ಲಡಾಖ್ ಅಮೃತಯಾತ್ರೆ - 2022: ಭಾಗ-9, ಹಾನ್‌ಲೇ... ಅದು ಬೇರೆಯೇ ಗ್ರಹ !

By Suvarna NewsFirst Published Sep 18, 2022, 4:12 PM IST
Highlights

ಚೀನಾ ಗಡಿಯಿಂದ ಕೇವಲ 40 ಕಿ.ಮೀ. ದೂರದ ಹಳ್ಳಿ. ರಾತ್ರಿ ಹೊತ್ತಲ್ಲಿ ಕೈಗೆಟಕುತ್ತವೇನೋ ಅನಿಸುವಂತಿರುವ ಗ್ರಹ, ನಕ್ಷತ್ರಪುಂಜ, ಉಲ್ಕಾಪಾತಗಳು. ಎಲ್ಲೆಲ್ಲೂ ಸೇನೆ, ಸೈನಿಕರು, ಸೇನಾ ವಾಹನ, ಸೇನಾ ಶಿಬಿರ. ಹಿಮಪರ್ವತ, ಬೋಳುಬೆಟ್ಟ, ಮರುಭೂಮಿ, ಹುಲ್ಲುಗಾವಲು, ಬಟಾಬಯಲುಗಳೆಲ್ಲವೂ ಇರುವ ಪ್ರದೇಶ. ವಿಶ್ವದ ಅತಿ ಎತ್ತರದ ವಾಹನ ಸಂಚಾರಿ ಮಾರ್ಗ ಇರುವ ಉಮ್ಲಿಂಗ್‌ ಲಾ ಪಾಸ್‌. ಭಾರತದಲ್ಲೇ ಅತಿ ಎತ್ತರದ ಸರೋವರಗಳಲ್ಲೇ ಅತಿ ದೊಡ್ಡದು ಎನಿಸಿಕೊಂಡ, 23 ಕಿ.ಮೀ. ಉದ್ದವಿರುವ ಸೋ ಮೊರಿರಿ. ಇದು ನಮ್ಮ ಯಾತ್ರೆಯ ಭಾಗ-2ರ ಪ್ರದೇಶಗಳ ಪರಿಚಯ. ಆ ಅನುಭವ ಮುಂದೆ ಓದಿ...

-ರವಿಶಂಕರ್ ಭಟ್‌

ಯಾತ್ರೆಯ ಮಾರ್ಗದಲ್ಲಿ ಸಣ್ಣ ಮಾರ್ಪಾಡು
ಚಂಡೀಗಢದಿಂದ ಲೇಹ್ ತಲುಪುವಷ್ಟರಲ್ಲಿ ನಮ್ಮ ಯಾತ್ರೆಯ ಮೊದಲ ಚರಣ ಮುಕ್ತಾಯವಾಗಿತ್ತು. ದಕ್ಷಿಣ ದಿಕ್ಕಿನಿಂದ ಲಡಾಖ್‌ ಪ್ರಾಂತ್ಯ ಪ್ರವೇಶಿಸಿದ ನಾವು ವಾಯವ್ಯ, ಉತ್ತರ ದಿಕ್ಕಿನಲ್ಲಿ ಚಲಿಸಿ ಕಾರ್ಗಿಲ್‌ನಲ್ಲಿ ಪೂರ್ವಕ್ಕೆ ತಿರುಗಿ ಲೇಹ್ ತಲುಪಿದ್ದೆವು. ಇನ್ನು ದಕ್ಷಿಣ ಹಾಗೂ ಆಗ್ನೇಯ ದಿಕ್ಕಿನಲ್ಲಿ ಚಲಿಸಿ ಮತ್ತೆ ಪಶ್ಚಿಮಕ್ಕೆ ತಿರುಗಿ ಚಂಡೀಗಢ ತಲುಪುವುದು ನಮ್ಮ ಲಡಾಖ್ ಪ್ರದಕ್ಷಿಣೆ ಯಾತ್ರೆಯ ಯೋಜನೆ. ಅಂದರೆ, ಲೇಹ್ ನಿಂದ ದಕ್ಷಿಣದಲ್ಲಿರುವ ಹಾನ್‌ ಲೇ ಪ್ರದೇಶ, ಅಲ್ಲಿಂದ ಉಮ್ಲಿಂಗ್‌ ಲಾ ಪಾಸ್‌, ಮರಳಿ ಹಾನ್‌ ಲೇಗೆ ಬಂದು ಪಶ್ಚಿಮಕ್ಕೆ ತಿರುಗಿ ಸೋ ಮೊರಿರಿ ಸರೋವರಕ್ಕೆ ಭೇಟಿ ನೀಡಿ, ಅಲ್ಲಿಂದ ವಾಯವ್ಯ ದಿಕ್ಕಲ್ಲಿ ಸಾಗಿ ಸೋ ಕರ್‌ ಸರೋವರ ಮಾರ್ಗವಾಗಿ ಡೆಬ್ರಿಂಗ್ ತಲುಪುವುದು. ಅಲ್ಲಿ ಸಿಗುವ ಲೇಹ್-ಮನಾಲಿ ಹೆದ್ದಾರಿ ಮಾರ್ಗವಾಗಿ ಎಡಕ್ಕೆ ತಿರುಗಿ ನೈಋತ್ಯ ದಿಕ್ಕಿನಲ್ಲಿ ಸಂಚರಿಸಿ ಚಂಡೀಗಢಕ್ಕೆ ಮರಳುವುದೆಂದು ಯೋಜಿಸಿದ್ದ ದಿಲೀಪ.

