ಪೇರೆಂಟಿಂಗ್ ಎಂಬುದು ಕೌಶಲ್ಯ. ಇದನ್ನು ಸದಾ ಉತ್ತಮಪಡಿಸಿಕೊಳ್ಳಲು ಇದ್ದೇ ಇರುತ್ತದೆ. ಇದು ನಿರಂತರ ಕಲಿಕೆ. ಆದರೆ, ಇಂದಿನ ಪೋಷಕರಿಗೆ ಮಕ್ಕಳನ್ನು ಬೆಳೆಸಲು ಹೆಚ್ಚು ಸಮಯವಿಲ್ಲ. ಇರುವುದನ್ನಾದರೂ ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆಯೇ ಎಂಬುದರ ಬಗ್ಗೆ ಕೂಡಾ ಅನುಮಾನವೇ.
ಪರ್ಫೆಕ್ಟ್ ಪೇರೆಂಟ್ ಎಂಬವರು ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆದರೂ ಪೇರೆಂಟಿಂಗ್‌ನಿಂದ ತಪ್ಪಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿ ಪೋಷಕರಿಗೂ ಬೇಕು. ಏಕೆಂದರೆ, ಇದರಲ್ಲಿ ತಪ್ಪಾದರೆ ಅದು ಮಕ್ಕಳ ಮೇಲೆ ಧೀರ್ಘಕಾಲದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ಪೋಷಕರು ಎಡವಿದ್ದೀರೋ ಇಲ್ಲವೋ ಎಂದು ಅರಿಯುವ ಬಗೆ ಹೇಗೆ?
ನಿಮ್ಮ ಮಕ್ಕಳು ನಿಮ್ಮೊಂದಿಗೆ ತಮ್ಮೆಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತಾರೆ, ನಿಮ್ಮನ್ನು ನೋಡಿದಾಗೆಲ್ಲ ಸ್ಮೈಲ್ ಮಾಡುತ್ತಾರೆ, ತಮಗೆ ಇಷ್ಟ ಬಂದ ಕೆಲಸ ಮಾಡಿಕೊಂಡು ಇರುತ್ತಾರೆ, ಬಹಳಷ್ಟು ಗೆಳೆಯರನ್ನು ಹೊಂದಿದ್ದಾರೆ, ಆತಂಕ, ಸಿಟ್ಟು ಯಾವುದೂ ಮಿತಿ ಮೀರದೆ ಆರಾಮಾಗಿರುತ್ತಾರೆ ಎಂದರೆ ನೀವು ಪೇರೆಂಟಿಂಗ್‌ನಲ್ಲಿ ಗಣನೀಯವಾದ ಯಾವುದೇ ತಪ್ಪುಗಳನ್ನು ಮಾಡಿಲ್ಲ ಎಂದರ್ಥ.
(ಪೋಷಕರ ತಪ್ಪಿಲ್ಲದೆಯೂ ಹಲವು ಮಕ್ಕಳು ಆತಂಕ ಹಾಗೂ ವರ್ತನಾ ಸಮಸ್ಯೆ ಹೊಂದಿರುತ್ತಾರೆ.)
ಉದ್ಯೋಗ ಮಾಡುತ್ತಿರಲಿ, ಇಲ್ಲದಿರಲಿ, ಪ್ರತಿಯೊಬ್ಬ ತಾಯಿಯೂ ಕಷ್ಟಪಟ್ಟು ಕೆಲಸ ಮಾಡುವವಳೇ. ಮಕ್ಕಳನ್ನು ನೋಡಿಕೊಳ್ಳುವುದು, ಮನೆ ನಿಭಾಯಿಸುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಅಂಥದರಲ್ಲಿ ಆ ತಾಯಿ ಉದ್ಯೋಗಿಯೂ ಆಗಿದ್ದರೆ ಎರೆಡೆರಡು ಸಾಮಾಜಿಕ ಜವಾಬ್ದಾರಿಗಳನ್ನು ಒಟ್ಟೊಟ್ಟಿಗೇ ಹೆಗಲಿಗೆ ಹಾಕಿಕೊಂಡು ನಿಭಾಯಿಸುವುದು ಒತ್ತಡದಾಯಕವೇ. ಆದರೂ ನೀವು ಮಗುವಿಗಾಗಲೀ, ಉದ್ಯೋಗಕ್ಕಾಗಲೀ ಯಾವುದೇ ರೀತಿಯಲ್ಲೂ ಕಡಿಮೆ ಮಾಡುತ್ತಿಲ್ಲ ಎಂಬ ಭಾವ ನಿಮ್ಮಲ್ಲಿದ್ದರೆ ನಿಮ್ಮದು ಬಹಳ ತೃಪ್ತಿಕರ ಜೀವನವೇ. ಅದು ಬಿಡಿ ಉದ್ಯೋಗಿ ತಾಯಂದಿರು ಏನೆಲ್ಲ ಪೇರೆಂಟಿಂಗ್ ಮಿಸ್ಟೇಕ್ಸ್ ಮಾಡುತ್ತಾರೆ ಎಂದು ನೋಡೋಣ.
