ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ ನನಗೆ ಪರಿಚಯವಾದ ರಾಧಾಕೃಷ್ಣ ಕಲ್ವಾರ್ ಎಂಬ ಸಜ್ಜನ ಕಲಾವಿದ ಇಂದೂ ನನ್ನ ಒಡನಾಡಿಯಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಯಕ್ಷಗಾನ ಎಂಬ ಕೊಂಡಿ.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಮಂಗಳೂರು
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಭ್ಯಾಸ ಮಾಡುತ್ತಿದ್ದ ದಿನಗಳಲ್ಲಿ ನನಗೆ ಪರಿಚಯವಾದ ರಾಧಾಕೃಷ್ಣ ಕಲ್ವಾರ್ ಎಂಬ ಸಜ್ಜನ ಕಲಾವಿದ ಇಂದೂ ನನ್ನ ಒಡನಾಡಿಯಾಗಿದ್ದರೆ ಅದಕ್ಕೆ ಮುಖ್ಯ ಕಾರಣ ಯಕ್ಷಗಾನ ಎಂಬ ಕೊಂಡಿ. ನಾನು ಅರ್ಥಶಾಸ್ತ್ರ ವಿಭಾಗದ ಮೊದಲ ವರ್ಷದಲ್ಲಿರುವಾಗ ಕಲ್ಚಾರ್ ಕನ್ನಡ ವಿಭಾಗದ ಎರಡನೇ ವರ್ಷದ ವಿದ್ಯಾರ್ಥಿ. ಆ ವರ್ಷ ನಾವೆಲ್ಲಾ ಸೇರಿ ಆಡಿದ ಯಕ್ಷಗಾನ ‘ಗದಾಯುದ್ಧ’ದಲ್ಲಿ ಕಲ್ಚಾರ್ ಕೌರವನಾದರೆ, ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿದ್ದ ಡಾ. ಪುರುಷೋತ್ತಮ ಬಿಳಿಮಲೆ ಭೀಮ. ತೆಂಕುತಿಟ್ಟಿನ ಪರಿಚಯವೇ ಇಲ್ಲದ ಅಲ್ಪ ಸ್ವಲ್ಪ ಬಡಗಿನ ಅರಿವಿದ್ದ ನನ್ನನ್ನು, ‘ಶ್ರೀಕೃಷ್ಣ ವೇಷ ಮಾಡು’ ಎಂದಿದ್ದರಿಂದ ಉಮೇದಿನಲ್ಲೇ ಮಾಡಿದ್ದೆ. ಆಟ ಚೆನ್ನಾಗಿಯೇ ಆಯ್ತು. ನನ್ನ ವೇಷ ಹೇಗಾಗಿತ್ತೆಂದು ನೋಡಿದವರೇ ಹೇಳಬೇಕು. ಆದರೆ, ಆಟದ ನಂತರ ಡಾ. ಬಿಳಿಮಲೆ ಕ್ಯಾಂಪಸ್ಸಿನಲ್ಲಿ ಸಿಕ್ಕಿದಾಗೆಲ್ಲಾ ನನ್ನನ್ನು ‘ಕೃಷ್ಣ’ನೆಂದೇ ಕರೆಯುತ್ತಿದ್ದುದು.
undefined
ಮೂರು ದಶಕಗಳ ಹಿಂದಿನ ಈ ಘಟನೆ ಇವತ್ತು ನೆನಪಿಗೆ ಬರಲು ಕಾರಣ ಇತ್ತೀಚೆಗೆ ಪ್ರಕಟಗೊಂಡ ರಾಧಾಕೃಷ್ಣ ಕಲ್ಚಾರರ ‘ಉಲಿಯ- ಉಯ್ಯಾಲೆ’ ತಾಳಮದ್ದಲೆ ಎಂಬ ಮೋಹಕ ಲೋಕ ಎಂಬ ನೆನಪಿನ ದೋಣಿಯಂತಹ ಕೃತಿ.
