ಆ ದಿಟ್ಟ ತಾಯಿ ಹೋರಾಟಕ್ಕೆ ಸಿಗದ ಜಯ, ಕೈಗೆ ಬಂದ ಮಗನ ಕಿತ್ಕೊಂಡ ದೇವರು!

By Shobha MC  |  First Published Jun 13, 2023, 4:43 PM IST

ಬಹುಶಃ ಅಮ್ಮನಾದವಳಿಗೆ ಡೆತ್ ಬೆಡ್‌ನಲ್ಲಿರೋ ಮಗನನ್ನು ನೋಡಿಕೊಳ್ಳುವ ಪರಿಸ್ಥಿತಿ ಬಂದರೆ ಆಗುವಷ್ಟು ನೋವನ್ನು ಯಾರಿಂದಲೂ ವಿವರಿಸಲು ಅಸಾಧ್ಯ. ಅಂತ ನೋವುಂಡ ತಾಯಿ ಬಗ್ಗೆ ಒಂದಿಷ್ಟು


- ಎಂ.ಸಿ.ಶೋಭಾ, ಔಟ್‌ಪುಡ್ ಹೆಡ್, ಏಷ್ಯಾನೆಟ್ ಸುವರ್ಣ ನ್ಯೂಸ್

ಆ ತಾಯಿಯ ಕಣ್ಣಲ್ಲಿ ಕೊನೆಯ ನಂಬಿಕೆ ಇತ್ತು. ಹೇಗಾದರೂ ಸರಿಯೇ ಮಗನನ್ನು ಉಳಿಸಿಕೊಳ್ಳಲೇ ಬೇಕೆಂಬ ಹಠಕ್ಕೆ ಬಿದ್ದವಳಂತೆ, ಕಿದ್ವಾಯಿ ಆಸ್ಪತ್ರೆಯ ವೈದ್ಯರ ರೂಮ್​ಗಳಿಗೆ ನುಗ್ಗುತ್ತಿದ್ದಳು. ಹೊರಗೆ ಗಾಲಿ ಕುರ್ಚಿಯಲ್ಲಿ ಕುಳಿತಿದ್ದವನು 24 ವರ್ಷದ ಮಗ. ಲಿವರ್ ಕ್ಯಾನ್ಸರ್ ಎಂಬ ಮಹಾಮಾರಿಯಿಂದ ತನ್ನ ಮಗನನ್ನು ರಕ್ಷಿಸಿ ಎಂದು ಕಂಡ ಕಂಡ ಡಾಕ್ಟರ್​ಗಳ ಬಳಿ ಬೇಡುತ್ತಿದ್ದಳು ತಾಯಿ. ಕುರ್ಚಿಯಲ್ಲಿ ಮುದುಡಿ ಕುಳಿತಿದ್ದ ಮಗ, ತನ್ನ ತಾಯಿಯ ಅಸಹಾಯಕತೆ ನೋಡಿ ಕಣ್ಣೀರಾಗುತ್ತಿದ್ದ. ಒಂದು ವರ್ಷದಿಂದ ಮಗನ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದ ಆ ತಾಯಿ, ಕೊನೆಗೆ ಕರೆತಂದಿದ್ದು ಬೆಂಗಳೂರಿನ ಕಿದ್ವಾಯಿಗೆ, ಅಲ್ಲಿಂದ ವಿಕ್ಟೋರಿಯಾಗೆ ಶಿಫ್ಟ್​. ಸತತ ಎರಡು ತಿಂಗಳು ಮಗನನ್ನು ಬದುಕಿಸಿಕೊಳ್ಳಲು  ಆಕೆ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಆಕೆಯ ಏಕಾಂಗಿ ಹೋರಾಟಕ್ಕೆ ದೇವರ ಮನಸ್ಸೂ ಕರಗಲಿಲ್ಲ. 

