ಎಂಥ ಅಡ್ವೆಂಚರ್ ಇಷ್ಟಪಡುವ ಪ್ರವಾಸಿಗರೇ ಆದರೂ ಭಾರತದ ಆ ಗ್ರಾಮವೊಂದಕ್ಕೆ ಕಾಲಿಡಲು ಹೆದರುತ್ತಾರೆ. ಅದ್ಯಾಕೆ ಗೊತ್ತೆ? ಈ ಗ್ರಾಮದ ಕರಾಳ ಇತಿಹಾಸ ಇಲ್ಲಿದೆ!
ಭಾರತವು ಅನೇಕ ರಹಸ್ಯಗಳ ನಾಡು. ಕೆಲವು ಊರುಗಳು ವಿಚಿತ್ರ ಇತಿಹಾಸ ಹೊಂದಿರುತ್ತವೆ. ಉದಾಹರಣೆಗೆ ಕೇರಳದ ಕೆಲವು ಊರುಗಳಲ್ಲಿ ಮಾಟಗಾರರು ಅಧಿಕ. ಕೊಳ್ಳೇಗಾಲದಲ್ಲಿ ತುಂಬಾ ಮಂದಿ ಮಾಟಗಾರರು ಇದ್ದಾರೆ ಎನ್ನುತ್ತಾರೆ. ಆದರೆ ಭಾರತದ ಮಾಟಗಾರರ ರಾಜಧಾನಿ ಎಂದೇ ಅಪಖ್ಯಾತಿ ಪಡೆದಿರುವ ಈ ಗ್ರಾಮದ ಬಗ್ಗೆ ನೀವು ಕೇಳಿರಲಾರಿರಿ. ಇಂಥ ಊರೊಂದು ಅಸ್ಸಾಂನಲ್ಲಿದೆ. ಅದರ ಹೆಸರು ಮಯೋಂಗ್. ಇಲ್ಲಿನ ಇತಿಹಾಸ ಗೊತ್ತಿರುವವರು, ಆಸುಪಾಸಿನವರು ಇಲ್ಲಿಗೆ ಕಾಲಿಡಲು ಅಂಜಿಕೊಳ್ಳುತ್ತಾರೆ.
ಭಾರತದ ಬ್ಲ್ಯಾಕ್ ಮ್ಯಾಜಿಕ್ ಕ್ಯಾಪಿಟಲ್ ಎಂದು ಕರೆಯಲ್ಪಡುವ ಊರು ಅಸ್ಸಾಂನ ಮಯೋಂಗ್ ಗ್ರಾಮ. ಇಲ್ಲಿ ಮನೆ ಮನೆಗಳಲ್ಲೂ ಒಬ್ಬ ಮಾಂತ್ರಿಕ, ಮಾಟಗಾರ ಇದ್ದಾನೆ ಎನ್ನಲಾಗುತ್ತದೆ. ಮಾಟಗಾರ್ತಿಯರೂ ಇದ್ದಾರೆ. ಇಲ್ಲಿನ ಒಂಟಿ ವಿಧವೆಯರನ್ನು ಸುತ್ತಮುತ್ತಲಿನ ಊರಿನ ಜನ ಗುಮಾನಿಯಿಂದಲೇ ನೋಡುತ್ತಾರೆ. ಇಲ್ಲಿನ ಹಳೆಯ ಜನಪದ ಕತೆಗಳು ಕೂಡ ದೆವ್ವ ಭೂತಗಳಿಂದ ಕೂಡಿವೆ. ಜನರು ಕಣ್ಮರೆಯಾಗುವುದು, ಬೇರೆ ರೂಪದಲ್ಲಿ ಬರುವುದು, ಪುರುಷರಿಗೆ ಮೋಹಿನಿ ಕಾಟ, ಸ್ತ್ರೀಯರಿಗೆ ಗಂಧರ್ವ ಪಿಶಾಚಿಯ ಕಾಟ ಹೀಗೆ. ಶತಮಾನಗಳಿಂದ ಇಲ್ಲಿ ಮಾಟಮಂತ್ರ ಮತ್ತು ಅಲೌಕಿಕ ಚಟುವಟಿಕೆಗಳ ಅಭ್ಯಾಸಗಳು ಇವೆ. ಶಕ್ತಿ ದೇವತೆಗಳನ್ನು ಪೂಜಿಸುವುದು, ಬಲಿ ಕೊಡುವುದು ಇಲ್ಲಿ ಮಾಮೂಲು. ಇಲ್ಲಿ ನಡೆಯುವ ಮಾಟಮಂತ್ರಕ್ಕಾಗಿ ನರಬಲಿಯನ್ನೂ ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾರೇ ಕಣ್ಮರೆಯಾದರೂ, ಅಥವಾ ನಿಗೂಢವಾಗಿ ಶವವಾಗಿ ಪತ್ತೆಯಾದರೂ ಅಂಥವರು ಇಲ್ಲಿನ ಮಾಟ ಮಂತ್ರಕ್ಕಾಗಿಯೇ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತದೆ.
