
ಮುಟ್ಟು (Menstruation) ಎಂದರೆ ಹಲವರಿಗೆ ದುಃಸ್ವಪ್ನ. ಪ್ರತಿ ತಿಂಗಳು ಇದೊಂದು ಕಿರಿಕಿರಿ (Irritation) ಅನುಭವಿಸಬೇಕಲ್ಲ ಎನ್ನುವ ನೋವು. ಇದೊಂದಿಲ್ಲದಿದ್ದರೆ ತಾವೂ ಗಂಡಸಿನಂತೆ ಏನು ಬೇಕಿದ್ದರೂ ಮಾಡುತ್ತಿದ್ದೆವು ಎನ್ನುವ ಯುವತಿಯರೂ ಇಲ್ಲದಿಲ್ಲ. ಮಾಸಿಕ ಋತುಸ್ರಾವ (Monthly Cycle) ಮದುವೆಯಾಗುವ ಮುನ್ನ ಒಂದು ರೀತಿಯಾದರೆ, ಮದುವೆಯಾದ ಬಳಿಕ ಇನ್ನೊಂದು ರೀತಿಯಲ್ಲಿ ಕಾಡುತ್ತದೆ. ಮಕ್ಕಳಾದ ಬಳಿಕ ಮತ್ತೊಂದು ರೀತಿ, ೪೦ರ ಮೇಲ್ಪಟ್ಟು ಇನ್ನೂ ಬೇರೆಯದೇ ರೀತಿಯಲ್ಲಿ ಜತೆಗಿರುತ್ತದೆ. ಬಹಳಷ್ಟು ಮಹಿಳೆ (Women)ಯರಿಗೆ ಹೊಟ್ಟೆನೋವು (Pain), ಕಿಬ್ಬೊಟ್ಟೆ, ಸೊಂಟ, ಬೆನ್ನು ನೋವು (Back Pain), ಕೈಕಾಲು ಸೆಳೆತ ಕಾಣಿಸಿಕೊಳ್ಳುವುದು ಸಾಮಾನ್ಯ. ನೋವು ಹಾಗೂ ಋತುಸ್ರಾವ ಅತಿಯಾದರೆ ವೈದ್ಯರ ಬಳಿಗೆ ಹೋಗುವುದೂ ಇದೆ. ಸಾಮಾನ್ಯವಾಗಿ ನೋವಂತೂ ಇದ್ದೇ ಇರುತ್ತದೆ. ಆ ಸಮಯದಲ್ಲಿ ಮಾನಸಿಕವಾಗಿ ದೈಹಿಕವಾಗಿ ನೆಮ್ಮದಿಯಾಗಿರಲು ಸಾಧ್ಯವಾಗುವುದಿಲ್ಲ. ದಿನಗಳು ಹತ್ತಿರ ಬರುತ್ತಿರುವಾಗ ಕಿರಿಕಿರಿಯಾಗಲು, ಕೋಪ ಬರಲು ಶುರುವಾಗುತ್ತದೆ. ಇಂಥದ್ದೇ ಕಾರಣಕ್ಕೆ ಕೋಪ ಬರುತ್ತಿದೆ ಎಂದು ತಿಳಿದುಕೊಂಡರೆ ಅರ್ಧ ಸಮಸ್ಯೆ ತೀರಿದಂತೆ. ಆದರೆ, ಬಹಳಷ್ಟು ಬಾರಿ ಸ್ವತಃ ಮಹಿಳೆಯರಿಗೂ ಅದರ ಅರಿವಿರುವುದಿಲ್ಲ. ಯಾರೊಂದಿಗೂ ಮಾತು ಬೇಡವಾಗಿದ್ದರೂ ಸುಮ್ಮನಿರುವಂತಿಲ್ಲ. ಈ ಸಮಯದಲ್ಲಿ ಮಕ್ಕಳಿಗೆ ಬೈಯುವುದು, ಹೊಡೆಯುವುದು ಹೆಚ್ಚಾಗುವುದು ಪ್ರತಿ ಮನೆಗಳಲ್ಲೂ ಕಂಡುಬರುವ ಸಾಮಾನ್ಯ ಸಂಗತಿ. ಇದನ್ನು ಅರ್ಥೈಸಿಕೊಂಡು ಪುರುಷರು (Men) ಸ್ವಲ್ಪ ಸಹಾಯ ಮಾಡುವ ಮೂಲಕವಾದರೂ ಮಾನಸಿಕವಾಗಿ ಜತೆಗಿರುವುದು ಅತಿ ವಿರಳ.
