ಬಾಲ್ಯ ವಿವಾಹ ಆದ್ಮೇಲೆ ಇಷ್ಟೇ ನಮ್ಮ ಜೀವನ ಅಂತ ಬದುಕುವ ಅನೇಕ ಮಹಿಳೆಯರಿದ್ದಾರೆ. ಆದ್ರೆ ಈಕೆ ಎಲ್ಲರಂಥಲ್ಲ. ಓದಿನಲ್ಲಿ ಬುದ್ಧಿವಂತೆಯಾಗಿದ್ದ ಹುಡುಗಿಗೆ ಕುಟುಂಬಸ್ಥರು ಬೆಂಬಲವೂ ಸಿಕ್ಕಿದೆ. ನೂರಾರು ಮಹಿಳೆಯರಿಗೆ ಸ್ಪೂರ್ತಿಯಾಗುವ ಕೆಲಸ ಮಾಡಿದ್ದಾಳೆ.
ಮಹಿಳೆಯರು ಮನಸ್ಸು ಮಾಡಿದ್ರೆ ಏನುಬೇಕಾದ್ರೂ ಸಾಧಿಸಬಹುದು. ಕುಟುಂಬ, ಮಕ್ಕಳ ಆರೈಕೆ ಜೊತೆಗೆ ವೃತ್ತಿಯಲ್ಲಿ ಉನ್ನತ ಮಟ್ಟಕ್ಕೆ ಏರಬಹುದು. ಇದಕ್ಕೆ ರಾಜಸ್ಥಾನದ ಕರಿರಿ ಎಂಬ ಹಳ್ಳಿಯ ರೂಪಾ ಯಾದವ್ ಉದಾಹರಣೆ. ಅವರು ಚಿಕ್ಕ ವಯಸ್ಸಿನಲ್ಲೇ ಗಮನಾರ್ಹ ಸಾಧನೆ ಮಾಡಿದ್ದಾರೆ. ಎಂಬಿಬಿಎಸ್ ಪರೀಕ್ಷೆ ತೇರ್ಗಡೆಯಾದ ರೂಪಾ ಯಾದವ್, ತಮ್ಮ 26 ನೇ ವಯಸ್ಸಿನಲ್ಲಿ ವೈದ್ಯೆಯಾಗಿದ್ದಾರೆ. ಇದ್ರಲ್ಲಿ ವಿಶೇಷ ಏನು ಅಂತ ನೀವು ಕೇಳ್ಬಹುದು. ಆದ್ರೆ ರೂಪಾ ಯಾದವ್ ಪ್ರಯಾಣ ಸುಲಭವಾಗಿರಲಿಲ್ಲ. ರೂಪಾಗೆ ಎಲ್ಲ ಸೌಲಭ್ಯ ಸುಲಭವಾಗಿ ಸಿಕ್ಕಿರಲಿಲ್ಲ ಎಂಬುದು ಎಷ್ಟು ಸತ್ಯವೋ ಅವರು ಬಾಲ್ಯ ವಿವಾಹಿತೆ ಎನ್ನುವುದು ಕೂಡ ಅಷ್ಟೇ ಸತ್ಯ. ಆದ್ರೆ ರೂಪಾ ಕುಟುಂಬಸ್ಥರು ಹಾಗೂ ಅತ್ತೆ – ಮಾವನ ಪ್ರೀತಿ ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಲು ಕಾರಣವಾಗಿದೆ. ರೂಪಾ ಯಾದವ್ ಸಾಧನೆ ಮಾಡಬೇಕೆಂಬ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಲಿದ್ದಾರೆ.
ರೂಪಾ (Rupa) ಅವರಿಗೆ ಕೇವಲ ಎಂಟು ವರ್ಷವಿದ್ದಾಗ ಬಾಲ್ಯ ವಿವಾಹ (Child Marriage) ವಾಯ್ತು. ರೂಪಾ ಮತ್ತು ಅವಳ ಅಕ್ಕ ರುಕ್ಮಾಳನ್ನು ಸೋದರ ಮಾವನ ಮಕ್ಕಳಿಗೆ ಮದುವೆ ಮಾಡೋದಾಗಿ ಅವರ ಚಿಕ್ಕಪ್ಪ ಹೇಳಿದ್ದರು. ಅದರಂತೆ ಮದುವೆ ಮಾಡಿದ್ದರು. ಒಂದು ವಯಸ್ಸಿನ ನಂತ್ರ ರೂಪಾ ಗಂಡನ ಮನೆಗೆ ಹೋಗ್ಬೇಕಿತ್ತು. ಅಲ್ಲಿಯವರೆಗೆ ತವರಿನಲ್ಲೇ ಇದ್ದ ರೂಪಾ, ವಿದ್ಯಾಭ್ಯಾಸ (Education) ಮುಂದುವರೆಸಿದ್ದರು. ರೂಪಾ ತಂದೆ ಮಲಿರಾಮ್ ಯಾದವ್ ಅವರಿಗೆ ಮಗಳಿಗೆ ಉನ್ನತ ಶಿಕ್ಷಣ ನೀಡುವ ಕನಸಿತ್ತು. ರೂಪಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 86ರಷ್ಟು ಅಂಕ ಪಡೆದು ಇಡೀ ಊರಿಗೆ ಹೆಮ್ಮೆ ತಂದಿದ್ದರು. ಆದ್ರೆ ರೂಪಾ ಗಂಡನ ಮನೆಗೆ ಹೋಗುವ ಸಮಯ ಬಂದಿತ್ತು. ಇದು ತಂದೆಗೆ ಮನಸ್ಸಿರಲಿಲ್ಲ. ಈ ಸಮಯದಲ್ಲಿ ಸೋದರ ಮಾವ, ತಂದೆಗೆ ಪ್ರಮಾಣ ಮಾಡಿದ್ದರು. ಮಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವುದಾಗಿ ಭರವಸೆ ನೀಡಿದ್ದರು.