ಆದರೆ, ವಾಸ್ತವ್ಯ, ಇಂಧನ ಲಭ್ಯತೆ, ಇತರೆ ಪ್ರಾದೇಶಿಕ ಅಡಚಣೆಗಳು, ಕೆಲ ತಾಂತ್ರಿಕ ಅಡ್ಡಿ-ಆತಂಕಗಳಿಂದಾಗಿ ಸೋ ಕರ್‌, ಡೆಬ್ರಿಂಗ್‌ ಮಾರ್ಗವಾಗಿ ಮರಳುವ ಯೋಚನೆಯನ್ನು ಕೈಬಿಟ್ಟು, ಮರಳಿ ಲೇಹ್‌ಗೇ ಬಂದು ಮನಾಲಿ ಮೂಲಕ ಚಂಡೀಗಢಕ್ಕೆ ಹೋಗುವುದೆಂದು ತೀರ್ಮಾನಿಸಿದ್ದ. ಇದರಿಂದ ಸುಮಾರು 140-150 ಕಿ.ಮೀ. ಹೆಚ್ಚುವರಿ ಪ್ರಯಾಣ ಆದರೂ ಅದು ಇದ್ದುದರಲ್ಲಿ ಸುರಕ್ಷಿತ (Safe) ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದ. ಅನುಭವಿಯ ತೀರ್ಮಾನಕ್ಕೆ ನಾವೂ ಸೈ ಅಂದೆವು.

ಲಡಾಖ್ ಅಮೃತ ಯಾತ್ರೆ – 2022 ಭಾಗ-5: ಜನ್ಸ್ಕಾರ್ ರೈಡ್ - ಏಕಾಗ್ರತೆ, ಕೌಶಲ್ಯ, ಮನೋಬಲ, ಸಾಮರ್ಥ್ಯ ಪರೀಕ್ಷೆ!

700 ಕಿ.ಮೀ. ಪೆಟ್ರೋಲ್ ಬಂಕೇ ಇಲ್ಲ!
ಮೇಲೆ ಹೇಳಿದ ಮಾರ್ಗವಾಗಿ ಲೇಹ್‌ನಿಂದ ಹೊರಟು ಮರಳಿ ಲೇಹ್‌ ತಲುಪಲು ಸುಮಾರು 760-770 ಕಿ.ಮೀ. ಆಗುತ್ತದೆ. ಈ ಮಾರ್ಗದಲ್ಲಿ 35 ಕಿ.ಮೀ. ಸಾಗಿದರೆ ಕಾರು ಎಂಬ ಪಟ್ಟಣ (City) ಸಿಗುತ್ತದೆ. ಅದೇ ಕೊನೆ. ಅಲ್ಲಿಂದ ಮುಂದಕ್ಕೆ ಎಲ್ಲೂ ಪೆಟ್ರೋಲ್ ಬಂಕ್‌ ಇಲ್ಲ. ಅಂದರೆ, ಕಾರುವಿನಿಂದ ಹಾನ್‌ ಲೇ, ಉಮ್ಲಿಂಗ್‌ ಲಾ, ಮರಳಿ ಹಾನ್‌ ಲೇ, ಸೊ ಮೊರಿರಿ ಎಲ್ಲ ಸುತ್ತಾಡಿ ಮತ್ತೆ ಕಾರು ಪಟ್ಟಣ ತಲುಪಲು ಸರಿಸುಮಾರು 700 ಕಿ.ಮೀ. ಪ್ರಯಾಣ. ನಮ್ಮ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ಗಳು ಒಮ್ಮೆ ಹೊಟ್ಟೆ ತುಂಬಿದರೆ ಸುಮಾರು 400-450 ಕಿ.ಮೀ. ಸಾಗಬಲ್ಲವು. ಮಹೀಂದ್ರ ಥಾರ್ ಒಮ್ಮೆ ಟ್ಯಾಂಕ್ ತುಂಬಿಸಿದರೆ 650-700 ಕಿ.ಮೀ.ಗೆ ಮೋಸವಿಲ್ಲ. ಹಾಗಾಗಿ, ನಾವು ಒಂದೋ ಕ್ಯಾನ್‌ಗಳಲ್ಲಿ ಪೆಟ್ರೋಲ್‌, ಡೀಸೆಲ್ ತುಂಬಿ ಒಯ್ಯಬೇಕು.

