Chikkamagalur: ಕಾಡ್ಗಿಚ್ಚು ತಡೆಯಲು ಮಾಸ್ಟರ್ ಪ್ಲಾನ್: ಬೆಂಕಿ ತಡೆಯಲು ಡ್ರೋಣ್ ಕಣ್ಗಾವಲು..!
* ಅರಣ್ಯ ರಕ್ಷಣೆಗೆ ಫೈರ್‌ಲೈನ್ ಯೋಜನೆ ಜೊತೆಗೆ ಡ್ರೋಣ್ ಕಣ್ಣು
* ಒಣಗಿರುವ ಗಿರಿ ಶ್ರೇಣಿ, ಅರಣ್ಯ ರಕ್ಷಣೆಗೆ ಮುಂದಾಗಿರುವ ಅರಣ್ಯ ಇಲಾಖೆ
* ಬೆಂಕಿಯಿಂದ ಕಾಡನ್ನ ರಕ್ಷಿಸಲು ನೂರಾರು ಕಿ.ಮೀ. ಫೈರ್ ಲೈನ್ ನಿರ್ಮಾಣ
ಚಿಕ್ಕಮಗಳೂರು(ಫೆ.18): ಅರಣ್ಯವನ್ನ ಯಾರೂ ಬೆಳೆಸೋದು ಬೇಡ. ಅದೇ ಬೆಳೆಯುತ್ತೆ. ಆದ್ರೆ, ರಕ್ಷಣೆ ಮಾಡೋದು ಮಾತ್ರ ಅನಿವಾರ್ಯ. ಅದ್ರಲ್ಲೂ ಈ ಬಾರಿ ಭಾರೀ ಮಳೆಯ ಮಧ್ಯೆಯೂ ಬಿಸಿಲಿನ ತಾಪ ವಿಶ್ವದ ಸೂಕ್ಷ್ಮ ಅರಣ್ಯಕ್ಕೂ ತಟ್ಟಿದೆ. ಹಾಗಾಗಿ, ಬೇಸಿಗೆಗೂ ಮುನ್ನವೇ ಬಿಸಿಲ ಬೇಗೆಯಿಂದ ಅರಣ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ. ಬೆಂಕಿಯಿಂದ ಕಾಡನ್ನ ರಕ್ಷಿಸಲು ನೂರಾರು ಕಿ.ಮೀ. ಫೈರ್ ಲೈನ್ ನಿರ್ಮಿಸಿದೆ. ಕಿಡಿಗೇಡಿಗಳಿಂದ ಬೀಳುವ ಬೆಂಕಿಯನ್ನು ತಡೆಯುಲು ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ.
ಹೌದು, ಪ್ರಪಂಚದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರೋ ಪಶ್ಚಿಮಘಟ್ಟಗಳ ಸೌಂದರ್ಯದ ಶಕ್ತಿಯೇ ಶೋಲಾ ಕಾಡುಗಳು. ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ಹರಿಸೋ ಸಾಮರ್ಥ್ಯವಿರೋ ಶೋಲಾ ಕಾಡುಗಳು ಕೂಡ ಈ ಬಾರಿ ಬಿಸಿಲ ಛಾಯೆಯಿಂದ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿವೆ. ತಾಪದ ತೀವ್ರತೆಯಿಂದ ಶೋಲಾ ಕಾಡುಗಳು ಸೇರಿದಂತೆ ಅಲ್ಲಲ್ಲೇ ಅರಣ್ಯ ಬೆಂಕಿಗಾಹುತಿಯಾಗ್ತಿದೆ. 2004ರಲ್ಲಿ ಮುತ್ತೋಡಿಯಲ್ಲಿ ಕಾಡ್ಗಿಚ್ಚಿನಿಂದಾದ ದುರಂತದಿಂದ ಎಚ್ಚೆತ್ತುಕೊಂಡಿರೋ ಇಲಾಖೆ ಬೆಂಕಿಯಿಂದ ಕಾಡನ್ನ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ತಿದೆ. ನೂರಾರು ಕಿ.ಮೀ. ಫೈರ್ ಲೈನ್ ನಿರ್ಮಿಸಿ, ಮುತ್ತೋಡಿ, ಹೆಬ್ಬೆ, ಲಕ್ಕವಳ್ಳಿ, ತಣಿಗೆಬೈಲು ಸೇರಿದಂತೆ ಕಾಫಿನಾಡಿನ ನಾಲ್ಕು ವಲಯಗಳಲ್ಲೂ ಆಂಟಿಪೋಚಿಂಗ್ ಹಾಗೂ 13 ಫೈರ್ ಡಿಟೆಕ್ಷನ್ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
