ವಾಟ್ಸಾಪ್‌ಗೆ 12 ಹರೆಯ, ನಿತ್ಯ ನೂರು ಕೋಟಿ ಕರೆಗಳ ನಿರ್ವಹಣೆ!

By Suvarna NewsFirst Published Feb 25, 2021, 3:46 PM IST
Highlights

ಭಾರಿ ಜನಪ್ರಿಯ ಮೆಸಿಜಿಂಗ್ ಆಪ್ ವಾಟ್ಸಾಪ್‌ 12 ವಸಂತಗಳನ್ನು ಪೂರೈಸಿದೆ. 2009ರ ಫೆಬ್ರವರಿಯಲ್ಲಿ ತನ್ನ ಪ್ರಯಾಣ ಆರಂಭಿಸಿದ ಇದೀಗ ಜಗತ್ತಿನ ಅಗ್ರಮಾನ್ಯ ಮೆಸೆಜಿಂಗ್ ಆಪ್ ಆಗಿ ಬದಲಾಗಿದೆ. ಹಲವು ದಾಖಲೆಗಳನ್ನು ತನ್ನ ಒಡಲೊಳಗೇ ಇಟ್ಟುಕೊಂಡಿರುವ ವಾಟ್ಸಾಪ್‌ ಬಳಕೆದಾರರಿಗೆ ಅನುಕೂಲವಾಗುವಂಥ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಪ್ರೈವೆಸಿ ಪಾಲಿಸಿಗೆ ಸಂಬಂಧಿಸಿದಂತೆ ತೀವ್ರ ಟೀಕೆಯನ್ನು ಎದುರಿಸುತ್ತಿರುವ ಜನಪ್ರಿಯ ಇನ್ಸ್‌ಟಂಟ್ ಮೆಸೆಜಿಂಗ್ ಆಪ್ ವಾಟ್ಸಾಪ್‌ ಮೂಲಕ ಆಗುವ ಕರೆಗಳ ಸಂಖ್ಯೆ ಎಷ್ಟಿರಬಹುದು? ಇದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಯಾಕೆಂದರೆ ಅಷ್ಟು ಪ್ರಮಾಣದಲ್ಲಿ ಕರೆಗಳನ್ನು ಮಾಡಲಾಗುತ್ತದೆ. ಅಂದರೆ, ನಿತ್ಯ ನೂರು ಕೋಟಿಗೂ ಅಧಿಕ ವಾಟ್ಸಾಪ್‌ ಕರೆಗಳನ್ನು ನಿರ್ವಹಣೆ ಮಾಡಲಾಗುತ್ತಿದೆಯಂತೆ!

ಈ ಮಾಹಿತಿಯನ್ನು ಸ್ವತಃ ವಾಟ್ಸಾಪ್ ಹೊರ ಹಾಕಿದೆ. 12 ವಸಂತಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್ ಒಡೆತನದ ವಾಟ್ಸಾಪ್ ಹಲವು ಇಂಟರೆಸ್ಟಿಂಗ್ ಸಂಗತಿಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದೆ.

ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಡೈರೆಕ್ಟ್ ಮೆಸೇಜ್! ಹೇಗೆ ಗೊತ್ತಾ..?