ಮುಟ್ಟಾದಾಗ ನೋವಿನಿಂದ ಹಾಗೂ ಕಿರಿಕಿರಿಯಿಂದ ಪಾರಾಗಲು ಏನು ಮಾಡಬೇಕೆಂದು ಅರಿತುಕೊಳ್ಳಬೇಕು. ಕಿಬ್ಬೊಟ್ಟೆ ನೋವಾಗುತ್ತಿದ್ದರೆ ಬಿಸಿನೀರಿನ (Hot Water) ಶಾಖ ಕೊಟ್ಟುಕೊಳ್ಳಬೇಕು. ಕೈಕಾಲು ಸೆಳೆತ ನಿವಾರಿಸಿಕೊಳ್ಳಲು ಸಾಕಷ್ಟು ವಿಶ್ರಾಂತಿ (Rest) ಪಡೆಯುವುದೊಂದೇ ಪರಿಹಾರ. ಹಾಗೂ ರಾತ್ರಿ ಬಿಸಿ ನೀರಿನಲ್ಲಿ ಸ್ವಲ್ಪ ಸಮಯ ಕಾಲುಗಳನ್ನು ಇಟ್ಟುಕೊಂಡು ಕುಳಿತುಕೊಳ್ಳುವುದರಿಂದ ಆರಾಮವೆನಿಸುತ್ತದೆ.
ಈ ಸಮಯದಲ್ಲಿ ಉತ್ತಮ ಆಹಾರ (Good Food) ಸೇವನೆ ಅತ್ಯಂತ ಅಗತ್ಯ. ಅನೇಕರು ತಿನ್ನುವ ಬಯಕೆ (Cravings) ಎಂದು ಕರಿದ ತಿಂಡಿಗಳನ್ನು ಸೇವನೆ ಮಾಡುತ್ತಾರೆ. ಆದರೆ, ಇದರಿಂದ ದೈಹಿಕ-ಮಾನಸಿಕ ಕಿರಿಕಿರಿಗಳು ಹೆಚ್ಚಾಗುತ್ತವೆ. ಹಣ್ಣುಗಳು, ತರಕಾರಿ ಸೇವನೆ ಮಾಡಬೇಕು. ಚೆನ್ನಾಗಿ ನೀರು ಕುಡಿಯಬೇಕು. ಸಾಧ್ಯವಾದಷ್ಟೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಹೆಚ್ಚು ಕೆಲಸಗಳಿದ್ದರೆ ಬದಿಗಿಟ್ಟು ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಉದ್ಯೋಗಸ್ಥ ಮಹಿಳೆಯರು ಈ ಸಮಯದಲ್ಲಾದರೂ “ತಾವು ಎಲ್ಲವನ್ನೂ ನಿಭಾಯಿಸಬೇಕುʼ ಎನ್ನುವ ಧೋರಣೆ ಕೈಬಿಟ್ಟು ಕೆಲವು ಕೆಲಸವಾದರೆ ಸರಿ, ಇಲ್ಲವಾದರೂ ಸರಿ ಎನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಸ್ವಲ್ಪ ನೆಮ್ಮದಿ ಸಿಗಬಹುದು. ಒತ್ತಡ ಮಾಡಿಕೊಳ್ಳುವುದರಿಂದ ಕಿರಿಕಿರಿ ಹೆಚ್ಚಾಗುತ್ತದೆಯೇ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ.
ತಿಂಗಳಿಗೆ ಎರಡು ಬಾರಿ ಮುಟ್ಟು ಆಗೋದ್ಯಾಕೆ?
ಯಾವ ಫುಡ್ ಬೆಸ್ಟ್?
