
ಶ್ರೀನಿವಾಸ ಜೋಕಟ್ಟೆ, ಮುಂಬಯಿ
ಕಾಮಾಠೀಪುರಕ್ಕೆ ಗ್ರಾಹಕರು ತಾವೇ ಬಂದು ಹೋಗುತ್ತಾರೆ. ಇದಕ್ಕೆ ಶತಮಾನಗಳ ಇತಿಹಾಸವಿದೆ. ಈ ದಂಧೆಯಲ್ಲಿ ಹಲವು ವರ್ಷಗಳಿಂದ ಇದ್ದವರು ಮಾತ್ರ ರೂಮಿನ ಹೊರಗಡೆ ಕೂರಬಹುದು, ಅಥವಾ ರಸ್ತೆ ಬದಿಯೂ ನಿಲ್ಲುತ್ತಾರೆ. ಆದರೆ ಹೊಸ ಹುಡುಗಿಯರು ಒಳಗೆ ರೂಮಲ್ಲೇ ಇರಬೇಕು. ಅವರು ಹೊರಗಡೆ ನಿಲ್ಲುವಂತಿಲ್ಲ. ಎಲ್ಲಿ ಅವರು ಪಲಾಯನ ಮಾಡುತ್ತಾರೋ ಎಂದು ಘರ್ವಾಲಿ (ಮಮ್ಮಿ) ಮತ್ತು ಕಾವಲುಗಾರ, ದಲ್ಲಾಳಿಗಳು ನಿಗಾ ಇರಿಸುತ್ತಾರೆ.
ಕಳೆದ ದಶಕದಲ್ಲಿ ಹತ್ತು ಸಾವಿರದಷ್ಟುವೇಶ್ಯೆಯರು ಇದ್ದರೆ ಈ ಕೊರೋನಾ ಕಾಲದಲ್ಲಿ ಸುಮಾರು ಮೂರೂವರೆ ಸಾವಿರದಷ್ಟುಸೆಕ್ಸ್ ವರ್ಕರ್‌ಗಳು ಉಳಿದಿದ್ದಾರೆ. ಇವರೆಲ್ಲರನ್ನು ಈಗ ಕೊರೋನಾ ಮಹಾಮಾರಿ ಉಪವಾಸ ಕೂರುವಂತಹ ಸ್ಥಿತಿಗೆ ತಂದಿದ್ದು ರಸ್ತೆಗೆ ನೂಕಿ ಬಿಟ್ಟಿದೆ.
ಕಾಮಾಟಿಪುರದ ವೇಶ್ಯೆಯರು ಈಗೇನು ಮಾಡುತ್ತಿದ್ದಾರೆ!
ಕಾಮಾಠೀಪುರದ ಈ ವೇಶ್ಯೆಯರಲ್ಲಿ ಶೇಕಡಾ ಐದರಷ್ಟುಎಚ್‌ಐವಿ ಪೊಸಿಟಿವ್ ಇದ್ದವರು. ಲಾಕ್‌ಡೌನ್‌ನ ಐದಾರು ತಿಂಗಳು ಇವರಿಗೆ ಯಾವ ಔಷಧಿಯನ್ನೂ ಯಾರು ಕೊಟ್ಟಿಲ್ಲ. ಲಾಕ್‌ಡೌನ್ ಸಮಯ ಸರಕಾರಿ ಆಸ್ಪತ್ರೆಗಳಲ್ಲಿ ಇವರಿಗೆ ಬೇಕಾದ ಔಷಧಿಗಳೂ ಸಿಗಲಿಲ್ಲ. ಸಯನ್ ಆಸ್ಪತ್ರೆಗೆ ಹೋಗಿ ಔಷಧಿ ಪಡೆಯುತ್ತಿದ್ದ ವೇಶ್ಯೆಯರಿಗೆ ಲಾಕ್ಡೌನ್ ಕಾರಣ ಅತ್ತ ಹೋಗಲಾಗಲಿಲ್ಲ. ಈಗಲೂ ಅವರಿಗೆ ಬೇಕಾದ ಔಷಧಿ ಸಿಗುತ್ತಿಲ್ಲ. ಈ ದಿನಗಳಲ್ಲಿ ಕೊರೋನಾ ಕಾರಣ ಒಂದೆಡೆ ಗ್ರಾಹಕರು ಬರುತ್ತಿಲ್ಲವಾದ್ದರಿಂದ ಊಟಕ್ಕೂ ಗತಿಯಿಲ್ಲ, ಘರ್ವಾಲಿಗೆ ಬಾಡಿಗೆ, ಕಮಿಷನ್ ನೀಡಲು ಸಾಧ್ಯವಾಗದೆ ಊರು ಇದ್ದ ಹಲವು ವೇಶ್ಯೆಯರು ಊರಿಗೆ ತೆರಳಿದರೆ, ಊರು ಎಂಬುದೇ ಇಲ್ಲದ ಇನ್ನು ಹಲವು ವೇಶ್ಯೆಯರು ಬಟ್ಟೆ, ತರಕಾರಿ ವ್ಯಾಪಾರ, ಚಹದ ವ್ಯಾಪಾರಕ್ಕೆ ಶಿಫ್ಟ್ ಆಗಿದ್ದಾರೆ. ಇಲ್ಲಿನ ರೂಮನ್ನು ಒಬ್ಬೊಬ್ಬರೇ ತ್ಯಜಿಸಲು ಆರಂಭಿಸಿದ್ದಾರೆ.
ದಿನಕ್ಕೆ ಐನೂರು, ಸಾವಿರ ರೂ. ಸಂಪಾದಿಸುತ್ತಿದ್ದ ವೇಶ್ಯೆಯರಿಗೆ ಕಷ್ಟದಲ್ಲಿ ಈವಾಗ ನೂರಿನ್ನೂರು ರೂಪಾಯಿ ಸಂಪಾದನೆಯಾಗುತ್ತಿದೆಯಂತೆ. ಯಾಕೆಂದರೆ ಇವರ ಹೆಚ್ಚಿನ ಗ್ರಾಹಕರು ವಲಸೆ ಕಾರ್ಮಿಕರು. ಅವರೆಲ್ಲ ಲಾಕ್ಡೌನ್‌ನಲ್ಲಿ ತಮ್ಮ ತಮ್ಮ ಊರಿಗೆ ತೆರಳಿದ್ದಾರೆ. ಒಬ್ಬಳು ವೇಶ್ಯೆ ಹೇಳುತ್ತಾಳೆ- ಲಾಕ್ಡೌನ್ ಸಮಯ ಓದು ಬರಹ ಕಲಿತ ಕೆಲವು ಮನೆಯ ಮಹಿಳೆಯರೂ ದೇಹ ವ್ಯಾಪಾರವನ್ನು ಆಪ್ ಮೂಲಕ ಆರಂಭಿಸಿದ್ದಾರೆ. ಕಡಿಮೆ ಹಣಕ್ಕೆ ಅವರು ಗ್ರಾಹಕರನ್ನು ಕರೆಯುತ್ತಾರೆ. ಇದರಿಂದ ಪರಂಪರಾಗತ ವೇಶ್ಯಾದಂಧೆಗೆ ಹೊಡೆತ ಬಿದ್ದಿದೆ ಎಂದು.
