್ ಅವರ ವ್ಯಾಪಾರ ನಿರ್ಧಾರಗಳ ಆಧಾರದಲ್ಲಿ, ಭಾರತದ ವಿವಿಧ ವಲಯಗಳ ಮೇಲೆ ಪರಿಣಾಮಗಳು ಉಂಟಾಗಲಿವೆ. ಡೊನಾಲ್ಡ್ ಟ್ರಂಪ್ ಮತ್ತೊಂದು ಬಾರಿಗೆ ಅಮೆರಿಕಾ ಅಧ್ಯಕ್ಷರಾಗಿ ಮರಳುವುದರೊಡನೆ, ಭಾರತದ ಮುಂದೆ ಅವಕಾಶಗಳು ಮತ್ತು ಸವಾಲುಗಳೆರಡೂ ತೆರೆದಿವೆ. ಒಂದೆಡೆ, ಪ್ರಬಲ ರಕ್ಷಣಾ ಸಂಬಂಧ ಮತ್ತು ಕಡಿಮೆ ಮಧ್ಯಪ್ರವೇಶಗಳು ಉಭಯ ರಾಷ್ಟ್ರಗಳನ್ನು ನಿಕಟವಾಗಿಸಬಹುದು. ಆದರೆ, ವ್ಯಾಪಾರ ಸಮಸ್ಯೆಗಳು, ವಲಸೆ ನೀತಿಗಳು ಇದಕ್ಕೆ ಅಡಚಣೆಯಾದೀತು. ಇನ್ನು ಇತರ ಪ್ರಮುಖ ವಿಚಾರಗಳಾದ ಪ್ರಾದೇಶಿಕ ಭದ್ರತೆ, ಹವಾಮಾನ ಬದಲಾವಣೆ, ತಾಂತ್ರಿಕ ಸಹಯೋಗ, ಅಮೆರಿಕಾದಲ್ಲಿನ ಭಾರತೀಯ ಸಮುದಾಯದ ಸಾರ್ವಜನಿಕ ಅಭಿಪ್ರಾಯ, ಮತ್ತು ಆರ್ಥಿಕ ನಿರೀಕ್ಷೆಗಳು ಭಾರತ - ಅಮೆರಿಕಾ ಸಂಬಂಧವನ್ನು ರೂಪಿಸುವಲ್ಲಿ ಮುಖ್ಯವಾಗಲಿವೆ.

click me!