ದಿಕ್ಕುಗಳ ವಿಶೇಷತೆಯೊಂದಿಗೆ ದಿಕ್ಪಾಲಕರ ಮಹತ್ವ

By Suvarna NewsFirst Published May 21, 2021, 6:47 PM IST
Highlights

ಸಾಮಾನ್ಯವಾಗಿ ಪ್ರಮುಖವಾದ ನಾಲ್ಕು ದಿಕ್ಕುಗಳ ಬಗ್ಗೆ ಅರಿವಿರುತ್ತದೆ. ಉಳಿದ ನಾಲ್ಕು ದಿಕ್ಕುಗಳ ಬಗ್ಗೆ ತಿಳಿದಿರುವುದು ಕಡಿಮೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಗೆ ಮಹತ್ವವಿರುವಂತೆ, ಉಳಿದಂತೆ ವಾಯುವ್ಯ, ಈಶಾನ್ಯ, ನೈಋತ್ಯ ಮತ್ತು ಆಗ್ನೇಯ ದಿಕ್ಕುಗಳಿಗೂ ಸಹ ವಿಶೇಷ ಮಹತ್ವವಿದೆ. ಅಷ್ಟೇ ಅಲ್ಲದೆ ಆಕಾಶ ಮತ್ತು ಪಾತಾಳವನ್ನು ಸಹ ದಿಕ್ಕುಗಳೆಂದು ತಿಳಿಯಬೇಕೆಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಆಯಾ ದಿಕ್ಕು ಮತ್ತು ದಿಕ್ಪಾಲಕರ ಬಗ್ಗೆ ತಿಳಿಸಿರುವ ವಿಶೇಷತೆಗಳ ಬಗ್ಗೆ ತಿಳಿಯೋಣ...

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹ, ನಕ್ಷತ್ರಗಳಂತೆ, ದಿಕ್ಕುಗಳಿಗೂ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರ ಧ್ಯಾನ ಮತ್ತು ಜಪ-ಅನುಷ್ಠಾನಗಳನ್ನು ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುವುದು ಶ್ರೇಷ್ಠವೆಂದು ಹೇಳಲಾಗುತ್ತದೆ. ಹಾಗೆಯೇ ಪ್ರತಿ ದಿಕ್ಕಿಗೂ ಆದರದ್ದೇ ಆದ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳ ಮಹತ್ವದ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಪ್ರತಿ ದಿಕ್ಕು ಮತ್ತು ಅವುಗಳ ದಿಕ್ಪಾಲಕರ ಬಗ್ಗೆ ತಿಳಿಯೋಣ...

ಈಶಾನ್ಯ
ಉತ್ತರ ಮತ್ತು ಪೂರ್ವ ದಿಕ್ಕಿನ ಮಧ್ಯದಲ್ಲಿ ಬರುವ ದಿಕ್ಕನ್ನು ಈಶಾನ್ಯ ಮೂಲೆ ಅಥವಾ ದಿಕ್ಕು ಎಂದು ಕರೆಯಲಾಗುತ್ತದೆ. ಈಶ್ವರನು ಈ ದಿಕ್ಕಿನ ದಿಕ್ಪಾಲಕ ಅಥವಾ ಅಧಿಪತಿ ದೇವರಾಗಿದ್ದಾನೆ. ಶಿವನನ್ನು ಈಶಾನ ಎಂದು ಸಹ ಕರೆಯಲಾಗುತ್ತದೆ. ಹಾಗೆಯೇ ಪ್ರತಿ ದಿಕ್ಕಿಗೂ ಪ್ರತ್ಯೇಕ ಸ್ವಾಮಿಗ್ರಹವಿರುತ್ತದೆ.  ಈಶಾನ್ಯ ದಿಕ್ಕಿಗೆ ಗುರುಗ್ರಹವು ಸ್ವಾಮಿಗ್ರಹವಾಗಿದೆ. ವಾಸ್ತು ಶಾಸ್ತ್ರದ ಅನುಸಾರ ಈಶಾನ್ಯ ದಿಕ್ಕಿನಲ್ಲಿ ಕಿಟಕಿ ಮತ್ತು ಬಾಗಿಲನ್ನು ನಿರ್ಮಿಸುವುದು ಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಈ ದಿಕ್ಕಿನಲ್ಲಿ ಹೆಚ್ಚು ಭಾರವಿರುವ ವಸ್ತುಗಳನ್ನು ಇಡಬಾರದೆಂದು ಹೇಳಲಾಗುತ್ತದೆ. ಈ ಜಾಗವನ್ನು ಸ್ವಚ್ಛ ಮತ್ತು ವಿಶಾಲವಾಗಿ ಇಟ್ಟುಕೊಂಡರೆ ಉತ್ತಮ. ಈ ದಿಕ್ಕಿನ ದೋಷ ಉಂಟಾದರೆ ಮನೆಯಲ್ಲಿ ಧನಹಾನಿ ಮತ್ತು ಇತರ ತೊಂದರೆಗಳು ಉಂಟಾಗುತ್ತವೆ.

