ಮಕ್ಕಳನ್ನು ಹೇಗಾದರೂ ಸಂಭಾಳಿಸಬಹುದು.ಆದರೆ, ಗಂಡನದ್ದೇ ದೊಡ್ಡ ಪ್ರಾಬ್ಲಂ, ಮನೆಯ ಈ ದೊಡ್ಡ ಮಗುವನ್ನು ಸಂಭಾಳಿಸುವುದೇ ಅತ್ಯಂತ ಒತ್ತಡದಾಯಕ ಕೆಲಸ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಉದ್ಯೋಗಸ್ಥೆ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.
ಮನೆ ಹಾಗೂ ಆಫೀಸ್ ಎರಡನ್ನೂ ಸಂಭಾಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಆಧುನಿಕ ಮಹಿಳೆಯದ್ದು. ಈ ಬ್ಯಾಲೆನ್ಸ್ ಸರ್ಕಸ್‍ನಲ್ಲಿ ಆಕೆ ಪ್ರತಿದಿನ ಸಾಕಷ್ಟು ಒತ್ತಡಗಳನ್ನು ಎದುರಿಸಬೇಕಾಗುತ್ತದೆ.ಅದರಲ್ಲೂ ಮಕ್ಕಳಿದ್ದರಂತೂ ಕೇಳೋದೇ ಬೇಡ, ಅವರ ಊಟ, ತಿಂಡಿ, ಸ್ನಾನ, ಸ್ಕೂಲ್, ಹೋಂವರ್ಕ್, ಎಕ್ಸಾಂ....ಹೀಗೆ ಸಾಲು ಸಾಲು ಕೆಲಸಗಳ ಹೊರೆ ಆಕೆಯ ಮೇಲಿರುತ್ತದೆ. ಹೀಗಾಗಿ ಉದ್ಯೋಗಸ್ಥ ಮಹಿಳೆ ಮೇಲೆ ಮಕ್ಕಳ ಒತ್ತಡ ಹೆಚ್ಚಿರುತ್ತದೆ ಎಂಬುದು ಎಲ್ಲರ ಅನಿಸಿಕೆ. ಆದರೆ, ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಬಹುತೇಕ ಉದ್ಯೋಗಸ್ಥ ಮಹಿಳೆಯರು ತಮ್ಮ ದೈನಂದಿನ ಬದುಕಿನಲ್ಲಿ ಒತ್ತಡ ಹೆಚ್ಚಿಸುತ್ತಿರುವುದು ಮಕ್ಕಳಲ್ಲ, ಗಂಡಂದಿರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೈಂಗಿಕ ದೌರ್ಜನ್ಯ ಉನ್ನತ ಹುದ್ದೆಯಲ್ಲಿರುವ ಮಹಿಳೆಯನ್ನೂ ಬಿಟ್ಟಿಲ್ಲ!
undefined
ಗಂಡನ ಕಾಟವೇ ಜಾಸ್ತಿ: ‘ಟುಡೇ’ ನಡೆಸಿದ ಈ ಸಮೀಕ್ಷೆಯಲ್ಲಿ ಏಳು ಸಾವಿರ ಮಹಿಳೆಯರು ಪಾಲ್ಗೊಂಡಿದ್ದು,ತಮ್ಮ ಒತ್ತಡದ ಮಟ್ಟ 8.5ರಿಂದ 10ರಷ್ಟಿದೆ ಎಂದು ರೇಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಇಷ್ಟು ದೊಡ್ಡ ಪ್ರಮಾಣದಲ್ಲಿ ಒತ್ತಡ ಸೃಷ್ಟಿಯಾಗಲು ಮಕ್ಕಳಿಗಿಂತ ಗಂಡಂದಿರ ಕೊಡುಗೆ ಹೆಚ್ಚಿದೆ ಎಂಬುದು ಶೇ.46ರಷ್ಟು ಮಹಿಳೆಯರ ಅಭಿಪ್ರಾಯವಾಗಿದೆ. ಅನೇಕ ಮಹಿಳೆಯರು ಪತಿಯೇ ಮನೆಯಲ್ಲಿ ‘ದೊಡ್ಡ ಮಗು’, ಅವರನ್ನು ಸಂಭಾಳಿಸುವುದೇ ದೊಡ್ಡ ತಲೆನೋವಾಗಿದೆ. ಹೀಗಿರುವಾಗ ಅವರೊಂದಿಗೆ ಕೆಲಸದ ಹೊರೆಯನ್ನು ಹಂಚಿಕೊಳ್ಳುವುದು ಅಸಾಧ್ಯವಾದ ಮಾತು.ಇನ್ನು ಮಕ್ಕಳೊಂದಿಗೆ ಪತಿಯ ಕೆಲಸಗಳ ಮೇಲೂ ಸದಾ ಒಂದು ಕಣ್ಣಿಟ್ಟಿರಬೇಕಾದ ಅಗತ್ಯವಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ ಎಂದು ಅಳಲು ತೊಡಿಕೊಂಡಿರುವುದಾಗಿ ಸಮೀಕ್ಷೆ ತಿಳಿಸಿದೆ.
