ವ್ಯಂಗ್ಯಚಿತ್ರಕಾರ ಕೆ ಆರ್ ಸ್ವಾಮಿ ವ್ಯಂಗ್ಯ ಕಂಗಳಿಂದ ನೋಡಿದ ನೆನಪಿನ ಚಿತ್ತಾರ ಇದು. ಚಿಗುರು ಚಿತ್ತಾರ ಹೆಸರಿನ ಅವರ ಪುಸ್ತಕ ಇಂದು ಬಿಡುಗಡೆ ಆಗುತ್ತಿದೆ. ಅಂಕಿತ ಪುಸ್ತಕ ಪ್ರಕಟಿಸಿರುವ ಅದರಿಂದ ಆಯ್ದ ಬರಹ ಇದು.
ಕೆ ಆರ್ ಸ್ವಾಮಿ
ಸುಮಾರು 1950-60ರ ದಶಕದ ಮಧ್ಯಭಾಗದಲ್ಲಿ ಒಂದು ದಿನ ನಾನು ಶಾಲೆಯಿಂದ ಹಿಂದಿರುಗುತ್ತಿದ್ದಾಗ ತೀರ್ಥಹಳ್ಳಿ ಪೇಟೆಯಲ್ಲಿ ಅನೇಕರು ಬುಕ್ಲಾಪುರದ ಗಣಪಾತ್ರಿಯ ಬಗ್ಗೆಯೇ ಮಾತಾಡುತ್ತಿದ್ದರು. ಆ ದಿನಗಳಲ್ಲಿ ಅಲ್ಲಿನ ಗ್ರಾಮದೇಗುಲ ನಂಬಿಕೆಯ ಸ್ಥಳ ಎಂದು ತುಂಬಾ ಪ್ರಖ್ಯಾತವಾಗಿತ್ತು. ಪ್ರತಿ ಮಂಗಳವಾರ ಸಂಜೆ ಅನೇಕ ಪವಾಡಗಳು ಅಲ್ಲಿ ನಡೆಯುತ್ತಿದ್ದವು. ಅಲ್ಲಿಗೆ ಭೇಟಿಯಿತ್ತ ಭಕ್ತರು ಕಾಯಿಲೆಯಿಂದ ಗುಣವಾಗುತ್ತಿದ್ದರು. ಉದ್ಯೋಗ ಖಾತ್ರಿಯಾಗುತ್ತಿತ್ತು. ಭಕ್ತರಿಗೆ ದೇವರನ್ನೇ ಕಾಣಿಸುತ್ತಿದ್ದರಂತೆ. ಹೀಗಾಗಿ ಈ ದೇವರ ಮಗ ಭಕ್ತರು ಹಾಗೂ ದೇವರ ಮಧ್ಯದ ಸಂಪರ್ಕ ಕೊಂಡಿಯಂತಾಗಿದ್ದ. ಭಕ್ತರೂ ಕೂಡಾ ಒಳ್ಳೆಯ ಸಂಪತ್ತಿನ ಕಾಣಿಕೆ ನೀಡುತ್ತಿದ್ದರು.
undefined
ಇಷ್ಟೇ ಆಗಿದ್ದರೆ ಅವನು ನೆಮ್ಮದಿಯಿಂದ ಇದ್ದು ಬಿಡಬಹುದಿತ್ತು. ಆದರೆ ಹಾಗಾಗಲಿಲ್ಲ. ಖ್ಯಾತಿಯ ಉತ್ತುಂಗಕ್ಕೇರಿದ್ದ ಅವನು ನಂಬಿಕೆಯನ್ನು ವೈಭವೀಕರಿಸುವ ಭರದಲ್ಲಿ ಮುಂದಿನ ಮುಂಗಳವಾರ ಸಂಜೆ ನಾನು ಒಂದು ಹುಲಿಯೊಂದಿಗೆ ದೇವರನ್ನು ಕರೆತರುತ್ತೇನೆ ಎಂದು ಘೋಷಿಸಿಬಿಟ್ಟಿದ್ದ. ಈ ಸುದ್ದಿ ಎಲ್ಲೆಡೆ ಹರಡಿಬಿಟ್ಟಿತ್ತು. ಜನರ ಕುತೂಹಲಕ್ಕೆ ಎಣೆಯುಂಟೇ?
