ಪ್ರವಾಸ ಹೋಗದಿದ್ದರೇನಂತೆ ಮನೆಯಲ್ಲಿದ್ದೇ ಜಗತ್ತು ಸುತ್ತಿ ಬನ್ನಿ!

By Kannadaprabha NewsFirst Published Mar 29, 2020, 9:32 AM IST
Highlights

ಕೊರೋನಾದ ಅವಕೃಪೆಯಿಂದಾಗಿ ಈ ಬಾರಿಯ ಬೇಸಿಗೆ ರಜಾದ ಪ್ರವಾಸವನ್ನು ಕಳೆದುಕೊಂಡ ಬೇಸರ ಎಲ್ಲರಲ್ಲಿಯೂ ಎದ್ದು ಕಾಣುತ್ತಿದೆ. ಮಕ್ಕಳಂತೂ ಪ್ರವಾಸದಿಂದ ಪಡೆಯುತ್ತಿದ್ದ ಹಲವು ರೀತಿಯ ವಿನಾಯಿತಿಗಳು ದೊರೆಯದೆ, ನಿರಾಸೆಗೆ ಒಳಗಾಗಿದ್ದಾರೆ. ಪ್ರವಾಸಕ್ಕೆ ಹೋಗಲು ಸಾಧ್ಯವಿಲ್ಲದಿರಬಹುದು. ಆದರೆ ಪುಸ್ತಕ ಓದಲು ಸಾಧ್ಯವಿದೆಯಷ್ಟೆ! ಕನ್ನಡ ಗಾದೆಯೊಂದು ಹೇಳುತ್ತಲ್ಲ ‘ಕೋಶ ಓದು, ದೇಶ ಸುತ್ತು’ ಈ ಗಾದೆಯ ‘ಕೋಶ’ ಪ್ರವಾಸ ಕಥನವೂ ಆಗಿರಬಹುದಲ್ಲ? ಅಥವಾ ಸದ್ಯದ ಪರಿಸ್ಥಿತಿಯಲ್ಲಿ ‘ಕೋಶ ಓದುವ ಮೂಲಕ ದೇಶ ಸುತ್ತು’ ಎಂದೇ ನಾವು ಅರ್ಥೈಸಿಕೊಳ್ಳಬಹುದು.

- ಡಾ ಕೆ.ಎಸ್‌. ಪವಿತ್ರ

ಪ್ರವಾಸ ಕಥನಗಳಿಗೆ ಕನ್ನಡ -ಇಂಗ್ಲಿಷ್‌ ಭಾಷೆಗಳಲ್ಲೇನೂ ಕೊರತೆಯಿಲ್ಲ. ಹಲವು ಪುಸ್ತಕಗಳು ಇಂದು ಡಿಜಿಟಲ್‌ ಅವತರಣಿಕೆಯಲ್ಲಿಯೂ ಲಭ್ಯವಿವೆ. ಕುತೂಹಲಕ್ಕೆಂದು ಒಂದಿಷ್ಟುಪ್ರವಾಸ ಕಥನಗಳನ್ನು ಓದುತ್ತಾ ಸಾಗಿದಾಗ ನನ್ನೆದುರು ಒಂದು ಬೇರೆಯದೇ ಆದ ಜಗತ್ತು ತೆರೆದುಕೊಂಡಿದ್ದು ಸತ್ಯ. ರೋವಾಲ್ಡ್‌ ಡಾಹ್‌್ಲನ ಮಟಿಲ್ಡಾ ಎಂಬ ಬಾಲಕಿ ಹೇಳಿದಂತೆ ‘ಆ ಪುಸ್ತಕಗಳು ನನ್ನನ್ನು ಹೊಸ ಲೋಕಕ್ಕೆ ಕರೆದೊಯ್ದವು. ಉತ್ಸಾಹದ-ಸಂಭ್ರಮದ ಜೀವನ ನಡೆಸುತ್ತಿರುವ ಹಲವು ಅದ್ಭುತ ಜನರನ್ನು ಪರಿಚಯಿಸಿದವು. ಒಂದು ದಿನ ಜೋಸೆಫ್‌ ಕೊನ್ರಾಡ್‌ನ ಜೊತೆಗೆ ತೇಲುವ ಹಡಗಿನಲ್ಲಿ, ಇನ್ನೊಂದು ದಿನ ಅರ್ನೆಸ್ಟ್‌ ಹೆಮಿಂಗ್‌ ವೇ ಜೊತೆಯಲ್ಲಿ ಆಫ್ರಿಕಾಕ್ಕೆ, ಮತ್ತೊಮ್ಮೆ ರುಡ್‌ಯಾರ್ಡ್‌ ಕಿಪ್ಲಿಂಗ್‌ ಜೊತೆ ಭಾರತಕ್ಕೆ! ಹೀಗೆ ಇಡೀ ಜಗತ್ತನ್ನು ನನ್ನ ಸಣ್ಣ ಕೊಠಡಿಯಲ್ಲಿ ಕುಳಿತುಕೊಂಡು ನಾನು ಸುತ್ತುತ್ತಿದ್ದೆ’. ಅದೂ ಪೈಸಾ ಖರ್ಚಿಲ್ಲದೆ ಎಂಬುದು ವಿಶೇಷ!