ಸಹಾಯ ನೀಡಿದರೂ ಕಷ್ಟ: ಈ ಒತ್ತಡವು ‘ಡ್ಯಾಡ್ ಸ್ಟ್ರೆಸ್’ಗಿಂತ ಭಿನ್ನವಾದದ್ದು ಎಂಬುದು ಅನೇಕ ಮಹಿಳೆಯರ ಅಭಿಪ್ರಾಯ.ಮಕ್ಕಳಿಗೆ ಸಂಬಂಧಿಸಿದ ಕೆಲಸಗಳನ್ನು ಗಂಡನ ಜೊತೆ ಸೇರಿ ಮಾಡುವಾಗ ಪ್ರತಿ ವಿಷಯವನ್ನು ಗಮನಿಸಬೇಕಾಗುತ್ತದೆ ಎಂದಿದ್ದಾರೆ.ಎಷ್ಟೋ ಬಾರಿ ಗಂಡಂದಿರು ಹೆಂಡತಿಗೆ ಸಹಾಯ ಮಾಡಲೇನೋ ಬರುತ್ತಾರೆ, ಆದರೆ, ಏನಾದರೊಂದು ಎಡವಟ್ಟು ಮಾಡುತ್ತಾರೆ. ಅದನ್ನು ಸರಿಪಡಿಸಲು ಹೆಂಡತಿಗೆ ಮತ್ತಿಷ್ಟು ಸಮಯ ಬೇಕಾಗುತ್ತದೆ. ಇದೇ ಕಾರಣಕ್ಕೆ ಎಷ್ಟೋ ಮಹಿಳೆಯರು ಗಂಡನ ಬಳಿ ಸಹಾಯ ಕೇಳುವುದು ಬೇಡವೇ ಬೇಡ ಎಂದು ಸುಮ್ಮನಿದ್ದು ಬಿಡುತ್ತಾರೆ.
ಉದ್ಯೋಗಸ್ಥೆ ಅಮ್ಮನಿಗಿಂತ ಮನೇಲಿರೋ ಅಮ್ಮಂಗೆ ಎಷ್ಟು ಕಷ್ಟ ಗೊತ್ತಾ?
ಸಮಯವೇ ಸಾಲುತ್ತಿಲ್ಲ: ಬಹುತೇಕ ಮಹಿಳೆಯರು ಮಕ್ಕಳ ಪಾಲನೆಯ ಹೆಚ್ಚಿನ ಜವಾಬ್ದಾರಿ ತಮ್ಮ ಮೇಲೆ ಬೀಳುತ್ತಿರುವ ಕಾರಣ ಉಳಿದ ಕೆಲಸಗಳನ್ನು ಮಾಡಿ ಮುಗಿಸಲು ಹೆಚ್ಚಿನ ಸಮಯ ಸಿಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ನಾನ, ಊಟ ಸೇರಿದಂತೆ ಪ್ರತಿ ಕೆಲಸಕ್ಕೂ ಮಕ್ಕಳು ಏನಾದರೊಂದು ತಕರಾರು ತೆಗೆಯುತ್ತಿರುತ್ತಾರೆ. ಅವರನ್ನು ಸಮಾಧಾನಪಡಿಸಿ ಆ ಕೆಲಸ ಮಾಡಿ ಮುಗಿಸಲು ಇಷ್ಟೇ ಸಮಯ ಎಂದು ಹೇಳಲು ಬರುವುದಿಲ್ಲ. ಇದರ ಜೊತೆಗೆ ಊಟ, ತಿಂಡಿ ಸೇರಿದಂತೆ ಅಡುಗೆ ತಯಾರಿಯನ್ನೂ ಮಾಡಬೇಕು. ಕ್ಲೀನಿಂಗ್ ಕೆಲಸವಂತೂ ಇದ್ದೇ ಇದೆ. ಹೀಗಾಗಿ ಆಫೀಸ್ ಮುಗಿಸಿ ಮನೆ ಸೇರಿದ ಮಹಿಳೆಗೆ ಹತ್ತು ನಿಮಿಷ ಆರಾಮವಾಗಿ ಕುಳಿತು ಕಾಫಿ ಹೀರುತ್ತ ರೆಸ್ಟ್ ಮಾಡಲು ಕೂಡ ಪುರುಸೊತ್ತು ಇರುವುದಿಲ್ಲ.ಇನ್ನು ರಜಾ ದಿನಗಳಲ್ಲಂತೂ ಮನೆ ಕ್ಲೀನಿಂಗ್, ಬಟ್ಟೆ ವಾಷ್ ಜೊತೆಗೆ ಏನಾದರೂ ಸ್ಪೆಷಲ್ ಡಿಸ್ ಸಿದ್ಧಪಡಿಸಬೇಕಾದ ಅನಿವಾರ್ಯತೆ. ಹೀಗಾಗಿ ವಾರದ ರಜೆಯೂ ಮನೆಗೆಲಸಗಳಲ್ಲೇ ಕಳೆದು ಹೋಗುತ್ತದೆ ಎನ್ನುವುದು ಉದ್ಯೋಗಸ್ಥೆ ಮಹಿಳೆಯರ ದೂರು.