ಕತೆಯ ಪ್ರಕಾರ ಮಹಾಭಾರತದ ರಾಕ್ಷಸಿ ಹಿಡಿಂಬಿ- ಭೀಮರ ದಾಂಪತ್ಯಕ್ಕೆ ಜನಿಸಿದ ಮಗ ಘಟೋತ್ಕಚ ಈ ಊರಿನವನಂತೆ. ಇಲ್ಲಿ ನಡೆದ ಒಂದು ವಿಚಿತ್ರ ಕಣ್ಮರೆ ಪ್ರಕರಣ 1330ರ ದಶಕದ್ದು. ಆಗ ಮೊಗಲ್ ದೊರೆ ಮುಹಮ್ಮದ್ ಶಾನ 1,00,000 ಸೈನಿಕರ ಸೈನ್ಯದ ಒಂದು ಗುಂಪು ಈ ಊರಿನ ಬಳಿಯ ಕಾಡಿನಲ್ಲಿ ಕಣ್ಮರೆಯಾಯಿತು. ಒಬ್ಬನೇ ಒಬ್ಬ ಸೈನಿಕನ ದೇಹ ಕಾಣಸಿಗಲಿಲ್ಲವಂತೆ. ಔರಂಗಜೇಬನ ಆಳ್ವಿಕೆಯ ವೃತ್ತಾಂತವಾದ ಅಲಂಗೀರ್ ನಾಮಾದಲ್ಲಿ, ಆಸ್ಥಾನದ ಇತಿಹಾಸಕಾರ ಮಿರ್ಜಾ ಮುಹಮ್ಮದ್ ಕಾಜಿಮ್ ಬರೆಯುವಂತೆ, ಅಸ್ಸಾಂನಲ್ಲಿ ಅಹೋಮ್ ಸಾಮ್ರಾಜ್ಯವನ್ನು ಸೋಲಿಸಿದಾಗ, ಇಲ್ಲಿನ ನಾಯಕ ರಾಮ್ ಸಿಂಗ್ ಅಹೋಮ್ ಸೈನ್ಯಕ್ಕಿಂತ ಮಯೋಂಗ್‌ನ ಮಾಟಮಂತ್ರಕ್ಕೆ ಜನ ಹೆಚ್ಚು ಹೆದರುತ್ತಿದ್ದರು ಎಂದು ಹೇಳುತ್ತಾನೆ.
ಇಲ್ಲಿ ಕೈ ನೋಡಿ ಭವಿಷ್ಯ ಹೇಳುವವರು, ಗಿಣಿಶಾಸ್ತ್ರ ಹೇಳುವವರು ಹೇರಳ. ಇಲ್ಲಿನ ಅನೇಕ ನಾಟಿ ವೈದ್ಯರು ಔಷಧಿಯನ್ನು ಬಳಸದೆ ರೋಗಿಗಳಿಗೆ ‘ಚಿಕಿತ್ಸೆ’ ನೀಡುತ್ತಾರೆ. ಇವರು ಸ್ಪಷ್ಟವಾಗಿ ದೆವ್ವಗಳಿಂದ ಸಹಾಯ ಪಡೆಯುತ್ತಾರೆ. ದೆವ್ವಗಳು ಬಂದು ಇವರ ಕಿವಿಯಲ್ಲಿ ರೋಗಿಯ ಹಿಸ್ಟರಿ ಹೇಳುತ್ತವೆ. ರೋಗಿಯ ನೋವನ್ನು ಕಡಿಮೆ ಮಾಡಲು ಈ ವೈದ್ಯರು ತಾಮ್ರದ ಫಲಕಗಳನ್ನು ಬಳಸುತ್ತಾರೆ. ಇಲ್ಲಿ ನಿರ್ಜೀವ ವಸ್ತುಗಳು ಅಸ್ವಾಭಾವಿಕವಾಗಿ ಅತ್ತಿತ್ತ ಚಲಿಸುವುದನ್ನು ಸ್ವಾಭಾವಿಕ ಎಂದು ಪರಿಗಣಿಸಲಾಗುತ್ತದಂತೆ. ಇದನ್ನು ಅದರಶ್ಯ ಜೀವಿಗಳ ಸಂದೇಶದ ಚಿಹ್ನೆಗಳೆಂದು ಪರಿಗಣಿಸಲಾಗುತ್ತದೆ.
