ವಾಟ್ಸ್‌ಆ್ಯಪ್ ಬಳಕೆದಾರರೇ, ನೀವೇ ಸುಳ್ಳು ಸುದ್ದಿ ಪತ್ತೆ ಹಚ್ಚಿ!

By Suvarna NewsFirst Published Apr 9, 2020, 3:41 PM IST
Highlights

ಈಗ ವಿಶ್ವಕ್ಕೇ ಕೊರೋನಾ ನಂಜು ಹೊತ್ತಿಕೊಂಡಿದೆ. ಈ ನಂಜಿನ ಬಾಧೆ ವಿಪರೀತವಾಗಿ ಬಾಧಿಸುತ್ತಿರುವುದರ ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳ ಜಾತ್ರೆ ಪ್ರಾರಂಭವಾಗಿದೆ. ಇಲ್ಲಿ ಇಂಥ ಸುದ್ದಿಗಳಿಗೆ ಸೋಷಿಯಲ್ ಮೀಡಿಯಾ ಡಿಸ್ಟೆನ್ಸ್ ಎಂಬುದು ಇರಲಿಲ್ಲ. ಜೊತೆಗೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಜನರ ಭಾವನೆಗಳನ್ನು ಬಳಸಿಕೊಂಡು ಹಣ ಹೊಡೆಯುವ ಕಾರ್ಯಕ್ಕೂ ಕೈ ಹಾಕಿದ್ದಾರೆ. ಇಂಥದ್ದೆಕ್ಕೆಲ್ಲ ಬ್ರೇಕ್ ಹಾಕಲು ಈಗ ವಾಟ್ಸ್‌ಆ್ಯಪ್ ಮುಂದಾಗಿದೆ. ವಾಟ್ಸ್‌ಆ್ಯಪ್‌ನ ಈ ಹೊಸ ಫೀಚರ್ ಏನು? ಎತ್ತ ಇಲ್ಲಿ ನೋಡಿ...

ಈಗಿನ ಫಾಸ್ಟ್ ಯುಗದಲ್ಲಿ ಎಲ್ಲರಿಗೂ ಎಲ್ಲವೂ ತುಂಬಾನೇ ಫಾಸ್ಟ್ ಆಗಿಯೇ ಸಿಗಬೇಕು. ಮತ್ತದನ್ನು ಅವರು ಅಷ್ಟೇ ಫಾಸ್ಟ್ ಆಗಿಯೇ ನಂಬಿ ತುಂಬಾನೇ ಫಾಸ್ಟ್ ಫಾಸ್ಟ್ ಆಗಿ ಸುದ್ದಿ ಬಿತ್ತರಿಸಿಬಿಟ್ಟುರುತ್ತಾರೆ. ಆದರೆ, ನಿಜವಾಗಿಯೂ ಅದು ನಂಬಿಕೆಗೆ ಅರ್ಹವೇ? ಅದರ ಪಾಸ್ಟ್ (ಹಿಂದಿನ ಸ್ಥಿತಿ) ಏನಾಗಿತ್ತು ಎಂದು ಪರಿಶೀಲಿಸುವ ಗೋಜಿಗೇ ಹೋಗುವುದಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಂತೂ ಸುಳ್ಳು ಸುದ್ದಿಗಳದ್ದೇ ಹಾವಳಿ. 
ಈಗ ಇಂಥಹ ಸುಳ್ಳು ಸುದ್ದಿಗಳಿಂದ ಸಮಾಜ ಸ್ವಾಸ್ಥ್ಯ ಹಾಳಾಗುತ್ತಿದೆ ಎಂಬ ದೂರುಗಳು ತೀವ್ರವಾಗಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಇಂಥದ್ದಕ್ಕೆ ಕಡಿವಾಣ ಹಾಕಲು ವಾಟ್ಸ್‌ಆ್ಯಪ್ ಮುಂದೆ ಬಂದಿದೆ. ಹೀಗಾಗಿ ಗ್ರಾಹಕರು ಯಾವುದು ಸತ್ಯ? ಯಾವುದು ಸುಳ್ಳು? ಎಂಬುದು ತಿಳಿದುಕೊಳ್ಳಬೇಕು ಎಂದಿರುವ ವಾಟ್ಸ್‌ಆ್ಯಪ್, ಫ್ಯಾಕ್ಟ್ ಚೆಕ್ ಅವಕಾಶವನ್ನು ಕಲ್ಪಿಸಿದೆ. ಇದಕ್ಕಾಗಿ ವೆಬ್ ಸರ್ಚ್ ಆಯ್ಕೆಯನ್ನು ಕೊಡುತ್ತಿದೆ.

