
- ಡಾ.ಕೆ.ಎಸ್. ಪವಿತ್ರ
ಹಿಮ ಎಂದರೆ ದಕ್ಷಿಣ ಭಾರತದಲ್ಲಿ ಹುಟ್ಟಿಬೆಳೆದ ನನಗೆ ಅದೇನೋ ಆಕರ್ಷಣೆ. ಹಿಮ ಎಂದರೆ ಚಿಕ್ಕಂದಿನಲ್ಲಿ ನನಗಿದ್ದ ಕಲ್ಪನೆ ದೊಡ್ಡ ಫ್ರಿಜ್ಜು. ಫ್ರಿಜ್ಜಿನಲ್ಲಿ ವಿಧ ವಿಧ ಆಕಾರದ ಕಪ್ಪುಗಳಲ್ಲಿ ನೀರಿಟ್ಟು, ಮಂಜುಗಡ್ಡೆಯಾಗಿಸಿ ಸ್ವಲ್ಪ ಸ್ವಲ್ಪ ಚೀಪುವುದು ನನಗೆ ಬಲು ಇಷ್ಟ. ಹಿಮದ ಬಗ್ಗೆ, ಅದು ತರಬಹುದಾದ ಮೋಜು-ಸ್ಲೆಜ್ ಆಟಗಳ ಬಗ್ಗೆ, ಹಾಕಿಕೊಳ್ಳಬಹುದಾದ ಬಣ್ಣ ಬಣ್ಣದ ಕೈಗವಸು-ಟೋಪಿ-ಕೋಟುಗಳ ಸುಂದರತೆಯ ಕುರಿತು ನಾನು ಮೊದಲು ಓದಿದ್ದು ಲಾರಾ ಇಂಗಲ್ಸ್ ವೈಲ್ಡರ್‌ಳ ‘ದೊಡ್ಡ ಕಾಡಿನ ಪುಟ್ಟಮನೆ’ ಯ ಮಕ್ಕಳ ಕಾದಂಬರಿಗಳಲ್ಲಿ.
ಆದರೆ ಹಿಮದ ಬಗ್ಗೆ ನನಗೆ ಆಕರ್ಷಣೆ-ಕುತೂಹಲ-ಒಂಥರಾ ಹೆದರಿಕೆ ಮೂಡಿಸಲು ಶಕ್ತವಾದದ್ದು ಮಾತ್ರ ಪಿಯುಸಿಯಲ್ಲಿ ನಮಗೆ ಪಠ್ಯವಾಗಿದ್ದ ರಾಬರ್ಚ್ ಸ್ಕಾಟ್‌ನ ದಿನಚರಿಯೇ. ಕ್ಯಾಪ್ಟನ್ ಸ್ಕಾಟ್ ಒಬ್ಬ ಬ್ರಿಟಿಷ್ ಅಧಿಕಾರಿ. ಅಂಟಾರ್ಟಿಕಾದ ಟೆರ್ರಾನೋವಾ ಪಯಣದಲ್ಲಿ 1912ರ ಜನವರಿಯಲ್ಲಿ ಆತ ತನ್ನ ಸಂಗಡಿಗರೊಡನೆ ಪಾಲ್ಗೊಳ್ಳುತ್ತಾನೆ. ದಕ್ಷಿಣ ಧ್ರುವವನ್ನು ತಲುಪುವ ತನ್ನ ಪ್ರಯತ್ನದಲ್ಲಿ ವಿಫಲನಾಗಿ ಮರಣಿಸಿದರೂ, ತನ್ನ ದಿನಚರಿಯ ಮೂಲಕ ಉಳಿಯುತ್ತಾನೆ. ಆತನ ಮರಣಾನಂತರ ಸಿಕ್ಕ ದಿನಚರಿ ಇಂದಿಗೂ ಪಠ್ಯ ಪುಸ್ತಕಗಳಲ್ಲಿ ಮತ್ತೆ ಮತ್ತೆ ಕಾಣಸಿಗುತ್ತದೆ. ಆತನ ಕೊನೆಯ ಮಾತುಗಳು ಇವು.