Flag Row: ಈಶ್ವರಪ್ಪ ರಾಜೀನಾಮೆ ನೀಡೋವರೆಗೂ ಧರಣಿ ನಿಲ್ಲಲ್ಲ: ಕಾಂಗ್ರೆಸ್ ನಾಯಕರು
ಸರ್ಕಾರ ಕೂಡ ಜಿಲ್ಲೆಯ ನಾಲ್ಕು ವಲಯಗಳಿಗೂ ತಲಾ 9 ಲಕ್ಷ ಸೇರಿದಂತೆ ಒಟ್ಟು 36 ಲಕ್ಷ ಹಣ ಬಿಡುಗಡೆ ಮಾಡಿದೆ. ಅರಣ್ಯ ರಕ್ಷಣೆಗೆ ಬೇಕಾದ ವಾಹನ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ವಾಹನಗಳಲ್ಲಿ ಬೆಂಕಿ ಶಮನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನ ಶೇಖರಿಸಲಾಗಿದ್ದು, ಸಿಬ್ಬಂದಿಗಳು ಅರಣ್ಯದಾದ್ಯಂತ ಗಸ್ತು ತಿರುಗುತ್ತಿದ್ದಾರೆ. ಸಿಬ್ಬಂದಿಗಳಿಗೂ ಕೂಡ ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. ಅರಣ್ಯವಾಸಿಗಳಿಗೂ ಕಾಡಿನ ರಕ್ಷಣೆ ಬಗ್ಗೆ ತರಬೇತಿ ನೀಡಿ, ಜಾಗೃತಿ ಮೂಡಿಸೋ ಕೆಲಸ ಮಾಡ್ತಿದೆ. ಭಿತ್ತಿಪತ್ರ, ಕರಪತ್ರ, ಬೀದಿ ನಾಟಕಗಳ ಮೂಲಕವೂ ಅರಣ್ಯ ರಕ್ಷಣೆಯ ಬಗ್ಗೆ ಕಾಡಿನಮಕ್ಕಳಿಗೆ ಮಾಹಿತಿ ನೀಡ್ತಿದ್ದಾರೆ. ಫೈರ್ ಲೈನ್ ಯೋಜನೆ ಕಾಡುಪ್ರಾಣಿಗಳ ರಕ್ಷಣೆಗೂ ಸಹಕಾರಿಯಾಗಿದೆ. ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಫೈರ್ ಕ್ಯಾಂಪ್ ನಿರ್ಮಿಸಿ 24 ಗಂಟೆಗಳ ಕಾಲವೂ ಸಿಬ್ಬಂದಿಗಳನ್ನ ಅರಣ್ಯ ರಕ್ಷಣೆಗೆ ನೇಮಿಸಿದ್ದು ಈ ಭಾರೀ ಇಲಾಖೆ ಕಿಡಿಗೇಡಿಗಳಿಂದ ಬೀಳುವ ಬೆಂಕಿಯನ್ನು ಸೆರೆಹಿಡಿಯುಲು ಡ್ರೋಣ್ ಕ್ಯಾಮರಾವನ್ನು ಬಳಸುತ್ತಿದೆ. ಸೂಕ್ಷ್ಮ, ಅತೀ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಡ್ರೋಣ್ ಕ್ಯಾಮರಾವನ್ನು ಬಳಸಿ ಯಾರೇ ಅರಣ್ಯ ಬೆಂಕಿ ಇಟ್ಟರೆ ಅಂತಹ ದ್ರಶ್ಯವನ್ನು ಸೆರೆ ಹಿಡಿದು ಆರೋಪಿಗಳಿಗೆ ಸರಿಯಾದ ಶಿಕ್ಷೆ ನೀಡಲು ಇಲಾಖೆ ಮುಂದಾಗಿದೆ.