ಇದನ್ನೂ ಓದಿ: ಕೋರೋನಾ ಮಾಹಿತಿಗೆ ಟ್ವಿಟ್ಟರ್ ಶುರುಮಾಡಿದೆ ಸರ್ಚ್ ಪ್ರಾಂಪ್ಟ್!

ಯಾವುದರಲ್ಲಿ ಸಿಗುತ್ತೆ ಈ ಸೌಲಭ್ಯ?
ವಾಬೆಟಾಇನ್ಫೋ (WABetainfo) ಪ್ರಕಾರ, ವೆಬ್‌ ಸರ್ಚ್ ಆಯ್ಕೆಯು ಆ್ಯಂಡ್ರಾಯ್ಡ್ ಹಾಗೂ ಐಒಎಸ್‌ನ ಲೇಟೆಸ್ಟ್ ವರ್ಶನ್‌ನಲ್ಲಿ ಲಭ್ಯವಾಗಿದೆ. ಹೀಗಾಗಿ ಸದ್ಯಕ್ಕೆ ಕೆಲವೇ ಬಳಕೆದಾರರಿಗೆ ಈ ಸೌಲಭ್ಯ ಸಿಕ್ಕಿದೆ. ವಾಟ್ಸ್‌ಆ್ಯಪ್ ವೆಬ್/ಡೆಸ್ಕ್ ಟಾಪ್ ಎರಡರಲ್ಲೂ ಪರಿಶೀಲಿಸಬಹುದಾಗಿದೆ.
 
ಪರಿಶೀಲಿಸಿ, ಷರತ್ತುಗಳು ಅನ್ವಯ
ವಾಬೆಟಾಇನ್ಫೋ ಈ ನೂತನ ಸೌಲಭ್ಯದ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿತ್ತು. ಹೀಗೆ ಕಳುಹಿಸಿದ ಮೆಸೇಜ್‌ನಲ್ಲಿ ಯಾವ ರೀತಿ ಸರ್ಚ್ ಐಕಾನ್ ತೋರಿಸಿ ಫಾರ್ವರ್ಡ್ ಎಂಬ ಮಾರ್ಕ್ ತೋರಿಸುತ್ತದೆ. ಈ ಮೂಲಕ ಯಾವ ಮಾದರಿಯಲ್ಲಿ ಸುಳ್ಳು ಸುದ್ದಿಯನ್ನು ಪತ್ತೆಹಚ್ಚಬಹುದು ಎಂದು ಹೇಳಿಕೊಂಡಿತ್ತು. ಇದನ್ನು ಗಮನಿಸುತ್ತಿದ್ದಂತೆ ಅಖಾಡಕ್ಕಿಳಿದ ಟ್ವಿಟ್ಟರ್ ಬಳಕೆದಾರರು ತಕ್ಷಣ ತಮ್ಮ ತಮ್ಮ ವಾಟ್ಸ್‌ಆ್ಯಪ್‌ಗಳಲ್ಲಿ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡಿ ಪರಿಶೀಲಿಸಿದ್ದಾರೆ. ಆದರೆ, ಯಾವುದೇ ರೀತಿಯ ಹೊಸ ಫೀಚರ್ ಲಭ್ಯವಾಗದಿದ್ದಾಗ ಪುನಃ ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ಕೊಟ್ಟಿರುವ ವಾಟ್ಸ್‌ಆ್ಯಪ್ ಪುನಃ ಪುನಃ ಒಂದೇ ಮೆಸೇಜ್ ಬಹಳ ಕಾಲ ಫಾರ್ವರ್ಡ್ ಆಗುತ್ತಿದ್ದರೆ, ಅಂಥವುಗಳನ್ನು ಮಾತ್ರ ಪರಿಶೀಲಿಸಬಹುದಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಸುಳ್ಳು ಸಾಂಕ್ರಾಮಿಕಕ್ಕೆ ವ್ಯಾಟ್ಸ್‌ಆ್ಯಪ್ ಗುನ್ನ, ಒಬ್ಬರಿಗೆ ಒಂದೇ ಫಾರ್ವರ್ಡ್!

