ರೇಣುಕಾಸ್ವಾಮಿ ಕೊಲೆ ಕೇಸ್‌ನ ಪ್ರಕರಣ ಸಿನಿಮಾ ಆಗುವ ಮುನ್ನವೇ ಧಾರವಾಹಿಯ ಎಪಿಸೋಡ್ ಆಗಿ ಹೊರಬರಲು ರೆಡಿಯಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಶಾಂತಂ ಪಾಪಂ ಎಪಿಸೋಡ್‌ನಲ್ಲಿ ಈ ವಾರ ರೇಣುಕಾಸ್ವಾಮಿ ಮರ್ಡರ್ ಕೇಸ್ ಹೋಲುವ ಕಥೆ ಪ್ರಸಾರವಾಗಲಿದೆ.
ಬೆಂಗಳೂರು (ಜೂ.28): ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ನಟ ದರ್ಶನ್ ಇಂದು ಪರಪ್ಪನ ಅಗ್ರಹಾರ ಸೇರಿಕೊಂಡಿದ್ದಾರೆ. ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರ ಪಾತ್ರವೇ ಮಹತ್ವದ್ದಾಗಿದೆ ಎನ್ನುವ ಸುಳಿವು ಹಾಗೂ ಸಾಕ್ಷ್ಯಗಳು ಸಿಗುತ್ತಿರುವ ನಡುವೆ ದರ್ಶನ್ ಫ್ಯಾನ್ಸ್‌ಗಳು ಮಾತ್ರ ನಮ್ಮ ಹೀರೋ ತಪ್ಪೇ ಮಾಡಿಲ್ಲ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೀಡಲಾಗಿರುವ ಖೈದಿ ನಂಬರ್‌ಗಳನ್ನು ತಮ್ಮ ಕಾರು, ಬೈಕ್, ಆಟೋಗಳ ಮೇಲೆ ಪ್ರಿಂಟ್ ಮಾಡಿಕೊಂಡು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದೆಡೆ ಸ್ಯಾಂಡಲ್‌ವುಡ್‌ನ ನಟ-ನಟಿಯರು ಈ ಕೇಸ್‌ನಲ್ಲಿ ಆರಂಭದಲ್ಲಿ ಸುಮ್ಮನಾಗಿದ್ದರೂ, ದಿನಗಳು ಕಳೆದ ಹಾಗೆ ಕೇಸ್‌ನ ಬಗ್ಗೆ ಮುಕ್ತವಾಗಿ ಮಾತನಾಡಲು ಆರಂಭಿಸಿದ್ದಾರೆ. ದರ್ಶನ್ ಜೊತೆ ನಟಿಸಿದ ಕೆಲವು ತಾರೆಯರು ಅವರ ಬೆಂಬಲಕ್ಕೆ ನಿಂತು ಮಾತನಾಡಿದ್ದರೆ. ದರ್ಶನ್ ಜತೆ ಕೆಲಸ ಮಾಡಿದ ಹೆಚ್ಚಿನ ನಿರ್ಮಾಪಕ ಹಾಗೂ ನಿರ್ದೇಶಕರು ಮಾತ್ರ ತಪ್ಪಿತಸ್ಥನಾದಲ್ಲಿ ದರ್ಶನ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದರ ನಡುವೆ ದರ್ಶನ್ ಅವರ ಕೊಲೆ ಕೇಸ್ ಪ್ರಕರಣವನ್ನು ಸಿನಿಮಾ ಮಾಡುವ ನಿಟ್ಟಿನಲ್ಲಿಯೂ ಪ್ರಯತ್ನ ಆರಂಭವಾಗಿದೆ.
ಈಗಾಗಲೇ ಡಿ ಗ್ಯಾಂಗ್, ಖೈದಿ ನಂ.6106 ಹೆಸರಲ್ಲಿ ಸಿನಿಮಾ ಟೈಟಲ್ ರಿಜಿಸ್ಟರ್ ಆಗಿದೆ. ಇದರ ನಡುವೆ ಕಿರುತೆರೆಯಲ್ಲಿ ದರ್ಶನ್ ಕೇಸ್‌ನ ಎಪಿಸೋಡ್ ಪ್ರಸಾರವಾಗುವ ಹಾದಿಯಲ್ಲಿದೆ. ಕಲರ್ಸ್ ಕನ್ನಡ ವಾಹಿನಿಯ ಪ್ರಖ್ಯಾತ ಶಾಂತಂ ಪಾಪಂನ ಹೊಸ ಸೀಸನ್ ಸೋಮವಾರಿಂದ ಶುಕ್ರವಾರ ಪ್ರತಿ ರಾತ್ರಿ 10.30ಕ್ಕೆ ಪ್ರಸಾರವಾಗುತ್ತಿದೆ. ಈ ದಿನದ ಎಪಿಸೋಡ್‌ನಲ್ಲಿ ದರ್ಶನ್ ಅವರ ಕೊಲೆ ಕೇಸ್ ಪ್ರಕರಣದ ಹೋಲುವ ಸ್ಟೋರಿಯನ್ನು ಪ್ರಸಾರ ಮಾಡಲಾಗುತ್ತಿದೆ. ಇದರ ಪ್ರೋಮೋವನ್ನು ಕಲರ್ಸ್ ಕನ್ನಡ ತನ್ನ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದೆ.