ಇಲ್ಲವೇ, ಕೆಲವು ಹಳ್ಳಿಗಳಲ್ಲಿ ಕದ್ದುಮುಚ್ಚಿ ಮಾರುವ ಒಂದಕ್ಕೆರಡು ಬೆಲೆಯ ಇಂಧನ ಖರೀದಿಸಬೇಕು. ನಾವು ಮೊದಲ ರೀತಿ ವ್ಯವಸ್ಥೆ ಮಾಡಿಕೊಂಡೆವು. ಲೇಹ್‌ನಿಂದ ಕಾರು ಪಟ್ಟಣದವರೆಗೆ ಪ್ರಯಾಣಿಸಿ ಅಲ್ಲಿ ಇಂಧನ ಭರ್ತಿ ಮಾಡಿದೆವು. ಅಲ್ಲದೆ, ಥಾರ್‌ನಲ್ಲಿ ಬೆಂಗಳೂರಿಂದಲೇ ಒಯ್ದಿದ್ದ 20 ಲೀ. ಕ್ಯಾನಲ್ಲಿ ಡೀಸೆಲ್, ಲೇಹ್‌ನಲ್ಲಿ ವಂಶಿಯಿಂದ ಪಡೆದಿದ್ದ ಐದೈದು ಲೀಟರಿನ ಎರಡು ಕ್ಯಾನ್‌ಗಳಲ್ಲಿ ಪೆಟ್ರೋಲ್‌ ತುಂಬಿ ಹಾನ್‌ ಲೇ ಕಡೆಗೆ ಪ್ರಯಾಣ (Travel) ಆರಂಭಿಸಿದೆವು.

ಹಿಮಪರ್ವತ, ಬೋಳುಬೆಟ್ಟ, ಮರುಭೂಮಿ, ಬಟಾಬಯಲು, ಹುಲ್ಲುಗಾವಲು!
ವಂಶಿ ಮೊದಲೇ ಹೇಳಿದ್ದ. ಇಲ್ಲಿಂದ ಹಾನ್‌ ಲೇಗೆ ಟೂಫಿಫ್ಟಿ ಕಿಲೋಮೀಟರ್ಸ್ ಬ್ರೋ. ಮಿಡ್ಲ್‌ನಲ್ಲಿ ಟ್ವೆಂಟಿ ಕಿಲೋಮೀಟರ್ಸ್ ಕಚ್ಚಾ ರಸ್ತೆ ಇದೆ. ಅದು ಬಿಟ್ಟರೆ ಹಾನ್‌ ಲೇ ವರೆಗೂ ಸೂಪರ್‌ ಟಾರ್‌ ರೋಡ್‌ ಇದೆ ಅಂತ. ಹಾಗಾಗಿ, ನಮ್ಮ ಪ್ರಯಾಣ ತ್ರಾಸಿಲ್ಲದ್ದು ಅಂದುಕೊಂಡಿದ್ದೆವು. ಅದು ನಿಜವೂ ಆಗಿತ್ತು. ಆದರೆ, ಆ 250 ಕಿ.ಮೀ. ಪ್ರಯಾಣದ ಅನುಭವ ಬಣ್ಣಿಸಲಸದಳವಾದದ್ದು. ಲೇಹ್‌ನಿಂದ ಸುಮಾರು 50 ಕಿ.ಮೀ. ದೂರವರೆಗಿನ ಉಪ್ಷಿ ಎಂಬಲ್ಲಿವರೆಗೆ ಹೆಚ್ಚೂಕಮ್ಮಿ ಒಂದೇ ರೀತಿಯ ಪ್ರದೇಶ. ಅಲ್ಲಲ್ಲಿ ಜನವಸತಿ ಇರುವ ಪ್ರಾಂತ್ಯ.

