Jul 14, 2021, 9:25 PM IST
ಮಂಗಳೂರು(ಜು. 14) ಹಳ್ಳಿ ಮೂಲೆಯಲ್ಲಿ ಅರಳಿ ನಿಂತ ಅಮೋಘ ಗಾರ್ಡನ್.. ಆಕರ್ಷಕವಾಗಿದೆ. ಅಬ್ಬಬ್ಬಾ, ಏನಿದು ಎಲ್ಲಿ ನೋಡಿದರೂ ಹಸಿರು. ಕಣ್ಮನ ಸೆಳೆಯುವ ಸೌಂದರ್ಯ. ಇದ್ಯಾವ ಗಾರ್ಡನ್ ಇರಬಹುದು ಎಂದು ಆಶ್ಚರ್ಯವಾಗುತ್ತಿದೆಯಾ? ಇದು ದಕ್ಷಿಣ ಕನ್ನಡದ ಹಳ್ಳಿಯ ಮೂಲೆಯೊಂದರಲ್ಲಿ ಕೃಷಿಕರೊಬ್ಬರ ಮನೆಯಂಗಳ. ಇದೀಗ ಪ್ರವಾಸಿಗರ, ಸೆಲ್ಫೀ ಪ್ರಿಯರನ್ನು ಆಕರ್ಷಿಸುತ್ತಿರುವ ಪ್ರೇಕ್ಷಣಿಯ ಸ್ಥಳವಾಗಿದೆ.
ಸುಳ್ಯದ ಕೃಷಿಕರೇ ರೂಪಿಸಿದ ಉದ್ಯಾನವನ
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಬೆಳ್ಳಾರೆಯ ಕೊಡಿಯಾಲ ಗ್ರಾಮದ ಕುರಿಯಾಜೆಯಲ್ಲಿ ಮನೆಯಂಗಳವೇ ಗಾರ್ಡನ್ ಆಗಿದೆ. ತಿರುಮಲೇಶ್ವರ ಭಟ್ ಅವರ ಅಂಗಳವೇ ಗಾರ್ಡನ್ ರೂಪ ಪಡೆದಿದೆ. ವಿವಿಧ ನಮೂನೆಯ ಆರ್ಕಿಡ್, ಅಂಥೋರಿಯಂ, ಕ್ಯಾಕ್ಟಸ್ ಹೀಗೆ ಹಲವು ಅಲಂಕಾರಿಕ ಗಿಡಗಳು ಇವರ ಅಂಗಳದಲ್ಲಿ ಕಂಗೊಳಿಸುತ್ತಿವೆ.
ಕೇರಳ, ಉತ್ತರ ಭಾರತ, ಮಲೇಷಿಯಾ, ಥೈಯ್ಲಾಂಡ್, ನೇಪಾಳಕ್ಕೆಲ್ಲಾ ಪ್ರವಾಸ ಹೋಗಿರುವ ಭಟ್ಟರು ಅಲ್ಲಿಂದಲೂ ಗಿಡ ತಂದಿದ್ದಾರೆ. ಇವರಲ್ಲಿ ಈಗ ಸುಮಾರು 250ಕ್ಕೂ ಅಧಿಕ ಕ್ಯಾಕ್ಟಸ್ ಗಿಡಗಳಿವೆ. ಹೀಗೆ ಸಂಗ್ರಹಿಸುತ್ತಾ ಇವರ ಅಂಗಳದ ಅಂದ ಹೆಚ್ಚಾಯಿತು. ಬಳಿಕ ಅದ್ಭುತ ಗಾರ್ಡನ್ ಸ್ವರೂಪ ಪಡೆಯಿತು. ಸುತ್ತಮುತ್ತಲಿನ ಜನರನ್ನು ಆಕರ್ಷಿಸುವಂತಾಗಿದೆ.