ಒಂದೊಮ್ಮೆ ಬ್ರಿಟಿಷ್ ಕಾಲದಲ್ಲಿ ಕಾಮಾಠೀಪುರ ಏರಿಯಾ ಸಂಗೀತ ತವಾಯಫ್ ಮನರಂಜನೆಗೆ ಪ್ರಸಿದ್ಧಿ ಪಡೆದಿದ್ದರೆ ನಂತರದ ದಿನಗಳಲ್ಲಿ ವೇಶ್ಯಾವಾಟಿಕೆಗೆ ಕುಖ್ಯಾತಿ ಹೊಂದಿದೆ. ಕಾಮಾಠೀಪುರದ ಹಲವಾರು ಗಲ್ಲಿಗಳಲ್ಲಿ ವೇಶ್ಯಾಗೃಹಗಳು ಇವೆ. ರಸ್ತೆಗಳಲ್ಲಿ ಹೋಗುವವರನ್ನು ಕೆಲವು ವೇಶ್ಯೆಯರು ಕಿಟಕಿಗಳಿಂದ ಕರೆದರೆ ಇನ್ನು ಕೆಲವರು ರಸ್ತೆಗಳಲ್ಲಿ ನಿಂತು ಗ್ರಾಹಕರ ನಿರೀಕ್ಷೆಯಲ್ಲಿರುತ್ತಾರೆ. ಮಾಲ್ ಚಾಹಿಯೇ ಎಂದು ಬೆನ್ನುಬೀಳುವ ತಲೆಹಿಡುಕರ ಕಾಟ ಇನ್ನೊಂದೆಡೆ.
ಕೊರೋನಾ ವೈರಸ್ ಹೊಡೆತಕ್ಕೆ ಸೆಕ್ಸ್ ಇಂಡಸ್ಟ್ರಿಯೇ ಮಟಾಷ್!
2003 - 04ರಲ್ಲಿ ಏಡ್ಸ್ ಜನಜಾಗೃತಿ ಅಭಿಯಾನದ ಕಾರಣ ಇಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಾ ಬರತೊಡಗಿತ್ತು. ಆ ದಿನಗಳಲ್ಲಿ ‘ಬಲ್ಬೀರ್ ಪಾಶಾ’ ಎನ್ನುವ ಜಾಹೀ ರಾತು ಬಹಳಷ್ಟುವಿವಾದವನ್ನು ಸೃಷ್ಟಿಸಿತ್ತು. ಸ್ತ್ರೀಯರಿಂದಲೇ ಏಡ್ಸ್ ಬರುತ್ತದೆ ಎನ್ನುವ ಛಾಪು ಬೀರಿದ ಈ ಜಾಹೀರಾತಿನ ನಂತರ ಈ ಕಡೆ ಪುರುಷರು ಬರುವುದು ಕಡಿಮೆ ಯಾಗುತ್ತಾ ಬಂದಿತ್ತು. ಅನಂತರ ಈ ಜಾಹೀರಾತು ವಿರುದ್ಧ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು.
21ನೇ ಶತಮಾನ ಆರಂಭವಾಗುತ್ತಲೇ 2002-03ರಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದ ಕಾಮಾಠೀಪುರದ ಅನೇಕ ಕೊಠಡಿಗಳನ್ನು ನಷ್ಟದ ಕಾರಣ ಮಾರಾಟ ಮಾಡುವ ದೃಶ್ಯ ಆರಂಭವಾಯಿತು. ಆ ದಿನಗಳಲ್ಲಿ ಎಸ್ಟಿಡಿ ಬೂತ್, ರದ್ದಿ ಅಂಗಡಿ, ಚಹದ ಕ್ಯಾಂಟೀನ್, ಗಾರ್ಮೆಂಟ್.... ಹೀಗೆ ಒಂದೊಂದೇ ಅಂಗಡಿಗಳು ಕಂಡು ಬರತೊಡಗಿತು. ಈ ಪ್ರದೇಶ ಕಳಂಕಿತವಾಗಿರುವ ಕಾರಣ ಮರ್ಯಾದಸ್ಥರು ಇಲ್ಲಿನ ಕೊಠಡಿಗಳನ್ನು ಖರೀದಿಸುವುದಿಲ್ಲ. ಆದ್ದರಿಂದ ಬಹಳ ಕಡಿಮೆ ಕ್ರಯಕ್ಕೆ ಈ ಕೊಠಡಿಗಳನ್ನು ಖರೀದಿಸಿರುವುದಾಗಿ ಆ ದಿನಗಳಲ್ಲಿ ಚಹದ ಕ್ಯಾಂಟೀನ್ ಅಂಗಡಿಯವನೊಬ್ಬ ಹೇಳಿದ್ದಿದೆ. ಅನಂತರ ಅನೇಕ ವೇಶ್ಯೆಯರು ಉಪನಗರಗಳಿಗೆ ವಲಸೆ ಹೋದದ್ದಿದೆ. ರೈಲ್ವೆ ಸ್ಟೇಷನ್‌ಗಳ ಅಕ್ಕಪಕ್ಕ ತಿರುಗಾಡುತ್ತಾ ಗ್ರಾಹಕರನ್ನು ನಿರೀಕ್ಷಿಸುತ್ತಿರುವ ವೇಶ್ಯೆಯರ ಸಂಖ್ಯೆ ಹೆಚ್ಚಿತು.