undefined
1. ಫಾಸ್ಟ್ ಲೇನ್‌ನಲ್ಲಿ ಬದುಕು
ಬಹಳಷ್ಟು ಉದ್ಯೋಗಿ ತಾಯಂದಿರು ಇಡೀ ದಿನ ಗಡಿಬಿಡಿಯಲ್ಲೇ ಕಳೆಯುತ್ತಾರೆ. ಎಲ್ಲವನ್ನೂ ಮುಗಿಸುವ ಹಪಹಪಿಯಲ್ಲಿ ಬಹಳ ಬೇಗ ಬೇಗ ಕೆಲಸ ಮಾಡುವ ಅಭ್ಯಾಸಕ್ಕೆ ಹೊಂದಿಕೊಳ್ಳುತ್ತಾರೆ. ಆದರೆ, ಇದು ನಮ್ಮ ಮಕ್ಕಳಲ್ಲೂ ಟೆನ್ಷನ್ ಹುಟ್ಟುಹಾಕುತ್ತದೆ ಎಂದು ಗೊತ್ತೇ? ನಮ್ಮ ಮಕ್ಕಳು ನಮ್ಮ ಕನ್ನಡಿ ಇದ್ದಂತೆ- ನಮ್ಮಿಂದ ಪಡೆದ ಎನರ್ಜಿಯನ್ನೇ ಅವರು ಪ್ರತಿಫಲಿಸುತ್ತಾರೆ. ಇಂದು ಬಹಳಷ್ಟು ಮಕ್ಕಳು ಹೈಪರ್ ಆ್ಯಕ್ಟಿವ್ ಆಗಿರಲು ಕಾರಣ ದೊಡ್ಡವರ ಹೈಪರ್‌ಆ್ಯಕ್ಟಿವಿಟಿ.
ಯಾವಾಗಲೂ ಗಡಿಬಿಡಿಯಲ್ಲೇ ಇರುವುದು ಚಿತ್ರವೊಂದನ್ನು ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ನೋಡಿದಂತೆ. ಸರಿಯಾಗಿ ಚಿತ್ರವನ್ನು ನೋಡಲೂ ಸಾಧ್ಯವಿಲ್ಲ, ಡೈಲಾಗನ್ನೂ ಕೇಳಿಸಿಕೊಳ್ಳಲಾಗುವುದಿಲ್ಲ. ನಿಜವಾಗಗಿ ಅಲ್ಲೇನಾಗುತ್ತಿದೆ ಎಂದೂ ಅರ್ಥವಾಗುವುದಿಲ್ಲ. ಬದುಕು ನಿಧಾನವಾದರೆ ಕಿರಿಕಿರಿ ಎನಿಸುತ್ತದೆ ನಿಜ. ಆದರೆ, ಅದು ಆರೋಗ್ಯಕಾರಿ ಜೀವನದ ಲಕ್ಷಣ. ಇದರಿಂದ ಹೊರ ಬರುವ ಬಗೆ ಹೇಗೆ? ಎಲ್ಲವನ್ನೂ ಮಾಡಬೇಕೆಂಬ ಹಪಹಪಿ ಬಿಡಿ. ಯಾವುದು ಮುಖ್ಯವಾಗಿ ಆಗಲೇಬೇಕೋ ಅದನ್ನಷ್ಟೇ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ತಾಳ್ಮೆ ಹೆಚ್ಚಿಸಿಕೊಳ್ಳಲು ಗಮನ ಹರಿಸಿ ಪ್ರಯತ್ನಿಸಿ.
