ಮಧ್ಯರಾತ್ರಿ 12ಕ್ಕೆ ಸರಿಯಾಗಿ ಕ್ಯೂ ಸೇರಿದ್ದೆವು. ಸೀರೆ ಉಡಬೇಕೋ, ಚೂಡಿದಾರ್ ಸಾಕೋ ಎಂಬ ಗೊಂದಲದಲ್ಲಿ ದುಪಟ್ಟಾವನ್ನೇ ಸೀರೆ ಸೆರಗಿನ ಹಾಗೆ ಸುತ್ತಿ ಹೊಸ ಸ್ಟೈಲ್ ಮಾಡಿಕೊಂಡಿದ್ದೆ. ಇದೆಲ್ಲಾ ಯಾರಿಗಾಗಿ. ಉಜ್ಜಯಿನಿಯ ಮಹಾಕಾಲೇಶ್ವರನ ದರ್ಶನಕ್ಕಾಗಿ.
- ಡಾ.ಕೆ.ಎಸ್.ಪವಿತ್ರ
ಮಧ್ಯರಾತ್ರಿ 12ಕ್ಕೆ ಸರಿಯಾಗಿ ಕ್ಯೂ ಸೇರಿದ್ದೆವು. ಸೀರೆ ಉಡಬೇಕೋ, ಚೂಡಿದಾರ್ ಸಾಕೋ ಎಂಬ ಗೊಂದಲದಲ್ಲಿ ದುಪಟ್ಟಾವನ್ನೇ ಸೀರೆ ಸೆರಗಿನ ಹಾಗೆ ಸುತ್ತಿ ಹೊಸ ಸ್ಟೈಲ್ ಮಾಡಿಕೊಂಡಿದ್ದೆ. ಇದೆಲ್ಲಾ ಯಾರಿಗಾಗಿ?! ಉಜ್ಜಯಿನಿಯ ಮಹಾಕಾಲೇಶ್ವರನ ದರ್ಶನಕ್ಕಾಗಿ.
undefined
ಭೋಪಾಲ್ ಭೇಟಿ ಮತ್ತು ಇತ್ತೀಚೆಗೆ ನೋಡಿದ್ದ ಓ ಮೈ ಗಾಡ್-2 ಸಿನಿಮಾದ ಅಕ್ಷಯ್ ಕುಮಾರನ ಮಹಾಕಾಲನ ವಿಚಿತ್ರ ಪಾತ್ರ ಎರಡೂ ಒಟ್ಟಾಗಿ ಉಜ್ಜಯಿನಿ ಹೋಗಲೇಬೇಕೆಂಬ ಆಸೆಯನ್ನು ತಲೆಯಲ್ಲಿ ಹಾಕಿಬಿಟ್ಟಿದ್ದವು. ಓಎಂಜಿ-2ನಲ್ಲಂತೂ ಭಸ್ಮ ಆರತಿಯನ್ನು ಮತ್ತೆ ಮತ್ತೆ ತೋರಿಸಿ, ಅಘೋರಿಗಳೇ ಅಲ್ಲೆಲ್ಲ ಓಡಾಡುತ್ತಿರುತ್ತಾರೆ, ಅವರೇ ಭಸ್ಮ ಆರತಿ ಮಾಡುತ್ತಾರೆ ಎಂಬ ಕಲ್ಪನೆ ಮೂಡಿಸಿ ಒಂಥರಾ ವಿಚಿತ್ರ ಆಕರ್ಷಣೆ-ಅದಮ್ಯ ಕುತೂಹಲ ಮೂಡಿಸಿದ್ದವು. ಒಂದು ತಿಂಗಳ ಮೊದಲೇ ಆನ್‌ಲೈನ್‌ನಲ್ಲಿ ‘ಭಸ್ಮ ಆರತಿ’ ಗಾಗಿ ಜಾಗ ಕಾದಿರಿಸಿದ್ದೆ.
