ಪ್ರವಾಸಿಗರಿಗೆ ಸಿಯಾಚಿನ್‌ ಮುಕ್ತ; ಈಗಲೇ ಪ್ರವಾಸ ಹೋಗಬಹುದೆ?

By Kannadaprabha NewsFirst Published Oct 26, 2019, 9:25 AM IST
Highlights

ಇಷ್ಟುವರ್ಷ ಜನಸಾಮಾನ್ಯರ ಪ್ರವೇಶಕ್ಕೆ ನಿಷೇಧವಿದ್ದ ಜಮ್ಮು ಕಾಶ್ಮೀರದ ಸಿಯಾಚಿನ್‌ ನೀರ್ಗಲ್ಲು ಪ್ರದೇಶವನ್ನು ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಪ್ರವಾಸಿಗರಿಗೆ ಮುಕ್ತಗೊಳಿಸಿದೆ. ಹೀಗಾಗಿ ಇನ್ನುಮುಂದೆ ಲಡಾಖ್‌, ಕಾಶ್ಮೀರ ಅಥವಾ ಹಿಮಾಲಯದ ಪ್ರವಾಸಕ್ಕೆ ಪ್ಲಾನ್‌ ಮಾಡುವವರು ಸಿಯಾಚಿನ್‌ಗೂ ಟ್ರೆಕಿಂಗ್‌ ಹೋಗಲು ಅಡ್ಡಿಯಿಲ್ಲ.

ಸಮುದ್ರ ಮಟ್ಟದಿಂದ 21 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್‌, ಜಮ್ಮು-ಕಾಶ್ಮೀರದ ಲಡಾಖ್‌ ಪ್ರಾಂತ್ಯದಲ್ಲಿರುವ ಅತ್ಯಂತ ಸುಂದರ ಹಾಗೂ ಅಪಾಯಕಾರಿ ಪ್ರದೇಶ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾಗಿರುವ ಈ ಸಿಯಾಚಿನ್‌ ನೀರ್ಗಲ್ಲು ಪ್ರದೇಶ ಇನ್ನು ಪ್ರವಾಸಿಗರಿಗೆ ಮುಕ್ತ ಎಂದು ಘೋಷಿಸಿದ್ದಾರೆ. ಆದರೆ ಅಲ್ಲಿಗೆ ಹೋಗಲು ಸಿದ್ಧರಾಗಿರುವ ಪ್ರವಾಸಿಗರು ಮೊದಲು ಕೆಲ ವಿಷಯಗಳನ್ನು ತಿಳಿದುಕೊಳ್ಳಲೇಬೇಕು.

ಬಾಲ್ಟಿಭಾಷೆಯಲ್ಲಿ ‘ಸಿಯಾ’ ಎಂದರೆ ಗುಲಾಬಿ ಜಾತಿಗೆ ಸೇರಿದ ಹೂವು ಹಾಗೂ ‘ಚನ್‌’ ಎಂದರೆ ಹೇರಳವಾಗಿ ಕಾಣಸಿಗುವ ಎಂಬರ್ಥವಿದೆ. ಆದರೆ, ಸಿಯಾಚಿನ್‌ನಲ್ಲಿ ಯಾವುದೇ ರೀತಿಯ ಗಿಡಮರಗಳು ಬೆಳೆಯುವುದಿಲ್ಲ. ಸಿಯಾಚಿನ್‌ನ ಕೆಳಭಾಗದಲ್ಲಿ ಕಾಣಸಿಗುವ ಒಂದು ನಮೂನೆಯ ಗುಲಾಬಿ ಹೂವಿನಿಂದ ಈ ಹೆಸರು ಬಂದಿರಬಹುದು ಎಂದು ಹೇಳಲಾಗುತ್ತದೆ.

