Feb 18, 2022, 12:00 PM IST
ಕಾರವಾರ(ಫೆ.18): ದ್ವೀಪದಲ್ಲಿರುವ ಆ ದೇವಳದ ಜಾತ್ರೆಗೆ ತೆರಳುವುದು ಯಾವುದೇ ಸಾಹಸಕ್ಕಿಂತಲೂ ಕಡಿಮೆಯಿಲ್ಲ. ತುಂಬಿ ಹರಿಯುವ ನದಿಯನ್ನು ಬೋಟ್ ಮೂಲಕ ದಾಟಿ, ಹಚ್ಚ ಹಸಿರಿನ ಕಾನನದ ನಡುವೆ ಸಾಗಿದರೆ ಆ ಪುಣ್ಯಕ್ಷೇತ್ರದ ದರ್ಶನ ಪಡೆಯಲು ಸಾಧ್ಯ. ದ್ವೀಪದಲ್ಲಿರುವ ಆ ಕ್ಷೇತ್ರದ ಜಾತ್ರೆ ನೋಡಲು ಬರುವ ಸಾವಿರಾರು ಭಕ್ತಾಧಿಗಳು ಹೂವಿನ ಮಾಲೆ, ನಿಂಬೆ ಹಣ್ಣಿನ ಮಾಲೆ ಹಾಗೂ ವಿವಿಧ ರೀತಿಯ ಹರಕೆ ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಾಳಿ ಜಾತ್ರಾ ಮಹೋತ್ಸವದಲ್ಲಿ ಪ್ರತಿ ವರ್ಷ ಕಾಳಿ ನಡುಗಡ್ಡೆಯಲ್ಲಿ ಕಾಳಿ ದೇವಿಯ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿತ್ತಾದರೂ, ಕಳೆದ ವರ್ಷ ಮಾತ್ರ ಕೊರೋನಾ ಕಾರಣದಿಂದ ಸಂಭ್ರಮಕ್ಕೆ ಅಡ್ಡಿಯುಂಟಾಗಿತ್ತು. ಈ ಬಾರಿ ಮತ್ತೆ ಕೊರೋನಾ ವಕ್ಕರಿಸಿ ಕಣ್ಮರೆಯಾದ ಕಾರಣ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಕಾಳಿ ಮಾತೆಯ ದರ್ಶನ ಪಡೆದಿದ್ದಾರೆ. ಅಂದಹಾಗೆ, ಸುತ್ತಲೂ ನದಿಯಿಂದ ಆವೃತವಾಗಿರುವ ಈ ನಡುಗಡ್ಡೆಯಲ್ಲಿ ಕಾಳಿ ಮಾತೆ ನೆಲೆಸಿರುವುದರಿಂದ ನದಿಗೆ ಕಾಳಿ ನದಿ ಎನ್ನುವ ಹೆಸರು ಬಂದಿತು ಅನ್ನೋ ಪ್ರತೀತಿಯಿದೆ. ಕಾರವಾರ ತಾಲೂಕಿನ ಸುಂಕೇರಿಯಿಂದ 5ಕಿಲೋ ಮೀಟರ್ ದೂರದಲ್ಲಿರುವ ಈ ನಡುಗಡ್ಡೆಯಲ್ಲಿ ಪುಟ್ಟದಾಗಿದ್ದ ದೇವಸ್ಥಾನವನ್ನು ಕಳೆದ 11 ವರ್ಷದ ಹಿಂದೆ ದೊಡ್ಡ ದೇವಸ್ಥಾನವನ್ನಾಗಿ ನವೀಕರಣಗೊಳಿಸಲಾಯಿತು. ಪ್ರತಿ ವರ್ಷ ಪುಷ್ಯ ಮಾಸದಲ್ಲಿ ಮೂರು ದಿನಗಳ ಕಾಲ ಇಲ್ಲಿ ಅದ್ಧೂರಿಯಾಗಿ ಜಾತ್ರೆ ಮಾಡಲಾಗುತ್ತದೆ. ಇನ್ನು ಭಕ್ತರಿಗೆ ಬೋಟ್ ಮೂಲಕ ನಡುಗಡ್ಡೆಗೆ ಒಡಾಡುವ ವ್ಯವಸ್ಥೆಯನ್ನು ಮಾಡುವ ಹಿನ್ನೆಲೆಯಲ್ಲಿ ನಂದನಗದ್ದಾದಿಂದ ಭಕ್ತರು ದೋಣಿಯಲ್ಲಿ ಸಾಗುವ ಮೂಲಕ ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡು, ಕಾಳಿ ದೇವಿಯ ದರ್ಶನವನ್ನ ಪಡೆಯುತ್ತಾರೆ.
