ಹೃದಯಾಘಾತ ಹಿಂದೆ ಪುರುಷರಿಗೆ ಮೀಸಲಾದ ಖಾಯಿಲೆ ಎಂಬ ಕಲ್ಪನೆ ಇತ್ತು. ಆದ್ರೀದ ಇದಕ್ಕೆ ಲಿಂಗ ಬೇಧವಿಲ್ಲ ಎಂಬ ಅಂಶ ಗೊತ್ತಾಗಿದೆ. ಎದೆ ನೋವಿಲ್ಲವೆಂದ್ರೂ ಮಹಿಳೆಯನ್ನು ಈ ಎಲ್ಲ ರೀತಿಯಲ್ಲಿ ಕಾಡುತ್ತೆ ಹೃದ್ರೋಗ.
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ಹೃದಯಾಘಾತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸ್ಪಂದನಾ ಮಾತ್ರವಲ್ಲ ಈಗಿನ ದಿನಗಳಲ್ಲಿ ಅನೇಕ ಮಹಿಳೆಯರು ಹೃದಯಾಘಾತಕ್ಕೆ ಬಲಿಯಾಗ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತವಾಗ್ತಿದೆ. ಹೃದಯಾಘಾತವೆಂದ್ರೆ ಅದು ಪುರುಷರಿಗೆ ಬರುವ ಕಾಯಿಲೆ ಎನ್ನುವ ನಂಬಿಕೆ ಹಿಂದಿತ್ತು. ಬಹಳ ಅಪರೂಪಕ್ಕೆ ಒಂದೋ ಎರಡೋ ಪ್ರಕರಣಗಳಿದ್ದವು. ಮಹಿಳೆಯರಿಗೆ ಹೃದಯಾಘಾತವಾಗುತ್ತೆ ಅಂದ್ರೆ ನಂಬೋರೇ ಇರಲಿಲ್ಲ. ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಈಗಿನ ದಿನಗಳಲ್ಲಿ ಭಾರತದಲ್ಲಿ ಹೃದಯಾಘಾತದ ಸಂಖ್ಯೆ ಹೆಚ್ಚಾಗಿರುವುದು ಮಾತ್ರವಲ್ಲ ಮಹಿಳೆಯರಲ್ಲಿ ಶೇಕಡಾ 8ರಷ್ಟು ಕಾಣಿಸಿಕೊಳ್ತಿದೆ. ನಾವಿಂದು ಮಹಿಳೆಯಲ್ಲಿ ಕಾಣಿಸಿಕೊಳ್ಳುವ ಹೃದಯಾಘಾತದ ಲಕ್ಷಣ, ಕಾರಣ ಹಾಗೂ ಪರಿಹಾರದ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹೃದ್ರೋಗ (Heart Disease) ದ ಲಕ್ಷಣಗಳು : ಮಹಿಳೆಯರು ಆರೋಗ್ಯ (Health) ದ ಬಗ್ಗೆ ಹೆಚ್ಚು ಕಾಳಜಿವಹಿಸೋದಿಲ್ಲ. ಹೃದಯ ಸಂಬಂಧಿ ಖಾಯಿಲೆ ನಮಗಲ್ಲ ಎಂದುಕೊಂಡಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ. ಅವರಿಗೆ ಹೃದ್ರೋಗದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಹೃದ್ರೋಗದ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಭಿನ್ನವಾಗಿರಬಹುದು. ಉದಾಹರಣೆಗೆ ಎದೆ ನೋವು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ. ಆದರೆ ಮಹಿಳೆಯರಿಗೆ ಎದೆಯಲ್ಲಿ ನೋವು ಕಾಣಿಸಿಕೊಳ್ಳದೆ ಇರಬಹುದು. ಅವರು ಬೇರೆ ಸಮಸ್ಯೆಗಳನ್ನು ಎದುರಿಸುತ್ತಾರೆ.
ಯುವಜನರಲ್ಲಿ ಹೃದಯಾಘಾತ 22% ಹೆಚ್ಚಳ, ಮಹಿಳೆಯರಲ್ಲಿ ಶೇ.8 ಏರಿಕೆ: ಡಾ.ಸಿ.ಎನ್.ಮಂಜುನಾಥ್
ಹೃದಯ ಸಂಬಂಧಿ ರೋಗದಿಂದ ಬಳಲುವ ಮಹಿಳೆಯರಿಗೆ ದವಡೆ ನೋವು ಕಾಣಿಸಿಕೊಳ್ಳುತ್ತದೆ. ಭುಜದ ನೋವು ಮಾಮೂಲಿಯಾಗಿರುತ್ತದೆ. ಬೆನ್ನಿನ ಮೇಲ್ಭಾಗ ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಡುತ್ತದೆ. ಆಗಾಗ ಬೆವರುವ ಸಮಸ್ಯೆಯನ್ನು ಮಹಿಳೆಯರು ಹೊಂದಿರುತ್ತಾರೆ. ತಲೆ ಸುತ್ತು ಕಾಡುವುದಿದೆ. ಈ ಲಕ್ಷಣಗಳು ಕಂಡು ಬಂದಾಗ ಅದನ್ನು ನಿರ್ಲಕ್ಷ್ಯ ಮಾಡಬಾರದು. ಕೆಲಸ ಮಾಡುವ ಮಹಿಳೆಯರು ಭುಜದ ನೋವು, ಸೊಂಟದ ನೋವನ್ನು ಗಂಭೀರವಾಗಿ ಪರಿಗಣಿಸೋದಿಲ್ಲ. ಕೆಲಸದ ಕಾರಣಕ್ಕೆ ಈ ಸಮಸ್ಯೆ ಬಂದಿದೆ ಎಂದುಕೊಳ್ತಾರೆ.