Latest Videos

undefined

ಇದು ಶಿವಮೊಗ್ಗದ ಗುರುಪುರ ನಿವಾಸಿ ಪುಷ್ಪಾ ಎಂಬ ಮಹಾತಾಯಿಯ ಹೋರಾಟದ ಕಥೆ. ತನ್ನ 24 ವರ್ಷದ ಕ್ಯಾನ್ಸರ್ ಪೀಡಿತ ಮಗ ನಂದನ್​​ಗಾಗಿ ಆ ತಾಯಿ ಮಾಡಿದ ಹೋರಾಟದ ಕಥೆ ಇದು. 

ವಿಮಾನ ಪತನದಲ್ಲೂ ಬದುಕುಳಿದ ಮಕ್ಕಳು, ಅಮೆಜಾನ್​ ಕಾಡಿನಲ್ಲಿ 17 ದಿನದ ಬಳಿಕ ಪವಾಡ..!

24 ವರ್ಷದ ನಂದನ್​, ಭವಿಷ್ಯದ ಬಗ್ಗೆ ಹತ್ತಾರು ಕನಸುಗಳ ಮೂಟೆ ಹೊತ್ತಿದ್ದ. ಬಡ ಅಪ್ಪ- ಅಮ್ಮನನ್ನು ಸಾಕುವ ಜವಾಬ್ದಾರಿ, ಸಾಧಿಸಬೇಕೆಂಬ ಛಲ, ಗುರಿಯೊಂದಿಗೆ ಕುವೆಂಪು ವಿವಿಯಲ್ಲಿ ಎಂಎಸ್ಸಿ ಮುಗಿಸಿದ್ದವನಿಗೆ ಯಮಸ್ವರೂಪಿಯಂತೆ ಹೆಗಲೇರಿದ್ದು ಲಿವರ್​ ಕ್ಯಾನ್ಸರ್ ಎಂಬ ಮಹಾಮಾರಿ. ಮಗನ ಬಗ್ಗೆ ಹತ್ತಾರು ಕನಸು ಕಟ್ಟಿದ ಅಮ್ಮ (Mother) ಪುಷ್ಪ- ಅಪ್ಪ ರಾಜಶೇಖರಯ್ಯಗೆ ಬರಸಿಡಿಲು. ಜೀವನಕ್ಕಾಗಿ ಕೇಟರಿಂಗ್ ನಡೆಸುತ್ತಿದ್ದ ಪುಪ್ಪಾ, ಸಣ್ಣ ಕೆಲಸದಲ್ಲಿದ್ದ ರಾಜಶೇಖರಯ್ಯಗೆ ಎದೆಯೊಡೆದಿತ್ತು. ಆದರೂ, ಧೃತಿಗೆಡದ ತಾಯಿ ಪುಪ್ಪಾ, ಮಗನ ಚಿಕಿತ್ಸೆಗಾಗಿ ಊರೂರು ಸುತ್ತಿದರು, ಮಣಿಪಾಲ್, ವೆನ್ಲಾಕ್​ ಆಸ್ಪತ್ರೆಗಳ (Hospital) ದಡ ತಟ್ಟಿದ್ದರು. ಎಷ್ಟೇ ಖರ್ಚಾದರೂ ಸರಿ, ಮಗನನ್ನು ಬದುಕಿಸಿ ಎಂದು ವೈದ್ಯರ ಬಳಿ ಪರಿಪರಿ ಬೇಡಿದ್ರು.

