ಮಹಿಳಾ ದಿನಾಚರಣೆ: ಭಾರತದ 10 ಹೆಮ್ಮೆಯ ನಾರಿಯರು

By Kannadaprabha News  |  First Published Mar 8, 2021, 9:46 AM IST

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಎಲ್ಲಾ ರಂಗಗಳಲ್ಲಿ ಹೆಣ್ಣು ಮಕ್ಕಳು ಛಾಪು ಮೂಡಿಸಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. 


ಎಲ್ಲ ಅಡೆತಡೆಗಳನ್ನೂ ಮೀರಿ ಕಲೆ-ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ನೃತ್ಯ, ರಾಜಕೀಯ, ಆರ್ಥಿಕ, ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಒಂದಿಷ್ಟುಮಹಿಳೆಯರು ಛಾಪು ಮೂಡಿಸಿ,ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ, ಗೌರವವನ್ನು ಮಗಿಲೆತ್ತರಕ್ಕೆ ಕೊಂಡೊಯ್ದ ನಮ್ಮ ಹೆಮ್ಮೆಯ ಸಾಧಕಿಯರ ಕಿರು ಪರಿಚಯ ಇಲ್ಲಿದೆ.

ಕಮಲಾ ಹ್ಯಾರೀಸ್‌

Tap to resize

Latest Videos

ಭಾರತದ ಚೆನ್ನೈ ಮೂಲದ ಕಮಲಾ ಹ್ಯಾರಿಸ್‌ ಅವರು ವಿಶ್ವದ ದೊಡ್ಡಣ್ಣ ಎಂದೇ ಕರೆಯುವ ಅಮೆರಿಕದ 49ನೇ ಉಪಾಧ್ಯಕ್ಷೆ ಹುದ್ದೆಗೇರುವ ಮೂಲಕ ಭಾರತದ ಘನತೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದ್ದಾರೆ. ಅಷ್ಟೇ ಅಲ್ಲದೆ ಅಮೆರಿಕ ಉಪಾಧ್ಯಕ್ಷರಾದ ಮೂಲಕ ಮೊದಲ ಕಪ್ಪು ವರ್ಣೀಯ ಹಾಗೂ ಮೊದಲ ಆಫ್ರಿಕನ್‌-ಅಮೆರಿಕನ್‌ ಎಂಬ ದಾಖಲೆಯನ್ನೂ ಬರೆದಿದ್ದಾರೆ.

ಕಮಲಾ ಹಾರಿಸ್‌ ಅವರ ತಾಯಿ ಶ್ಯಾಮಲಾ ಗೋಪಾಲ ಹ್ಯಾರಿಸ್‌ ಚೆನ್ನೈ ಮೂಲದವರು. ತಂದೆ ಜಮೈಕಾ ಮೂಲದವರು. ಅಮೆರಿಕದಲ್ಲೇ ಹುಟ್ಟಿಬೆಳೆದ ಕಮಲಾ ವಕೀಲೆಯಾಗಿ ಪ್ರಸಿದ್ಧಿ ಪಡೆದಿದ್ದರು. ಬಳಿಕ ರಾಜಕೀಯ ಪ್ರವೇಶಿಸಿ 2020ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್‌ ನೇತೃತ್ವದ ಸರ್ಕಾರದಲ್ಲಿ ಉಪಾಧ್ಯಕ್ಷೆಯಂತ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.