ಕ್ಯೂನಲ್ಲಿ ನಮ್ಮ ಮುಂದೆ-ಹಿಂದೆ ಹಲವು ರೀತಿಯ ಜನ. ಕೆಲವರು ಶಿವನ ದೃಢ ಭಕ್ತರು. ಮತ್ತೆ ಕೆಲವರು ನನ್ನಂತೆ ಅರ್ಧ ಭಕ್ತಿ-ಇನ್ನರ್ಧ ಕುತೂಹಲದಿಂದ ಒಳಬಂದವರು. ಇನ್ನು ಕೆಲವರು ಕೇವಲ ಕುತೂಹಲಿಗಳು. 12ಕ್ಕೇ ‘ಮಹಾಕಾಲನ ಲೋಕ’ ಹೊಕ್ಕರೂ, ‘ಲೋಕ’ದ ಬಾಗಿಲು ತೆರೆದದ್ದು ಮಾತ್ರ 4 ಗಂಟೆಗೇ. ಸ್ಮಶಾನದ ವಾಸಿ ಶಿವನ ದೇವಾಲಯ-ಭಸ್ಮ ಆರತಿ-ಅಘೋರಿಗಳು ಇವೆಲ್ಲ ಪದಗಳ ಮಧ್ಯೆ ‘ಮಹಾಕಾಲ ಲೋಕಕ್ಕೆ ದಾರಿ’ ಎನ್ನುವ ಬೋರ್ಡು ನನ್ನೊಳಗೆ ಒಂದು ಕ್ಷಣ ಭಯ-ದಿಗಿಲುಗಳನ್ನೇ ತಂದವು!
ಒಳಗೆ ಹೊಕ್ಕರೆ ಗರ್ಭಗುಡಿಯೊಳಗೆ ಎಲ್ಲಿಯೂ ಇರಬಹುದಾದ ಶಿವಲಿಂಗ; ಗರ್ಭಗುಡಿಯ ಎದುರು ದೊಡ್ಡ ಪ್ರಾಂಗಣ, ಮೆಟ್ಟಿಲು ಮೆಟ್ಟಿಲುಗಳಾಗಿ ಜನ ಕುಳಿತುಕೊಳ್ಳುವ ವ್ಯವಸ್ಥೆ. ಶಿವ ಸ್ನಾನ ಮಾಡಿ ನೈವೇದ್ಯ-ಆರತಿ ಮಾಡಿಸಿಕೊಳ್ಳುವುದು ಒಂದು ಕಾರ್ಯಕ್ರಮ. ಜನ ಪ್ರೇಕ್ಷಕರು ಎಂಬ ರೀತಿಯಲ್ಲಿ! ಶಿವ ಎಷ್ಟೆಂದರೂ ನಟರಾಜನಷ್ಟೆ!
ಜನಜಂಗುಳಿಯೊಳಗೆ ಹೇಗೋ ‘ಸೀಟು’ ಹಿಡಿದು ಕುಳಿತೆವು. ‘ಮಹಾಕಾಲ’ನಿಗೆ ಇಲ್ಲಿರುವ ಅರ್ಥ ವಿಶೇಷ ‘ಕಾಲುನೋವು’ ಎಂದು ನಕ್ಕೆವು. ಮಂಡಿನೋವಿನಿಂದ ಕೆಳಗೆ ಕುಳಿತುಕೊಳ್ಳಲಾಗದ ಹಿರಿಯರು-ಆರೋಗ್ಯ ಸಮಸ್ಯೆಗಳಿಂದ ಬಳಲುವವರು ಇವರಿಗೆಲ್ಲ ಹೀಗೆ ಗಂಟೆಗಟ್ಟಲೆ ಕಾಯುವುದು ನಿಜವಾಗಿ ‘ಮಹಾಕಾಲನ ಮೃತ್ಯುಲೋಕ’ ಎದುರಿಸಿ ಬದುಕಿ ಬಂದ ಅನುಭವ ಇಲ್ಲಿ ಆಗಬಹುದೇನೋ ಎನಿಸಿಬಿಟ್ಟಿತು.