ಲಡಾಖ್ ಅಮೃತ ಯಾತ್ರೆ – 2022 ಭಾಗ-6. ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು !

ಆದರೆ, ಒಮ್ಮೆ ಉಪ್ಷಿ ದಾಟಿದರೆ 25-30 ಕಿ.ಮೀ.ಗೊಂದರಂತೆ ಭೌಗೋಳಿಕ ದೃಶ್ಯ. ಮೊದಲಿಗೆ, ಅಕ್ಕಪಕ್ಕದಲ್ಲಿ ಕಲ್ಲು-ಬಂಡೆಗಳಿಂದ ಕೂಡಿದ ಬೆಟ್ಟಗಳ ನಡುವಣ ಕಡಿದಾದ ಕಣಿವೆಯಲ್ಲಿ ಸಾಗುವ ರಸ್ತೆ. ಅಲ್ಲಲ್ಲಿ ರಸ್ತೆ ಮೇಲೆ ಉರುಳಿದ ಸಣ್ಣ ಸಣ್ಣ ಬಂಡೆಗಳು. ಕಣಿವೆ ರಸ್ತೆಯ ಪಕ್ಕದಲ್ಲೇ ಹರಿಯುವ ಸಿಂಧೂ ನದಿ (Sindu River). ಮುಂದೆ ಸಾಗುತ್ತಿದ್ದಂತೆ ಅಗಲವಾಗುವ ಕಣಿವೆ, ತುಸು ದೂರವಾಗುವ ಬೆಟ್ಟಗಳು. ಅವುಗಳ ಹಿಂದೆ ಅರಳಿದ ಹಿಮಶಿಖರಗಳು. ಇದ್ದಕ್ಕಿದ್ದಂತೆ ಬದಲಾಗುವ ಬೆಟ್ಟಗಳ ಬಣ್ಣ. ಒಮ್ಮೆ ಬೂದು, ಮತ್ತೊಮ್ಮೆ ಕಂದು, ಮಗದೊಮ್ಮೆ ಕೆಂಪು. ಸಮುದ್ರಮಟ್ಟದಿಂದ ಸುಮಾರು 13-14 ಸಾವಿರ ಅಡಿ ಎತ್ತರದ ಪ್ರದೇಶದ ಮಾರ್ಗವದು. ತೀರಾ ಏರಿಳಿತ ಇಲ್ಲ. ಮುಂದೆ ಮುಂದೆ ಹೋಗುತ್ತಿದ್ದಂತೆ ಪಕ್ಕದ ಬೆಟ್ಟಗಳಲ್ಲಿ ಕಲ್ಲುಗಳ ಬದಲು ಮರಳು. ಮತ್ತೊಂದು ಮಗ್ಗುಲಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳು ತುಂಬಿದ ಬಟಾಬಯಲು. Cold Desert ಎಂದು ಕರೆಸಿಕೊಳ್ಳುವ ತುಂಡು ಮರುಭೂಮಿ. ಕಿಯಾರಿ ಕಣಿವೆ ದಾಟಿ, ಹಿಮ್ಯಾ ಗ್ರಾಮದಲ್ಲಿ ಚಹಾ ಹೀರಿ, ಬಿಸಿನೀರ ಬುಗ್ಗೆಗಳಿರುವ ಚುಮಾತಾಂಗ್‌ ಹಾದು, ಸುಮಾರು 20 ಕಿ.ಮೀ. ದೂರಕ್ಕೆ ಕಚ್ಚಾರಸ್ತೆ (Road) ಇರುವ ಮಾಹೆ ಬಳಿಕ ನ್ಯೋಮಾವನ್ನು ಹಿಂದಿಕ್ಕಿ ಲೋಮಾ ಎಂಬಲ್ಲಿಗೆ ತಲುಪಿದಾಗ ಸುಮಾರು 200 ಕಿ.ಮೀ. ಪ್ರಯಾಣಿಸಿದ್ದೆವು.