'ನಿನ್ನ ಟೈಮ್ ಚೆನ್ನಾಗಿದ್ದಾಗ್ಲೇ ನೀನು ತಗ್ಗಿ ಬಗ್ಗಿ ನಡೆದಿದ್ರೆ, ಇವರತ್ತು ತಲೆ ತಗ್ಸೋ ಪರಿಸ್ಥಿತಿ ಬರ್ತಾ ಇರ್ಲಿಲ್ಲ ಅಲ್ವಾ..' ಎಂದು ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಬಂಧನದಲ್ಲಿರುವ ನಾಯಕನಿಗೆ ಹೇಳುವುದರೊಂದಿಗೆ ಪ್ರೋಮೋ ಆರಂಭವಾಗುತ್ತದೆ. ಆ ನಂತರ, 'ವಾಸು ಹಾಗೂ ಅಕ್ಕ ಮೊದಲು ತುಂಬಾ ಚೆನ್ನಾಗಿದ್ರು, ಅವರ ಜೀವ್ನದಲ್ಲಿ ನಟಿ ಬಂದ್ಮೇಲೆನೇ ಹೀಗಾಗಿದ್ದು..' ಎಂದು ಸಹಾಯಕ ಹೇಳುವ ಮಾತು ಬರುತ್ತದೆ. ಇನ್ನು ಎರಡು ದಿನದಲ್ಲಿ ನೀನು ನನ್ನ ಕಣ್ಮುಂದೆ ಇರಲ್ಲ ಎಂದು ನಾಯಕನ ಪಾತ್ರಧಾರಿ ಎಣ್ಣೆ ಗ್ಲಾಸ್‌ಅನ್ನು ಕೈಯಲ್ಲಿ ಹಿಡಿದುಕೊಂಡು ಹೇಳುವ ಮಾತು ಬರುತ್ತದೆ. ಈ ಎಪಿಸೋಡ್‌ಗೆ ಡೇರ್ ಡೆವಿಲ್ ದೇವದಾಸ್ ಎಂದು ಹೆಸರಿಡಲಾಗಿದೆ.
4 ಗಂಟೆಗಳ ಹಿಂದೆ ಕಲರ್ಸ್ ಕನ್ನಡ ಪೋಸ್ಟ್ ಮಾಡಿದ ಪ್ರೋಮೋಗೆ ಸಾಕಷ್ಟು ಕಾಮೆಂಟ್‌ಗಳು ಕೂಡ ಬಂದಿವೆ. 'ಹಾಗೇನಾದರೂ ದರ್ಶನ್ ರಿಲೀಸ್ ಆದ್ರೆ, ಈ ಎಪಿಸೋಡ್‌ನ ಪ್ರೊಡ್ಯೂಸರ್‌ಅನ್ನು ಶೆಡ್‌ಗೆ ಕರೆಯೋ ಸಾಧ್ಯತೆ ಕಾಣ್ತಾ ಇದೆ..' ಎಂದು ತಮಾಷೆ ಮಾಡಿದ್ದಾರೆ. ಕಲರ್ಸ್ ಕನ್ನಡ ಸ್ವಲ್ಪವೂ ಹಿಂಜರಿಯದೇ ಈ ವಿಚಾರ ಪ್ರಸಾರ ಮಾಡೋಕೆ ಮುಂದಾಗಿದ್ದನ್ನು ಮೆಚ್ಚಲೇಬೇಕು ಎಂದು ಬರೆದುಕೊಂಡಿದ್ದಾರೆ.
ಇದು ಖಂಡಿತವಾಗಿಯೂ ದರ್ಶನ್ ಅವರ ಸ್ಟೋರಿ ಎಂದಿ ಇನ್ನೊಬ್ಬರು ಬರೆದಿದ್ದರೆ, ನಿಮ್ಮ ಧೈರ್ಯವನ್ನು ಮೆಚ್ಚಲೇಬೇಕು ಎಂದು ಮತ್ತೊಬ್ಬರು ಕಾಮೆಂಟ್ ಪೋಸ್ಟ್ ಮಾಡಿದ್ದಾರೆ.
