ಅಮ್ಮ, ನೀನೇ ಅರ್ಥ ಮಾಡಿಕೊಳ್ಳದಿದ್ರೆ ಮತ್ಯಾರು ಮಾಡ್ಕೋತಾರೆ?

By Web Desk  |  First Published Nov 9, 2019, 3:39 PM IST

ಹುಟ್ಟಿದ ಮಗುವಿಗೆ ಏನೂ ಅರ್ಥವಾಗುವುದಿಲ್ಲವೆಂದುಕೊಂಡು ಅದನ್ನು ಕಡೆಗಣಿಸಿದರೆ ಅದರಿಂದ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ, ನೆನಪಿನ ಶಕ್ತಿ ಕುಂದುತ್ತದೆ ಜೊತೆಗೆ ಮಗು ಭಯದಲ್ಲಿ ಬೆಳೆಯುತ್ತದೆ. 


ಮಕ್ಕಳಿಗೆ ಅಪ್ಪ ಅಮ್ಮನೇ ಜಗತ್ತು. ಅದರಲ್ಲೂ ಪಿಳಿಪಿಳಿ ಕಣ್ಣು ಬಿಡುವ, ಜಗತ್ತು ಏನೆಂದೇ ಗೊತ್ತಿರದ ಪುಟ್ಟ ಮಗುವಿಗೆ ಅಮ್ಮನೇ ಜಗತ್ತಿಗೆ ಕಿಟಕಿ. ಅವಳ ಲಾಲನೆಪಾಲನೆಯಲ್ಲಿ ಮಗು ಸಂತೋಷವಾಗಿ ಬೆಳೆಯಬೇಕು. ಅಲ್ಲಿಂದಲೇ ಮಗುವಿನ ಸಂತೋಷಕ್ಕೆ ಭದ್ರ ಬುನಾದಿ ಹಾಕಬೇಕು. ಆದರೆ, ತಾಯಿಯೇ ಪದೇ ಪದೆ ಮಗುವಿಗೆ ಬೈಯ್ಯತೊಡಗಿದರೆ, ಮಗುವನ್ನು ನೆಗ್ಲೆಕ್ಟ್ ಮಾಡಿದರೆ, ಅದಕ್ಕೆ ಹೇಗಿದ್ದರೂ ಅರ್ಥವಾಗುವುದಿಲ್ಲ ಎಂದು ಬೇಕೆಂದಂತೆ ನಡೆದುಕೊಂಡರೆ, ಮಗುವಿಂದ ತನ್ನ ಸ್ವಾತಂತ್ರ್ಯಹರಣವಾಗುತ್ತಿದೆ ಎಂದು ಭಾವಿಸಿ ಅದಕ್ಕೆ ಬೈಯುವುದು, ಹಾಲು ಕೊಡದಿರುವುದು, ಎತ್ತಿಕೊಳ್ಳದೇ ಸತಾಯಿಸುವುದು ಮುಂತಾದ್ದನ್ನು ಮಾಡಿದರೆ ಅದು ಮಗುವಿನ ಮೆದುಳಿನ ಮೇಲೆ ಮುಂದೆಂದೂ ಸರಿಪಡಿಸಲಾಗದಷ್ಟು ಹಾನಿ ಮಾಡುತ್ತದೆ. 
ನಾವು ಆಗಾಗ ಇಂಥ ತಾಯಂದಿರ ಬಗ್ಗೆ ಓದಿರುತ್ತೇವೆ. ಕೇಳಿರುತ್ತೇವೆ.

Tap to resize

Latest Videos

ಬಾಣಂತಿ ಸನ್ನಿಯಿಂದ ಆಕೆ ಹೀಗೆಲ್ಲ ಮಾಡಿದಳೆಂದು ತೀರ್ಪು ನೀಡಿರುತ್ತೇವೆ. ಈಗಂತೂ ಎಲ್ಲೆಡೆ ಮೊಬೈಲ್ ಕ್ಯಾಮೆರಾ ಹಾಗೂ ಸಿಸಿಟಿವಿ ಇರುವುದರಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆಸುವ ಪೋಷಕರ ವಿಡಿಯೋಗಳು ಕೂಡಾ ಕಂಡು ಮನಸ್ಸು ವಿಲವಿಲ ಒದ್ದಾಡುತ್ತದೆ. 

ಇಂಥ ಪೋಷಕರ ನಿಂದನೆಯಿಂದ ಮಗುವಿನ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅಧ್ಯಯನವೊಂದು ಬೆಳಕು ಚೆಲ್ಲಿದೆ. 