ಅಷ್ಟು ಹೊತ್ತೂ ಒಂದು ಮಗ್ಗುಲಲ್ಲಿ ಸಾಥ್‌ ಕೊಟ್ಟಿದ್ದ ಸಿಂಧೂ ನದಿಯನ್ನು ಬೀಳ್ಕೊಟ್ಟು ನಾವು ಮತ್ತೊಂದು ದಿಕ್ಕಿಗೆ ತಿರುಗಬೇಕಾಯಿತು. ಅಲ್ಲಿಂದ ಹಾನ್‌ ಲೇಗೆ ಸುಮಾರು 50 ಕಿ.ಮೀ. ಅಲ್ಲಿವರೆಗಿನ ಪ್ರದೇಶದ್ದು ಒಂದು ಕತೆಯಾದರೆ, ನಂತರದ ಭೂಭಾಗದ ಚಹರೆಯೇ ಬೇರೆ. ಖಾಲಿ ಬಟಾಬಯಲಿನ ಬದಲು ವಿಶಾಲ ಹುಲ್ಲುಗಾವಲು. ಅಲ್ಲಲ್ಲಿ ಮೇಯುವ, ಕತ್ತೆಯನ್ನು ಹೋಲುವ ಕಿಯಾಂಗ್‌ಗಳು. ಒಟ್ಟಿನಲ್ಲಿ ಭೂಮಿಯಲ್ಲ, ಬೇರೆಯೇ ಗ್ರಹ (Planet) ಎನ್ನುವಂಥ ಪ್ರದೇಶ.

ಅಲ್ಲಿ ಟಾರು ರಸ್ತೆಯೇ ಕೊಚ್ಚಿ ಹೋಗಿತ್ತು!
ಹಾನ್‌ಲೇ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ರಸ್ತೆ ಮೇಲೆ ನೀರಿನ ಹರಿವು ಕಾಣಿಸತೊಡಗಿತ್ತು. ದೂರದ ಪರ್ವತಗಳಲ್ಲಿ ಒಂದೋ ಹಿಮ ಕರಗಿ, ಇಲ್ಲವೇ ಭಾರೀ ಮಳೆಯಾಗಿ ಮರಳು ಕೊಚ್ಚಿಕೊಂಡು ಬಂದು ಕೆಲವು ಕಡೆ ಟಾರೇ ಮುಚ್ಚಿ ಹೋಗಿತ್ತು. ನಾಜೂಕಾಗಿ ಬೈಕ್, ಥಾರ್ ಚಲಾಯಿಸುತ್ತಾ ಹೋಗುವಾಗ ಒಂದೆಡೆ ರಸ್ತೆಯೇ ಕೊಚ್ಚಿ ಹೋಗಿತ್ತು. ಆ ಜಾಗದಲ್ಲಿ ರಭಸವಾಗಿ ನೀರು ಹರಿಯುತ್ತಿತ್ತು. ರಸ್ತೆ ಕೊಚ್ಚಿ ಹೋದ ಕಾರಣ 2-3 ಅಡಿಯ ತಗ್ಗು ಉಂಟಾಗಿತ್ತು. ಅದನ್ನು ದಾಟಿ ಮುಂದೆ ಸಾಗಲು ಸಾಧ್ಯವೇ ಇರಲಿಲ್ಲ. ಆಚೆ ಬದಿಗೆ ಹೋಗಲು ರಸ್ತೆಯಿಂದ ಬಲ ಮಗ್ಗುಲಿಗೆ ಸರಿದು ಒಂಚೂರು ಮುಂದೆ ಹೋಗಿ ಕನಿಷ್ಠ 50-60 ಅಡಿಯಷ್ಟು ಹಳ್ಳದಂತೆ ಹರಿಯುತ್ತಿದ್ದ ನೀರನ್ನು ದಾಟಬೇಕಿತ್ತು. ಈ ರೀತಿಯ ಅದೆಷ್ಟೇ ಜಲದಾಟುಗಳನ್ನು ಜನ್ಸ್ ಖಾರ್ ಪ್ರಯಾಣದಲ್ಲಿ ಮಾಡಿದ್ದೆವಲ್ಲ. ಇಲ್ಲಿ ಒಂದೇ ಒಂದು ಆತಂಕ ಎಂದರೆ ನೀರಿನಾಳ ಗೊತ್ತಾಗುತ್ತಿಲ್ಲ. ಆದರೆ, ನಮ್ಮ ಅದೃಷ್ಟಕ್ಕೆ ನಮಗಿಂತ ಮುಂಚಿತವಾಗಿ ಎಸ್‌ಯುವಿಯಲ್ಲಿದ್ದ ತಂಡವೊಂದು ಧೈರ್ಯ್ ಮಾಡಿ ಹಳ್ಳ ದಾಟಿತು. 2-3 ಅಡಿಗಿಂತ ಆಳವಿಲ್ಲ ಎಂಬುದು ಖಾತ್ರಿಯಾದ ಬಳಿಕ ನಾವೂ ದಾಟಿ ಮುಂದೆ ಸಾಗಿದೆವು.

ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!

ಎಲ್ಲೆಲ್ಲೂ ಸೇನೆ, ಸೈನಿಕರು, ಸೇನಾ ವಾಹನ, ಸೇನಾ ಶಿಬಿರ
ಅಂತೂ ಇಂತೂ ಹಾನ್ ಲೇ ಸಮೀಪಿಸಿದೆವು. In Land Permit ಇದ್ದವರಿಗೆ ಮಾತ್ರ ಆ ಪ್ರದೇಶಕ್ಕೆ ಪ್ರವೇಶ. ಅದನ್ನು ಲೇಹ್‌ನಲ್ಲಿ ಆನ್‌ಲೈನ್‌ನಲ್ಲೇ ಮಾಡಿಕೊಂಡು ಬಂದಿದ್ದೆವು. ಲೋಮಾದ ಸೇನಾ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಿ ನಮ್ಮನ್ನು ಮುಂದಕ್ಕೆ ಹೋಗಲು ಅನುವು ಮಾಡಿಕೊಟ್ಟಿದ್ದರು. ಹಾನ್ ಲೇ ಹೊರವಲಯ ತಲುಪಿದಾಗ 7 ಗಂಟೆ ಕಳೆದಿತ್ತು. ಪರ್ವತಗೆಳೆಡೆಯಲ್ಲಿ ಸೂರ್ಯ ಮುಳುಗುತ್ತಿದ್ದ. ಅಲ್ಲಿಂದ ಪೂರ್ವಕ್ಕೆ 40 ಕಿ.ಮೀ. ದೂರದಲ್ಲಿ ಭಾರತ-ಚೀನಾ ಗಡಿ. ಎಲ್ಲಿ ನೋಡಿದರೂ ಸೇನೆ, ಸೈನಿಕರು, ಸೇನಾ ಶಿಬಿರಗಳು. ಒಂದರ ಹಿಂದೊಂದರಂತೆ ಸಾಗುವ ಸೇನಾ ವಾಹನಗಳು (Army vehicles). ಸ್ಥಳೀಯರಿಗಿಂತ ಸೇನಾ ನೆಲೆಗಳೇ ಹೆಚ್ಚು. ನಿಶ್ಶಬ್ದವಾಗಿತ್ತಾದರೂ ಯಾವುದೋ ಯುದ್ಧಭೂಮಿಗೆ ತೆರಳಿದಂಥ ಅನುಭವ. 

ನೆಟ್‌ವರ್ಕ್ ಇಲ್ಲದ ಊರಲ್ಲಿ ವಾಸ್ತವ್ಯಕ್ಕಾಗಿ ಹುಡುಕಾಟ
ಅಲ್ಲಿಯವರೆಗೆ ಯಾವ ಪುಟ್ಟ ಊರು (Village) ತಲುಪಿದರೂ ರಿಲಯನ್ಸ್ ಜಿಯೋ ಪೋಸ್ಟ್ ಪೇಡ್ ನೆಟ್‌ವರ್ಕ್ ಕೆಲಸ ಮಾಡುತ್ತಿತ್ತು. ಆದರೆ, ಹಾನ್‌ ಲೇಯಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಇರಲಿಲ್ಲ. ಬಿಎಸ್ಸೆನ್ನೆಲ್ ಪೋಸ್ಟ್‌ ಪೇಡ್ ಸಂಪರ್ಕ ಇದ್ದರೆ ನೆಟ್‌ವರ್ಕ್ ಸಿಗುತ್ತದೆ ಎಂದು ಯಾರೋ ಹೇಳಿದರು. ನಾವು ಯಾರೂ ಅದನ್ನು ಹೊಂದಿರಲಿಲ್ಲ. ಇದ್ದವರಿಗೂ ನೆಟ್ ವರ್ಕ್ ದುರ್ಲಭ ಎಂಬುದು ಆಮೇಲೆ ತಿಳಿಯಿತು. ಹಾನ್ ಲೇ ಗ್ರಾಮದಲ್ಲಿ ಒಂದೆರಡು ಹೋಮ್‌ ಸ್ಟೇಗಳನ್ನು ಹೊರತುಪಡಿಸಿದರೆ ಹೊರಗಿಂದ ಬಂದವರ ವಾಸ್ತವ್ಯಕ್ಕೆ ಬೇರೆ ವ್ಯವಸ್ಥೆ ಇರಲಿಲ್ಲ. ಆದರೆ, ನಾವು ಹೋಮ್‌ಸ್ಟೇಯಲ್ಲಿ ಉಳಿಯುವ ಯೋಜನೆ ಹಾಕಿಕೊಂಡಿರಲಿಲ್ಲ. ದಿಲೀಪನ ಪರಿಚಿತರೊಬ್ಬರ ಮೂಲಕ ಮೊದಲೇ ಸ್ಥಳೀಯರೊಬ್ಬರಲ್ಲಿ ತಂಗಲು ಮಾತನಾಡಿ ಆಗಿತ್ತು. ಆದರೆ, ಅದೆಲ್ಲಿದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಫೋನ್ ಮಾಡಿ ಕೇಳೋಣ ಅಂದರೆ ನೆಟ್‌ವರ್ಕೇ ಇಲ್ಲ. ಗೂಗಲ್ ಮೊದಲೇ ಕೆಲಸ ಮಾಡುತ್ತಿಲ್ಲ.

