ಕೊರೊನಾ ನಂತ್ರ ಪ್ರವಾಸಿ ಸ್ಥಳಗಳಿಗೆ ಜನರು ಹರಿದು ಬರ್ತಿದ್ದಾರೆ. ಈ ಮಧ್ಯೆ ಭಾರತ – ಪಾಕಿಸ್ತಾನ ಗಡಿ ಕೂಡ ಶಾಂತವಾಗಿದೆ. ಹಾಗಾಗಿ ಕಾಶ್ಮೀರದಲ್ಲಿ ಪ್ರವಾಸಿಗರು ಗಿಜಿಗುಡ್ತಿದ್ದಾರೆ. ಇದ್ರ ಲಾಭ ಪಡೆಯಲು ಅಲ್ಲಿನ ಜನರು ಹೊಸ ಪ್ಲಾನ್ ಮಾಡಿದ್ದಾರೆ. ಇದಕ್ಕೆ ಭಾರತೀಯ ಸೇನೆ ಕೂಡ ಸಹಾಯ ಮಾಡ್ತಿದೆ.
ಜಮ್ಮು (Jammu) – ಕಾಶ್ಮೀರ (Kashmir) ಪ್ರವಾಸಿಗರ ಸ್ವರ್ಗ (Heaven). ಜಮ್ಮು ಮತ್ತು ಕಾಶ್ಮೀರದ ಸೌಂದರ್ಯ (Beauty) ವನ್ನು ಕಣ್ತುಂಬಿಕೊಳ್ಳುವ ತವಕ ನಿಮಗಿದ್ದರೆ ಖುಷಿ ಸುದ್ದಿಯೊಂದಿದೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸೇನೆಯು ನಿಯಂತ್ರಣ ರೇಖೆಯುದ್ದಕ್ಕೂ ಹೆಚ್ಚಿನ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಿದ್ದು, ಉಭಯ ದೇಶಗಳ ಮಧ್ಯೆ ಶಾಂತಿಯಿದೆ. ಈ ಕಾರಣಕ್ಕೆ ಕಾಶ್ಮೀರ ಕಣಿವೆಯ ಗಡಿಯಲ್ಲಿ ಭಾರತೀಯ ಸೇನೆ, ಹೆಚ್ಚಿನ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಕಪ್ವಾರದ ಕೆರಾನ್ ವಲಯ ಅಭಿವೃದ್ಧಿ ಕಾಣ್ತಿರುವ ಪ್ರದೇಶಗಳಲ್ಲಿ ಒಂದು. ದಶಕಗಳ ಕಾಲ ಫಿರಂಗಿಗಳ ನೆರಳಿನಲ್ಲಿದ್ದ ನಂತರ, ನಿಯಂತ್ರಣ ರೇಖೆಯ ಬಳಿ ಇರುವ ಈ ಸುಂದರ ಸ್ಥಳವು ನಿಧಾನವಾಗಿ ಪ್ರವಾಸಿ ತಾಣವಾಗಿ ಬದಲಾಗುತ್ತಿದೆ. ಪ್ರವಾಸಿಗರ ಆಸಕ್ತಿ ಮತ್ತು ಆಗಮನವನ್ನು ಸೆಳೆಯಲು, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯು ಪ್ರತಿ ವರ್ಷವೂ ಕೇರನ್ ಉತ್ಸವವನ್ನು ಆಯೋಜಿಸುತ್ತಿದೆ. ಈಗ ಈ ಪ್ರದೇಶದಲ್ಲಿ ಮತ್ತಷ್ಟು ಬದಲಾವಣೆಯಾಗ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗ್ತಿದ್ದಂತೆ ಅಲ್ಲಿನ ಜನರು ತಮ್ಮ ಮನೆಗಳನ್ನು ಹೋಮ್-ಸ್ಟೇಗಳಾಗಿ ಪರಿವರ್ತಿಸುತ್ತಿದ್ದಾರೆ.
ಹೋಟೆಲ್ ಆಗಿ ಬದಲಾದ ಮನೆ : ಜಮ್ಮು – ಕಾಶ್ಮೀರದ ಜನರು ತಮ್ಮ ಮನೆಗಳನ್ನು ಹೋಟೆಲ್ ಗಳಂತೆ ಪರಿವರ್ತಿಸುತ್ತಿದ್ದಾರೆ. ಈ ಹೋಮ್ ಸ್ಟೇನಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿದೆ. ಹಾಗೆಯೇ ಪ್ರವಾಸಿಗರಿಗೆ ಮನೆಯಲ್ಲಿ ತಯಾರಿಸಿದ ಆಹಾರ ನೀಡಲಾಗ್ತಿದೆ. ಭಾರತೀಯ ಸೇನೆಯು ಪ್ರವಾಸಿಗರನ್ನು ಸೆಳೆಯಲು ಜಮ್ಮು- ಕಾಶ್ಮೀರದ ಜನರಿಗೆ ಸಹಾಯ ಮಾಡ್ತಿದೆ. ಗಡಿ ಪ್ರವಾಸೋದ್ಯಮ ಅಲ್ಲಿನ ಜನರಿಗೆ ಗಳಿಕೆಯ ದಾರಿಯಾಗ್ತಿದೆ. ಪ್ರವಾಸಿಗರ ಒಳಹರಿವಿನೊಂದಿಗೆ ಗಡಿ ಪ್ರವಾಸೋದ್ಯಮವು ಈಗ ಆಕರ್ಷಣೆಯಾಗಿ ಮಾರ್ಪಟ್ಟಿದೆ. ಹಳ್ಳಿಗಳು ಅಭಿವೃದ್ಧಿಯ ದೃಷ್ಟಿಯಿಂದಲೂ ಉತ್ತೇಜನವನ್ನು ಪಡೆಯುತ್ತಿವೆ. ಗಡಿ ಗ್ರಾಮದ ಜನರು, ಭಾರತೀಯ ಸೇನೆ ಮತ್ತು ಸ್ಥಳೀಯ ಆಡಳಿತದ ಬೆಂಬಲವನ್ನು ಶ್ಲಾಘಿಸಿದ್ದಾರೆ.