ಮಹಾಕಾಲನಿಗೆ ಉಜ್ಜಯಿನಿಯಲ್ಲಿ ಒಟ್ಟು ಆರು ಆರತಿಗಳು. ಅದರಲ್ಲಿ ದಿನದ ಮೊದಲ ಆರತಿ ‘ಭಸ್ಮ ಆರತಿ’. ಮಹಾಕಾಲನಿಗೆ ಸ್ನಾನ ಮಾಡಿಸಿ, ಅಲಂಕಾರ ಮಾಡಿ, ಎಬ್ಬಿಸುವ ಆರತಿ ಇದು. ಗರ್ಭಗುಡಿಯೊಳಗೆ ಬಣ್ಣ ಬಣ್ಣದ ಮಡಿ ವಸ್ತ್ರಗಳನ್ನುಟ್ಟ ಭಟ್ಟರ ಒಂದು ಗುಂಪು ಮೊಸರು, ಜೇನು, ಶ್ರೀಗಂಧ, ಹಾಲು, ನೀರುಗಳಿಂದ ಅಭಿಷೇಕ ಆರಂಭಿಸಿತು. ನಂತರ ಮುಖ್ಯ ಭಟ್ಟ ಎದುರು ಕುಳಿತು ಶಿವಲಿಂಗದ ಅಲಂಕಾರಕ್ಕಾರಂಭಿಸಿದ. ನೋಡು ನೋಡುತ್ತಿದ್ದಂತೆ ಕಲ್ಲಿನಂತಿದ್ದ ಶಿವಲಿಂಗದಲ್ಲಿ ದೊಡ್ಡ ಕಣ್ಣು-ಮೀಸೆ-ಕೆಂಪು ತುಟಿಗಳ ಸುಂದರ ಈಶ್ವರ ಮೈತಳೆಯತೊಡಗಿದ.
ಪ್ರತಿದಿನ ಶಿವ ಬೇರೆ ಬೇರೆ ರೀತಿಯಲ್ಲಿ ರೂಪುಗೊಳ್ಳುತ್ತಿರಬೇಕು. ಅಲಂಕಾರ ಮಾಡುತ್ತಿದ್ದ ಆ ಭಟ್ಟನೂ ‘ಕಲಾವಿದ’ ಅಂತಲೇ ನನಗನ್ನಿಸಿತು. ಇಷ್ಟು ಚೆಂದದ ಶಿವಲಿಂಗಕ್ಕೆ ಈಗ ಭಸ್ಮ ಹಾಕಿ ಏನು ಮಾಡಬಹುದು ಎಂಬ ಸಂದೇಹ ನನಗೆ. ಅದಕ್ಕೆ ಉತ್ತರವೆನ್ನುವ ಹಾಗೆ ಬಿಳೀ ವಸ್ತ್ರವೊಂದನ್ನು ಮುಚ್ಚಿದರು. ಭಟ್ಟರೆಲ್ಲ ಸುತ್ತ ನಿಂತರು. ಉದ್ದ ಗಡ್ಡ ಬಿಟ್ಟು ಕಾವೀ ವಸ್ತ್ರವುಟ್ಟ, ಋಷಿಯಂತಹ ವ್ಯಕ್ತಿ ಬಂದ. ಅವನ ಕೈಯ್ಯಲ್ಲಿ ಒಂದು ಪುಟ್ಟ ಗಂಟಿನಲ್ಲಿ ಭಸ್ಮ. ಆರಂಭವಾಯಿತು ಭಸ್ಮ ಆರತಿ!