ನೀವು ಜವಾಬ್ದಾರಿಯುತ ಚಾನೆಲ್ ಆಗಿ. ಯಾವುದೇ ಅಧಿಕೃತ ಹೇಳಿಕೆಗಳು ಇಲ್ಲದೆ, ನೀವು ಇಂಥ ಸ್ಟೋರಿಗಳನ್ನು ಪ್ರಸಾರ ಮಾಡಬಾರದು ಎಂದು ದರ್ಶನ್ ಅಭಿಮಾನಿಯೊಬ್ಬರು ಬರೆದಿದ್ದಾರೆ. ಇದು ಪವಿ ದರ್ಶನ್ ಸ್ಟೋರಿ ಅನ್ನೋದು ಖಂಡಿತಾ ಎಂದು ಮತ್ತೊಬ್ಬರು ಬರೆದಿದ್ದಾರೆ.
ರೇಣುಕಾಸ್ವಾಮಿಯನ್ನ ಹೀರೋ ಮಾಡ್ಬೇಡಿ, ದರ್ಶನ್ ಮೇಲಿನ ಗೌರವ ಕಡಿಮೆ ಆಗೋದಿಲ್ಲ ಎಂದ ವಿಜೆ ಹೇಮಲತಾ!
ಘಟನೆ ಏನು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನವಾಗಿತ್ತು. ಫೆಬ್ರವರಿಯಿಂದಲೂ ದರ್ಶನ್ ಅವರ ಪ್ರೇಯಸಿ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಈತನ ಅಕೌಂಟ್‌ಅನ್ನು ಬ್ಲಾಕ್ ಮಾಡಿದರೂ ಕೂಡ ಬೇರೆ ಬೇರೆ ಅಕೌಂಟ್‌ನಿಂದ ಪವಿತ್ರಾಗೆ ಮೆಸೇಜ್ ಮಾಡುತ್ತಿದ್ದ. ಟಾರ್ಚರ್ ತಾಳಲಾರದೆ ಪವಿತ್ರಾ ಗೌಡ ಈ ವಿಚಾರವನ್ನು ಮನೆಗೆಲಸದ ವ್ಯಕ್ತಿ ಪವನ್‌ಗೆ ತಿಳಿಸಿದ್ದಳು.ಇದು ದರ್ಶನ್‌ಗೂ ಗೊತ್ತಾಗಿದೆ. ಆ ನಂತರ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿದ ದರ್ಶನ್ ಪಟ್ಟಣಗೆರೆಯ ಶೆಡ್‌ನಲ್ಲಿ ಮನಬಂದಂತೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಅಲ್ಲಿಯೇ ಸಾವು ಕಂಡಿದ್ದಾನೆ. ಬಳಿಕ ಶವವನ್ನು ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಇನ್ನೊಂದು ಗ್ಯಾಂಗ್‌ಗೆ ಒಪ್ಪಿಸಲಾಗಿತ್ತು. ಅದಕ್ಕಾಗಿ 30 ಲಕ್ಷ ರೂಪಾಯಿಯನ್ನು ನೀಡಿದ್ದರು. ಈ ಹಣ ದರ್ಶನ್ ಅವರೇ ನೀಡಿದ್ದು ಎನ್ನಲಾಗುತ್ತಿದೆ.
ತರುಣ್ ಸುಧೀರ್-ಸೋನಲ್ ಪ್ರೀತಿಗೆ ಕಾರಣವಾಗಿದ್ದೇ ದರ್ಶನ್?
ಹಣ ಪಡೆದ ಇನ್ನೊಂದು ಗ್ಯಾಂಗ್ ಶವವನ್ನು ಸುಮ್ಮನಹಳ್ಳಿ ಸತ್ ಅನುಗ್ರಹ ಅಪಾರ್ಟ್‌ಮೆಂಟ್‌ನ ಬದಿಯಲ್ಲಿರುವ ರಾಜಾಕಾಲುವೆಯಲ್ಲಿ ಎಸೆದು ಹೋಗಿದ್ದಾರೆ. ಆ ಬಳಿಕ ತಾವೇ ಕೊಲೆ ಮಾಡಿದ್ದಾಗಿ ಪೊಲೀಸ್ ಠಾಣೆಗೆ ಬಂದು ಹೇಳಿದ್ದಲ್ಲದೆ, ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿದ್ದೇವೆ ಎಂದಿದ್ದರು. ಆದರೆ, ಪೊಲೀಸರ ವಿಚಾರಣೆಯ ವೇಳೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದರಿಂದ ಪೊಲೀಸರು ಮತ್ತಷ್ಟು ವಿಚಾರಣೆ ಮಾಡಿದ್ದಾರೆ. ಬಳಿಕ ಪ್ರಕರಣದಲ್ಲಿ ದರ್ಶನ್ ಪಾತ್ರವಿರೋದು ಬಯಲಾಗಿತ್ತು. ಈಗ ದರ್ಶನ್ ಜುಲೈ 4ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.