ಸದ್ಯ ಈ ಸಿಯಾಚಿನ್‌ ಪ್ರದೇಶವನ್ನು ಪ್ರವಾಸಿಗರಿಗೆ ತೆರೆಯಲಾಗುತ್ತಿದೆ ಎಂದರೆ ಪ್ರವಾಸಿಗರು ಸಿಯಾಚಿನ್‌ ಬೇಸ್‌ ಕ್ಯಾಂಪ್‌ನಿಂದ ಕುಮಾರ್‌ ಪೋಸ್ಟ್‌ಗೆ ಪ್ರಯಾಣಿಸಬಹುದು. ಸಿಯಾಚಿನ್‌ ಬೇಸ್‌ ಕ್ಯಾಂಪ್‌ ಸಮುದ್ರ ಮಟ್ಟದಿಂದ 11,000 ಅಡಿ ಎತ್ತರದಲ್ಲಿದೆ. ಪ್ರವಾಸಿಗರಿಗೆ ಅವಕಾಶ ಕಲ್ಪಿಸಿರುವ ಕುಮಾರ್‌ ಪೋಸ್ಟ್‌ 15,000 ಅಡಿ ಎತ್ತರದಲ್ಲಿದೆ. ಇಲ್ಲಿಯವರೆಗಷ್ಟೇ ಪ್ರವಾಸಿಗರು ಹೋಗಬಹುದು.

ಪ್ರವಾಸಿಗರೇ ಗಮನಿಸಿ! ಸಿಯಾಚಿನ್ ಯುದ್ಧಭೂಮಿ ಭೇಟಿಗೆ ಮುಕ್ತ

ಇದೇನೂ ಗೋವಾ ಟ್ರಿಪ್‌ನಂತಲ್ಲ

ಮೊದಲನೆಯದಾಗಿ ಸಿಯಾಚಿನ್‌ ಪ್ರವಾಸ ಗೋವಾ ಟ್ರಿಪ್‌ಗೆ ಹೋದಂತೆ ಅಲ್ಲ. ಅಲ್ಲಿ ಭಾರತೀಯ ಸೇನೆ ಪ್ರವಾಸಿಗರ ಆತಿಥ್ಯ ವಹಿಸುತ್ತದೆ. ಹಿಮಚ್ಛಾದಿತ ಪ್ರದೇಶಕ್ಕೆ ಅನುಮತಿ ಪಡೆದ ಪ್ರವಾಸಿಗರು ಸೇನೆಯ ನಿಯಂತ್ರಣಕ್ಕೆ ಒಳಪಡುತ್ತಾರೆ.

2007-2017ರ ವರೆಗೂ ವರ್ಷಕ್ಕೆ ಒಂದು ಬಾರಿ ಸಿಯಾಚಿನ್‌ಗೆ ತೆರಳಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಪ್ರತಿವರ್ಷ ಸೇನೆಯು ನಾಗರಿಕರು, ಮಿಲಿಟರಿ ಕೆಡೆಟ್‌ಗಳು, ರಕ್ಷಣಾ ಸಿಬ್ಬಂದಿ ಮತ್ತು ಮಾಧ್ಯಮಗಳ ಗುಂಪನ್ನು ಕರೆದೊಯ್ಯುತ್ತಿತ್ತು. ಈಗಿನ ಪ್ರವಾಸಕ್ಕೆ ಈ ಹಿಂದೆ ಅನ್ವಯವಾಗುತ್ತಿದ್ದ ನಿಯಮಗಳೆಲ್ಲ ಅನ್ವಯವಾಗುತ್ತವೆ. ಭಾರತೀಯ ಸೇನೆ ಎಲ್ಲಾ ಪ್ರವಾಸಿಗರನ್ನೂ ಪರೀಕ್ಷೆಗೆ ಒಳಪಡಿಸುತ್ತದೆ, ಅವರ ಆರೋಗ್ಯ ಸ್ಥಿತಿ ಬಗ್ಗೆ ತಪಾಸಣೆ ನಡೆಸಿ ಆ ಅಸಾಧ್ಯ ಚಳಿ, ಪ್ರತಿ ನಿಮಿಷವೂ ಬದಲಾಗುವ ಕಠಿಣ ಹವಾಮಾನವನ್ನು ತಡೆದುಕೊಳ್ಳುವ ಶಕ್ತಿ ಹೊಂದಿರುವವರನ್ನು ಮಾತ್ರ ಸಿಯಾಚಿನ್‌ ಚಾರಣಕ್ಕೆ ಕಳುಹಿಸುತ್ತದೆ.