ಇದನ್ನು ಓದಿ: ನಕಾರಾತ್ಮಕ ಶಕ್ತಿಯನ್ನು ಮೊದಲೇ ಗ್ರಹಿಸೋ ರಾಶಿಗಳಿವು, ನಿಮಗಿದ್ಯಾ ಈ ಪವರ್? 

ಪೂರ್ವ 
ಪೂರ್ವ ದಿಕ್ಕಿನ ಅಧಿಪತಿ ದೇವರ ಇಂದ್ರದೇವನಾಗಿದ್ದಾನೆ. ಸೂರ್ಯ ನಾರಾಯಣನು ಪೂರ್ವ ದಿಕ್ಕಿನ ಸ್ವಾಮಿ ಗ್ರಹವಾಗಿದ್ದಾನೆ. ಪೂರ್ವ ದಿಕ್ಕನ್ನು ಪಿತೃ ಸ್ಥಾನವೆಂದು ಸಹ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕಿನಲ್ಲಿ ಮೆಟ್ಟಿಲು ಮತ್ತು ಹಿರಿಯರ ಕೋಣೆಯನ್ನು ನಿರ್ಮಿಸಬಾರದೆಂದು ಹೇಳಲಾಗುತ್ತದೆ. ಈ ದಿಕ್ಕು ಆದಷ್ಟು ವಿಶಾಲವಾಗಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.

ವಾಯವ್ಯ 
ಉತ್ತರ ಮತ್ತು ಪಶ್ಚಿಮ ದಿಕ್ಕಿನ ಮಧ್ಯ ಸ್ಥಾನವನ್ನು ವಾಯವ್ಯ ಮೂಲೆ ಅಥವಾ ದಿಕ್ಕು ಎಂದು ಕರೆಯಲಾಗುತ್ತದೆ. ವಾಯು ದೇವನು ಈ ದಿಕ್ಕಿನ ಅಧಿಪತಿ ದೇವನಾಗಿದ್ದಾನೆ. ಚಂದ್ರ ಗ್ರಹವು ಈ ದಿಕ್ಕಿನ ಸ್ವಾಮಿಗ್ರಹವಾಗಿದೆ. ಈ ದಿಕ್ಕಿನಲ್ಲಿ ಅತಿ ಭಾರವಾದ ವಸ್ತುಗಳನ್ನು ಇಡುವುದು ಉತ್ತಮವಲ್ಲ. ಈ ದಿಕ್ಕು ಮನೆಯ ಸದಸ್ಯರು, ನೆರೆ-ಹೊರೆಯವರು ಮತ್ತು ಸಂಬಂಧಿಗಳೊಂದಿನ ಬಾಂಧವ್ಯದ ದಿಕ್ಕು ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ದೋಷವಿದ್ದರೆ ಈ ಎಲ್ಲ ಸಂಬಂಧಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ.



ಪಶ್ಚಿಮ 
ಪಶ್ಚಿಮ ದಿಕ್ಕಿನ ಅಧಿಪತಿ ದೇವರು ವರುಣ ದೇವ ಮತ್ತು ಈ ದಿಕ್ಕಿನ ಸ್ವಾಮಿ ಗ್ರಹವು ಶನಿ ಗ್ರಹವಾಗಿದೆ. ಈ ದಿಕ್ಕಿನಲ್ಲಿರುವ ಕಿಟಕಿ ಬಾಗಿಲುಗಳನ್ನು ಆದಷ್ಟು ತೆರೆದಿಡುವುದು ಉತ್ತಮ. ಹೆಚ್ಚು ಭಾರವಾದ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡಲಾಗುತ್ತದೆ. ಪಶ್ಚಿಮ ದಿಕ್ಕಿನಲ್ಲೇನಾದರು ದೋಷವಿದ್ದರೆ ಅದು ಗೃಹಸ್ಥ ಜೀವನ ಮತ್ತು ವ್ಯಾಪಾರ-ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನು ಓದಿ: ಶನಿವಾರ ಈ ವಸ್ತು ಖರೀದಿಸಿದರೆ ಶನಿ ದೇವರಿಗೆ ಸಿಟ್ಟು ಬರುತ್ತೆ..! 