2. ವಾಸ್ತವದಲ್ಲಿ ಫೋಕಸ್ ಇಲ್ಲದಿರುವುದು
ಈಗಿನ ಬದುಕೇ ಹೀಗಾಗಿದೆ. ಹೆಚ್ಚಿನವರು ವರ್ತಮಾನದಲ್ಲಿ ಬದುಕುವುದಿಲ್ಲ. ಉದ್ಯೋಗಿ ತಾಯಂದಿರು ಕೆಲಸದಲ್ಲಿರುವಾಗ ಮಕ್ಕಳ ಬಗ್ಗೆ ಯೋಚಿಸುತ್ತಾರೆ, ಮಕ್ಕಳ ಜೊತೆಗಿರುವಾಗ ಕೆಲಸದ ಬಗ್ಗೆ ಯೋಚಿಸುತ್ತಾರೆ. ಇದರಿಂದ ನಾವು ಖುಷಿಯಾಗಿ ಬದುಕಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಎರಡೂ ಕಡೆ ಪರಿಣಾಮಕಾರಿಯಾಗಿ ಕೆಲಸ ಮಾಡಲು, ಪ್ರಭಾವ ಬೀರಲು ಕೂಡಾ ಸಾಧ್ಯವಿಲ್ಲ. ಹಾಗಾಗಿ, ಮಕ್ಕಳೊದಿಗಿರುವಾಗ ಶೇ.100ರಷ್ಟು ಅವರೊಂದಿಗೇ ಇರುವುದು, ಉದ್ಯೋಗದಲ್ಲಿರುವಾಗ ಆ ಬಗ್ಗೆ ಪೂರ್ತಿ ಏಕಾಗ್ರತೆ ವಹಿಸುವುದನ್ನು ಪ್ರಯತ್ನ ಹಾಕಿ ಅಭ್ಯಾಸ ಮಾಡಿಕೊಳ್ಳಬೇಕು.
3. ಕಚೇರಿಯ ಸಮಸ್ಯೆ ಮನೆಗೆ ತರುವುದು
ಉದ್ಯೋಗಿ ಮಹಿಳೆಯರು ಕೆಲಸ ಸಂಬಂಧಿ ಸಮಸ್ಯೆಗಳ ಬಗ್ಗೆ ನೇರವಾಗಿ ಬಾಸ್ ಅಥವಾ ಸಹೋದ್ಯೋಗಿಗಳ ಜೊತೆ ಮಾತನಾಡುವ ಬದಲು ಆ ದೂರುಗಳನ್ನು ಮನೆಗೆ ಕೊಂಡೊಯ್ಯುತ್ತಾರೆ. ಈ ಸಂಬಂಧ ಅವರಲ್ಲಿ ಉಂಟಾದ ಒತ್ತಡ, ಕೋಪ, ಹಿಂಸೆಯನ್ನೆಲ್ಲ ಪಾಪದ ಮಕ್ಕಳ ಮೇಲೆ ತೀರಿಸುವುದಾಗುತ್ತದೆ. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅದರ ಬದಲು ನಮಗೆ ಖುಷಿ ಕೊಡುವ ಕೆಲಸ ಹುಡುಕಿಕೊಂಡು ಸಂಬಂಧಪಟ್ಟವರ ಜೊತೆ ಸಮಸ್ಯೆ ಚರ್ಚಿಸಿ ಪರಿಹರಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು.
ಶ್ರದ್ಧಾ ಶ್ರೀನಾಥ್ ತೂಕ ಇಳಿಸಿಕೊಂಡಿದ್ದು ಹೇಗೆ?
