
ಕೊರೊನೋತ್ತರ ಕಾಲದ ಹೊಸ ಆತಂಕಗಳಿಗೆ ಇದು ಇನ್ನೊಂದು ಸೇರ್ಪಡೆ. ಹೆಣ್ಣುಮಕ್ಕಳು ಬಲುಬೇಗನೆ ಋತುಮತಿಯರಾಗುತ್ತಿದ್ದಾರೆ. ಅವಧಿಗೂ ಮುನ್ನವೇ ಮೈ ನೆರೆಯುತ್ತಿರುವುದು ಹೆತ್ತವರ ಕಳವಳಕ್ಕೆ ಕಾರಣ.
ಇತ್ತೀಚೆಗೆ ಹೆಣ್ಣುಮಕ್ಕಳು ಮೈ ನೆರೆಯುತ್ತಿರುವ ವಯೋಮಾನವೇ ಇಳಿದಿದೆ. ಕೇವಳ ಹತ್ತು ವರ್ಷಗಳ ಹಿಂದೆ ಹೆಣ್ಣುಮಕ್ಕಳು ಸಾಮಾನ್ಯವಾಗಿ ಹದಿನೈದು, ಹದಿನಾರು ವರ್ಷಕ್ಕೆ ಮುಟ್ಟಾಗುತ್ತಿದ್ದರು. ಹತ್ತು ವರ್ಷಗಳಿಂದ ಈಚೆಗೆ ಅದು ಹನ್ನೆರಡು, ಹದಿಮೂರು ವರ್ಷಗಳಿಗೆ ಇಳಿದಿದೆ. ಜಂಕ್ ಫುಡ್, ವ್ಯಾಯಾಮರಹಿತ ಅನಾರೋಗ್ಯಕರ ಜೀವನ ಇತ್ಯಾದಿ ಸೇರಿ ಇದಕ್ಕೆ ಅನೇಕ ಕಾರಣಗಳು. ಕೊರೊನೋತ್ತರ ಅವಧಿಯಲ್ಲಿ ಈ ಪ್ರಮಾಣ ಇನ್ನೂ ಇಳಿದಿದ್ದು. ಒಂಬತ್ತು- ಹತ್ತು ವರ್ಷಕ್ಕೆಲ್ಲ ಹೆಣ್ಣುಮಕ್ಕಳಿಗೆ ಋತುಬಂಧ ಆರಂಭವಾಗುತ್ತಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಇದು ಹೆಚ್ಚು.
ನಗರ ಪ್ರದೇಶದ ಶೇ.20ರಷ್ಟು ಮಕ್ಕಳು ಹೆಚ್ಚು ತೂಕ ಹೊಂದಿದ್ದು, ಇವರಲ್ಲಿ ಶೇ.೧೮ರಷ್ಟು ಮಕ್ಕಳು ಸಾಮಾನ್ಯ ವಯಸ್ಸಿಗಿಂತ ಬೇಗನೆ ಪ್ರೌಢರಾಗುತ್ತಿದ್ದಾರೆ. ಅದರಲ್ಲೂ ಈ ವರ್ಷ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇದರಲ್ಲಿ ಶೇ.೫ರಷ್ಟು ಏರಿಕೆಯಾಗಿದೆ. ಗರ್ಭಾವಸ್ಥೆಯಲ್ಲೇ ಮಕ್ಕಳಿಗೆ ಪೌಷ್ಟಿಕ ಪೂರಕ ಆಹಾರವನ್ನು ನೀಡಲಾಗುತ್ತಿದೆ. ಹೀಗಾಗಿ, ಯಾವುದರ ಕೊರತೆಯೂ ಇಲ್ಲದಿರುವುದರಿಂದ ಮಕ್ಕಳು ಆರೋಗ್ಯಕರವಾಗಿ ಬೆಳೆಯುತ್ತಿದ್ದು, ಬೇಗ ಬಾಲ್ಯದಿಂದ ಕೌಮಾರ್ಯಕ್ಕೆ, ಅಲ್ಲಿಂದ ಪ್ರೌಢತೆಗೆ ಕಾಲಿಡುತ್ತಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಭರ್ತಿ 9 ತಿಂಗಳ ಕಾಲ ಶಾಲಾ ಚಟುವಟಿಕೆ ಇರಲಿಲ್ಲ. ಹೀಗಾಗಿ ಮಕ್ಕಳಿಗೆ ಆಟ- ಪಾಠಗಳೂ ಇರಲಿಲ್ಲ. ಆಡಲು ಗೆಳೆಯ ಗೆಳತಿಯರೂ ಇಲ್ಲದೆ ಮನೆಯಲ್ಲೇ ಜಡವಾಗಿ ಇರುತ್ತಾರೆ. ಪೋಷಕರಿಬ್ಬರೂ ಉದ್ಯೋಗಸ್ಥರಾಗಿರುವಾಗ ಮಕ್ಕಳ ಆಹಾರ ಮತ್ತು ವ್ಯಾಯಾಮದ ಮೇಲೆ ನಿಗಾ ಇಡುವವರೂ ಇಲ್ಲ. ಮಕ್ಕಳೂ ಟಿವಿ, ಮೊಬೈಲ್, ಐಪಾಡ್ ಎಂದು ಗ್ಯಾಜೆಟ್‌ಗಳನ್ನು ನೋಡುತ್ತಾ ಆರಾಮಾಗಿ, ಯಾವುದೇ ದೈಹಿಕ ಚಟುವಟಿಕೆ ಇಲ್ಲದೆ ಇಡೀ ದಿನ ಇರುತ್ತಾರೆ. ಹೇರಳ ಪೋಷಕಾಂಶಯುಕ್ತ ಆಹಾರ ಸೇವಿಸುತ್ತಾರೆ; ಆದರೆ ಚಟುವಟಿಕೆಯೇ ಇಲ್ಲ ಎಂಬ ಕಾರಣದಿಂದ ದೇಹತೂಕ ಹೆಚ್ಚಾಗುತ್ತಿದೆ. ಇದು ದೈಹಿಕ ಬೆಳವಣಿಗೆ ಹಾಗೂ ಲೈಂಗಿಕ ಹಾರ್ಮೋನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವೇ ಅಕಾಲಿಕ ಪ್ರೌಢತನ.
ಪಾಲಕರೇ ಎಚ್ಚರ..! ಮೊಬೈಲ್‌ನಿಂದ ಮಕ್ಕಳ ಮೆದುಳು ನಿಷ್ಕ್ರಿಯವಾಗುತ್ತಾ..? ...
ಕೆಲವೊಮ್ಮೆ ಆಹಾರವೂ ಪರಿಣಾಮ ಬೀರುತ್ತದೆ. ಪೌಲ್ಟ್ರಿಮಾಂಸ ಹಾಗೂ ಹೈಬ್ರಿಡ್ ತರಕಾರಿಗಳ ಸೇವನೆ, ಸೋಯಾ ಪದಾರ್ಥಗಳ ಅತಿಯಾದ ಬಳಕೆ, ಹೈಬ್ರಿಡ್ ತಳಿಗಳ ಹಸುಗಳ ಹಾಲು, ಹಾಲಿನ ಉತ್ಪನ್ನಗಳ ಬಳಕೆಗಳು ದೇಹವನ್ನು ಅತಿಯಾಗಿ ಬೆಳೆಸುತ್ತವೆ. ಮಾನಸಿಕ ಬೆಳವಣಿಗೆ ಆಗುವ ಮುನ್ನವೇ ದೈಹಿಕ ಬೆಳವಣಿಗೆ ಆಗಿಬಿಡುತ್ತದೆ. ಹಸುವಿನ ಹಾಲಿನ ಉತ್ಪಾದನೆ ಹೆಚ್ಚಿಸಲು ಹಾರ್ಮೋನ್ ಇಂಜೆಕ್ಷನ್ ನೀಡಲಾಗುತ್ತದೆ. ಈ ಹಾರ್ಮೋನ್ ಇಂಜೆಕ್ಷನ್ ನಿಡಿದ ಹಸುವಿನ ಹಾಲು ಸೇವಿಸುವುದು ಪ್ರೌಢತೆಗೆ ಮೂಲವಾಗಬಹುದು.
