Jul 13, 2021, 5:00 PM IST
ಕಾರವಾರ (ಜು. 13): ಮಳೆಗಾಲದ ಎರಡು ತಿಂಗಳು ಆಳ ಸಮುದ್ರ ಮೀನುಗಾರಿಕೆಗೆ ನಿಷೇಧವಿರುವುದರಿಂದ ಫಿಶಿಂಗ್‌ಗೆ ಸಂಬಂಧಿಸಿ ಉಪ ಕಸುಬು ಮಾಡುವವರು ಉದ್ಯೋಗ ಇಲ್ಲದೇ ಊಟಕ್ಕೂ ಕಷ್ಟ ಪಡಬೇಕಾಗುತ್ತದೆ. ಮೀನುಗಾರರ ಈ ಸಂಕಷ್ಟ ತಪ್ಪಿಸಲು ಸರ್ಕಾರ "ಉಳಿತಾಯ ಮತ್ತು ಪರಿಹಾರ" ಯೋಜನೆಯನ್ನು ಬಹಳ ಹಿಂದೆಯೇ ಜಾರಿಗೆ ತಂದಿದೆ. "ನೀವು ಉಳಿತಾಯ ಮಾಡಿ, ನಾವು ಪರಿಹಾರ ನೀಡುತ್ತೇವೆ" ಎಂದು ಭರವಸೆ ನೀಡಿದ್ದ ಸರ್ಕಾರ ಇದೀಗ ತನ್ನ ಮಾತು ತಪ್ಪಿದೆ.
ಮೂರ್ನಾಲ್ಕು ತಿಂಗಳಿಂದ ಮೀನುಗಾರರಿಗಿಲ್ಲ ಸಬ್ಸಿಡಿ, ಇನ್ಮುಂದೆ ಕರರಹಿತ ಡಿಸೇಲ್
ಈ ಯೋಜನೆಯಲ್ಲಿ ಮೀನುಗಾರರು ವರ್ಷದ 8 ತಿಂಗಳು ತಲಾ 165 ರೂ. ಹಾಗೂ ಮತ್ತೊಂದು ತಿಂಗಳಲ್ಲಿ 180 ರೂ. ಸೇರಿ ಒಟ್ಟು 1500 ರೂ.ಗಳನ್ನು ತಮ್ಮ ಸಹಕಾರಿ ಸಂಘಕ್ಕೆ ಜಮಾ ಮಾಡುತ್ತಾರೆ. ಮೀನುಗಾರರು ಉಳಿತಾಯ ಮಾಡಿದ ಹಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 1500 ರೂ. ಸೇರಿಸಿ ಒಟ್ಟು 4500 ರೂ.ಗಳನ್ನು ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕು. ಆದರೆ, ಕಳೆದ ನಾಲ್ಕು ವರ್ಷದಿಂದ ಮೀನುಗಾರರಿಗೆ ಈ ಪರಿಹಾರದ ಮೊತ್ತ ದೊರೆಯದೆ ಮೀನುಗಾರರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಆದಷ್ಟು ಶೀಘ್ರದಲ್ಲಿ ಹಣ ಬಿಡುಗಡೆ ಮಾಡುವಂತೆ ಮೀನುಗಾರರು ಒತ್ತಾಯಿಸಿದ್ದಾರೆ.