ವಾವ್ಹ್..ಸ್ವರ್ಗವೇ ಧರೆಗಿಳಿದಂತೆ..ಮಂಜು ಹೊದ್ದು ಮಲಗಿದ ಸುಂದರ ಕಾಶ್ಮೀರ
‘21ರಿಂದ ಈಶಾನ್ಯದಿಂದ, ಪಶ್ಚಿಮದಿಂದ ಸತತವಾಗಿ ಹಿಮದ ಬಿರುಗಾಳಿ ಒಂದೇ ಸಮನೆ ಬೀಸುತ್ತಿದೆ. ಎರಡು ಕಪ್ ಟೀ ಪ್ರತಿ ಒಬ್ಬರಿಗೆ, ಎರಡು ದಿನಗಳಿಗೆ ಸಾಲುವಷ್ಟುಆಹಾರವಷ್ಟೇ ಉಳಿದಿದೆ. 11 ಮೈಲಿ ದೂರದ ನಮ್ಮ ಡಿಪೋಗೆ ಹೋಗಲು ನಾವು ಪ್ರತಿದಿನ ಸಿದ್ಧರಾಗುತ್ತೇವೆ. ಆದರೆ ಟೆಂಟಿನ ಬಾಗಿಲ ಹೊರಗೆ ಬರೀ ಹುಯ್ಯಲಿಡುವ ಗಾಳಿ. ಉತ್ತಮವಾದ ಪರಿಸ್ಥಿತಿ ಬರಬಹುದೆಂಬ ವಿಶ್ವಾಸ ಈಗ ನಮಗಿಲ್ಲ. ಕೊನೆಯ ತನಕ ಪ್ರಯತ್ನವನ್ನಂತೂ ಮಾಡುತ್ತೇವೆ. ಆದರೆ ನಾವು ದುರ್ಬಲವಾಗುತ್ತಿದ್ದೇವೆ. ಅಂತ್ಯ ಇನ್ನು ದೂರವಿಲ್ಲ ಎನಿಸುತ್ತಿದೆ. ಇನ್ನು ಬರೆಯಲು ಸಾಧ್ಯವಾಗದು ಎನಿಸುತ್ತದೆ’
-ಆರ್. ಸ್ಕಾಟ್ (ವಿ.ಸೂ.ದೇವರಿಗಾಗಿ ನಮ್ಮ ಜನರನ್ನು ನೋಡಿಕೊಳ್ಳಿ).
ಯಾವುದೋ ಸಮಯದಲ್ಲಿ, ನಾವೆಂದೂ ನೋಡದ ಹಿಮದ ವಾತಾವರಣದಲ್ಲಿ ನಡೆದ ಘಟನೆಯೊಂದರ ದಿನಚರಿ 16-17ರ ಆ ವಯಸ್ಸಿನಲ್ಲಿ ನನ್ನಲ್ಲಿ ಮೂಡಿಸಿದ ವಿಷಾದದ ಬಗೆಗೆ ನನಗೆ ಇಂದೂ ಅಚ್ಚರಿ. ಇದನ್ನು ಓದಿ ಹಿಮ ನೋಡಬೇಕು ಎಂದು ಪರಿತಪಿಸಿ ಶಿಮ್ಲಾದ ಕುಫ್ರಿಗೆ ಜನವರಿಯಲ್ಲಿ, ‘ಆಫ್ ಸೀಸನ್’ ನಲ್ಲಿ ಹೋಗಿ ಇಳಿದಿದ್ದೆ. ಹಿಮದ ಬಗ್ಗೆ ಓದಿಕೊಂಡಷ್ಟೇ ಹೋದರೆ ಆಗುವ ಫಜೀತಿ ನನಗಾಗಿತ್ತು. ಕುಫ್ರಿಯಲ್ಲಿ ಆ ಬಾರಿ ಹಿಮವೋ ಹಿಮ. ಶಿವಮೊಗ್ಗೆಯ ಹವಾಮಾನದಲ್ಲಿ ಛತ್ರಿ, ಜಾಕೆಟ್, ಸ್ವೆಟರ್‌ಗಳನ್ನೊಂದೂ ಉಪಯೋಗಿಸದ ನನ್ನಂಥ, ಮನೆ ಹೊಕ್ಕರೆ ಸ್ಲೀವ್‌ಲೆಸ್ ಇಷ್ಟಪಡುವವಳಿಗೆ ಕುಫ್ರಿಯ ರಿಸಾರ್ಚ್‌ನಲ್ಲಿ ಪೈಪ್‌ಗಳೆಲ್ಲವೂ ಗಡ್ಡೆ ಕಟ್ಟಿ, ಹೀಟರ್ ಇಲ್ಲದೆ, ಬೆಚ್ಚಗಿನ ಬಟ್ಟೆಗಳಿರದ ಪರಿಸ್ಥಿತಿ ‘ಸಾಕಪ್ಪಾ ಸಾಕು’ ಎನಿಸಿಬಿಟ್ಟಿತ್ತು.