ಗೀತಾ ಗೋಪಿನಾಥ್‌

ಗೀತಾ ಗೋಪಿನಾಥ್‌ ಭಾರತೀಯ-ಅಮೆರಿಕನ್‌ ಅರ್ಥಶಾಸ್ತ್ರಜ್ಞೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 1 ಅಕ್ಟೋಬರ್‌ 2018ರಲ್ಲಿ ಡಾ.ಗೀತಾ ಅವರನ್ನು ತನ್ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞೆಯಾಗಿ ನೇಮಿಸಿತು. ಗೀತಾ ಡಿಸೆಂಬರ್‌ 8, 1971ರಲ್ಲಿ ಟಿ.ವಿ.ಗೋಪಿನಾಥ್‌ ಮತ್ತು ವಿ.ಸಿ.ವಿಜಯಲಕ್ಷ್ಮಿ ದಂಪತಿಗಳ ಕಿರಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿ, ಇಲ್ಲಿಯೇ ಪಿಯುಸಿ ವರೆಗಿನ ಶಿಕ್ಷಣ ಪೂರೈಸಿದರು. ನಂತರ ದಿಲ್ಲಿಯ ದೆಹಲಿ ಸ್ಕೂಲ್  ಆಫ್‌ ಎಕನಾಮಿಕ್ಸ್‌ನಲ್ಲಿ ಮಾಸ್ಟರ್‌ ಪದವಿ ಮತ್ತು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ ಪಡೆದರು.

ಐಎಂಎಫ್‌ನಲ್ಲಿ ಆರ್ಥಿಕ ತಜ್ಞೆಯಾಗಿ ನೇಮಕಕ್ಕೂ ಮುನ್ನ ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಮತ್ತು ಇಂಟರ್‌ನ್ಯಾಷನಲ್‌ ಸ್ಟಡೀಸ್‌ ಮತ್ತು ಎಕನಾಮಿಕ್ಸ್‌ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಡಾ.ಗೀತಾ, ಕೇರಳ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಪೈಲಟ್‌ ಭಾವನಾ ಕಾಂತ್‌

ಭಾವನಾ ಕಾಂತ್‌ ಭಾರತದಲ್ಲಿ ಫೈಟರ್‌ ಜೆಟ್‌ ವಿಮಾನ ಹಾರಿಸಲು ಅರ್ಹತೆ ಪಡೆದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾವನಾ 2017ರಲ್ಲಿ ವಾಯುಪಡೆಯ ಯುದ್ಧವಿಮಾನ ಸ್ಕಾ$್ವಡ್ರನ್‌ ವಿಭಾಗಕ್ಕೆ ಸೇರಿಕೊಂಡಿದ್ದರು. 2018ರಲ್ಲಿ ಮಿಗ್‌-21 ಬಿಸನ್‌ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಮೊದಲ ಪೈಲಟ್‌ ಎನಿಸಿಕೊಂಡರು. ಅದಕ್ಕೂ ಮೊದಲು 2016ರಲ್ಲಿ ಭಾರತೀಯ ವಾಯುಸೇನೆಯ ವೈಮಾನಿಕ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಭಾವನಾ ಡಿಸೆಂಬರ್‌ 1, 1992ರಲ್ಲಿ ಬಿಹಾರದ ದರ್ಭಂಗಾದಲ್ಲಿ ಜನಿಸಿದರು.

ಸ್ವಾತಿ ಮೋಹನ್‌

ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವೇ ಎಂಬುದನ್ನು ಪತ್ತೆಹಚ್ಚಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳುಹಿಸಿದ್ದ ‘ಪರ್ಸೀವರೆನ್ಸ್‌’ ರೋವರ್‌ ಅನ್ನು ಮಂಗಳನ ಮೇಲೆ ಯಶಸ್ವಿಯಾಗಿ ಇಳಿಸಿದ್ದು ಕನ್ನಡತಿ ಡಾ. ಸ್ವಾತಿ ಮೋಹನ್‌. ಅಮೆರಿಕದಲ್ಲಿ ನೆಲೆಸಿರುವ ಬೆಂಗಳೂರು ಮೂಲದ ದಂಪತಿ ಮೋಹನ್‌ ಹಾಗೂ ಜ್ಯೋತಿ ಪುತ್ರಿಯಾಗಿರುವ ಸ್ವಾತಿ ನಾಸಾದಲ್ಲಿ ‘ಜೆಎನ್‌ ಅಂಡ್‌ ಸಿ’ ಎಂಬ ವೈಜ್ಞಾನಿಕ ತಂಡದ ಮುಖ್ಯಸ್ಥೆಯಾಗಿದ್ದಾರೆ. ಚಂದ್ರದಲ್ಲಿ ನಾಸಾ ಗ್ರೇಲ್‌ ನೌಕೆಯನ್ನು ಕಳುಹಿಸಿದ ಯೋಜನೆಯಲ್ಲೂ ಸ್ವಾತಿ ಕೆಲಸ ಮಾಡಿದ್ದಾರೆ.