ಕೃತಕ ಬರಹಗಾರ; ಕಂಪ್ಯೂಟರ್ ಕೈ ಬರೆಯುತ್ತದೆ
ಗಂಟಾನಾದದ ಮಧ್ಯೆ ಕೆಲವೇ ನಿಮಿಷಗಳಲ್ಲಿ ಇಡೀ ಗರ್ಭಗುಡಿ ಭಸ್ಮಮಯ. ಶಿವನ ಸುಂದರ ಮುಖ ಬಿಡಿ, ಆ ಕೋಣೆಯ ಯಾರೂ-ಏನೂ ಕಾಣದಂತಾಗಿಹೋಯಿತು. ಮತ್ತೆ ಭಸ್ಮದ ಮೋಡಗಳಿಂದ ನಿಧಾನವಾಗಿ ಶಿವನ ಮುಖ, ಆತನ ಸುತ್ತಲ ಜನ ಕಾಣತೊಡಗಿದರು. ಈಗ ಮತ್ತಷ್ಟು ಮಂತ್ರಗಳು. ಸುತ್ತಲಿದ್ದ ಭಕ್ತರು ಉತ್ತರ ಭಾರತದ ಶೈಲಿಯಲ್ಲಿ ‘ಓಂ ತ್ರ್ಯಂಬಕಂ ಯಜಾಮಹೇ, ಸುಗಂಧಿಂ ಪುಷ್ಟಿವರ್ದನಂ, ಉರ್ವಾರುಕಮಿವ ಬಂಧನಾನ್, ಮೃತ್ಯೋರ್ಮುಕ್ಷೀಯ ಮಾಮೃತಾಂ’ ಎಂಬ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸತೊಡಗಿದರು. ಈಗ ಗರ್ಭಗುಡಿಯ ಒಳಗಿನ ದೀಪಗಳನ್ನು ನಂದಿಸಿಬಿಟ್ಟರು.
ಕತ್ತಲಲ್ಲಿ ಬಣ್ಣದಿಂದ ಅಸ್ಪಷ್ಟವಾಗಿ ಕಾಣುವ ದೇವರ ಮುಖ, ದೊಡ್ಡ ಆರತಿಯ ಬೆಳಕಿನಲ್ಲಿ ವಿಚಿತ್ರ ಸೌಂದರ್ಯದಿಂದ, ಏಕಕಾಲಕ್ಕೆ ಭಯ-ಭಕ್ತಿ - ಆಕರ್ಷಣೆಗಳನ್ನು ತರುವಂತೆ ಕಾಣತೊಡಗಿತು. ದೇವರ ದರ್ಶನ-ಅಲಂಕಾರಗಳಲ್ಲಿಯೂ ‘ರಸಾನಂದ’ ಸಾಧ್ಯ ಎನಿಸಿಬಿಟ್ಟಿತು.
ಆ ಕ್ಷಣದಲ್ಲಿ ‘ಮಹಾಕಾಲ’ ಎಂಬ ಪರಿಕಲ್ಪನೆಯ ಬಗ್ಗೆ ಮನಸ್ಸು ಯೋಚಿಸತೊಡಗಿತು. ಕಾಲ ಎಂದರೆ ಸಮಯ- ಮೃತ್ಯು ಎರಡೂ ಹೌದು. ಲಯ-ಅಂದರೆ ಕೊಲ್ಲುವುದು; ಲಯಕ್ಕೆ ಮತ್ತೆ ಸಮಯಕ್ಕೆ ಸಂಬಂಧಿಸಿದ್ದೇ. ನೃತ್ಯ-ಸಂಗೀತ-ಕಾವ್ಯಗಳ ಕಾಲಪ್ರಮಾಣವನ್ನು ಲಯವೆಂದೇ ಕರೆಯಲಾಗುತ್ತದೆ. ನಿರಾಕಾರವಾದ ದೇವರ ಮುಖ-ಗೀತ ವಾದ್ಯಗಳ ಮಧ್ಯೆ ಸುಂದರ ಶಿವರೂಪಿಯಾಗುವುದು-ಭಸ್ಮದಿಂದ ಮರೆಯಾಗುವುದು ಮತ್ತೆ ಹೊರಬರುವುದು ಇವೆಲ್ಲವೂ ಸಾಂಕೇತಿಕವಾಗಿ ಸೃಷ್ಟಿ-ನಾಶಗಳ ಅನಂತ-ಅವಿರತ ಚಕ್ರವನ್ನು ಸೂಚಿಸಬಹುದೆ?