undefined
22 ದಿನಗಳ ಅಂತರದಲ್ಲಿ ಜನಿಸಿದ ಅವಳಿ, ಅಪರೂಪದಲ್ಲಿ ಅಪರೂಪದ ಪ್ರಕರಣವಿದು!
ರೂಪಾ ಪತಿ ಮನೆಗೆ ಹೋದ್ಮೇಲೂ ಓದು ಮುಂದುವರೆಸಿದ್ದರು. ಆರ್ಥಿಕ ಸಂಕಷ್ಟಗಳು (Financial Crisis) ಮತ್ತು ಸಾಮಾಜಿಕ ಅಡೆತಡೆಯ ಮಧ್ಯೆಯೂ ರೂಪಾ ಅಧ್ಯಯನ ಮುಂದುವರೆಸಿದ್ದರು. ಅಂತಿಮವಾಗಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಅವರಿಗೆ ಸೀಟು ಸಿಕ್ಕಿತು. ಬಿಕಾನೇರ್‌ನ ಸರ್ದಾರ್ ಪಟೇಲ್ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದ ರೂಪಾ, ಎಂಬಿಬಿಎಸ್ ಅಂತಿಮ ಪರೀಕ್ಷೆ ಬರೆದು ವೈದ್ಯರಾಗಿದ್ದಾರೆ.
ಎಂಬಿಬಿಎಸ್ ಅಂತಿಮ ಪರೀಕ್ಷೆ ಬರೆಯುವ ಸಮಯದಲ್ಲಿ ರೂಪಾ ಆಗಷ್ಟೆ ತಾಯಿಯಾಗಿದ್ದರು. ಅವರು ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ವೃತ್ತಿ ಮತ್ತು ಕುಟುಂಬ ನಿರ್ವಹಣೆ ಸವಾಲನ್ನು ಸುಲಭವಾಗಿ ನಿರ್ವಹಿಸುವುದನ್ನು ರೂಪಾ ಕಲಿತಿದ್ದಾರೆ. ರೂಪಾಗೆ ಅವರ ಪತಿ ಹಾಗೂ ಸೋದರ ಮಾವ ಹಾಗೂ ಅತ್ತೆಯ ಸಂಪೂರ್ಣ ಬೆಂಬಲ ಸಿಕ್ಕಿದೆ. ಸಾಲ ಮಾಡಿ ಸೊಸೆಗೆ ಶಿಕ್ಷಣ ನೀಡಿದ ಅತ್ತೆ – ಮಾವನಿಗೆ ಋಣಿ ಎನ್ನುತ್ತಾರೆ ರೂಪಾ.
ಇಂಥ ಗಂಡ ಸಿಕ್ಕಿದ್ದು ಏಳೇಳು ಜನ್ಮದ ಪುಣ್ಯ ಎಂದು ಕೊಂಡಳಿಗೆ 3 ವರ್ಷವಾದ್ಮೇಲೆ ಗೊತ್ತಾಯ್ತು ಪತಿಯ ಅಕ್ರಮ ಸಂಬಂಧ
ರೂಪಾ ಕನಸು ಬರೀ ವೈದ್ಯೆ ಆಗುವುದಲ್ಲ. ತನ್ನ ಹಳ್ಳಿಯಲ್ಲಿ ಆಸ್ಪತ್ರೆಯನ್ನು ತೆರೆಯಲು ರೂಪಾ ಬಯಸಿದ್ದಾರೆ. ಜೀವಮಾನದ ಕನಸನ್ನು ನನಸಾಗಿಸಿಕೊಳ್ಳುವತ್ತ ಅವರು ಹೆಜ್ಜೆ ಇಟ್ಟಿದ್ದಾರೆ. ತನ್ನ ಸಮುದಾಯಕ್ಕೆ ಅಗತ್ಯವಾದ ಆರೈಕೆಯನ್ನು ಒದಗಿಸುವುದು ಅವರ ಗುರಿಯಾಗಿದೆ. ರೂಪಾ ಕಥೆಯು ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದೆ. ಸ್ಥಿತಿಸ್ಥಾಪಕತ್ವ, ನಿರ್ಣಯ ಮತ್ತು ಅಚಲವಾದ ನಂಬಿಕೆಯ ಶಕ್ತಿಗೆ ಸಾಕ್ಷಿಯಾಗಿದೆ. ಕನಸು ಕಾಣೋದನ್ನು ಎಂದಿಗೂ ನಿಲ್ಲಿಸಬಾರದು. ಸದಾ ಕನಸು ಕಾಣ್ತಾ, ಅದನ್ನು ಸಾಕಾರಗೊಳಿಸುವತ್ತ ನಮ್ಮ ಚಿತ್ತ ಹರಿಸಬೇಕು ಎನ್ನುತ್ತಾರೆ ರೂಪಾ.