2009ರ  ಫೆಬ್ರವರಿಯಲ್ಲಿ ಬಳಕೆದಾರರಿಗೆ ಮುಕ್ತವಾದ ವಾಟ್ಸಾಪ್‌ಗೆ ಇದೀಗ 12ರ ಹರೆಯ. ಮೊದಲಿಗೆ ವಾಟ್ಸಾಪ್ ಬಳಕೆದಾರರ ನಡುವೆ ಸ್ಟೇಟಸ್‌ ಷೇರ್ ಮಾಡಲು ಅವಕಾಶ ಮಾಡಿಕೊಡುತ್ತಿತ್ತು. ಆ ಬಳಿಕ ಮೆಸೆಜಿಂಗ್ ಸಲೂಷನ್ ಆಗಿ ತನ್ನ ವಿನ್ಯಾಸವನ್ನು ಅಭಿವೃದ್ಧಿಪಡಿಸಿಕೊಂಡ ವಾಟ್ಸಾಪ್, ಸಾಂಪ್ರದಾಯಿಕ ವಾಯ್ಸ್ ಮ್ತತು ವಿಡಿಯೋ ಕರೆಗಳಿಗೆ ಪರ್ಯಾಯ ವೇದಿಕೆಯಾಗಿ ಜನಪ್ರಿಯವಾಯಿತು. ಈಗಂತೂ ವಾಟ್ಸಾಪ್ ಬ್ಯಾಂಕ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಾಟ್ಸಾಪ್ ಮೂಲಕವೇ ಜನರು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಲೂ ಬಹುದು. ಸ್ಟಿಕರ್‌ಗಳನ್ನು ಕೂಡ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಏತನ್ಮಧ್ಯೆ, ಪ್ರವೇಸಿ ಪಾಲಿಸಿ ಬಗ್ಗೆ ತೀವ್ರ ವಿರೋಧ ಎದುರಿಸುತ್ತಿರುವ ತನ್ನ ನೀತಿಯನ್ನು ಮೇ 15ರ ಬಳಿಕ ಜಾರಿ ಮಾಡಲು ಸಜ್ಜಾಗಿದೆ.

ಟ್ವಿಟರ್‌ನಲ್ಲಿ ಪೋಸ್ಟ್ ಹಾಕಿರುವ ವಾಟ್ಸಾಪ್ 12 ವರ್ಷಗಳನ್ನು ಪೂರ್ತಿಗೊಳಿಸಿರುವ ವಿಷಯವನ್ನು ತಿಳಿಸಿದೆ. ಈ ಹಿಂದೆಯೇ ಘೋಷಿಸಲಾದ ಅಂಕಿ-ಸಂಖ್ಯೆಗಳು ಬಗ್ಗೆ ಮಾಹಿತಿ ನೀಡಿದೆ. ಇದರಲ್ಲಿ ತಿಂಗಳಿಗೆ 200 ಕೋಟಿಗೂ ಅಧಿಕ ಸಕ್ರಿಯ ಬಳಕೆದಾರರು, 10 ಶತಕೋಟಿ ಮೆಸೆಜ್‌ಗಳು ವಿನಿಮಯಗೊಳ್ಳುವುದು ವಿವರವೂ ಸೇರಿದಂತೆ ನಿತ್ಯ ನೂರು ಕೋಟಿಗೂ ಅಧಿಕ ಕರೆಗಳನ್ನು ನಿರ್ವಹಣೆ ಮಾಡುವ ಮಾಹಿತಿಯನ್ನು ನೀಡಿದೆ.

ಪಾಸ್‌ಪೋರ್ಟ್‌ಗೆ ಅಗತ್ಯ ದಾಖಲೆ ನೀಡಲು ಡಿಜಿಲಾಕರ್ ಸಾಕು!