ಬಹಳ ಹಿಂದೆ ಸ್ಮಶಾನದಿಂದ ಅಂದರೆ ರುದ್ರನ ಭೂಮಿಯಿಂದ ತಂದ ಚಿತಾಭಸ್ಮದಿಂದಲೇ ಆರತಿ ನಡೆಯುತ್ತಿತ್ತಂತೆ. ಈಗ ಗೋಮಯ-ಕೆಲ ಮೂಲಿಕೆಗಳನ್ನು ಸುಟ್ಟು ಭಸ್ಮ ಮಾಡುತ್ತಾರೆ. ಆದರೆ ಭಸ್ಮದಿಂದ ನಡೆಯುವ ಆರತಿ ‘ರುದ್ರಭೂಮಿ’ಯ ಬಗೆಗೆ ನಮಗಿರುವ ಭಯ; ಮೃತ್ಯುವಿನ ಕುರಿತ ಹೆದರಿಕೆಗಳನ್ನು ದೂರವಾಗಿಸುವ ಒಂದು ಉಪಾಯವೂ ಇರಬಹುದೆ? ಕಣ್ಣ ಮುಂದಿರುವ ಶಿವನ ಸಾಕಾರ ರೂಪ ಮನಸ್ಸಿನಲ್ಲಿ ನಿರಾಕಾರವಾಗಿ ನೆಲೆಯಾಗುವುದು, ಸತ್ತವರ ದೇಹ ಭಸ್ಮವಾದರೂ, ಅವರ ನೆನಪು ನಿರಾಕಾರವಾಗಿ ನಮ್ಮಲ್ಲಿ ಉಳಿಯುವ ಸಂಕೇತವಿರಬಹುದೇ?
ಮಹಾಕಾಲನಿರುವುದು ಉಜ್ಜಯಿನಿಯಲ್ಲಿ. ಖಗೋಳಶಾಸ್ತ್ರದ ಪ್ರಕಾರ ಉಜ್ಜಯಿನಿ ಕರ್ಕರೇಖೆ (ಟ್ರಾಫಿಕ್ ಆಫ್ ಕ್ಯಾನ್ಸರ್) ಮತ್ತು ಶೂನ್ಯ ರೇಖೆ /ಭೂಮಧ್ಯರೇಖೆ (Zero meridian)ಗಳು ಕೂಡುವ ಸಂಧಿಯಲ್ಲಿದೆಯಂತೆ! ಮತ್ತೆ ಇದೂ ಸಮಯಕ್ಕೇ ಸಂಬಂಧಿಸಿದ್ದೇ.