ಮೌಂಟ್‌ ಎವರೆಸ್ಟ್‌ ಪರ್ವತ ಏರುವಾಗ ಪರ್ವತಾರೋಹಿಗಳು ಮತ್ತು ಖಾಸಗಿ ಪ್ರವಾಸಿಗರಿಗೆ ಕೈಗೊಳ್ಳುವ ಎಲ್ಲಾ ಪರೀಕ್ಷೆಗಳನ್ನು ಇಲ್ಲಿ ಸೇನೆ ಅನುಸರಿಸಿ ಅನುಮತಿ ಕೊಡುತ್ತದೆ. ಸಿಯಾಚಿನ್‌ನ ಕೊನೆಯ ಘಟ್ಟತಲುಪಿದಾಗ ಉಸಿರಾಡಲೂ ಕಷ್ಟವಾಗುತ್ತದೆ, ಹಿಮಪಾತದ ನಡುವೆ ಅಸಾಧ್ಯ ಚಳಿ ಎದುರಿಸಿ ನಿಲ್ಲಲು ದೈಹಿಕವಾಗಿ ಸಮರ್ಥರಾಗಿರಬೇಕಾಗುತ್ತದೆ.

ಪ್ರವಾಸಿಗರಿಗೆ ಅವಕಾಶ ಕೊಟ್ಟಿದ್ದೇಕೆ?

ಸಿಯಾಚಿನ್‌ ಈಗಾಗಲೇ ಸೇನೆಯ ಕಣ್ಗಾವಲಿನಲ್ಲಿದೆ. ಹಾಗೆಯೇ ಅಲ್ಲಿ ಉತ್ಪಾದನೆಯಾಗುವ ತ್ಯಾಜ್ಯವೂ ಒಂದು ದೊಡ್ಡ ಸಮಸ್ಯೆ. ಪ್ರವಾಸಿಗರಿಂದ ಉಂಟಾದ 130 ಟನ್‌ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಸೇನೆಗೆ ಒಂದೂವರೆ ವರ್ಷ ಬೇಕಾಗುತ್ತದೆ. ಸ್ವತಃ ಸೇನೆಯಿಂದಲೇ ವಾರ್ಷಿಕ 236 ಟನ್‌ ತ್ಯಾಜ್ಯ ಉಂಟಾಗುತ್ತದೆ. ಹೆಚ್ಚೆಚ್ಚು ಜನರು ಸೇರಿದಂತೆ ಸಹಜವಾಗಿ ತ್ಯಾಜ್ಯವೂ ಹೆಚ್ಚುತ್ತದೆ. ಹೀಗಿದ್ದಾಗ ಸರ್ಕಾರ ಏಕೆ ಸಿಯಾಚಿನ್ನನ್ನು ಪ್ರವಾಸಿಗರಿಗೆ ಮುಕ್ತಗೊಳಿಸಿತು ಎಂಬ ಪ್ರಶ್ನೆ ಮೂಡುತ್ತದೆ.

ಎರಡು ವಾರಗಳ ಹಿಂದೆ ಸೆಮಿನಾರ್‌ವೊಂದರಲ್ಲಿ ಸಿಯಾಚಿನ್‌ನಂತಹ ಅಪಾಯಕಾರಿ ಯುದ್ಧಭೂಮಿಗಳ ಬಗ್ಗೆ ಸೇನೆಯ ಮುಖ್ಯಸ್ಥರಾದ ಬಿಪಿನ್‌ ರಾವತ್‌ ಮಾತನಾಡುತ್ತಾ, ಸಿಯಾಚಿನ್‌ ಪ್ರದೇಶದಲ್ಲಿ ಕೆಲಸ ಮಾಡುತ್ತಾ ಜೀವಿಸುತ್ತಿರುವ ಸೈನಿಕರ ಅನುಭವವನ್ನು ನಾಗರಿಕರು ಸ್ವತಃ ಅನುಭವಿಸಿ ನಮ್ಮ ಸೈನಿಕರನ್ನು ಪ್ರಶಂಸಿಸುತ್ತಾರೆ ಎಂದಿದ್ದರು. ಹೀಗಾಗಿ ರಾಷ್ಟ್ರದ ಜನರನ್ನು ಒಂದುಗೂಡಿಸುವ ಗುರಿಯೂ ಈ ಘೋಷಣೆಯ ಹಿಂದಿದೆ ಎನ್ನಬಹುದು.