ಕೊರೋನಾ ಕಾಲದ ಆರು ತಿಂಗಳಲ್ಲಿ ಕಾಮಾಠೀಪುರದ ವೇಶ್ಯೆಯರ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಸೆಕ್ಸ್ ವರ್ಕರ್‌ಗಳು ತಮಗೆ ಕೆಲಸವೂ ಇಲ್ಲ, ಸರಕಾರದ ಆರ್ಥಿಕ ಸಹಾಯವೂ ಇಲ್ಲ...ಎಂದು ಗೋಳು ಹೊಯ್ಯುತ್ತಿದ್ದಾರೆ. ಸಂಪಾದನೆಯ ದಿನಗಳಲ್ಲಿ ಇವರಲ್ಲಿ ಹಲವರು ಊರಿಗೂ ಹಣ ಕಳುಹಿಸುತ್ತಿದ್ದ ವೇಶ್ಯೆಯರಿದ್ದರು. ಈಗ ಸಂಬಂಧಿಕರು ಕೂಡಾ ವಿಚಾರಿಸುವುದು ಬಿಟ್ಟಿದ್ದಾರಂತೆ.
ಲಾಕ್ಡೌನ್‌ನಲ್ಲಿ ಕಾಮಾಠೀಪುರದ ಎಲ್ಲಾ ಗಲ್ಲಿಗಳನ್ನು ಸೀಲ್ ಮಾಡಲಾಗಿತ್ತು. ಪೊಲೀಸರು ಹೊರಗೂ ಬಿಡುತ್ತಿರಲಿಲ್ಲ, ಒಳಗೂ ಬಿಡುತ್ತಿರಲಿಲ್ಲ. ಈಗ ಗಲ್ಲಿಗಳ ಸೀಲ್ ಡೌನ್ ತೆಗೆದರೂ ಗ್ರಾಹಕರು ಇತ್ತ ಬರುತ್ತಿಲ್ಲ. ಸಾಯಿ ಸಂಸ್ಥಾನ್, ಪ್ರೇರಣಾ... ಮೊದಲಾದ ಎನ್‌ಜಿಓ ( ಕನ್ನಡಿಗರ ಎನ್‌ಜಿಓ ಕೂಡಾ ಇದೆ.) ಇಲ್ಲಿನ ವೇಶ್ಯೆಯರಿಗೆ ಲಾಕ್ಡೌನ್‌ನಲ್ಲಿ ಹದಿನೈದು ದಿನಗಳಿಗೊಮ್ಮೆ ರೇಷನ್ ನೀಡುತ್ತಿತ್ತು. ಇಲ್ಲಿನ ಕಷ್ಟಅಂದರೆ ಇಲ್ಲಿರುವ ವೇಶ್ಯೆಯರ ಮಕ್ಕಳು.