ಲಡಾಖ್ ಅಮೃತಯಾತ್ರೆ-2022: ಭಾಗ-8, ಲೇಹ್‌ ಗೆ ಹೋಗೋಣ, ಬಾರೋ ಲೇ...!

ಹಾನ್‌ ಲೇ ಗ್ರಾಮದ ಆರಂಭದಲ್ಲಿ ಸಿಗುವ ಪುಟ್ಟ ಹೋಟೆಲೊಂದರಲ್ಲಿ ವಿಚಾರಿಸಿದರೆ ಅವರಿಗೂ ಆ ಸ್ಥಳವನ್ನು ಗುರುತಿಸಿ ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ. ಕತ್ತಲು (Night) ಕವಿದಿತ್ತು. ಚಳಿ ಏರತೊಡಗಿತ್ತು. ವಿಧಿಯಿಲ್ಲದೆ ಸೇನಾ ಶಿಬಿರಗಳಲ್ಲಿ ವಿಚಾರಿಸಿ ಗಂಟೆಗಟ್ಟಲೆ ಅಲೆದಾಡಿದೆವು. ಕಡೆಕಡೆಗೆ ಯಾವ ದಿಕ್ಕಲ್ಲಿ ಅಲೆಯುತ್ತಿದ್ದೆವೆಂದೇ ತಿಳಿಯಲಿಲ್ಲ. ಅದೃಷ್ಟವಶಾತ್, ಬೌದ್ಧ ಲಾಮಾಗಳು ನಡೆಸುತ್ತಿದ್ದ ಶಾಲೆಯೊಂದರಲ್ಲಿ ಸರಿಯಾದ ಮಾರ್ಗದರ್ಶನ ದೊರಕಿತು. ಕಡೆಗೂ ವಾಸ್ತವ್ಯದ ಸ್ಥಳ ತಲುಪಿದಾಗ ಗಂಟೆ 9 ದಾಟಿತ್ತು.