ಹಿಮಾದಾಸ್‌

ಹಿಮದಾಸ್‌ 2018ರಲ್ಲಿ ನಡೆದ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು. ಫಿನ್‌ಲ್ಯಾಂಡ್‌ನಲ್ಲಿ ನಡೆದ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ 20 ವರ್ಷದೊಳಗಿನ ಮಹಿಳೆಯರ 400 ಮೀಟರ್‌ ಓಟದ ಸ್ಪರ್ಧೆಯಲ್ಲಿ ಹಿಮಾದಾಸ್‌ ಚಿನ್ನದ ಪದಕ ಗೆದ್ದಿದ್ದರು. 18 ವರ್ಷದ ಹಿಮದಾಸ್‌ 400 ಮೀಟರ್‌ ಓಟವನ್ನು ಕೇವಲ 51.46 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ್ದರು.

ನಂತರ ಏಷ್ಯನ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಇವರ ಕ್ರೀಡಾ ಸಾಧನೆ ಗುರುತಿಸಿ ಇತ್ತೀಚೆಗೆ ಹಿಮಾದಾಸ್‌ ಅವರನ್ನು ಅಸ್ಸಾಂ ಪೊಲೀಸ್‌ ಇಲಾಖೆಯ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಿಸಲಾಗಿದೆ. ಹಿಮಾದಾಸ್‌ ಮೂಲತಃ ಅಸ್ಸಾಂನ ನಾಗೋನ್‌ ಜಿಲ್ಲೆಯವರಾಗಿದ್ದು, ಕೃಷಿ ಹಿನ್ನೆಲೆ ಹೊಂದಿರುವ ಬಡ ಕುಟುಂಬದಲ್ಲಿ ಜನಿಸಿದ್ದಾರೆ.

ಕಿರಣ್‌ ಮುಜುಂದಾರ್‌ ಶಾ

ಕಿರಣ್‌ ಮಜುಂದಾರ್‌ ಶಾ ಬೆಂಗಳೂರಿನ ಬಯೋಕಾನ್‌ ಸಂಸ್ಥೆಯ ಮುಖ್ಯಸ್ಥೆ. ಕಿರಣ್‌ ಮುಜುಂದಾರ್‌ ಅವರ ‘ಬಯೋಕಾನ್‌’ ಸಂಸ್ಥೆ ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಬಯೋಕಾನ್‌ ಸಂಸ್ಥೆಯನ್ನು ಕಿರಣ್‌ ಮಜುಂದಾರ್‌ ಅವರು ಪ್ರಾರಂಭಿಸಿದ್ದು ಕೇವಲ 10000 ರುಪಾಯಿ ಬಂಡವಾಳದ ಮೂಲಕ, ತಮ್ಮ ಮನೆಯ ಶೆಡ್‌ ಒಂದರಲ್ಲಿ ಎಂಬುದು ಗಮನಾರ್ಹ.

ಮಜುಂದಾರ್‌ ಅವರ ಸಾಧನೆಗಾಗಿ ಭಾರತ ಸರ್ಕಾರದ ಅವರಿಗೆ ಪದ್ಮಶ್ರೀ, ಪದ್ಮಭೂಷಣ ನೀಡಿ ಗೌರವಿಸಿದೆ. ಪ್ರತಿಷ್ಠಿತ ಟೈಮ್ಸ್‌ ಪತ್ರಿಕೆ ಹೆಸರಿಸಿರುವ ನೂರು ಜನ ವಿಶ್ವದ ಪ್ರಮುಖರಲ್ಲಿ ಮತ್ತು ಫೋಬ್ಸ್‌ರ್‍ ಹೆಸರಿಸಿರುವ ನೂರು ಪ್ರಮುಖರ ಪಟ್ಟಿಯಲ್ಲಿ ಮತ್ತು ಫೈನಾನ್ಸಿಯಲ್ ಟೈಮ್ಸ್‌ ಹೆಸರಿಸಿರುವ ಐವತ್ತು ಪ್ರಮುಖರ ಪಟ್ಟಿಯಲ್ಲಿ ಕಿರಣ್‌ ಮಜುಂದಾರ್‌ ಅವರು ವಿರಾಜಿಸಿದ್ದಾರೆ.