ಕಲ್ಚಾರರ ಅರ್ಥ ಕೇಳಿದಾಗಲೆಲ್ಲ ನನಗೊಂದು ಪಶ್ಚಾತ್ತಾಪದ ಭಾವ ಈಗಲೂ ಆವರಿಸಿಕೊಳ್ಳುತ್ತದೆ. ಅದರ ಕುರಿತು ಕೆಲವು ಸಲ ಅವರೊಂದಿಗೆ ಚರ್ಚಿಸಿದ್ದಿದೆ. ಪ್ರಯತ್ನ ಶೀಲನಾಗಿದ್ದರೆ ಕಲ್ಚಾರರಂತಾಗದಿದ್ದರೂ ಸಣ್ಣ ಮಟ್ಟದಲ್ಲಿ ನಾನೊಬ್ಬ ಯಕ್ಷಗಾನ ಅರ್ಥಧಾರಿಯಾಗಿ ರೂಪುಗೊಳ್ಳಬಹುದಿತ್ತೆಂದು ನಾನಂದುಕೊಳ್ಳುತ್ತೇನೆ. ‘ಬದುಕು ಜಟಕಾಬಂಡಿ ವಿಧಿಯದರ ಸಾಹೇಬ’ ಎಂಬ ಡಿ.ವಿ. ಗುಂಡಪ್ಪನವರ ಕಗ್ಗದ ಮಾತಿನಂತೆ ಸಾಹೇಬ ನಿರ್ಣಯಿಸಿದತ್ತ ನಮ್ಮ ಬದುಕು ಸಾಗತಕ್ಕದ್ದು; ಸಾಗುತ್ತದೆ. ನಮ್ಮಲ್ಲಿ ತುಂಬಾ ಜನ ಶೇಣಿ, ಸಾಮಗ, ಕುಂಬ್ಳೆ, ಜೋಶಿಯಂಥವರ ಅರ್ಥವನ್ನು ಕೇಳಿದಾಗ ಈ ತಲೆಮಾರಿನ ಜಬ್ಬಾರರೋ, ರಂಗಭಟ್ಟರೋ, ಸಂಕದ ಗುಂಡಿಯವರೋ, ಸುಣ್ಣಂಬಳರೋ ಮಾತನಾಡುವಾಗ(ಅರ್ಥ) ಅವರ ಅಸ್ಖಲಿತ ವಾಗ್ಝರಿಯಿಂದ ಆಶ್ಚರ್ಯಗೊಳ್ಳುತ್ತಾರೆ. ಹೊಸಬರು ಕೇಳಿದರೆ ಅದು ಸಿದ್ಧಪ್ರತಿ ಅಂತ ಅಂದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಎದುರಿನ ಅರ್ಥಧಾರಿ ಯಾವ ವಿಷಯ ಪ್ರಸ್ತಾಪಿಸಿದರೂ, ಯಾವ ಪ್ರಶ್ನೆ ಕೇಳಿದರೂ ನಿರರ್ಗಳವಾಗಿ ಮಾತನಾಡುವ, ಉತ್ತರಿಸುವ, ವಾದಿಸುವ ನಮ್ಮ ಯಕ್ಷಗಾನದ ಅರ್ಥಧಾರಿಗಳ ಮಾತು ಎಂಥವರಿಗೂ ಆನಂದ ನೀಡುತ್ತದೆ. ಇಂತಿಪ್ಪ ಯಕ್ಷಗಾನ ತಾಳಮದ್ದಲೆ ಕ್ಷೇತ್ರದಲ್ಲಿ ನಮ್ಮ ತಲೆಮಾರಿನ ಒಬ್ಬ ಯಶಸ್ವೀ ಯಕ್ಷಗಾನ ಅರ್ಥಧಾರಿ, ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಕಲಾವಿದ, ಪತ್ರಕರ್ತ, ಬರಹಗಾರರಾಗಿ ಜನಮನ್ನಣೆ ಗಳಿಸಿದ ಮಿತ್ರ ರಾಧಾಕೃಷ್ಣ ಕಲ್ಚಾರರ ತೀರ ಇತ್ತೀಚಿನ ಪುಸ್ತಕ ತಾಳಮದ್ದಲೆಯೆಂಬ ಮೋಹಕ ಲೋಕ. ಪುಸ್ತಕದ ಹೆಸರೇ ಹೇಳುವಂತೆ ನಿಜವಾದ ಅರ್ಥದಲ್ಲಿ ತಾಳಮದ್ದಲೆಯೆಂಬ ಕಲೆ ಎಲ್ಲರನ್ನೂ ತನ್ನತ್ತ ಸೆಳೆಯುವ ಮೋಹಕ ಕಲೆ. 30 ಅಧ್ಯಾಯಗಳಲ್ಲಿ ಸುಲಲಿತವಾಗಿ ಸಾಗುವ ಪುಸ್ತಕ ಅಲ್ಲಲ್ಲಿ ಕಲ್ಚಾರರು ಬದುಕಿನಲ್ಲಿ ಬೆಳೆದು ಬಂದ ಬಗೆಯನ್ನು ಚಿತ್ರಿಸಿದ ರೀತಿ ಭಾಗಶಃ ಆತ್ಮಕಥೆಯಂತಿದೆ. ಅದರೊಂದಿಗೆ ಅತ್ಯಂತ ವಿಮರ್ಶಾತ್ಮಕವಾಗಿ ‘ತಾಳಮದ್ದಲೆ’ಯೆಂಬ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತಗೊಂಡಂತಿರುವ ಅತ್ಯದ್ಭುತ, ಅಸದೃಶ ಕಲೆಯು ಈ ಭಾಗದಲ್ಲಿ ಬೆಳೆದು ಬಂದ ದಾರಿ, ಅನುಭವಿಸಿದ ಏರಿಳಿತ, ಅದರಲ್ಲಿನ ಸತ್ಯ, ಅಲ್ಲಿಯ ಚಿಲ್ಲರೆ ರಾಜಕೀಯ, ಕಲಾವಿದರ ಮೇಲೆ ಕೆಲವರ ಸಣ್ಣತನ ಮುಂತಾದ ವಿಷಯಗಳ ಕುರಿತು ಉದ್ವೇಗ ರಹಿತ ಚಿತ್ರಣವನ್ನು ನೀಡುತ್ತದೆ.