ಉತ್ತರ
ಉತ್ತರ ದಿಕ್ಕಿನ ಅಧಿಪತಿ ದೇವರು ಸಂಪತ್ತಿನ ಒಡೆಯ ಕುಬೇರ ದೇವ. ಬುಧ ಗ್ರಹವು ಈ ದಿಕ್ಕಿನ ಸ್ವಾಮಿ ಗ್ರಹವಾಗಿದೆ. ಧನ ಸಂಪತ್ತನ್ನು ನೀಡುವ ದಿಕ್ಕು ಇದಾಗಿದೆ. ಈ ದಿಕ್ಕಿನಲ್ಲಿ ದೋಷವಿದ್ದರೆ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಅನಾವಶ್ಯಕ ಖರ್ಚು ಹೆಚ್ಚುವುದಲ್ಲದೆ, ಹಣದ ಕೊರೆತೆ ಉಂಟಾಗುತ್ತದೆ.

ಆಗ್ನೇಯ 
ದಕ್ಷಿಣ ಮತ್ತು ಪೂರ್ವ ದಿಕ್ಕಿನ ನಡುವಿನಲ್ಲಿ ಬರುವ ದಿಕ್ಕು ಆಗ್ನೇಯ ಅಥವಾ ಇದನ್ನು ಆಗ್ನೇಯ ಮೂಲೆ ಎಂದು ಕರೆಯುತ್ತಾರೆ. ಅಗ್ನಿ ದೇವನು ಈ ದಿಕ್ಕಿನ ಅಧಿಪತಿ ದೇವನಾದರೆ, ಶುಕ್ರನು ಆಗ್ನೇಯ ದಿಕ್ಕಿನ ಸ್ವಾಮಿ ಗ್ರಹವಾಗಿದೆ. ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಅಡುಗೆ ಮನೆ ಇರುವುದು ಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಅಗ್ನಿಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳ ಕೆಲಸವನ್ನು ಈ ದಿಕ್ಕಿನಲ್ಲಿ ಮಾಡುವುದು ಒಳ್ಳೆಯದು. ಈ ದಿಕ್ಕಿನಲ್ಲಿ ದೋಷವಿದ್ದರೆ ಸ್ವಾಸ್ಥ್ಯ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ.

ದಕ್ಷಿಣ
ದಕ್ಷಿಣ ದಿಕ್ಕಿನ ಅಧಿಪತಿ ಯಮರಾಜ ಮತ್ತು ಇದರ ಸ್ವಾಮಿ ಗ್ರಹವು ಮಂಗಳ ಗ್ರಹವಾಗಿದೆ. ಈ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು, ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ. ಈ ದಿಕ್ಕಿನಲ್ಲಿ ಖಾಲಿ ಜಾಗವನ್ನು ಬಿಡುವುದು ಒಳ್ಳೆಯದಲ್ಲ. ವಸ್ತುಗಳಿಂದ ತುಂಬಿ ಇಡುವುದು ಉತ್ತಮ. ಮುಖ್ಯ ದ್ವಾರವು ದಕ್ಷಿಣ ದಿಕ್ಕಿಗೆ ಇರುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ.

ಇದನ್ನು ಓದಿ: ಈ ರಾಶಿ ನಿಮ್ಮದಾಗಿದ್ದರೆ ಸದಾ ಇರುತ್ತೆ ಸದಾಶಿವನ ಕೃಪೆ..! 

ನೈಋತ್ಯ 
ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ನಡುವಿನಲ್ಲಿ  ಬರುವ ದಿಕ್ಕನ್ನು ನೈಋತ್ಯ ಮೂಲೆ ಎಂದು ಕರೆಯಲಾಗುತ್ತದೆ. ಈ ದಿಕ್ಕಿನ ಅಧಿಪತಿ ದೇವರು ನೈಋತ್ಯ ದೇವರು, ಈ ದಿಕ್ಕಿನ ಸ್ವಾಮಿ ಗ್ರಹವು ರಾಹು ಮತ್ತು ಕೇತು ಗ್ರಹವಾಗಿದೆ. ಈ ದಿಕ್ಕಿನಲ್ಲಿ ನೀರನ್ನು ಇಡುವುದು ಉತ್ತಮ. ಈ ದಿಕ್ಕು ಎತ್ತರವಾಗಿರಬೇಕು ಮತ್ತು ಭಾರದ ವಸ್ತುಗಳನ್ನು ಇಡಬೇಕು.  

click me!