ಕಾಮಾಠೀಪುರದ ಏರಿಯಾದಲ್ಲಿ ಸೆಕ್ಸ್ ವರ್ಕರ್‌ಗಳ ಸುಮಾರು 500ರಷ್ಟುಮಕ್ಕಳಿದ್ದಾರೆ. ಅವರು ಸಾಯಿಸಂಸ್ಥಾನ ನಡೆಸುವ ಶಾಲೆಯಲ್ಲಿ ಓದುತ್ತಾರೆ. ರಾತ್ರಿಗೆ ಸ್ವಯಂಸೇವಾ ಸಂಸ್ಥೆ ನಡೆಸುವ ನೈಟ್ ಶೆಲ್ಟರ್‌ಗೆ ತೆರಳುತ್ತಾರೆ. ಲಾಕ್ಡೌನ್ ಕಾಲದಲ್ಲಿ ಮಕ್ಕಳ ಬದುಕು ನರಕವಾಗಿತ್ತು. ಓದು ನಿಂತುಹೋಗಿದೆಯಾದರೂ ಈಗ ಮತ್ತೆ ಆನ್ಲೈನ್ ಓದಿನ ಪ್ರಯತ್ನ ಸಾಗಿದೆ. ಸದಾಕಾಲ ಮನೆಯಲ್ಲಿರುವುದರಿಂದ ಸೆಕ್ಸ್ ವರ್ಕರ್‌ಗಳಿಗೆ ತಮ್ಮ ಕೆಲಸವನ್ನೂ ಮಾಡುವಂತಿಲ್ಲ. ಮಕ್ಕಳು ಮನೆಯಲ್ಲಿದ್ದರೆ ಏನು ದಂಧೆ ನಡೆಸುವುದು ಎನ್ನುತ್ತಾಳೆ ಒಬ್ಬಳು ವೇಶ್ಯೆ. (ತೊಂಭತ್ತರ ದಶಕದ ತನಕ ಮನಪಾ ಕನ್ನಡ ಶಾಲೆ ಇತ್ತು. ನಂತರ ಮಕ್ಕಳ ಕೊರತೆಯಲ್ಲಿ ಅದು ಬಾಗಿಲು ಹಾಕಿತು)
ಸಾಯಿಸಂಸ್ಥೆ ನಿರ್ದೇಶಕ ವಿನಯ್ ತಿಳಿಸಿದಂತೆ ಕೊರೊನಾ ಇತರೆಡೆಗಳಿಗೆ ಹೊಡೆತ ನೀಡಿದಂತೆ ವೇಶ್ಯಾದಂಧೆಗೂ ಹೊಡೆತ ನೀಡಿದೆ. ವೇಶ್ಯೆಯರೆಲ್ಲ ರಸ್ತೆಗೆ ಬಂದು ನಿಲ್ಲುವುದರಿಂದ ಸೋಶಿಯಲ್ ಡಿಸ್ಟೆನ್ಸಿಂಗ್ ಎನ್ನುವುದು ಇಲ್ಲಿ ತಮಾಷೆಯ ಮಾತಾಗಿದೆ.
ಒಂದೊಮ್ಮೆ ‘ಅಸಹಾಯ… ತಿರಸ್ಕೃತ ನಾರೀ ಸಂಘ’ ದ ಅಂದಿನ ಅಧ್ಯಕ್ಷೆ ರುಕ್ಮಿಣಿಬಾಯಿ ಬನ್ಸೋಡೆ ಆ ದಿನಗಳಲ್ಲಿ ತನಾಡುತ್ತಾ ವೇಶ್ಯೆಯರ ಸಂಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದಿದ್ದರು.
‘ಭಾರತೀಯ ಪತಿತಾ ಉದ್ಧಾರ್ ಸಭಾ’ದ ಅಧ್ಯಕ್ಷ ರಾದ ಖೈರಾತಿಲಾಲ್ ಭೋಲಾ ತಿಳಿಸಿದಂತೆ ಭಾರತದಲ್ಲಿ ಪ್ರಮುಖ ಸುಮಾರು 1,110 ರಷ್ಟುರೆಡ್ ಲೈಟ್ ಕ್ಷೇತ್ರಗಳಿವೆ. ಇಲ್ಲಿ 28 ಲಕ್ಷಕ್ಕೂ ಹೆಚ್ಚು ಸೆಕ್ಸ್ ವರ್ಕರ್‌ಗಳಿದ್ದಾರೆ ಹಾಗೂ 54 ಲಕ್ಷ ದಷ್ಟುಇವರಿಗೆ ಮಕ್ಕಳಿದ್ದಾರೆ. ಇವರಲ್ಲಿ ಅನೇಕರು ತಮ್ಮ ಮಕ್ಕಳನ್ನು ಬೇರೆಡೆ ಇರಿಸಿದ್ದಾರೆ. ಒಂದೋ ಅವರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಅಥವಾ ಕೆಲಸಕ್ಕೆ ಹೋಗುತ್ತಿದ್ದಾರೆ. ಇವರಿಗೆ ಹಣ ಹೇಗೆ ತಾಯಿ ಕಳುಹಿಸುತ್ತಿದ್ದಾರೆ ಎಂದು ಗೊತ್ತಾಗದಂತೆ ಜಾಗ್ರತೆ ವಹಿಸಲಾಗುತ್ತದೆ. ದೇಶದಲ್ಲಿ ಭಾರತೀಯ ಪತಿತಾ ಉದ್ಧಾರ್ ಸಭಾ ಕೆಲವೆಡೆ ಶಾಲೆಗಳನ್ನು ನಡೆಸುತ್ತದೆ.