ಪ್ರವಾಹದಂತೆ ಧುಮ್ಮಿಕ್ಕುವ ಹಿಮ : ಹಿಮಪಾತದ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆ
ಬಕೆಟ್‌ನಲ್ಲಿ ಹಿಮ.. ಹೊರಗಿನಿಂದ ನೀರು ತಂದು ಶೌಚಕ್ಕೆ ಉಪಯೋಗಿಸಬೇಕಾದ ಪರಿಸ್ಥಿತಿ! ಸುತ್ತ ಮುತ್ತ ಬರೀ ಬಿಳಿ ಬಣ್ಣ ನೋಡಿ ನೋಡಿ ನಮ್ಮ ತಲೆಗಳೂ ಸ್ತಬ್ಧ. ಹಿಮದ ಬಿಳೀ ಬಣ್ಣದ ಜೊತೆಗೆ ಅದರ ಜೊತೆಗಾರನೆಂಬಂತೆ ನೀರವ ಮೌನ. ಇಡೀ ಭೂಮಿ ತಪಸ್ಸು ಮಾಡುತ್ತಿದೆಯೇನೋ ಎಂಬಂತಹ ಭಾವ. ನಾನು ಮತ್ತೆ ಮತ್ತೆ ಅಲ್ಲಿದ್ದ ಕಲ್ಲಿದ್ದಲಿನ ಹೀಟರ್ ಮುಂದೆ ಹೋಗಿ ನಿಲ್ಲುತ್ತಿದ್ದದನ್ನು ನೋಡಿ, ಅಲ್ಲಿನ ಮ್ಯಾನೇಜರ್ ನನಗೆ ಹೇಳಿದ್ದ ‘ನೀವು ಹಿಮದ ಚಳಿಯನ್ನು ಮೈಕಾಯಿಸಿಕೊಂಡು ತಡೆಯುವುದು ಸಾಧ್ಯವಿಲ್ಲ. ಹಿಮವನ್ನು ಎದುರಿಸುವ ಅತ್ಯುತ್ತಮ ಉಪಾಯಗಳೆಂದರೆ ಬೆಚ್ಚಗಿನ ಬಟ್ಟೆಮತ್ತು ಹೊಟ್ಟೆತುಂಬ ಆಹಾರ. ಮತ್ತೆ ಮತ್ತೆ ಬೆಂಕಿ ಕಾಯಿಸಿದರೆ, ಮತ್ತಷ್ಟು ಚಳಿಯಾಗುತ್ತದೆ.’
ಕೂದಲಿಗೆ ಪ್ರತಿದಿನ ಎಣ್ಣೆ ಹಚ್ಚುವ ನನ್ನ ಅಭ್ಯಾಸಕ್ಕೆ ಹಿಮದ ಚಳಿಯಲ್ಲಿ ಎಣ್ಣೆ ಗಟ್ಟಿಯಾಗಿ ಕೂದಲಿಗೆ ತುಪ್ಪ ಹಚ್ಚಿಟ್ಟಹಾಗೆ! ಕೈ ಬೆರಳಿನ ಉಂಗುರಗಳು ಸಡಿಲವಾಗಿ ಬೀಳತೊಡಗಿದವು. ಈ ಫಜೀತಿಗಳೆಲ್ಲ ಸಾಕು ಎಂದು ಕೆಳಗೆ ಚಂಡೀಗಢಕ್ಕೆ ಬಂದುಬಿಡೋಣ ಎಂದರೆ ದೆಹಲಿಯವನಾದ ನಮ್ಮ ಕಾರಿನ ಚಾಲಕ ತನಗೆ ಹಿಮಗಟ್ಟಿದ ರಸ್ತೆಯ ಮೇಲೆ ಓಡಿಸಲು ಸಾಧ್ಯವಿಲ್ಲ ಎಂದುಬಿಟ್ಟ! ಕೊನೆಗೆ ಚಕ್ರಕ್ಕೆ ಸರಪಣಿ ತೊಡಿಸಿದ, ಜೀಪ್‌ನಲ್ಲಿ ಜಾರದಂತೆ, ನಾಲ್ಕು ಜನ ಆರ್ಮಿ ಮಂದಿ ಬಾಗಿಲ ಬಳಿ ನಿಂತು, ನಮ್ಮನ್ನು ಅಂತೂ ಹಿಮ ಬೀಳದ ರಸ್ತೆಯ ಹತ್ತಿರ ತಂದು ತಲುಪಿಸಿದರು. ರಾಬರ್ಚ್ ಸ್ಕಾಟ್‌ನ ತಂಡಕ್ಕೆ ಹೇಗಾಗಿದ್ದಿರಬೇಕು ಎಂಬ ಕಲ್ಪನೆ ಮತ್ತಷ್ಟುಸ್ಪಷ್ಟವಾಯಿತು; ಆದರೆ ಹಿಮದ ಆಕರ್ಷಣೆ ಮತ್ತಷ್ಟುಹೆಚ್ಚಾಯಿತು!