ತಾನ್ಯಾ ಶೇರ್ಗಿಲ್‌

2020ರ ಗಣರಾಜ್ಯೋತ್ಸವದಲ್ಲಿ ಪುರುಷರ ತಂಡದ ಪಥಸಂಚಲನವನ್ನು ಮುನ್ನಡೆಸುವ ಮೂಲಕ ಪರೇಡ್‌ನಲ್ಲಿ ಪುರುಷರ ತಂಡದ ಪಥಸಂಚಲನವನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ತಾನ್ಯಾ ಶೇರ್ಗಿಲ್‌ ಪಾತ್ರರಾಗಿದ್ದಾರೆ. ಬಿ.ಟೆಕ್‌ ಪದವೀಧರೆ ತಾನ್ಯಾ ಅವರು ಚೆನ್ನೈನಲ್ಲಿರುವ ಭಾರತೀಯ ಸೇನೆಯ ಆಫೀಸರ್‌ ಟ್ರೈನಿಂಗ್‌ ಅಕಾಡೆಮಿಯಿಂದ ಪದವಿ ಪಡೆದಿದ್ದಾರೆ. ತಾನ್ಯಾ ಅವರ ತಂದೆ, ತಾತ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಆರುಣಿಮಾ ಸಿನ್ಹಾ

ಅರುಣಿಮಾ ಸಿನ್ಹಾ ಉತ್ತರ ಪ್ರದೇಶ ಮೂಲದ ಪರ್ವತಾರೋಹಿ ಮತ್ತು ಕ್ರೀಡಾಪಟು. ಅವರು ಭಾರತೀಯ ವಾಲಿಬಾಲ… ಆಟಗಾರ್ತಿ ಮತ್ತು ಮೌಂಟ್‌ ಎವರೆಸ್ಟ್‌, ಮೌಂಟ್‌ ಕಿಲಿಮಂಜಾರೊ (ಟಾಂಜಾನಿಯಾ), ಮೌಂಟಬ್ರೆಎಲ್ಬ್ರಸ್‌ (ರಷ್ಯಾ), ಮೌಂಟ್‌ ಕೊಸ್ಸಿಯುಸ್ಕೊ (ಆಸ್ಪ್ರೇಲಿಯಾ), ಮೌಂಟ್‌ ಅಕೊನ್ಕಾಗುವಾ (ದಕ್ಷಿಣ ಅಮೆರಿಕ), ಕಾಸ್ರ್ಟೆನ್ಸ್‌ ಪಿರಮಿಡ್‌ (ಇಂಡೋನೇಷ್ಯಾ) ಮತ್ತು ಮೌಂಟ್‌ ವಿನ್ಸನ್ಸ್‌ ಏರಿದ ಮೊದಲ ಪರ್ವತಾರೋಹಿ. 2011ರಲ್ಲಿ ದರೋಡೆಕೋರರು ಅವರನ್ನು ಓಡುತ್ತಿರುವ ರೈಲಿನಿಂದ ತಳ್ಳಿದರು. ಪರಿಣಾಮ ಅವರ ಎಡಗಾಲನ್ನು ಮೊಣಕಾಲಿನ ಕೆಳಗೆ ಕತ್ತರಿಸಬೇಕಾಯಿತು. ಆದಾಗ್ಯೂ ಪ್ರತಿ ಖಂಡದ ಅತ್ಯುನ್ನತ ಶಿಖರಗಳನ್ನು ಏರಿ ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸುವುದು ಅವರ ಉದ್ದೇಶವಾಗಿತ್ತು. ಅವರು ಈಗಾಗಲೇ 2014ರ ವರೆಗೆ 7 ಶಿಖರಗಳನ್ನು ಹತ್ತಿದ್ದಾರೆ. 2015ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದೆ.