ಬಾಳಲ್ಲಿ ಜೈಸಬೇಕಾ? ಹಾಗಿದ್ರೆ ಪೂಲ್‌ನಲ್ಲಿ ಈಸಬೇಕು!ಕವಿ ಮಹಾಲಿಂಗ ರಂಗನ ಉಪಮೆಯಂತೆ ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ ಲಲಿತವಹ ಕಲ್ಚಾರರ ಯಕ್ಷಗಾನ ಅರ್ಥದ ಶೈಲಿಯಂತೆ ಪುಸ್ತಕ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ ಎಂಬುದಕ್ಕೆ ಸಾಕ್ಷಿ ನಾನು ಒಂದೇ ದಿನದಲ್ಲಿ ಪುಸ್ತಕವನ್ನು ಓದಿ ಮುಗಿಸಿದ್ದು.
ಇಂದಿನ ತಲೆಮಾರಿನ ಮಕ್ಕಳು ತಮ್ಮ ವೃತ್ತಿಯೊಂದಿಗೆ ಬೆಳೆಸಿಕೊಳ್ಳಬಹುದಾದ, ಪ್ರವೃತ್ತಿಗಳಲ್ಲಿ ಅತ್ಯಂತ ಮನ್ನಣೆಯುಳ್ಳ ಕಲೆ ತಾಳಮದ್ದಲೆ. ತಾಳಮದ್ದಲೆಯ ಅರ್ಥಧಾರಿಯೊಬ್ಬ ರಾತ್ರಿ ಬೆಳಗಾಗುವುದರೊಳಗಾಗಿ ತಯಾರಾಗುವುದಿಲ್ಲ. ಅದಕ್ಕೆ ಆಸಕ್ತಿಯೊಂದಿಗೆ ಉತ್ತಮ ತಳಪಾಯ, ಸತತ ಪ್ರಯತ್ನ, ಹಿರಿಯರನ್ನು ಅನುಸರಿಸಿ ನಡೆಯುವ ಬುದ್ಧಿ, ತನ್ನಲ್ಲಿರುವ ಅಪಸವ್ಯಗಳನ್ನು ನಿವಾರಿಸಿಕೊಂಡು ಮುನ್ನಡೆಯುವ ಛಾತಿ ಮುಂತಾದ ಗುಣಗಳ ಅಗತ್ಯವಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಹುಟ್ಟಿಬಂದ ರಾಧಾಕೃಷ್ಣ ಕಲ್ಚಾರರು ತನ್ನ ಹಳ್ಳಿ, ತನ್ನ ಬಂಧುಗಳು, ತನ್ನ ಪರಿಸರ, ಕುಟುಂಬ, ತನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಉಂಟು ಮಾಡಿದ ಪರಿಣಾಮಗಳನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿರ್ಲಿಪ್ತ ಊರಿನ ಅಚ್ಚರಿಯ ಮನುಷ್ಯ, ನಾಗೇಶ ಹೆಗಡೆ ಕುರಿತು ಹೀಗೊಂದು ನುಡಿನಮನಶೇಣಿ, ಸಾಮಗ, ಜೋಶಿಯಂತಹ ಘಟಾನುಘಟಿಗಳನ್ನು ಆಶ್ಚರ್ಯಚಕಿತನಾಗಿ ನೋಡುತ್ತಿದ್ದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿಬೆಳೆದ ಬಾಲಕನೊಬ್ಬ ಕಾಲಾಂತರದಲ್ಲಿ ಅವರೊಂದಿಗೆ ಕುಳಿತು ಸರಿಸಮವಾಗಿ ಅರ್ಥ ಹೇಳಿ ಸೈ ಅನಿಸಿಕೊಂಡಂತಹ ಚಿತ್ರಣ ಪುಸ್ತಕದಲ್ಲಿ ಸಿಗುತ್ತದೆ. ತಾಳಮದ್ದಲೆಯ ಸ್ಥಿತ್ಯಂತರದ ಸಮಯದಲ್ಲಿ ಹೊಸಗಾಳಿಯಂತೆ ಪ್ರವೇಶಿಸಿ ತಾಳಮದ್ದಲೆಗೆ ಹೊಸ ಪ್ರೇಕ್ಷಕರನ್ನು ಸೃಜಿಸಿದ ಜಬ್ಬಾರ್ ಸಮೋ ಎಂಬ ಆತ್ಮೀಯ ಗೆಳೆಯನ ಬಗ್ಗೆ ಬರೆವ ಕಲ್ಚಾರ್ ತಮ್ಮಿಬ್ಬರ ಗೆಳೆತನದ ಕುರಿತೂ ಪ್ರಸ್ತಾಪಿಸುತ್ತಾರೆ .