ಕ್ರೆಡಿಟ್ ಸಿಗುತ್ತಿಲ್ಲ ಎಂಬುದು ಪತಿ ದೂರು: ಇತ್ತೀಚಿನ ದಿನಗಳಲ್ಲಿ ಪುರುಷರು ಕೂಡ ಸುಧಾರಿಸಿದ್ದಾರೆ. ಉದ್ಯೋಗಸ್ಥೆ ಪತ್ನಿಗೆ ಮನೆಗೆಲಸಗಳಲ್ಲಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ಬಗ್ಗೆಯೂ ಒಂದು ಸಮೀಕ್ಷೆ ನಡೆದಿದ್ದು, ಅದರಲ್ಲಿ ಪಾಲ್ಗೊಂಡ 1,500 ಪುರುಷರಲ್ಲಿ ಬಹುತೇಕರು ತಾವು ಮಕ್ಕಳ ಪಾಲನೆಯಲ್ಲಿ ಪತ್ನಿಗೆ ನೆರವು ನೀಡುತ್ತಿದ್ದೇವೆ, ಆದರೆ ಈ ಕಾರ್ಯಕ್ಕೆ ನಮಗೆ ಸರಿಯಾದ ಕ್ರೆಡಿಟ್ ಸಿಗುತ್ತಿಲ್ಲವಷ್ಟೆ ಎಂದು ಹೇಳಿಕೊಂಡಿದ್ದಾರೆ.
ಪತ್ನಿಯ ಕಾಳಜಿ ಪತಿ ಜವಾಬ್ದಾರಿ: ಪತ್ನಿಯ ಮೇಲಿನ ಹೊರೆ ತಗ್ಗಿಸಲು ಮಕ್ಕಳ ಪಾಲನೆಯಲ್ಲೂ ಪತಿ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆಯೇನೋ ಹೌದು. ಆದರೆ, ಆ ನೆರವು ಸೀಮಿತವಾಗಿದ್ದು, ಇನ್ನಷ್ಟು ವಿಸ್ತರಿಸುವ ಮೂಲಕ ಮಹಿಳೆ ಮೇಲಿನ ಒತ್ತಡವನ್ನು ತಗ್ಗಿಸಬೇಕಾದ ಅಗತ್ಯವಿದೆ. ಏಕೆಂದರೆ ಮನೆಯವರೆಲ್ಲರ ಕಾಳಜಿ ವಹಿಸುವ ಆಕೆಯ ಮೇಲೆ ಒತ್ತಡ ಹೆಚ್ಚಿ ಅನಾರೋಗ್ಯ ಕಾಡದಂತೆ ಎಚ್ಚರ ವಹಿಸುವುದು ಪತಿಯ ಕರ್ತವ್ಯವೂ ಹೌದು. ಆಕೆಗೂ ಒಂದಿಷ್ಟು ಸಮಯ, ಖಾಸಗಿತನದ ಅಗತ್ಯವಿರುತ್ತದೆ ಅಲ್ಲವೆ? ಸಂಸಾರದ ಬಂಡಿ ಸಾಗಲು ಪತಿಯ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಕೆಲಸವನ್ನು ಆಧುನಿಕ ಪತ್ನಿ ಮಾಡುತ್ತಿದ್ದಾಳೆ. ಹೀಗಿರುವಾಗ ಅವಳ ಮೇಲಿರುವ ಮನೆಗೆಲಸಗಳ ಹೊರೆಯನ್ನು ಸಮಾನವಾಗಿ ಹಂಚಿಕೊಳ್ಳುವ ಕಾರ್ಯವನ್ನು ಪತಿ ಮಾಡಬೇಕಲ್ಲವೆ?