Jan 31, 2022, 11:43 AM IST
ಚಿಕ್ಕಮಗಳೂರು (ಜ. 31): ವೈದ್ಯಕೀಯ ಕಾಲೇಜ್ ಆಗುವ ಹಣೆಪಟ್ಟಿ ಹೊತ್ತಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ (Chikkamagalur) ದಾರುಣ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಮಹಿಳೆ ಮೃತಪಟ್ಟಿದ್ದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಕಾಲದಲ್ಲಿ ಚುಚ್ಚುಮದ್ದು (Injection) ದೊರೆಯದೆ ಮಹಿಳೆ ಮೃತಪಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಇಲಾಖೆಯ ವಿರುದ್ದ ಜನರು ಕಿಡಿಕಾರುತ್ತಿದ್ದಾರೆ.
ಹೀಗೆ ಆರೋಗ್ಯ ಇಲಾಖೆ ವಿರುದ್ದ ಸಾಮಾಜಿಕ ತಾಣದಲ್ಲಿ ಆಕ್ರೋಶದ ಕಿಡಿ ಹೊತ್ತಿರುವುದು ಕಾಫಿನಾಡು ಚಿಕ್ಕಮಗಳೂರಿನಲ್ಲಿ. ಹೌದು ಹಾವು ಕಚ್ಚಿದ ಮಹಿಳೆಗೆ ಸಕಾಲದಲ್ಲಿ ಚುಚ್ಚುಮದ್ದು ಸಿಗದೆ ಮತಪಟ್ಟಿರುವ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ . ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ ಸಾಲುಮರಹಳ್ಳಿಯ ನಿವಾಸಿ ಶ್ರೀಮತಿ ಶಾರದಮ್ಮ ಮನೆಯ ಹಿತ್ತಲಿನಲ್ಲಿ ಕೆಲಸ ಮಾಡುತ್ತಿರುವಾಗ ವಿಷನಾಗರ ಕಚ್ಚಿದೆ. ತಕ್ಷಣವೇ ಅವರನ್ನು ಮೂಡಿಗೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Chikkamagaluru Crime: ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್: ಕಾರು ಚಾಲಕ ನಿಗೂಢ ಆತ್ಮಹತ್ಯೆ
ಆದರೆ ಅಲ್ಲಿ ಹಾವಿನ ಕಡಿತಕ್ಕೆ ಚುಚ್ಚುಮದ್ದು ಸಿಕ್ಕಿಲ್ಲ. ತಕ್ಷಣ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯೂ ಚುಚ್ಚುಮದ್ದು ಸಿಕ್ಕಿಲ್ಲ , ಸರ್ಕಾರಿ ಆಸ್ಪತ್ರೆ ಮಾತ್ರವಲ್ಲದೆ 3 ಖಾಸಗಿ ಆಸ್ಪತ್ರೆಗಳಲ್ಲೂ ಹೋಗಿ ಚುಚ್ಚುಮದ್ದಿಗೆ ಹೆಣಗಾಡಿದ್ದಾರೆ .ಆದರೆ ಎಲ್ಲಿಯೂ ಸಿಕ್ಕಿಲ್ಲ. ಸುಮಾರು 3 ಗಂಟೆಗಳ ಜೀವನ್ಮರಣ ಹೋರಾಟ ನಡೆಸಿದ ಶಾರದಮ್ಮ ಇಹಲೋಕ ತ್ಯಜಿಸಿದ್ದಾರೆ.
ವೈದ್ಯಕೀಯ ಕಾಲೇಜು ಆಗುವ ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲೇ ಹಾವು ಕಡಿತಕ್ಕೆ ಚುಚ್ಚುಮದ್ದು ಇಲ್ಲದೆ ಇರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅಸಡ್ಡೆ , ಜಡ್ಡುಗಟ್ಟಿದ ವೈದ್ಯಕೀಯ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ . ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಘಟನೆಯ ತನಿಖೆ ನಡೆಸಿ, ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Chikkamagaluru: ಈ ಬಾರಿ ಇಲ್ಲ ವೈದ್ಯಕೀಯ ಕಾಲೇಜಿನ ಶೈಕ್ಷಣಿಕ ವರ್ಷ!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಈಗ ತಾನೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಗೆ ಬಂದಿದ್ದೇನೆ , ಪ್ರಕರಣವನ್ನು ಗಮನಿಸುತ್ತೇನೆ ಸೂಕ್ತ ತನಿಖೆಗೆ ಆದೇಶ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ, ಇನ್ನು ಡಿ ಎಚ್ ಓ ಉಮೇಶ್ ಪ್ರತಿಕ್ರಿಯೆ ನೀಡಿ ಜಿಲ್ಲಾಸ್ಪತ್ರೆ ಸೇರಿದಂತೆ ತಾಲ್ಲೂಕ್ ಆಸ್ಪತ್ರೆಗಳಲ್ಲಿ ಹಾವು ಕಡಿತದ ಚುಚ್ಚುಮದ್ದುಗಳು ಲಭ್ಯವಿದೆ. ಮೂಡಿಗೆರೆ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಹಾವು ಕಡಿತದ ಚುಚ್ಚುಮದ್ದುಗಳು ಅಲಭ್ಯತೆಯೂ ಅಥವಾ ವೈದ್ಯರ ನಿರ್ಲಕ್ಷವೂ ಗೊತ್ತಿಲ್ಲ ,ಆದ್ರೆ ಮುಗ್ಗ ಜೀವವೊಂದು ಕೊನೆಯುಸಿರೆಳೆದಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹಾವು ಕಡಿತದ ಎಎಸ್ ವಿ ಚುಚ್ಚುಮದ್ದು ಕಾಫಿ ನಾಡಿನಲ್ಲಿ ಇದ್ದಯೂ ಇಲ್ಲವೂ ಎನ್ನವುದರ ಬಗ್ಗೆಯೂ ಸತ್ಯಾಂಶ ಹೊರಬರಬೇಕಾಗಿದೆ.