ಅಧ್ಯಯನ

ನವಜಾತ ಇಲಿಮರಿಗಳನ್ನು ತಾಯಿಯು ವಾರದ ಕಾಲ ಕೆಟ್ಟದಾಗಿ ನಡೆಸಿಕೊಂಡ ಬಳಿಕ ಆ ಮರಿಗಳ ಸಾಮಾಜಿಕ ವರ್ತನೆ ಹಾಗೂ ಮೆದುಳಿನ ಮೇಲೆ ಏನೆಲ್ಲ ಪರಿಣಾಮ ಬೀರಿತು ಎಂಬುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಅಧ್ಯಯನವು ಮನುಷ್ಯರಲ್ಲಿ ಕೂಡಾ ಪೋಷಕರ ನಿರ್ಲಕ್ಷ್ಯದಿಂದ ಮಗು ಎದುರಿಸುವ ಮಾನಸಿಕ ಆಘಾತದ ಕುರಿತು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ. 

ಪಿಎನ್ಎಎಸ್ ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ನಿಂದಿಸುವ ಪೋಷಕರಿದ್ದರೆ ಅದರಿಂದ ಮಗುವಿನಲ್ಲಿ ಒತ್ತಡವಷ್ಟೇ ಅಲ್ಲದೆ, ವರ್ತನಾ ಸಮಸ್ಯೆಗಳು ಕೂಡಾ ಕಾಣಿಸಿಕೊಳ್ಳಬಹುದು ಎಂಬುದನ್ನು ತಿಳಿಸಿದೆ. 

ಹಿಂದಿನ ಅಧ್ಯಯನಗಳು

ಈ ಹಿಂದೆ ಈ ಸಂಬಂಧ ಹಲವಾರು ಅಧ್ಯಯನಗಳು ನಡೆದಿದ್ದು, ಇಲಿಗಳಲ್ಲಿ ತಾಯಿಯ ನಿರ್ಲಕ್ಷ್ಯವು ಮೆದುಳಿನ ಅಮಿಗ್ಡಾಲಾ ಹಾಗೂ ಹಿಪ್ಪೋಕ್ಯಾಂಪಸ್ ಭಾಗಗಳು ಕುಗ್ಗುತ್ತವೆ. ಇವು ಭಯ ಹಾಗೂ ನೆನಪಿಗೆ ಸಂಬಂಧಿಸಿದ ಭಾಗಗಳಾದ್ದರಿಂದ ನೆನಪಿನ ಶಕ್ತಿ ಕುಂದುವ ಜೊತೆಗೆ ಭಯ ಆಘಾತ ನೀಡುತ್ತದೆ ಎಂದು ತಿಳಿದುಬಂದಿತ್ತು. ಈಗಿನ ಅಧ್ಯಯನವು ಈ ಕಾರಣಗಳು ಮರಿಗಳ ವರ್ತನೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿಸುತ್ತದೆ. 

ನ್ಯೂಯಾರ್ಕ್ ಯೂನಿವರ್ಸಿಟಿಯ ಸಂಶೋಧಕರು, ಕೇವಲ ನಿಂದನೆಯಿಂದಾಗುವ ಒತ್ತಡವೇ ಸಾಕು ಮಗುವಿನ ಮೆದುಳಿನ ಹಿಪ್ಪೋಕ್ಯಾಂಪಸ್ ಹಾನಿಯಾಗಲು. ಇನ್ನು ಈ ಒತ್ತಡದೊಂದಿಗೆ ತಾಯಿಯೇ ಮಗುವನ್ನು ಕಡೆಗಣಿಸುತ್ತಿದ್ದರೆ, ಕ್ರೂರವಾಗಿ ವರ್ತಿಸುತ್ತಿದ್ದರೆ ಆಗ ಅಮಿಗ್ಡಾಲಾ ಬೆಳವಣಿಗೆಯೂ ಕುಗ್ಗುತ್ತದೆ ಎಂದು ತಿಳಿಸಿದ್ದಾರೆ. 