ಇತ್ತ ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಜೇಷನ್ ಅನುಸಾರ ದೇಶದಲ್ಲಿ ಸುಮಾರು ಒಂಭತ್ತು ಲಕ್ಷದಷ್ಟುಸೆಕ್ಸ್ ವರ್ಕರ್‌ಗಳು ಇದ್ದಾರೆ ಅನ್ನುತ್ತದೆ. ಆದರೆ ಆಲ್ ಇಂಡಿಯಾ ನೆಟ್ವರ್ಕ್ ಆಫ್ ಸೆಕ್ಸ್ ವರ್ಕರ್ಸ್ (ಎ.ಐ.ಎನ್.ಎಸ್.ಡಬ್ಲ್ಯು) ಅಧ್ಯಕ್ಷರಾದ ಕುಸುಮ್ ಅನುಸಾರ ದೇಶದಲ್ಲಿ ಸುಮಾರು 28 ರಿಂದ 30 ಲಕ್ಷದಷ್ಟುಸೆಕ್ಸ್ ವರ್ಕರ್‌ಗಳು ಇದ್ದಾರೆ. (ಇವರಲ್ಲಿ ಅನೇಕರು ಪ್ರವಾಸಿ ಮಹಿಳೆಯರು, ಕೆಲವು ಹೌಸ್ ವೈಫ್‌ಗಳು, ದಿನಗೂಲಿ ಮಹಿಳೆಯರು.... ಇಂಥವರೆಲ್ಲ ಸೇರಿದ್ದಾರಂತೆ.) ಅನೇಕರು ತಾವು ವೇಶ್ಯಾ ದಂಧೆ ಮಾಡುತ್ತಿರುವುದನ್ನು ಮನೆಯಲ್ಲೂ ಹೇಳುವುದಿಲ್ಲ. ಹೀಗಾಗಿ ಲಾಕ್‌ಡೌನ್ ಸಮಯ ತಾವು ಸಂಕಷ್ಟದಲ್ಲಿದ್ದೇವೆ ಎಂದೂ ಹೇಳದಂತಹ ಸ್ಥಿತಿಯಲ್ಲಿ ಕೆಲವು ವೇಶ್ಯೆಯರಿದ್ದಾರೆ.
ಕಾಮಾಠೀಪುರದಲ್ಲಿ ಆಂಧ್ರ, ಕರ್ನಾಟಕ, ಪಶ್ಚಿಮ ಬಂಗಾಳ, ನೇಪಾಳ, ಬಾಂಗ್ಲಾದೇಶ ವೇಶ್ಯೆಯರ ಸಂಖ್ಯೆ ಹೆಚ್ಚು.