ಅವನಿ ಚತುರ್ವೇದಿ

ಭಾವನಾ ಕಾಂತ್‌ ಅವರಂತೆಯೇ ಹಗಲಿನ ಅವಧಿಯಲ್ಲಿ ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ ಮಹಿಳಾ ಪೈಲಟ್‌ಗಳಲ್ಲಿ ಅವನಿ ಚತುರ್ವೇದಿ ಸಹ ಒಬ್ಬರು. 27 ಅಕ್ಟೋಬರ್‌ 1993ರಲ್ಲಿ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಅವನಿ ಜನಿಸಿದರು. ಭಾವನಾ ಕಾಂತ್‌ ಮತ್ತು ಇವರನ್ನು ಜೂನ್‌ 2016ರಲ್ಲಿ ಭಾರತೀಯ ವಾಯುಪಡೆಯ ಫೈಟರ್‌ ಸ್ಕಾ$್ವಡ್ರನ್‌ಗೆ ಸೇರಿಸಲಾಯಿತು. ಅವನಿ ಚತುರ್ವೇದಿ ಗುಜರಾತ್‌ನ ಜಮ…ನಗರದಿಂದ ಎಮ…ಐಜಿ-21 ಬೈಸನ್‌ ವಿಮಾನವೇರಿ ಹಾರಾಟ ಶುರು ಮಾಡಿದಲ್ಲದೆ, ರಷ್ಯಾ ನಿರ್ಮಿತ ಸೂಪರ್‌ ಸೋನಿಕ್‌ ಯುದ್ಧವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಯಶಸ್ವಿಯಾಗಿ ಹಾರಾಟ ನಡೆಸಿದರು. ಈ ಮೂಲಕ ಅವನಿ ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ ಭಾರತೀಯ ಮಹಿಳೆಯಲ್ಲಿ ಒಬ್ಬರು ಎನಿಸಿಕೊಂಡರು. 2018ರಲ್ಲಿ ಅವನಿ ಅವರಿಗೆ ಫ್ಲೈಟ್‌ ಲೆಫ್ಟಿನೆಂಟ್‌ ಹುದ್ದೆಗೆ ಬಡ್ತಿ ನೀಡಲಾಯಿತು.

ಶಿಲ್ಪಾ ಹೆಗ್ಡೆ

ಮೂಲತಃ ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದ ಶಿಲ್ಪಾ ಹೆಗ್ಡೆ ಆಸ್ಪ್ರೇಲಿಯಾದ ಆಡಳಿತಾರೂಢ ಲಿಬರಲ್‌ ಪಕ್ಷದ ಕಾರ‍್ಯಕಾರಿ ಸದಸ್ಯರಾಗಿ ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ. ಉಡುಪಿಯ ಕೋಟಾದ ವಡ್ಡರ್ಸೆ ಮೂಲದವರಾಗಿರುವ ಶಿಲ್ಪಾ ಅವರು ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಮೊಮ್ಮಗಳು. ತಂದೆ ಮೋಹನ್‌ದಾಸ್‌ ಹೆಗ್ಡೆ ಮತ್ತು ತಾಯಿ ಶಶಿಕಲಾ ಹೆಗ್ಡೆ. ಶಿಲ್ಪಾ ಹಾಗೂ ಅವರ ಕುಟುಂಬ ಕಳೆದ ಇಪ್ಪತ್ತು ವರ್ಷಗಳಿಂದ ಲಿಬರಲ್‌ ಪಾರ್ಟಿಯೊಂದಿಗೆ ಗುರುತಿಸಿಕೊಂಡಿದ್ದು, ಇದೀಗ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಶಿಲ್ಪಾ ಆಸ್ಪ್ರೇಲಿಯಾದ ಲಿಬರಲ್‌ ಪಕ್ಷದ ಕಾರ‍್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. 2022ರಲ್ಲಿ ಆಸ್ಪ್ರೇಲಿಯಾದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಸಂಬಂಧ ಪಕ್ಷದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಿತಿ ಇದಾಗಿದೆ.

click me!