8 ವರ್ಷಕ್ಕೆ ಮೊದಲು ಮಕ್ಕಳು ಪ್ರೌಢರಾಗುವುದು ಆರೋಗ್ಯಕರವಲ್ಲ. ಅಸಹಜ. ಹೀಗಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವಿಶೇಷವೇನೆಂದರೆ, ಪ್ರೌಢ ಮಹಿಳೆಯರಲ್ಲಿ, ಮುಟ್ಟು ನಿಲ್ಲುವ ವಯಸ್ಸು ಕೂಡ ಮುಂದೆ ಹೋಗುತ್ತಿದೆ. ಇದೂ ಅಕಾಲಿಕವೇ. ಬಾಲ್ಯದಿಂದ ಯವ್ವನಕ್ಕೆ ಹೋಗುವ ಸರಾಸರಿ ಕಾಲಾವದಧಿ 13-16 ವರ್ಷ. ಆದರೆ ಈಗ ಹೆಣ್ಣುಮಕ್ಕಳು 8-10ರಲ್ಲೇ ಋತುಮತಿಯರಾಗುವುದರಿಂದ ಏನಾಗುತ್ತದೆ? ಇವರ ಬಾಲ್ಯವೇ ಇಲ್ಲವಾಗುತ್ತದೆ. ಆಟವಾಡಿಕೊಂಡು ಇರಬೇಕಾದವರು ದೈಹಿಕ ಬೆಳವಣಿಗೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಕಾಲಿಕ ಪ್ರೌಢತ್ವ ಉಂಟಾಗುತ್ತದೆ. ಎಲ್ಲರೊಂದಿಗೆ ಆಟವಾಡಿಕೊಳ್ಳಲು ಹೆತ್ತವರು ಈ ಸಂದರ್ಭದಲ್ಲಿ ಬಿಡದೆ ಇರುವುದರಿಂದ, ಮಾನಸಿಕ ಒತ್ತಡವೂ ಉಂಟಾಗಬಹುದು. ಈ ಪುಟ್ಟ ಮಕ್ಕಳಿಗೆ ಸರಿ ತಪ್ಪುಗಳ ಅರಿವು ಕೂಡ ಇಲ್ಲದೆ ಇರುವುದರಿಂದ ಸಮಸ್ಯೆಯ ಸುಳಿಗೆ ಸಿಲುಕಬಹುದು. ಕೋವಿಡ್ ಸಮಯದಲ್ಲಿ ಬೇಗನೆ ಋತುಮತಿಯರಾದ ಹೆಣ್ಣೂಮಕ್ಕಳನ್ನು ಪರೀಕ್ಷಿಸಿದ ಡಾಕ್ಟರಿಗೆ, ಈ ಮಕ್ಕಳು ಕಳೆದ ಆರೇಳು ತಿಂಗಳಲ್ಲಿ ನಾಲ್ಕಾರು ಕಿಲೋ ತೂಕ ಹೆಚ್ಚಿಸಿಕೊಂಡಿರುವುದು ಕಂಡುಬಂದಿದೆ. ಇದು ಅನಾರೋಗ್ಯಕರ.
ಮಕ್ಕಳು ನೋಡಬಾರದ ಪ್ರಾಯದಲ್ಲಿ ಪೋರ್ನ್ ನೋಡಿದ್ರೆ..? ...
ಎಚ್ಚರ ವಹಿಸುವುದು ಹೇಗೆ?
- ಜಂಕ್ ಫುಡ್ ಸೇವನೆ ಕಡಿತಗೊಳಿಸಿ. ಡೇರಿ ಉತ್ಪನ್ನಗಳನ್ನು ಮಿತಿಗೊಳಿಸಿ. ತರಕಾರಿ ಹಣ್ಣು ಹೆಚ್ಚು ತಿನ್ನಲಿ. ದ್ರವಾಂಶ ಹೆಚ್ಚು ಸೇವಿಸಲಿ.
- ದೈಹಿಕ ಚಟುವಟಿಕೆ ಹೆಚ್ಚಿಸಿ. ಸಂಜೆ ಮುಂಜಾನೆ ಕಡ್ಡಾಯವಾಗಿ ವಾಕಿಂಗ್ ಮಾಡಿಸಿ. ಡ್ಯಾನ್ಸ್ ಮುಂತಾದ ಕಲಿಕೆಯಲ್ಲಿ ತೊಡಗಿಸಿ.
ಮಕ್ಕಳು ಊಟ ಮಾಡುತ್ತಿಲ್ಲವೇ? ಹಾಗಿದ್ರೆ ಈ ಆಹಾರ ಟ್ರೈ ಮಾಡಿ ನೋಡಿ ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.