ಅ ಮಂಗಳವಾರ ಬಂದೇ ಬಿಟ್ಟಿತು. ಪೇಟೆಯಿಂದ ಸುಮಾರು ನಾಲ್ಕೈದು ಮೈಲಿ ದೂರದಲ್ಲಿದ್ದ ಆ ದೇಗುಲದ ರಂಗಸ್ಥಳದಲ್ಲಿ ಸುಮಾರು 300-400 ಜನ ಪೇಟೆಯಿಂದ ಬಂದು ಜಮಾಯಿಸಿಬಿಟ್ಟಿದ್ದರು. ನಾನು ಮತ್ತು ನನ್ನ ಕೆಲವು ಸ್ನೇಹಿತರೂ ಕೂಡಾ ಆ ಗುಂಪಿನಲ್ಲಿ ಸೇರಿಕೊಂಡಿದ್ದೆವು.
ದೇವರ ಮಗನ ಆಗಮನಕ್ಕಾಗಿ ಈಗ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಕೆಂಪು ಪಟ್ಟೆಮಡಿಯುಟ್ಟ, ಕೆದರಿದ ಉದ್ದ ತಲೆಕೂದಲಿನ, ಹಣೆಗೆ ಕೆಂಪು ಕುಂಕುಮ ಹಚ್ಚಿಕೊಂಡು ಮೈತುಂಬಾ ಬೂದಿ, ಅರಶಿನ, ಕುಂಕುಮ ಬಳಿದುಕೊಂಡ ಪಾತ್ರಿಯು ಆವೇಶಭರಿತವಾಗಿ ಬರುತ್ತಾನೆ. ಯಾರೋ ಪರಿಚಾರಕರು ಚಾಮರದಿಂದ ಗಾಳಿ ಬೀಸುತ್ತಾರೆ. ಅಡಿಕೆಯ ಸಿಂಗಾರವನ್ನು ಹಣೆಗೆ ಒತ್ತಿಕೊಳ್ಳುತ್ತಾನೆ. ಹೂವಿನ ಹಾರ ಕುತ್ತಿಗೆಗೆ ಹಾಕಿಕೊಂಡು ಕತ್ತಿ ಝಳಪಿಸುತ್ತಾನೆ.
ಆಗ ದೇವರು ಅವನ ಮೈಮೇಲೆ ಬಂದಿರುತ್ತೆ. ಮಾತು, ಹಾಡುಗಳು ಶುರು ವಾಗುತ್ತವೆ. ಆಗ ಕೆಲವು ಭಕ್ತರು ಅವನ ಕಾಲಿಗೆ ಬಿದ್ದು ತಮ್ಮ ಇಷ್ಟಾರ್ಥಗಳನ್ನು ನಿವೇದಿಸಿ ಕೊಳ್ಳುತ್ತಾರೆ. ಸುದೀರ್ಘವಾದ ಪ್ರಶ್ನೋತ್ತರಗಳು ನಡೆಯುತ್ತವೆ. ಎಲ್ಲದಕ್ಕೂ ಪಾತ್ರಿ ತನ್ನದೇ ಆದ ರೀತಿಯಲ್ಲಿ ಪರಿಹಾರ ಹೇಳುತ್ತಾ ಹೋಗುತ್ತಾನೆ. ಅಲ್ಲಿಗೆ ಒಂದು ಅಂಕ ಮುಕ್ತಾಯವಾಗುತ್ತದೆ..
ಆ.06ರಂದು ಜಿ.ಎನ್ ರಂಗನಾಥ ರಾವ್ ಅವರ 'ಆ ಪತ್ರಿಕೋದ್ಯಮ' ಪುಸ್ತಕ ಬಿಡುಗಡೆ.
ಇನ್ನು ಎರಡನೇ ಅಂಕ. ನಾವೆಲ್ಲಾ ಕಾಯುತ್ತಿರುವುದು ಅದಕ್ಕಾಗಿಯೇ.
ನೀವೆಲ್ಲಾ ಇದೇ ಸ್ಥಳದಲ್ಲಿ ಕಾಯುತ್ತಾ ಇರಿ. ಇನ್ನು ಸ್ವಲ್ಪವೇ ಹೊತ್ತಿನಲ್ಲಿ ನಾನು ಹುಲಿಯೊಂದಿಗೆ ದೇವರನ್ನು ಕರೆತರುತ್ತೇನೆ ಎಂದು ಹೇಳಿ ಕತ್ತಿಯನ್ನು ಝಳಪಿಸುತ್ತಾ ದಾಪುಗಾಲು ಹಾಕುತ್ತಾ ಆ ಕತ್ತಲಲ್ಲಿ ಕಾಡಿನ ಕಡೆಗೆ ಹೊರಟುಬಿಟ್ಟ.