ಕತ್ತೆತ್ತಿ ನೋಡಿದರೆ ಗ್ರಹ, ನಕ್ಷತ್ರಪುಂಜ, ಉಲ್ಕಾಪಾತ
ಅಲ್ಲಿ ನಮಗೆ ಸೊಗಸಾದ ಊಟ ತಯಾರಾಗಿತ್ತು. ರೊಟ್ಟಿ, ಅನ್ನ, ದಾಲ್ ಸೇವಿಸಿ ಮತ್ತೊಂದು ಅಪರೂಪದ ಅನುಭವಕ್ಕೆ ಸಜ್ಜಾದೆವು. ಸುಮಾರು 14500 ಅಡಿ ಎತ್ತರದ ಹಾನ್‌ಲೇ ಗ್ರಾಮದಿಂದ 10 ಕಿ.ಮೀ. ದೂರದಲ್ಲಿರುವ ಎತ್ತರದ ಮಟ್ಟಸ ಪ್ರದೇಶದಲ್ಲಿ ಭಾರತೀಯ ಖಗೋಳ ವೀಕ್ಷಣಾಲಯವಿದೆ. ವಿಶ್ವದಲ್ಲೇ ಅತಿ ಎತ್ತರದ ಖಗೋಳ ವೀಕ್ಷಣಾಲಯಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಇದರದು. ಇದನ್ನು ನಿರ್ವಹಿಸುವುದು ಅಲ್ಲಿಂದ 3200 ಕಿ.ಮೀ. ದೂರದ ಬೆಂಗಳೂರಿನ ಹೊರವಲಯದ ಹೊಸಕೋಟೆಯಲ್ಲಿರುವ ಭಾರತೀಯ ಖಭೌತಶಾಸ್ತ್ರ ಸಂಸ್ಥೆಗೆ ಸೇರಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಹಾಗೂ ಶಿಕ್ಷಣ ಕೇಂದ್ರದಿಂದ ಎಂಬುದು ವಿಶೇಷ. ಅದರಲ್ಲೂ ಉಪಗ್ರಹ ಸಂಪರ್ಕದ ಮೂಲಕ ಬೆಂಗಳೂರಿನಿಂದಲೇ ಹಾನ್‌ ಲೇಯಲ್ಲಿರುವ ದೂರದರ್ಶಕವನ್ನು ನಿಯಂತ್ರಿಸುವುದು ಇನ್ನೊಂದು ವಿಶೇಷ. ಇತರೆ ಬೆಳಕಿನ ಅಡಚಣೆ ಕಡಿಮೆ ಇರುವ ಹಾಗೂ ಶುಭ್ರಾಕಾಶ ಹೊಂದಿರುವ ಕಾರಣ ಖಗೋಳ ವೀಕ್ಷಣೆಗೆ ಇದು ಪ್ರಶಸ್ತ ಜಾಗವಂತೆ.

ಅನೇಕ ರೀತಿಯ ಅತ್ಯಾಧುನಿಕ ದೂರದರ್ಶಕಗಳ ಮೂಲಕ ಖಗೋಳಾಧ್ಯಯನ ನಡೆಯುವ ಈ ವೀಕ್ಷಣಾಲಯಕ್ಕೆ ಭೇಟಿ ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರದ ಕಾರಣ ನಾವು ಅಲ್ಲಿಗೆ ಹೋಗಲಾಗಲಿಲ್ಲ. ಆದರೆ, ಹಾನ್‌ ಲೇ ಗ್ರಾಮವೇ ಆಕಾಶ ವೀಕ್ಷಣೆಗೆ ಪ್ರಶಸ್ತ ಪ್ರದೇಶವಾದ್ದರಿಂದ ನಾವು ತಂಗಿದ್ದ ಸ್ಥಳದಿಂದಲೇ ಕಾರ್ಗತ್ತಲ ಆಗಸದ ಚೆಲುವನ್ನು ಆಸ್ವಾದಿಸಿದೆವು. ಗ್ರಹಗಳು, ನಕ್ಷತ್ರಪುಂಜಗಳು, ಉಲ್ಕಾಪಾತಗಳನ್ನು ನೋಡಿ ದಿಂಬಿಗೆ ತಲೆಯಿಟ್ಟಾಗ ಮಧ್ಯರಾತ್ರಿ ಕಳೆದಿತ್ತು.

ಮುಂದಿನ ಭಾಗದಲ್ಲಿ: ಜಗತ್ತಿನ ಅತಿ ಎತ್ತರದ ವಾಹನ ಸಂಚರಿಸಬಲ್ಲ ರಸ್ತೆ ಎಂಬ ಖ್ಯಾತಿ ಅದಕ್ಕೇಕೆ? ಎವರೆಸ್ಟ್ ಬೇಸ್‌ ಕ್ಯಾಂಪ್‌ಗಿಂತಲೂ ಎತ್ತರವಿರುವ ಉಮ್ಲಿಂಗ್ ಲಾದಲ್ಲಿ ಉಸಿರು ಬಿಗಿಯುವುದೇಕೆ? ಆ ನಿರ್ಮಾನುಷ ಪ್ರದೇಶದಲ್ಲಿ ಕಳೆದು ಹೋದರೆ ಏನು ಗತಿ? ಅಲ್ಲಿಂದ ಅಷ್ಟು ಹತ್ತಿರದ ಚೀನಾ ಗಡಿಗೆ ಅದೇಕೆ ಹೋಗಲಿಲ್ಲ? 3000 ಅಡಿ ಪ್ರಪಾತಕ್ಕೆ ಬೀಳುವ ಅಪಾಯದಿಂದ ಪಾರಾದದ್ದು ಯಾರು?

click me!