ವಾಟ್ಸಾಪ್‌ನ ಆರಂಭದಲ್ಲಿ ಆಡಿಯೋ ಆಗಲಿ ವಿಡಿಯೋ ಕಾಲಿಂಗ್ ಸೇವೆ ಇರಲಿಲ್ಲ. 2015  ಫೆಬ್ರವರಿಯಲ್ಲಿ ಕಂಪನಿ ಮೊದಲಿಗೆ ಆಡಿಯೋ ಕಾಲಿಂಗ್ ಸೌಲಭ್ಯ ಒದಗಿಸಿತು. ಬಳಿಕ 2016ರ ನವೆಂಬರ್‌ನಲ್ಲಿ ವಿಡಿಯೋ ಕಾಲಿಂಗ್ ಸೇವೆಯನ್ನು ಬಳಕೆದಾರರಿಗೆ ನೀಡಿತು. ಈ ಸೇವೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದ ವಾಟ್ಸಾಪ್, 2018ರ ಆಗಸ್ಟ್‌ನಲ್ಲಿ ಗ್ರೂಪ್ ಕಾಲಿಂಗ್ ಸೇವೆಯನ್ನು ಆರಂಭಿಸಿತು. ಆ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿತ್ತಲ್ಲದೇ, ಸಾಂಪ್ರದಾಯಿಕ ಸಂವಹನಕ್ಕೆ ಹೊಸ ಭಾಷ್ಯವನ್ನು ಬರೆಯಿತು ಎಂದು ಹೇಳಬಹುದು. ಕಾಲಿಂಗ್ ಸೇವೆ ಮಾತ್ರವಲ್ಲದೇ ವಾಟ್ಸಾಪ್ ಇದೀಗ ಪೇಮೆಂಟ್ಸ್ ಸೌಲಭ್ಯದ ಮೂಲಕವೂ ಸದ್ದು ಮಾಡುತ್ತಿದೆ. ಜೊತೆಗೆ ಸ್ಟಿಕರ್ ಷೇರಿಂಗ್ ಸೌಲಭ್ಯವೂ ಇದೆ.

ಯಾಹೂ ಉದ್ಯೋಗಿಗಳಾಗಿದ್ದ ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೌಮ್ ಅವರು 2009ರಲ್ಲಿ ವಾಟ್ಸಾಪ್ ಆಪ್ ಅಭಿವೃದ್ಧಿಪಡಿಸಿದರು. ಬಳಿಕ 2014ರಲ್ಲಿ ಫೇಸ್‌ಬುಕ್ ವಾಟ್ಸಾಪ್ ಅನ್ನು ಸ್ವಾಧೀನಪಡಿಸಿಕೊಂಡಿತು.

ಸರ್ಕಾರಿ ನಿರ್ಮಿತ ‘ಸಂದೇಶ್’ ಆಪ್ ಲಾಂಚ್, ಇದು ದೇಶಿ ವಾಟ್ಸಾಪ್!

ವಾಟ್ಸಾಪ್‌ 12 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲೇ ಬಳಕೆದಾರ ಖಾಸಗಿ ಮಾಹಿತಿಯ ರಕ್ಷಣೆಯ ಬದ್ಧತೆ ಹೊಂದಿರುವುದಾಗಿ ಹೇಳಿಕೊಂಡಿದೆ. ಇಷ್ಟಾಗಿಯೂ ವಾಟ್ಸಾಪ್ ಮಾಹಿತಿಯನ್ನು ಫೇಸ್‌ಬುಕ್‌ಗೂ ಬಳಸಿಕೊಳ್ಳುವ ಪ್ರವೇಸಿ ಪಾಲಸಿಯ ಬಗ್ಗೆ ಇನ್ನೂ ಕಂಪನಿ ಸ್ಪಷ್ಟವಾದ ನಿರ್ಧಾರವನ್ನು ಕೈಗೊಂಡಿಲ್ಲ. ಈ ನೀತಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇ 15ರವರೆಗೂ ಅದನ್ನು ಮುಂದೂಡಿದೆ. ಆದರೆ, ಆ ಗಡುವ ಮುಕ್ತಾಯಗೊಂಡ ಬಳಿಕ ಫೇಸ್‌ಬುಕ್ ಒಡೆತನದ ವಾಟ್ಸಾಪ್‌ನ ಮುಂದಿನ ನಡೆಯೇನು? ಒಂದೊಮ್ಮೆ ಗ್ರಾಹಕರು ಪ್ರವೇಸಿ ಪಾಲಿಸಿಗೆ ಒಪ್ಪಿಗೆ ನೀಡದಿದ್ದರೆ ಆಗವ ಪರಿಣಾಮಗಳೇನು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

click me!