ಇದರ ಕಾರ್ಯನಿರ್ವಹಣೆ ಹೇಗೆ?
ಒಮ್ಮೆ ಈ ಫೀಚರ್ ಬಳಕೆಗೆ ಲಭ್ಯವಾದರೆ, ಹೀಗೆ ನಿಮಗೆ ಬರುವ ಮೆಸೇಜ್‌ಗಳ ಬಲಬದಿಯಲ್ಲಿ ಸರ್ಚ್ ಐಕಾನ್ ಕಾಣಿಸಿಕೊಳ್ಳುತ್ತದೆ. ಹೀಗೆ ಕಾಣಿಸಿಕೊಂಡರೆ ಈ ಮೆಸೇಜ್ ಪದೇಪದೆ ಫಾರ್ವರ್ಡ್ ಆಗುತ್ತಿದೆ ಎಂದರ್ಥ. ಆಗ ನೀವಿದರ ಸತ್ಯಾಸತ್ಯತೆ ತಿಳಿಯಲು ಇಚ್ಛಿಸಿದರೆ ಸರ್ಚ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಈ ಮೆಸೇಜ್ ಅನ್ನು ಗೂಗಲ್‌ನಲ್ಲಿ ಪರಿಶೀಲಿಸುತ್ತೀರೋ? ಅಥವಾ ಇಲ್ಲವೋ ಎಂದು ಕೇಳುತ್ತದೆ. ನಿಮ್ಮ ಆಯ್ಕೆ ಹೌದು ಎಂದು ಕ್ಲಿಕ್ ಮಾಡಿದರೆ ಗೂಗಲ್ ಸರ್ಚ್ ಎಂಜಿನ್‌ಗೆ ಹೋಗಿ ಆ ಸಂದೇಶದ ನಿಖರತೆಯನ್ನು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ: ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!

ಸುದ್ದಿ ನಿಖರತೆ 1 ಮಿಲಿಯನ್ ಡಾಲರ್
ಈಗಂತೂ ಕೊರೋನಾ ವಿಶ್ವವನ್ನು ಬಾಧಿಸುತ್ತಿದೆ. ಅದರ ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ತರಹೇವಾರಿ ಸುಳ್ಳು ಸುದ್ದಿಗಳು ಬಿತ್ತರವಾಗುತ್ತಲೇ ಇದ್ದು, ಜನರನ್ನು ಮತ್ತಷ್ಟು ಭಯಭೀತವನ್ನಾಗಿ ಮಾಡುತ್ತಿದೆ. ಇಂಥ ಸುದ್ದಿಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ವಾಟ್ಸ್‌ಆ್ಯಪ್ ಬರೋಬ್ಬರಿ 1 ಮಿಲಿಯನ್ ಡಾಲರ್ ಅನ್ನು ಮೀಸಲಿಟ್ಟಿದೆ. ಪಾಯಿಂಟರ್ ಇನ್‌ಸ್ಟಿಟ್ಯೂಟ್ಸ್ ಇಂಟರ್ ನ್ಯಾಷನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ (ಐಎಫ್ ಸಿಎನ್) ಇಂಥ ಮೆಸೇಜ್‌ಗಳ ಅಸಲಿಯತ್ತನ್ನು ಹೇಳಲಿದೆ. 

click me!