ಮಹಿಳೆಯರನ್ನು ಈ ಕಾರಣದಿಂದ ಕಾಡುತ್ತೆ ಹೃದಯ ರೋಗ : ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ತೀವ್ರ ರಕ್ತದೊತ್ತಡ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಹೃದಯಾಘಾತವಾಗುವ ಅಪಾಯ ಹೆಚ್ಚಿರುತ್ತದೆ. ಬರೀ ಈ ಖಾಯಿಲೆ ಮಾತ್ರವಲ್ಲ ಈಗಿನ ದಿನಗಳಲ್ಲಿ ಮಾನಸಿಕ ಒತ್ತಡ, ಹೃದಯದ ಆರೋಗ್ಯ ಹಾಳು ಮಾಡಲು ಮುಖ್ಯ ಕಾರಣವಾಗಿದೆ. ಒತ್ತಡ, ಅಲ್ಪ ನಿದ್ರೆ, ದೈಹಿಕ ಚಟುವಟಿಕೆ ಮಾಡದೆ ಇರೋದು, ಧೂಮಪಾನ, ಮುಟ್ಟು ನಿಲ್ಲುವ ಸಮಯದಲ್ಲಿ ಕೆಲ ಮಹಿಳೆಯರು ಹೃದಯ ಸಂಬಂಧಿ ಖಾಯಿಲೆಗೆ ತುತ್ತಾಗುತ್ತಾರೆ. ಆನುವಂಶಿಕವಾಗಿಯೂ ಈ ಖಾಯಿಲೆ ನಿಮ್ಮನ್ನು ಕಾಡುವ ಸಾಧ್ಯತೆಯಿರುತ್ತದೆ.
ಎಷ್ಟು ಕೆಜಿ ಕಡಿಮೆ ಆದ್ರೂ ಹೃದಯಾಘಾತ ಆಗಲ್ಲ, ಮಾಡರ್ನ್ ಲೈಫ್‌ಗೆ ಗ್ಯಾರಂಟಿ: ಡಾ. ಪ್ರೇಮಾ
ಮಹಿಳೆಯನ್ನು ಕಾಡುವ ಹೃದಯ ಸಂಬಂಧಿ ಖಾಯಲೆಗೆ ಚಿಕಿತ್ಸೆ : ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ರೆ ಬದುಕುಳಿಯಲು ಸಾಧ್ಯ. ಹೃದ್ರೋಗ ಹೊಂದಿರುವ ಮಹಿಳೆಯರಿಗೆ ಪುರುಷರ ರೀತಿಯಲ್ಲೇ ಚಿಕಿತ್ಸೆ ನಡೆಯುತ್ತದೆ. ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG), ಎಕೋಕಾರ್ಡಿಯೋಗ್ರಾಮ್, ಆಂಜಿಯೋಗ್ರಫಿ ಮತ್ತು ಆಪ್ಟಿಕಲ್ ಕೋಹೆರೆನ್ಸ್ ಟೊಮೊಗ್ರಫಿ (OCT) ಯನ್ನು ಬಳಸಿ ರೋಗವನ್ನು ಪತ್ತೆ ಮಾಡಲಾಗುತ್ತದೆ. ಸಮಸ್ಯೆ ಪತ್ತೆಯಾದ್ಮೇಲೆ ಚಿಕಿತ್ಸೆಗಾಗಿ ಔಷಧ ಅಥವಾ ಪರ್ಕ್ಯುಟೇನಿಯಸ್ ಅಪಧಮನಿಯ ಮಧ್ಯಸ್ಥಿಕೆ (PCI)/ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟಿಂಗ್ ಅಥವಾ ಪರಿಧಮನಿಯ ಬೈಪಾಸ್ ಶಸ್ತ್ರಚಿಕಿತ್ಸೆಯಲ್ಲಿ ಒಂದನ್ನು ಮಾಡಬೇಕಾಗುತ್ತದೆ. ರೋಗದ ತೀವ್ರದ ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ.
ಜಾಗೃತಿ ಮುಖ್ಯ : ಮೊದಲೇ ಹೇಳಿದಂತೆ ಹೃದಯ ಸಂಬಂಧಿ ಖಾಯಿಲೆ ಬಗ್ಗೆ ಮಹಿಳೆಯರಿಗೆ ಸರಿಯಾದ ಮಾಹಿತಿ ಇಲ್ಲ. ಮಹಿಳೆಯರನ್ನು ಈ ಬಗ್ಗೆ ಜಾಗೃತಿಗೊಳಿಸಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಸಲಹೆ ನೀಡ್ಬೇಕು. ವರ್ಷ ಎಷ್ಟೇ ಆಗಿರಲಿ ಆರು ತಿಂಗಳಿಗೆ ಒಮ್ಮೆ ಅಥವಾ ವರ್ಷಕ್ಕೊಮ್ಮೆ ಪ್ರತಿಯೊಬ್ಬ ಮಹಿಳೆ ಪರೀಕ್ಷೆಗೆ ಒಳಗಾಗಬೇಕು.