4. ಮನರಂಜನೆಯ ಪ್ರಾಮುಖ್ಯತೆ ಕಡೆಗಣನೆ
ಮನರಂಜನೆಗಿಂತ ಡ್ಯೂಟಿಯೇ ಮುಖ್ಯ ಎಂಬುದು ನಮ್ಮಲ್ಲಿ ಬಹುತೇಕರ ಮನಸ್ಥಿತಿ. ಇದರಿಂದ ಬದುಕಿನ ಮಜ ಕಳೆದುಹೋಗಿಬಿಡುತ್ತದೆ. ಬಾಲ್ಯದಿಂದಲೂ ಜವಾಬ್ದಾರಿಯುತವಾಗಿ ಗಂಭೀರವಾಗಿ ಇರಲು ಹೇಳಿಕೊಟ್ಟಿದ್ದರಿಂದ ಕೆಲ ಉದ್ಯೋಗಿ ತಾಯಂದಿರಿಗೆ ಹೇಗೆ ಮಜವಾಗಿರುವುದೆಂದೇ ಮರೆತು ಹೋಗಿರುತ್ತದೆ. ಆದರೆ, ನಮ್ಮ ಬಹು ಮುಖ್ಯ ಜವಾಬ್ದಾರಿ ಎಂದರೆ ಮಕ್ಕಳಿಗೆ ಸಂತೋಷ ಹಂಚುವುದು. ಅದನ್ನೇ ಮರೆತು ಬಿಟ್ಟರೆ ಅದರಿಂದ ಮಕ್ಕಳ ಬಾಲ್ಯದಲ್ಲಿ ಇರಬೇಕಾದ ನಗು, ಸಂತೋಷ, ತಮಾಷೆ ಎಲ್ಲವನ್ನೂ ಕಿತ್ತುಕೊಂಡಂತಾಗುತ್ತದೆ. ಅದಕ್ಕಾಗೇ ಸಂತೋಷವೇ ಬದುಕಿನ ಶಕ್ತಿ ಎಂಬುದನ್ನು ಅರಿಯಬೇಕು. ಪ್ರತಿ ಮಗುವಿಗೂ ತಮ್ಮ ತಂದೆತಾಯೊಳಗಿರುವ ಮಗುವಿನ ಆಯಾಮ ಬಹಳ ಇಷ್ಟ. ಮಕ್ಕಳೊಂದಿಗೆ ಮಕ್ಕಳಾಗಿ ಆಟವಾಡಿ, ಪೇಂಟ್ ಮಾಡಿ, ಅವರ ಕೈ ಮೇಲೆ ಚಿತ್ರ ಬಿಡಿಸಿ ಖುಷಿ ಪಡಿ. ಮಕ್ಕಳೊಂದಿಗೆ ಆಡುವುದರಿಂದ ಭಾವನಾತ್ಮಕ ಸಂಬಂಧ ಹೆಚ್ಚು ಗಟ್ಟಿಯಾಗುತ್ತದೆ.
5. ಮಕ್ಕಳಿಗೆ ನೀಡಿದ ಪ್ರಾಮಿಸ್ ಮುರಿಯುವುದು
ನಮ್ಮ ಕೆಲಸಗಳ ಮಧ್ಯೆ ಮಕ್ಕಳಿಗೆ ನೀಡಿದ ಪ್ರಾಮಿಸ್ ಮುರಿಯುವುದು ಅಥವಾ ಮರೆಯುವುದರಿಂದ ಮಕ್ಕಳಿಗೆ ತಾವು ಪೋಷಕರಿಗೆ ಮುಖ್ಯವಲ್ಲ ಎನಿಸುವುದಲ್ಲದೆ ತಾಯಿಯ ಮೇಲಿಟ್ಟ ನಂಬಿಕೆ ಕಳೆದುಕೊಳ್ಳುತ್ತವೆ. ಅಷ್ಟೇ ಅಲ್ಲ, ಮಕ್ಕಳು ಕೂಡಾ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಇರುವುದನ್ನು ಕಲಿಯುತ್ತಾರೆ. ಶನಿವಾರ ಪಾರ್ಕಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರೆ, ಬೇರೇನೇ ಕೆಲಸಗಳಿರಲಿ, ಅಂದು ಆ ಮಾತಿನಂತೆ ನಡೆದುಕೊಳ್ಳಿ. ಇಲ್ಲವೇ ಮಕ್ಕಳಿಗೆ ಪ್ರಾಮಿಸ್ ಮಾಡುವ ಮುನ್ನವೇ ಅದು ಸಾಧ್ಯವೇ ಎಂದು ಯೋಚಿಸಿ ಹೇಳಿ.