12 ಜ್ಯೋತಿರ್ಲಿಂಗಗಳಲ್ಲಿ ಇದು ಒಂದು. ಜೊತೆಗೆ ಮಹಾಕಾಲನೊಂದಿಗೆ ಮಹಾಕಾಳಿಯೂ ಇಲ್ಲಿ ಇರುವುದರಿಂದ ಇದು ಶಕ್ತಿ ಪೀಠವೂ ಹೌದು. 12 ಜ್ಯೋತಿರ್ಲಿಂಗಗಳಲ್ಲಿ ಮಹಾಕಾಲ ಮಾತ್ರ ದಕ್ಷಿಣ ದಿಕ್ಕಿಗೆ ತಿರುಗಿರುವವನು. ಅಂದರೆ ಯಮನ ದಿಕ್ಕು. ಮೃತ್ಯುವಿನ ಕಡೆಗಿರುವ ದೇವಮುಖ! ದೇವ-ದೇವಿಯರ ಜೊತೆಗೆ ಕವಿ ಕಾಳಿದಾಸನ ಪ್ರೀತಿಯ ನಗರಿಯಾಗಿಯೂ ಉಜ್ಜಯಿನಿ ನಮ್ಮ ಗಮನ ಸೆಳೆಯುತ್ತದೆ. ಕಾಳಿದಾಸ ತನ್ನ ಮೇಘದೂತದಲ್ಲಿ ಮೋಡಕ್ಕೆ ಮಹಾಕಾಲ ಮಂದಿರಕ್ಕೆ ಹೋಗುವಂತೆ, ಅಲ್ಲಿ ನಟರಾಜನ ನಾಟ್ಯವನ್ನು ನೋಡುವಂತೆ ಹೇಳುವ ವಿವರಗಳು ಬರುತ್ತವೆ. ಕಾಳಿದಾಸನ ಅದ್ಭುತ ಕಾವ್ಯಶಕ್ತಿಗೆ ಉಜ್ಜಯಿನಿಯ ಪರಿಸರ, ಮಹಾಕಾಲನ ಸ್ಫೂರ್ತಿ, ನಂತರ ಕಾಳಿದಾಸ ತನ್ನ ಪ್ರತಿಭೆಯಿಂದ ಇವರಿಬ್ಬರ ಹೆಸರು-ವರ್ಣನೆಗಳನ್ನು ಮೂಡಿಸಿದ್ದು ಎರಡೂ ನನ್ನ ಮನಸ್ಸಿನಲ್ಲಿ ಮಹಾಕಾಲನೆದುರು ನಿಂತಾಗ ಹಾದು ಹೋದ ಸಂಗತಿಗಳು.
ಮಹಾಕಾಲನೇ ಉಜ್ಜಯಿನಿಯ ನಿಜ ಒಡೆಯ. ಅದರಲ್ಲೇನು ವಿಶೇಷ? ದೇವರು ಇಡೀ ಜಗತ್ತಿನ ರಾಜ ಅಂತ ನಾವೆನ್ನಬಹುದು. ಆದರೆ ಉಜ್ಜಯಿನಿಯಲ್ಲಿ ಬೇರೆ ಯಾರನ್ನೂ ಮಹಾರಾಜ ಅನ್ನುವ ಹಾಗಿಲ್ಲವಂತೆ! ಯಾವುದಾದರೂ ರಾಜ ಒಂದು ರಾತ್ರಿ ಉಜ್ಜಯಿನಿಯಲ್ಲಿ ಕಳೆದರೆ ಆತ ತನ್ನ ರಾಜ್ಯ ಕಳೆದುಕೊಳ್ಳುವುದು ಗ್ಯಾರಂಟಿಯಂತೆ. ಹಾಗಾಗಿಯೇ ಈಗಲೂ ಪ್ರಧಾನಿ/ಮುಖ್ಯಮಂತ್ರಿ ಮೊದಲಾದವರು ಉಜ್ಜಯಿನಿಯಲ್ಲಿ ರಾತ್ರಿ ಇರಲು ಹೆದರುತ್ತಾರಂತೆ!
ಮಹಾಕಾಲೇಶ್ವರನನ್ನು ಓಎಂಜಿ-2 ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮಾಡಿದ ರೀತಿ ನೋಡಿ ‘ಈ ಬಾಲಿವುಡ್ ಜನವೇ’ ಎಂದುಕೊಂಡ ನನಗೆ, ಚೂಡಿದಾರವನ್ನೇ ಸೀರೆಯನ್ನು ಹಾಕಿ ವಿಚಿತ್ರ ರೀತಿಯಲ್ಲಿ ಸುತ್ತಿದ್ದ ನನ್ನನ್ನು ನೋಡಿಯೂ ಏನೂ ಹೇಳದ ಸೆಕ್ಯೂರಿಟಿ-ಕ್ಯಾಡ್‌ಬರೀಸ್ ಚಾಕಲೇಟನ್ನು ನೈವೇದ್ಯಕ್ಕೆ ಅರ್ಪಿಸುವ ಜನರನ್ನು ನೋಡಿ ಗಣಗಳನ್ನೇ ಪ್ರೀತಿಸುವ ಮಹಾಕಾಲನದ್ದೇ ಮಹಿಮೆ ಎಂಬುದು ಖಾತರಿಯಾಯಿತು.