Chikkamagalur: ಕಾಡ್ಗಿಚ್ಚು ತಡೆಯಲು ಮಾಸ್ಟರ್ ಪ್ಲಾನ್: ಬೆಂಕಿ ತಡೆಯಲು ಡ್ರೋಣ್ ಕಣ್ಗಾವಲು..!
ಕಾರವಾರ ನಗರದ ನಂದನಗದ್ದಾ ಸಂತೋಷಿ ಮಾತ ದೇವಸ್ಥಾನದವರು ಕಾಳಿ ನಡುಗಡ್ಡೆಯಲ್ಲಿ ದೊಡ್ಡ ದೇವಸ್ಥಾನವೊಂದನ್ನ ಕಟ್ಟಿ ಈ ಜಾತ್ರಾ ಮಹೋತ್ಸವವನ್ನು ಪ್ರತಿವರ್ಷ ಆಚರಿಸುತ್ತಾ ಬರುತ್ತಿದ್ದಾರೆ. ಕಾಳಿ ನಡುಗಡ್ಡೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಕೇವಲ ಕಾರವಾರದಿಂದ ಮಾತ್ರವಲ್ಲದೇ, ನೆರೆಯ ಗೋವಾ ಮಹಾರಾಷ್ಟ್ರದಿಂದ ಕೂಡಾ ಭಕ್ತರು ಆಗಮಿಸುತ್ತಾರೆ. ನಡುಗಡ್ಡೆಗೆ ತೆರಳಿ ಜಾತ್ರೆಯಲ್ಲಿ ಪಾಲ್ಗೊಂಡ ನಂತರ ತಮ್ಮ ಸುತ್ತಲೂ ನದಿ ಇರೋ ಅನುಭವವೇ ಮರೆತು ಹೋದಂತಾಗುತ್ತದೆ ಅಂತಾರೆ ಭಕ್ತರು. ಇನ್ನು ಕಾಳಿ ನದಿ ಜೋಯಿಡಾ ತಾಲೂಕಿನ ಡಿಗ್ಗಿ ಅನ್ನೋ ಪ್ರದೇಶದಲ್ಲಿ ಹುಟ್ಟಿ ಅತೀ ಸಮೀಪದಲ್ಲೇ ಕಾರವಾರದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಈ ನದಿ ಹರಿಯುವ ಎರಡು ಬದಿಯಲ್ಲೂ ಪಶ್ಚಿಮ ಘಟ್ಟಗಳು ಇರುವುದರಿಂದ ನದಿಯ ಸುತ್ತಮುತ್ತಲಿನ ಪ್ರದೇಶ ಪ್ರವಾಸಿ ತಾಣದಂತೆಯೇ ಇರುತ್ತದೆ. ಅದರಂತೆ ಕಾಳಿ ಜಾತ್ರೆ ನಡೆಯುವ ನಡುಗಡ್ಡೆ ಕೂಡಾ ಸುಂದರ ಪರಿಸರವನ್ನ ಹೊಂದಿರುವುದರಿಂದ ಅರಣ್ಯ ಇಲಾಖೆ ಈ ಸ್ಥಳದಲ್ಲಿ ಕಾಳಿ ಮ್ಯಾಂಗ್ರೋವ್ಸ್ ಬೋರ್ಡ್ ವಾಕ್ ಕೂಡ ನಡೆಸಿದೆ.