ಅಷ್ಟರಲ್ಲಾಗಲೇ ನಂದನ್​​ಗೆ ಕ್ಯಾನ್ಸರ್​ ನಾಲ್ಕನೇ ಹಂತ ತಲುಪಿದ್ರೆ, ಸಾಲ ಬೆಟ್ಟದಷ್ಟಾಗಿತ್ತು. ಮಗನ ಚಿಕಿತ್ಸೆಗೆ (Treatment) ಪರದಾಡುತ್ತಿದ್ದ ತಾಯಿ ಪುಪ್ಪಾ, ಜೀವನಕ್ಕೆ ಆಧಾರವಾಗಿದ್ದ ಕೇಟರಿಂಗ್ ಕೆಲಸವನ್ನೂ ನಿಲ್ಲಿಸಿ, ಮಗನನ್ನು ಕರೆದುಕೊಂಡು ಬೆಂಗಳೂರಿನ ಕಿದ್ವಾಯಿಗೆ ಬಂದರು. ಅಲ್ಲಿಯೂ ಮಗನಿಗೆ ಸರಿಯಾದ ಚಿಕಿತ್ಸೆ ಸಿಗದೇ ಕಂಗಾಲಾದ ಪುಷ್ಪಾ, ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗದಲ್ಲಿ ನಂದನ್​ನನ್ನು ದಾಖಲಿಸಿದ್ರು. ಬರೋಬ್ಬರಿ ಒಂದೂವರೆ ತಿಂಗಳು, ಪುಪ್ಪಾ ವಿಕ್ಟೋರಿಯಾ ಆಸ್ಪತ್ರೆ ಅಂಗಳದಲ್ಲೇ ಕಳೆದುಬಿಟ್ರು. 

ಬಿಸಿಲು, ಮಳೆ, ಗಾಳಿಗೆ ತತ್ತರಿಸಲಿಲ್ಲ, ಊಟ, ನಿದ್ದೆ, ಸ್ನಾನ ಮರೆತು ಮಗನನ್ನು (Son) ಬದುಕಿಸಿಕೊಳ್ಳಲು ಆಕೆಯದ್ದು ಇನ್ನಿಲ್ಲದ ಹೋರಾಟ. ಮಧ್ಯರಾತ್ರಿಗಳಲ್ಲಿ ಅಸ್ವಸ್ಥನಾಗುತ್ತಿದ್ದ ಮಗನ ಚಿಕಿತ್ಸೆಗೆ ಪರಿಚಿತರ ಮನೆ ಕದತಟ್ಟುತ್ತಿದ್ದರು. 

17 ಮಿಸ್ಡ್​​ ಕಾಲ್ ಮಿಸ್ ಮಾಡಿಕೊಂಡ್ಲು ಮಗಳು, ಮತ್ತೆ ಕರೆ ಮಾಡಿದಾಗ ಅಮ್ಮ ಹೆಣವಾಗಿದ್ಲು!

ತಾಯಿಯ ಸ್ಥಿತಿ ಕಂಡು ನಂದನ್​ ಮರುಗುತ್ತಿದ್ದ. ‘ಈ ವಯಸ್ಸಲ್ಲಿ ನಿನ್ನನ್ನು ನಾನು ಸಾಕಬೇಕು, ಆದ್ರೆ, ನೀನೇ ನನ್ನನ್ನು ಸಾಕುವಂತಾಯ್ತು’ ಎಂದು ತಾಯಿ ಮಡಿಲಲ್ಲಿ ನಂದನ್ ಕಣ್ಣೀರಾಗುತ್ತಿದ್ದ. ಮಗನ ಸ್ಥಿತಿಗೆ ಮಮ್ಮಲ ಮರುಗುತ್ತಿದ್ದ ತಾಯಿ ಪುಷ್ಪಾ ಕಣ್ಣೀರು ತಡೆದುಕೊಂಡು, ಮಗನಿಗೆ ಬದುಕೇ ಬದುಕುವೆ ಎಂಬ ಕನಸು ತುಂಬುತ್ತಿದ್ದಳು. 

ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿದ ಕರುಳ ಕುಡಿ, ತನ್ನ ಕಣ್ಣೆದುರೇ ಸಾವಿನ ಬಾಗಿಲಲ್ಲಿ ನಿಂತಿರುವುದನ್ನು ನೋಡಿ ಆ ಹೆತ್ತತಾಯಿ ಅದೆಷ್ಟು ಸಂಕಟ ಅಷ್ಟಿತೋ? ನೋವು ನುಂಗುತ್ತಲೇ, ಮಗ ಬದುಕಿಯಾನು ಎಂಬ ಆಶಾವಾದ, ನಂಬಿಕೆಯಿಂದಲೇ ಪ್ರತಿದಿನ ನಂದನ್​ನನ್ನು ಆರೈಕೆ ಮಾಡಿದ್ದರು ಪುಷ್ಪಾ. ಆದರೆ, ಮಹಾಮಾರಿ ಕ್ಯಾನ್ಸರ್ ನಾಲ್ಕನೇ ಹಂತ ತಲುಪಿತ್ತು. ವೈದ್ಯರೂ ಕೈಚೆಲ್ಲಿದ್ದರು. ಇದ್ದಷ್ಟು ದಿನ ಮನೆಯಲ್ಲೇ ಇರಲಿ ಎಂದು ಡಿಸ್ಚಾರ್ಜ್ ಮಾಡಿಬಿಟ್ಟರು. ನಂದನ್​ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಪುಷ್ಪಾ ಖುಷಿಯಾಗಿದ್ದರು. ಆಕೆಯ ಸಂತೋಷ ಕಂಡು ದೇವರೂ ಕರುಬಿದನೇನೋ, ಅಜ್ಜ- ಅಜ್ಜಿ ಜತೆ ರಾತ್ರಿ ಹೋಳಿಗೆ ಊಟ ಮಾಡಿ ಮಲಗಿದ್ದ ನಂದನ್​ ಗೆ  ಬೆಳಗಿನ ಜಾವ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರೂ, ಬಾಗಿಲಲ್ಲೇ ನಂದನ್​ ಉಸಿರು ಚೆಲ್ಲಿದ್ದ. ಮಗ ಹೆಚ್ಚು ದಿನ ಬದುಕಲಾರ ಎಂಬ ಸತ್ಯ ಗೊತ್ತಿದ್ದರೂ, ಇನ್ನಷ್ಟು ದಿನ ಮಗ ಉಳಿದಾನೆಂಬ ನಂಬಿಕೆಯನ್ನು ಯಮರಾಯ ಹುಸಿ ಮಾಡಿದ್ದ. ಮಗನನ್ನು ಉಳಿಸಿಕೊಳ್ಳಲು ಯಮನಿಗೂ ಸಡ್ಡು ಹೊಡೆದು ನಿಂತಿದ್ದ ಪುಷ್ಪಾ, ಕುಸಿದು ಹೋಗಿದ್ದರು. 

ಹೆತ್ತ ಮಗ, ದಿನ ದಿನವೂ ಸಾವಿಗೆ ಹತ್ತಿರವಾಗುತ್ತಿರುವುದನ್ನು ನೋಡಿಕೊಂಡು ಬದುಕುವುದಿದೆಯಲ್ಲಾ, ಅದು ಹೆತ್ತವರಿಗೆ ಶಾಪವಲ್ಲದೇ ಬೇರೇನೊ ? ಎದೆ ಎತ್ತರ ಬೆಳೆದ ಮಗ, ನರಳಿ, ನರಳಿ ಜೀವ ಬಿಡುವುದನ್ನು ನೋಡುವುದು ಹೆತ್ತವರ ಪಾಲಿಗೆ ಅತಿದೊಡ್ಡ ಶಿಕ್ಷೆ. ದೇವರೇ, ಇಂಥ ಶಿಕ್ಷೆ ಇನ್ಯಾವ ತಂದೆ-ತಾಯಿಗೂ ಬಾರದಿರಲಿ. ನಂದನ್​​ಗೆ ಸದ್ಗತಿ ಸಿಗಲಿ.

ಬೆಳೆದ ಮಗನನ್ನು ಕಳೆದುಕೊಂಡು ಕಣ್ಣೀರು ಸುರಿಸುತ್ತಿರೋ ಪುಷ್ಪಾಗೆ ನಿಮ್ಮದೊಂದು ಸಾಂತ್ವನ ಸಿಕ್ಕರೆ ಆ ತಾಯಿಗೆಷ್ಟೋ ನೆಮ್ಮದಿ
ಪುಪ್ಪಾ- 8722924516/ 9743129959

click me!