ನಮಸ್ಕಾರ ಮಾಡಿ 6 ಗಂಟೆಗೆ ಹೊರ ಬಂದಾಗ ಬ್ಯಾಟರಿ ಗಾಡಿಗಳು ಅಲ್ಲಲ್ಲಿ ಓಡಾಡುತ್ತಿದ್ದವು. ಚಾಯ್-ಧೂಧ್ ಗಾಡಿಗಳು ‘ಬಿಸಿಬಿಸಿ’ಯಾಗಿ ಕಾಣುತ್ತಿದ್ದವು. ಸುತ್ತ ಮೋದಿ ಮಾಡಿಸಿರುವ ‘ಮಹಾಕಾಲ ಕಾರಿಡಾರ್’ನ ಮೂರ್ತಿಗಳು, ಶಿವನ ಕಥೆಗಳು ದೊಡ್ಡ ಶಿಲ್ಪಾಕೃತಿಗಳಲ್ಲಿ ಎದ್ದು ನಿಂತಿದ್ದವು.
ಮಹಾಕಾಲನ ಲೋಕದೊಳಗೆ ಎಲ್ಲವೂ ಸುಂದರ. ಆದರೆ ಸೆಕ್ಯೂರಿಟಿ ಜನರಿಗೆ ಮಾತ್ರ ಅಹಂಕಾರ! ಯಾರನ್ನೂ ಸೌಜನ್ಯದಿಂದ ಮಾತನಾಡಿಸುವ, ಹಿರಿಯರಿಗೆ ಸಹಾಯ ಮಾಡುವ ಬುದ್ಧಿ ಕಿಂಚಿತ್ತೂ ಕಾಣಲಾರದು. ಓಎಂಜಿ-2ರಲ್ಲಿ ಅಕ್ಷಯ್ ಕುಮಾರ್ ಮಹಾಕಾಲನ ಪಾತ್ರದಲ್ಲಿ ವಿವಿಧ ರೀತಿಗಳಲ್ಲಿ ಬಂದು ಜನರಿಗೆ ಬುದ್ಧಿ ಕಲಿಸಿದ ಹಾಗೆ, ಈ ಸೆಕ್ಯೂರಿಟಿ ಜನರಿಗೂ ಮಹಾಕಾಲ ಒಂದಿಷ್ಟು ಸೊಕ್ಕು ಮುರಿಯುವ ಹಾಗಿದ್ದರೆ ಎನ್ನಿಸಿತು. ಉಜ್ಜಯಿನಿಯಲ್ಲಿ ಮಹಾಕಾಲನ ಬಿಟ್ಟರೆ ಬೇರೆ ಯಾರೂ ತಾವು ರಾಜ ಅಂದುಕೊಳ್ಳುವ ಹಾಗಿಲ್ಲವಂತೆ, ಎಂಬ ನಂಬಿಕೆ ಈ ಅಹಂಕಾರಿಗಳಿಗೆ ಅನ್ವಯಿಸುವುದಿಲ್ಲವೇಕೆ? ಹುಟ್ಟು -ಸಾವು-ಅಹಂಕಾರ- ಒಡೆತನ- ಆಸ್ತಿಕತೆ-ನಾಸ್ತಿಕತೆ ಎಲ್ಲದರ ನಡುವೆ ಇರುವ ತೆಳುಗೆರೆಗಳನ್ನು ಯೋಚಿಸುತ್ತಲೇ ಹೊರಬಂದೆ.