ಮುಟ್ಟಿನ ದಿನಗಳಲ್ಲಿ ಕಳಿತ ಬಾಳೆಹಣ್ಣು ತಿನ್ನುವುದು ಅತ್ಯಂತ ಸೂಕ್ತ ಎನ್ನುತ್ತಾರೆ ತಜ್ಞರು. ತುಳಸಿ ರಸ ಮತ್ತು ಕಲ್ಲುಸಕ್ಕರೆ ಬೆರೆಸಿ ತಿನ್ನಬಹುದು. ಮೆಂತ್ಯವನ್ನು ನೆನೆಸಿಟ್ಟುಕೊಂಡು ನೀರಿನೊಂದಿಗೆ ಸೇವಿಸುವುದು ಅಥವಾ ಮೆಂತ್ಯದ ಕಷಾಯ ಮಾಡಿಕೊಂಡು ಕುಡಿಯುವುದು ಉತ್ತಮ. ಸೀಬೆಹಣ್ಣು, ನುಗ್ಗೆಸೊಪ್ಪು ಬಳಸಬಹುದು. ಹಣ್ಣಿನ ಜ್ಯೂಸ್, ಒಣದ್ರಾಕ್ಷಿ, ಹಾಲು, ಅರಿಶಿಣವನ್ನು ರಾತ್ರಿ ಸಮಯ ಮಲಗುವುದಕ್ಕೂ ಮುನ್ನ ಸೇವಿಸಬಹುದು. ಆದರೆ, ದೇಹಕ್ಕೆ ಹೆಚ್ಚು ಉಷ್ಣವಾಗದಂತೆ ನೋಡಿಕೊಳ್ಳಿ. ಇದರಿಂದ ನಿದ್ರೆ ಬರುವುದಿಲ್ಲ. ಆಗ ಇನ್ನಷ್ಟು ಹಿಂಸೆಯೆನಿಸುತ್ತದೆ. ದೇಹಕ್ಕೆ ಅತ್ಯಂತ ಹಿಂಸೆಯಾಗುತ್ತಿದ್ದರೆ ಗಂಜಿ, ಹೆಸರುಬೇಳೆ ಖಿಚಡಿ, ನಿಂಬೆಹಣ್ಣಿನ ಪಾನಕ, ಜೀರಿಗೆ ಕಷಾಯ ಇತ್ಯಾದಿ ಮಾಡಿಕೊಂಡು ಸೇವಿಸಬಹುದು. ಗರಿಕೆ ಬೇರಿನ ಕಷಾಯವನ್ನೂ ಮಾಡಿಕೊಂಡು ಕುಡಿದರೆ ನೋವು ನಿವಾರಣೆಯಾಗುತ್ತದೆ. ಸತ್ವಭರಿತ ಆಹಾರ ಸೇವನೆ ಮಾಡುವುದರಿಂದ ಮುಟ್ಟಿನ ದೈಹಿಕ ನೋವು ಹಾಗೂ ಮಾನಸಿಕ ಕಿರಿಕಿರಿಗಳು ದೂರವಾಗುವುದನ್ನು ಅನೇಕ ಸಂಶೋಧನೆಗಳು ಬಹಿರಂಗಪಡಿಸಿವೆ. ಅಗಸೆ ಬೀಜ, ಕಡಲೆ ಬೀಜ, ಮೆಂತ್ಯ ಇವುಗಳ ಬಳಕೆ ಸೂಕ್ತ.
ಮುಟ್ಟಿನ ದಿನಗಳಲ್ಲಿ ಹಿಂದಿನ ಮಹಿಳೆಯರು ಪ್ರತ್ಯೇಕವಾಗಿರುತ್ತಿದ್ದರು. ಎಂತಹ ತಲೆಹೋಗುವಂತಹ ಸಮಸ್ಯೆಯಾದರೂ ಮೂರು ದಿನಗಳ ಕಾಲ ಅವರು ಒಳಗೆ ಬರುವಂತಿರಲಿಲ್ಲ. ಹೀಗಾಗಿ, ಅವರಿಗೆ ಸಾಕಷ್ಟು ರೆಸ್ಟ್ ಸಿಗುತ್ತಿತ್ತು. ಈಗ ಹಾಗಲ್ಲ, ಆದರೂ ಸಾಧ್ಯವಾದಷ್ಟು ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು ಯತ್ನಿಸಬೇಕು. ಉತ್ತಮವಾದ ಪುಸ್ತಕ ಓದುವುದು, ಒಳ್ಳೆಯ ಸಂಗೀತ ಕೇಳುವುದನ್ನು ಮಾಡಿ. ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ “ಹೇಗೋ ಸರಿಯಾಗುತ್ತದೆʼ ಎಂದು ನಿರ್ಲಕ್ಷಿಸಬಾರದು. ಮನೆಯವರಲ್ಲಿ ಹಂಚಿಕೊಳ್ಳಬೇಕು. ನೀವು ಹೇಳದೆ ನಿಮ್ಮ ಸಮಸ್ಯೆ ಯಾರಿಗೂ ಅರ್ಥವಾಗುವುದಿಲ್ಲ. ಅಲ್ಲದೆ, ಮುಟ್ಟಿನ ಕುರಿತು ಬಹಳಷ್ಟು ಮನೆಗಳಲ್ಲಿ ಪತಿ ಹಾಗೂ ಮಕ್ಕಳು ಅಸಡ್ಡೆಯ ಮಾತುಗಳನ್ನಾಡುವುದು ಸಾಮಾನ್ಯ. ಅವುಗಳನ್ನು ನಿರ್ಲಕ್ಷಿಸಿಬಿಡಿ.
ಮುಟ್ಟಿನ ಸಮಯದ ಕೋಪ, ಖಿನ್ನತೆಗೇನು ಪರಿಹಾರ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.