ನವಜಾತ ಇಲಿಮರಿಗಳನ್ನು ತಾಯಿಯು ವಾರದ ಕಾಲ ಕೆಟ್ಟದಾಗಿ ನಡೆಸಿಕೊಂಡ ಬಳಿಕ ಆ ಮರಿಗಳ ಸಾಮಾಜಿಕ ವರ್ತನೆಯನ್ನು ವಿಷ್ಲೇಶಣೆಗೆ ಹಚ್ಚಿದ ವಿಜ್ಞಾನಿಗಳು, ಇದನ್ನು ಮೂರು ಇತರೆ ಗುಂಪುಗಳ ಇಲಿಮರಿಗಳೊಂದಿಗೆ ಹೋಲಿಸಿ ನೋಡಿದ್ದಾರೆ. ಅದರಲ್ಲಿ ಒಂದು ಗುಂಪಿನ ಒಳ್ಳೆ ತಾಯಿಯೊಂದಿಗಿರುವ ಇಲಿಮರಿಗಳಿಗೆ ಒತ್ತಡ ಹೆಚ್ಚಿಸುವ ಇಂಜೆಕ್ಷನ್ ನೀಡಿದ್ದರೆ, ಇನ್ನೊಂದು ಗುಂಪಿನಲ್ಲಿ ಅನಸ್ತೇಶಿಯಾ ನೀಡಿ ಯಾವುದೇ ತಾಯಿಯ ವರ್ತನೆಯನ್ನು ತೋರಿಸದ ಮತ್ತೊಂದು ಇಲಿಯೊಂದಿಗೆ ಮರಿಗಳನ್ನು ಬಿಡಲಾಗಿತ್ತು. ಇನ್ನೊಂದು ಗುಂಪಿನ ಇಲಿಮರಿಗಳನ್ನು ಸುಮ್ಮನೆ ಅಲುಗದ ವಸ್ತುಗಳೊಂದಿಗೆ ಬಿಡಲಾಗಿತ್ತು. 

ಮೊದಲ ಗುಂಪಿನಲ್ಲಿ ತಾಯಿಯು ಮಕ್ಕಳೊಂದಿಗೆ ರಫ್ ಆಗಿ ವರ್ತಿಸುವಂತೆ ಮಾಡಲು ಅವು ಮರಿಗಳಿಗಾಗಿ ಸಂಗ್ರಹಿಸುವ ಗೂಡಿನ ವಸ್ತುಗಳ್ಯಾವುವೂ ಅವಕ್ಕೆ ಸಿಗದಂತೆ ನೋಡಿಕೊಳ್ಳಲಾಗಿತ್ತು. 
ಅಧ್ಯಯನ ಫಲಿತಾಂಶದಲ್ಲಿ ತಾಯಿಯಿಂದ ದೌರ್ಜನ್ಯಕ್ಕೊಳಗಾದ ಇಲಿಮರಿಗಳು ತಾಯಿಯ ಜೊತೆಗಿರಲು ಹೆದರುತ್ತಿದ್ದವು ಹಾಗೂ ಅನುಮಾನಿಸುತ್ತಿದ್ದವು. ಸ್ಟ್ರೆಸ್ ಹಾರ್ಮೋನ್ ಇಂಜೆಕ್ಟ್ ಮಾಡಿದ ಮರಿಗಳಲ್ಲಿ ಕೂಡಾ ಇದೇ ವರ್ತನೆ ಕಂಡುಬಂತು. 

ತಾಯಿ ಹಾಗೂ ಅತ್ಯಂತ ಹತ್ತಿರದ ಕಾಳಜಿ ತೋರುವವರು ಮಕ್ಕಳ ಮೆದುಳಿನೊಳಗೆ ವಿಶೇಷ ಪ್ರವೇಶಾಧಿಕಾರ ಹೊಂದಿರುತ್ತಾರೆ. ಹಾಗಾಗಿ, ಅವರಿಂದ ದೌರ್ಜನ್ಯ ನಡೆದರೆ ಅದು ಧೀರ್ಘಕಾಲೀನವಾದ ಹಾನಿ ಉಂಟು ಮಾಡುವ ಸಾಧ್ಯತೆಗಳು ಹೆಚ್ಚು ಎಂದು ಸಂಶೋಧಕರು ವರದಿ ನೀಡಿದ್ದಾರೆ. ಆದರೆ, ಇದೇ ತಾಯಿಯು ಬೇಗ ಬದಲಾಯಿಸಿಕೊಂಡರೆ, ಮಗುವಿಗೆ ಉತ್ತಮ ಪ್ರೀತಿ, ಕಾಳಜಿ, ಗಮನ ನೀಡಿದಲ್ಲಿ ಈ ಹಾನಿಯನ್ನು ಸರಿಪಡಿಸಲು ಸಾಧ್ಯವಿದೆ ಎಂದೂ ಅವರು ಹೇಳಿದ್ದಾರೆ. 

ಪ್ರಸವದ ನಂತರ ಶೇಪ್ ಬರಲು ಹೀಗ್ ಮಾಡಿ.... ...

click me!