ಓರ್ವ ಸೆಕ್ಸ್ ವರ್ಕರ್‌ಳ ಸಂಪಾದನೆಯಲ್ಲಿ ಐದಾರು ಜನರ ಪಾಲು ಇರುತ್ತದೆ. ಓರ್ವ ವೇಶ್ಯೆಗೆ 500 ರೂಪಾಯಿ ಸಿಕ್ಕಿತು ಅಂದರೆ ಅದರಲ್ಲಿ ಘರ್‌ವಾಲಿ (ಮಮ್ಮಿ) ಕಮಿಷನ್, ದಲ್ಲಾಳಿ, ಮ್ಯಾನೇಜರ್, ಪೊಲೀಸ್, ಮೆಡಿಕಲ್.. ಮುಂತಾದ ಜನರು ಪಾಲು ಪಡೆಯುತ್ತಾರೆ. ಅಂದರೆ ಒಬ್ಬಳು ವೇಶ್ಯೆಗೆ ಸಿಗುವ ಹಣ ಅದರಲ್ಲಿ 100 ಅಥವಾ 125 ರೂಪಾಯಿ ಮಾತ್ರ.
ನಾಲ್ಕೈದು ತಿಂಗಳು ಎನ್‌ಜಿಓ ವನ್ನು ಅವಲಂಭಿಸಿದ ಅನೇಕ ವೇಶ್ಯೆಯರು ಈ ದಿನಗಳಲ್ಲಿ ದೇಹ ವ್ಯಾಪಾರ ತ್ಯಜಿಸಿ ತಮ್ಮ ದೇ ಆದ ಸ್ವಂತ ವ್ಯಾಪಾರಕ್ಕೆ ಇಳಿಯುತ್ತಿದ್ದಾರೆ. ಕೆಲವರು ಮಕ್ಕಳ ಉಡುಪನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ. ಕೆಲವರು ತರಕಾರಿ ವ್ಯಾಪಾರ ಆರಂಭಿಸಿದ್ದಾರೆ. ಕೆಲವರು ಚಹ ಮಾರಾಟಕ್ಕೆ ತೊಡಗಿದ್ದಾರೆ. ಇನ್ನು ಕೆಲವರು ಮೀನು ಮಾರುವುದಕ್ಕೆ ಇಳಿದಿದ್ದಾರೆ. ಹೊಸ ವ್ಯಾಪಾರ ತಮಗೆ ಗೌರವ ತಂದಿದೆ ಎನ್ನುತ್ತಾರೆ ಈ ಮಹಿಳೆಯರು. ಎನ್‌ಜಿಓ ಪ್ರೇರಣಾ ಕೆಲವರಿಗೆ ಆರ್ಥಿಕ ಸಹಾಯವನ್ನೂ ಮಾಡಿದೆ. ಹಣ ಕಡಿಮೆ ಸಿಕ್ಕರೂ ಯಾರ ಬೈಗಳನ್ನು ಕೇಳ ಬೇಕಿಲ್ಲ ಎನ್ನುವ ಸಂತೋಷ ಇವರಿಗಿದೆ.
ಕಾಮಾಠೀಪುರದ ವೇಶ್ಯೆಯರಿಗೆ 1928ರಲ್ಲಿ ಒಮ್ಮೆ ಲೈಸೆನ್ಸ್ ನೀಡಲಾಗಿತ್ತು .ಆದರೆ 1950ರಲ್ಲಿ ಲೈಸನ್ಸ್ ರದ್ದು ಮಾಡಲಾಯಿತು. ಆ ದಿನಗಳಲ್ಲಿ ಮುಂಬೈಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವೇಶ್ಯೆಯರಿದ್ದರು. 18-19ನೇ ಶತಮಾನದಲ್ಲಿ ಯುರೋಪ್, ಜಪಾನ್‌ನ ವೇಶ್ಯೆಯರೂ ಮುಂಬೈಯ ಕಾಮಾಠೀಪುರ, ಶುಕ್ಲಾಜೀ ಸ್ಟ್ರೀಟ್, ಫಾಕ್ಲಂಡ್ ರೋ ಡ್, ಹಾಗೂ ಪೀಲಾ ಹೌಸ್‌ಗೆ ಬರುತ್ತಿದ್ದರು ಎನ್ನುವ ಮಾತೂ ಇಲ್ಲಿನ ಪ್ರಸಿದ್ಧಿಗೆ ಸಾಕ್ಷಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.