ಅಮೆರಿಕಾದಲ್ಲಿ ಹಿಮಪಾತಕ್ಕೆ ತತ್ತರಿಸಿದ ಪ್ರಾಣಿಗಳು: ವಿಡಿಯೋ ವೈರಲ್
ಅದಾದ ಮೇಲೆ ಎರಡು-ಮೂರು ವರ್ಷಗಳಿಗೊಮ್ಮೆಯಾದರೂ ಹಿಮ ಬೀಳುವ ಸಮಯದಲ್ಲಿಯೇ ಮನಾಲಿ, ನತುಲಾ ಪಾಸ್, ಸ್ವಿಜರ್‌ಲ್ಯಾಂಡ್, ಕಾಶ್ಮೀರ ಹೀಗೆ ಬೇರೆ ಬೇರೆ ಕಡೆ ಪ್ರವಾಸ ಯೋಜಿಸಿ ಹೋಗಿ ಬಂದಿದ್ದೇನೆ. ಮಂಜುಗಟ್ಟಿದ ನದಿಯ ಮೇಲೆ ನಡೆಯುವ, ಬೀಳುವ, ಯಾಕ್ ಮೇಲೆ ಸವಾರಿ, ಉಸಿರುಗಟ್ಟುತ್ತದೆ ಎಂದರೂ ಬಿಡದೆ ಹಿಮ ಆವರಿಸಿದ ಎತ್ತರದ ತಾಣಕ್ಕೆ ಹೋಗಿ ಬರುವ ಸಾಹಸ ಮಾಡಿದ್ದೇನೆ. ನಾನು ಅಷ್ಟೇನೂ ಇಷ್ಟಪಡದ ನೂಡಲ್ಸ್ ಅನ್ನು ಹಿಮದ ಚಳಿಯಲ್ಲಿ ‘ಅಮೃತ’ ಎನ್ನುವಂತೆ ತಿಂದಿದ್ದೇನೆ. ಹಗುರ-ಸುಂದರ-ಹತ್ತಿಯಂತೆ ಬೀಳುವ ಹಿಮದ ಮಳೆಯನ್ನು ಆನಂದಿಸಿದ್ದೇನೆ.
ಈಗ ಮೊದಲಿನಂತೆ ಹಿಮದ ಬಿಳೀಬಣ್ಣ - ನೀರವತೆ ನನಗೆ ಬೇಸರ ತರಿಸುವ ಬದಲು ‘ಶಾಂತತೆ’, ‘ನಿಗೂಢ’ ಅನಿಸುತ್ತದೆ. ತನ್ನಲ್ಲಿ ಏನೇನನ್ನೋ ಅಡಗಿಸಿಟ್ಟುಕೊಂಡಿದೆ ಎಂಬಂತೆ ಭಾಸವಾಗುತ್ತದೆ. ವಿಜ್ಞಾನದ ಅಧ್ಯಯನಗಳಲ್ಲಿ ಆಗಾಗ ಬರುವ ‘ಟಿಪ್ ಆಫ್ ದಿ ಐಸ್‌ಬಗ್‌ರ್’ ನಂತೆ ‘ಮಂಜುಗಡ್ಡೆಯ ತೇಲುವ ತುದಿ’ ಪ್ರಕ್ರಿಯೆಯಲ್ಲಿ ನೀರಿನ ಕೆಳಗೆ ಕಾಣದ ದೊಡ್ಡ ಭಾಗವೊಂದು ಅಡಗಿರುತ್ತದಷ್ಟೆ. ಹಿಮವೂ ಹಾಗೆಯೇ! ಇಡೀ ಜಗತ್ತು ಪ್ರವಾಸ ಮಾಡುತ್ತಾ ಓಡಾಡುತ್ತಿರುವ ಈ ಕ್ಷಣಗಳಲ್ಲಿ ಹಿಮ-ಚಳಿಗಳನ್ನು ಆನಂದಿಸುತ್ತಲೇ, ಅದು ಅಡಗಿಸಿಕೊಂಡಿರುವ ಅದೆಷ್ಟೋ ಬದುಕಿನ ಪಾಠಗಳನ್ನು ಕಲಿಯುವ ಕುತೂಹಲವೂ ನಮ್ಮದಾಗಬಹುದೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.