ಕಾಯುತ್ತಾ ಕುಳಿತೆವು. ಗಂಟೆ ಎಂಟಾಯ್ತು. ಒಂಭತ್ತಾಯ್ತು. ಹತ್ತಾಯ್ತು. ಕಾದು...ಕಾದು...ಸಾಕಾಯ್ತು.ಹುಲಿ ಬರಲಿಲ್ಲ. ಹುಲಿ ನೋಡುವ ಹಸಿವಿಗಿಂತ ಹೊಟ್ಟೆಹಸಿವು ಜಾಸ್ತಿಯಾಗತೊಡಗಿತು. ದೇವರನ್ನು ನಂಬದ ಕೆಲ ನಾಸ್ತಿಕರು ಈ ಸ್ಥಳಕ್ಕೆ ಬಂದಿರಬೇಕು ಅದಕ್ಕೇ ದೇವರು ಇಲ್ಲಿಗೆ ಬಂದಿಲ್ಲ ಎಂದು ಕೆಲವು ಆಸ್ತಿಕ ಭಕ್ತರು ಗೊಣಗಲಾರಂಭಿಸಿದರು.
ನಂತರಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಲು ಶುರುಮಾಡಿದರು. ರಾತಿ ಹನ್ನೆರಡಾಯ್ತು. ಹುಲಿಯೂ ಇಲ್ಲ. ದೇವರ ಮಗನೂ ಇಲ್ಲ.
ಇನ್ನೂ ಕಾದು ಪ್ರಯೋಜನವಿಲ್ಲ ಎಂದುಕೊಂಡು ನಾನು ಮತ್ತು ನನ್ನ ಕೆಲವು ಸ್ನೇಹಿತರು ಅಲ್ಲಿಂದ ಕಾಲ್ಕಿತ್ತೆವು.
ಸಮಾಜದೊಳಗಿನ ಭಿನ್ನತೆಯನ್ನು ಮೀರುವುದೂ ಕ್ರೀಡೆಯ ಉದ್ದೇಶ: ಗೋಪಾಲ್ ಹೊಸೂರ್
ಮರುದಿನ ಮಧ್ಯಾಹ್ನ ಕೇಳಿಬಂದ ಸುದ್ದಿ: ದೇವಸ್ಥಾನಕ್ಕೆ ಸಂಬಂಧಪಟ್ಟಕೆಲವರು ಗಾಬರಿಯಿಂದ ಬೆಳಗ್ಗೆ ಕಾಡಿನಲ್ಲೆಲ್ಲಾ ಹುಡುಕಾಡಿದಾಗ ಆ ದೇವರ ಮಗ ದೊಡ್ಡ ಮರವೊಂದನ್ನೇರಿ ಎತ್ತರದಲ್ಲಿ ಯಾರಿಗೂ ಕಾಣದಂತೆ ಕೊಂಬೆಯೊಂದರ ಮೇಲೆ ಹತ್ತಿ ಕುಳಿತು ಬಿಟ್ಟಿದ್ದನಂತೆ.
ಆಗಿದ್ದು ಇಷ್ಟೇ:
ರಾತ್ರಿ ಆ ಕಗ್ಗತ್ತಲ ಕಾಡಿನಲ್ಲಿ ಹೋಗುತ್ತಾ ಹೋಗುತ್ತಾ ಅಮಲು ಇಳಿದು ಹೋಗಿದೆ. ಮೈಮೇಲೆ ಬಂದಿದ್ದ ದೇವರು ಬಿಟ್ಟು ದೂರ ಹೋಗಿಬಿಟ್ಟಿದ್ದಾರೆ. ಅವನೀಗ ಸಾಮಾನ್ಯ ಮನುಷ್ಯನಾಗಿದ್ದಾನೆ . ಹುಲಿ ಮುಂತಾದ ಕಾಡಿನ ಕ್ರೂರ ಪ್ರಾಣಿಗಳ ಭಯ ಶುರುವಾಗಿದೆ. ಇನ್ನು ಬಂದ ಜಾಗಕ್ಕೇ ಮರಳಿ ಹೋಗೋಣವೆಂದರೆ ಎಲ್ಲಿ ಜನರು ಹೊಡೆದು ಬಾರಿಸಿಬಿಡುತ್ತಾರೋ ಎಂಬ ಭಯ.