ಕಳೆದ ತಿಂಗಳು ಮೂರು ಅಂತಸ್ತಿನ ಮನೆಯನ್ನು ಹೋಮ್-ಸ್ಟೇ ಆಗಿ ಪರಿವರ್ತಿಸಿದ್ದೇನೆಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ. ಮುಂಬೈನಿಂದ ಬಂದ ಪ್ರವಾಸಿಗರ ಗುಂಪೊಂದು ತಮ್ಮ ಮನೆಯಲ್ಲೇ ಉಳಿದುಕೊಂಡಿತ್ತು ಎಂದವರು ಹೇಳಿದ್ದಾರೆ. ಝೀರೋ ಲೈನ್‌ನಲ್ಲಿರುವ ಅವರ ಹೋಟೆಲ್, ಕಿಶನ್‌ಗಂಗಾ ನದಿಯ ಮೇಲಿದ್ದು, ಪ್ರವಾಸಿಗರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಹಂಗಮ ನೋಟವನ್ನು ಸವಿಯಬಹುದು. ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಯಶಸ್ವಿಯಾಗಿ ಪ್ರಾರಂಭವಾದ ಮೊದಲ ಗಡಿ ಹೋಟೆಲ್ ಇದಾಗಿದೆ. ಪ್ರವಾಸಿಗರು ಕಿಶನ್ ಗಂಗಾ ನದಿಯ ಇನ್ನೊಂದು ದಡದಲ್ಲಿರುವ ಪಾಕಿಸ್ತಾನದ ನೀಲಂ ಗಾಂವ್ ಅನ್ನು ನೋಡಬಹುದು. ಇಲ್ಲಿಗೆ ಬರುವ ಪ್ರವಾಸಿಗರು ದೇಶದ ಕೊನೆಯ ತುದಿಯನ್ನು ನೋಡುವುದು ಮಾತ್ರವಲ್ಲದೆ ಸೇನೆಯ ಸೈನಿಕರನ್ನು ಹುರಿದುಂಬಿಸಬಹುದು. ಟ್ರೌಟ್ ಮೀನುಗಾರಿಕೆ, ರಾಫ್ಟಿಂಗ್, ಟ್ರೆಕ್ಕಿಂಗ್ ಮುಂತಾದ ಸಾಹಸ ಪ್ರವಾಸೋದ್ಯಮದೊಂದಿಗೆ ಪ್ರವಾಸಿಗರು ಇಲ್ಲಿ ಸಾಹಸವನ್ನು ಆನಂದಿಸಬಹುದು.
ಸಾಲು ಸಾಲು ರಜೆ, ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರ ಕಲರವ
ಕಳೆದ ವರ್ಷ ದ್ವಿಪಕ್ಷೀಯ ಕದನ ವಿರಾಮ ಒಪ್ಪಂದವನ್ನು ಗೌರವಿಸಲು, ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರವಾಸಿಗರಿಗೆ ಗಡಿ ಪ್ರದೇಶ ತೆರೆಯುವ ಕೆಲಸವನ್ನು ಉತ್ತರ ಕಾಶ್ಮೀರದ ಗುರೇಜ್‌ನಿಂದ ಪ್ರಾರಂಭಿಸಲಾಯಿತು. 2007 ರಲ್ಲಿ ಗುರೆಜ್ ಕಣಿವೆಯನ್ನು ಮೊದಲ ಬಾರಿಗೆ ಪ್ರವಾಸಿಗರಿಗೆ ತೆರೆಯಲಾಯ್ತು. ಸುಮಾರು 5,000 ಪ್ರವಾಸಿಗರು ಅಲ್ಲಿಗೆ ಬಂದಿದ್ದಾರೆ. ಆದರೆ ಇದಾದ ನಂತರ ಮತ್ತೆ ಗಡಿಯಲ್ಲಿ ಶೆಲ್ ದಾಳಿ ಆರಂಭವಾಯಿತು. ಇದಾದ ನಂತರ ಮತ್ತೊಮ್ಮೆ ಗಡಿ ಪ್ರದೇಶವನ್ನು ಬಂದ್ ಮಾಡಲಾಗಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವೆ ನಿಂತ ಕದನ ವಿರಾಮದಿಂದಾಗಿ ಗಡಿ ಪ್ರವಾಸೋದ್ಯಮ ಮತ್ತೊಮ್ಮೆ ಪ್ರಾರಂಭವಾಯಿತು.
ದಾಂಡೇಲಿ-ಜೊಯಿಡಾದಲ್ಲಿ ಅನಧಿಕೃತ ರ‍್ಯಾಫ್ಟಿಂಗ್ ಬ್ಯಾನ್
ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದಂತೆ ಕಳೆದ ವರ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡ್ತಿದ್ದಾರೆ. ಇದ್ರಿಂದಾಗಿ ಕಾಶ್ಮೀರದ ಹೊಸ ಹೊಸ ಪ್ರದೇಶಗಳು ಪ್ರವಾಸಿಗರಿಗೆ ತೆರೆದುಕೊಳ್ತಿವೆ. ಗಡಿ ಜಿಲ್ಲೆಗಳಾದ ಬಂಡಿಪೋರಾ, ಕುಪ್ವಾರ ಮತ್ತು ಬಾರಾಮುಲ್ಲಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.