ಯಕ್ಷಪ್ರಿಯರಿಗೆ ಕಲ್ಚಾರರ ಕಲಾ ಬದುಕು, ಯಕ್ಷಗಾನ ತಾಳಮದ್ದಲೆಯ ಸಂಕ್ಷಿಪ್ತ ಇತಿಹಾಸದ ಚಿತ್ರಣ ನೀಡುವ ಪುಸ್ತಕ ಹೊರಗಿನವರಿಗೆ ಯಕ್ಷ ಕಲೆಯ ಪರಿಚಯ ಮಾಡಿಸುವಂತಿದೆ. ಎಲ್ಲಾ 30 ಅಧ್ಯಾಯಗಳು ಆಸಕ್ತಿಯಿಂದಲೇ ಓದಿಸಿಕೊಂಡು ಹೋಗುತ್ತವೆ. ಆದರೆ, ‘ಮನ್ನಿಸೆನ್ನಪರಾಧವ’ ಎಂಬ ಕೊನೆಯ ಅಧ್ಯಾಯ ಬರಹಗಾರನೊಬ್ಬನ ಪ್ರಾಮಾಣಿಕತೆಯನ್ನು ನಮ್ಮೆದುರು ತೆರೆದಿಡುತ್ತದೆ. ತಪ್ಪು ಮಾಡುವ ಪ್ರತಿಯೊಬ್ಬನಿಗೂ ಆ ತಪ್ಪು ಮಾಡಲು ಒಂದು ಕಾರಣವಿರುತ್ತದೆ. ಅದಕ್ಕೆ ಪ್ರತಿಯೊಬ್ಬರೂ ಕೊನೆಯವರೆಗೂ ತಮ್ಮ ತಪ್ಪುಗಳಿಗೆ ಸ್ಪಷ್ಟಿಕರಣ ಕೊಡುತ್ತಲೇ ಇರುತ್ತಾರೆ. ಆದರೆ, ತನ್ನ ಕಲಾ ಬದುಕಿನಲ್ಲಿ ತನ್ನಿಂದ ಅನಿವಾರ್ಯವಾಗಿಯೋ, ಇನ್ಯಾವ ಕಾರಣಕ್ಕಾಗಿಯೋ ಇನ್ನೊಬ್ಬರಿಗಾದ ಅವಮಾನ ಅಥವಾ ತನ್ನ ವರ್ತನೆಗೆ ಲೇಖಕ ಮರುಗುವುದು ಬದುಕಿನಲ್ಲಿ ಪ್ರತಿಯೊಬ್ಬರ ಕಣ್ಣು ತೆರೆಸುವ ಕೆಲಸ ಎಂದೆನಿಸುತ್ತದೆ. ಒಟ್ಟಿನಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯಬೇಕು ಎಂಬ ಆಸೆಯಿದ್ದರೆ ಎಳೆಯ ಪ್ರಾಯದಲ್ಲೇ ಈ ಪುಸ್ತಕವನ್ನು ಓದಿದವನೊಬ್ಬ ಖಂಡಿತಾ ಪ್ರಭಾವಿತನಾಗುತ್ತಾನೆ. ಅಂತಹ ಸಾವಿರಾರು ಪ್ರತಿಭೆಗಳಿಗೆ ಈ ಪುಸ್ತಕ ದಾರಿ ದೀವಿಗೆಯಾಗಲಿ ಎಂಬುದು ನನ್ನ ಹಾರೈಕೆ.