ಸದಾ ನಿದ್ರೆ ಮಾಡುವ ಹಳ್ಳಿ: ಏನೀ ಗ್ರಾಮದ ವಿಚಿತ್ರ ಕಾಯಿಲೆ?
ಇತ್ತೀಚೆಗೆ ಇಲ್ಲಿ ಮಾಟಮಂತ್ರ ಮಾಡುವ ತಲೆಮಾರು ನಿಧಾನವಾಗಿ ಕಡಿಮೆಯಾಗುತ್ತಿದೆ. ಆದರೆ ಅದರ ಮೇಲಿನ ನಂಬಿಕೆ ಬಲವಾಗಿ ಉಳಿದಿದೆ. ಹೆಚ್ಚಿನ ಸಂಖ್ಯೆಯ ಜನರು ಮಾಟಮಂತ್ರಕ್ಕೆ ಸಂಬಂಧಿಸಿದ ಕಲಾತ್ಮಕ ಕ್ರಾಫ್ಟ್‌ಗಳಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಇದರಿಂದಾಗಿ ಇದರಲ್ಲಿ ಆಸಕ್ತಿ ಹೊಂದಿರುವ ಜನರಿಂದ ಮಯೋಂಗ್‌ಗೆ ಪ್ರವಾಸೋದ್ಯಮವೂ ಹೆಚ್ಚಿದೆ. ಮಯೋಂಗ್ ಒಂದು ವಸ್ತುಸಂಗ್ರಹಾಲಯದಂತಾಗುತ್ತಿದೆ. ಮಯೋಂಗ್ ಸೆಂಟ್ರಲ್ ಮ್ಯೂಸಿಯಂ ಮತ್ತು ಎಂಪೋರಿಯಮ್ ಇಲ್ಲಿ ಕೆಲವು ಹಳೆಯ ಶಸ್ತ್ರಾಸ್ತ್ರಗಳು, ಉಪಕರಣಗಳು, ಮಾಂತ್ರಿಕ ಗ್ರಂಥಗಳು ಇವನ್ನೆಲ್ಲ ಪ್ರದರ್ಶಿಸಲಾಗುತ್ತಿದೆ.
ಅಲೌಕಿಕ ಮತ್ತು ವಿಲಕ್ಷಣ ಕಥೆಗಳ ಬಗ್ಗೆ ನಿಮಗೆ ಅಸಕ್ತಿಯಿದ್ದರೆ, ಮಾಟಮಂತ್ರದ ಬಗ್ಗೆ ತಿಳಿಯುವ ಆಸಕ್ತಿಯಿದ್ದರೆ ನೀವು ಮಯೋಂಗ್‌ಗೆ ಭೇಟಿ ನೀಡಬಹುದು. ಮೇಯೊಂಗ್ ಗ್ರಾಮ ಈಶಾನ್ಯ ಅಸ್ಸಾಂನ ಅದ್ಭುತ ಮತ್ತು ಸೌಂದರ್ಯಕ್ಕೂ ನೆಲೆಯಾಗಿದೆ.
ಭಾರತದ ಈ ಗ್ರಾಮದ ಪುರುಷರಿಂದ ಗರ್ಭಿಣಿಯಾಗಲು ವಿದೇಶದಿಂದ ಬರ್ತಾರೆ ಮಹಿಳೆಯರು!