ವಾಸ್ತವವೇ ಬೇರೆ..

ಗಡಿ ಪ್ರದೇಶಗಳ ನಿಯಂತ್ರಣಕ್ಕೆ ಪ್ರವಾಸೋದ್ಯಮವೂ ಒಂದು ಪ್ರಬಲ ಆಯುಧ. 1970 ಮತ್ತು 80ರ ದಶಕದಲ್ಲಿ ಪಾಕಿಸ್ತಾನವೂ ಹಿಮಾಚ್ಛಾದಿತ ಪ್ರದೇಶಗಳಿಗೆ ಹೋಗಲು ಪರ್ವತಾರೋಹಿಗಳಿಗೆ ಅವಕಾಶ ನೀಡಿತ್ತು. ಆದರೆ 1984ರಲ್ಲಿ ಭಾರತೀಯ ಸೇನೆ ಆಪರೇಷನ್‌ ಮೇಘದೂತ್‌ ಲಾಂಚ್‌ ಮಾಡಿ, ಹಿಮಾಚ್ಛಾದಿತ ಪ್ರದೇಶವನ್ನು ಆಕ್ರಮಿಸಿಕೊಂಡ ನಂತರದಲ್ಲಿ ಪಾಕ್‌ ಮತ್ತು ಭಾರತದ ನಡುವೆ ಈ ಪ್ರದೇಶಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಅದಕ್ಕಾಗಿ 25000 ಜನರ ಬಲಿಯಾಗಿದೆ. ಇವರೇನೂ ಶತ್ರುಗಳ ಗುಂಡೇಟಿಗೆ ಬಲಿಯಾದರಲ್ಲ. ಅಲ್ಲಿನ ಹಿಮ, ಚಳಿ, ಕಠಿಣ ಹವಾಮಾನ ವೈಪರೀತ್ಯ ಎದುರಿಸಲಾಗದೆ ಮೃತಪಟ್ಟವರು.

ಜಗತ್ತಿನ ಎತ್ತರದ ಯುದ್ದಭೂಮಿಯಲ್ಲಿ ಯೋಧರ ಬದುಕು ಹೇಗಿರುತ್ತದೆ ಗೊತ್ತಾ?

ಸಿಯಾಚಿನ್ನನ್ನು ವಶಪಡಿಸಿಕೊಂಡಿರುವ ಸೇನೆ ಪ್ರತಿ ದಿನ ಅದರ ನಿರ್ವಹಣೆಗಾಗಿ 6 ಕೋಟಿ ವ್ಯಯಿಸುತ್ತಿದೆ. ಚಳಿಗಾಲದಲ್ಲಿ ಇಲ್ಲಿನ ತಾಪಮಾನ -60 ಡಿಗ್ರಿಗೆ ಇಳಿಯುತ್ತದೆ. ಈ ನೀರ್ಗಲ್ಲು ಪ್ರದೇಶದಲ್ಲಿ ಸಾಮಾನ್ಯವಾಗಿ ಸೈನಿಕರಿಗೆ ಮೂರು ತಿಂಗಳು ಮಾತ್ರ ನಿಯೋಜನೆ ಮಾಡಲಾಗುತ್ತದೆ. ನಂತರ ಬೇರೊಂದು ಸೇನಾ ತುಕಡಿ ಈ ಪ್ರದೇಶಕ್ಕೆ ನಿಯೋಜನೆಯಾಗುತ್ತದೆ. ಸಿಯಾಚಿನ್‌ನ ಕೆಲವು ಸ್ಥಳಗಳನ್ನು ತಲುಪುವುದಕ್ಕೆ ಯೋಧರು 128 ಕಿ.ಮೀ. ದೂರದವರೆಗೆ ಇಪ್ಪತ್ತೆಂಟು ದಿನಗಳ ಕಾಲ ಟ್ರೆಕ್ಕಿಂಗ್‌ ಮಾಡಿಕೊಂಡು ಹೋಗಬೇಕಾಗುತ್ತದೆ.

click me!