ಬೇಸಿಗೆಯಲ್ಲಿ ವಿಸಿಟ್ ಮಾಡಬಹುದಾದ ಬೆಸ್ಟ್ ಕೂಲ್‌ ಕೂಲ್‌ ತಾಣಗಳು

ಪ್ರವಾಸ ಕಥನಗಳಿಗೇ ಒಂದು ವಿಶಿಷ್ಟಚರಿತ್ರೆಯಿದೆ. ‘ಪ್ರವಾಸ ಕಥನ’ ಎಂದಾಕ್ಷಣ ಮೊದಲು ನೆನಪಾಗುವುದು ನಾವು ಪ್ರಾಥಮಿಕ ತರಗತಿಗಳಲ್ಲಿ ಓದುವಾಗ ಬರುತ್ತಿದ್ದ ‘ಇಂಡಿಕಾ ಬರೆದವರು ಯಾರು?’ ಎಂಬ ಪ್ರಶ್ನೆ. ಆಗ ಬಾಯಿ ಪಾಠ ಮಾಡಿ ‘ಮೆಗಾಸ್ತನೀಸ್‌’ ಎಂದು ಬರೆಯುವುದು ರೂಢಿಯಾಗಿತ್ತೇ ಹೊರತು, ಅದೂ ಒಂದು ಪ್ರವಾಸ ಕಥನ ಎಂಬುದರ ಅರಿವಿರಲಿಲ್ಲ. ರಾಜರ ಕಾಲದಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಿವಿಧ ಕಾರಣಗಳಿಗೆ-ಬೇಹುಗಾರಿಕೆ ನಡೆಸಲು, ಸ್ಥಿತಿಗತಿಗಳನ್ನು ತಡೆಯಲು, ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಲು ಪ್ರವಾಸಿಗರನ್ನು ಕಳಿಸುತ್ತಿದ್ದರು. ನಾವು ಚರಿತ್ರೆಯ ತರಗತಿಗಳಲ್ಲಿ ಓದಿದ ಹ್ಯೂಯೆನ್‌ತ್ಸಾಂಗ್‌, ಮೆಗಾಸ್ತನೀಸ್‌, ಫಾಹಿಯಾನ್‌ ಮೊದಲಾದವರು ಇಂತಹ ಪ್ರವಾಸಿಗರೇ. ಹೀಗೆ ಬಂದ ಪ್ರವಾಸಿಗರು ‘ಪ್ರವಾಸ ಕಥನ’ ಗಳನ್ನೂ ಬರೆದರು. ಮೆಗಾಸ್ತನೀಸ್‌ ಅಂತೂ ಭಾರತೀಯರ ದೈಹಿಕ ಚಹರೆಯಿಂದ ಆರಂಭಿಸಿ, ಭಾರತದ ನದಿಗಳು, ನಗರಗಳು, ರಾಜರು, ಧರ್ಮ ಎಲ್ಲದರ ಬಗೆಗೂ ದಾಖಲಿಸಿದ. ಫಾಹಿಯಾನ್‌ ಕಾಲ್ನಡಿಗೆಯಲ್ಲಿ ಚೀನಾದಿಂದ ಭಾರತಕ್ಕೆ ಬಂದವನು. ಬಂದಿದ್ದು ಬೌದ್ಧ ಧರ್ಮದ ಅಧ್ಯಯನಕ್ಕೆ. ಆದರೆ ತನ್ನ ಪ್ರವಾಸದ ಅನುಭವಗಳನ್ನು ಆತ ದಾಖಲಿಸಿದ. ಹ್ಯೂಯೆನ್‌ತ್ಸಾಂಗ್‌ ಅಂತೂ 17 ವರ್ಷಗಳ ತನ್ನ, ಹಲವು ಭಾರತ ಭೇಟಿಗಳ ಬಗೆಗೆ ಬರೆದಿಟ್ಟ. ಪರ್ಷಿಯಾದಿಂದ ಬಂದ ಆಲ್‌ಬೆರೂನಿ ಭಾರತೀಯರನ್ನು ಗಮನಿಸಿ ‘ಇವರ ಉದ್ಧಟತನ ಎಷ್ಟೆಂದರೆ ಖೊರಾಸಾನ್‌ ಅಥವಾ ಪರ್ಷಿಯಾದ ಯಾವುದೇ ವಿಜ್ಞಾನ/ಕಲೆ/ವಿಜ್ಞಾನಿ/ಪಂಡಿತನ ಬಗೆಗೆ ಹೇಳಿದರೆ, ಇವರು ನನ್ನನ್ನು ‘ಸುಳ್ಳ’ ನೆಂದೇ ಕರೆಯುತ್ತಾರೆ. ಇವರು ಪ್ರವಾಸ ಮಾಡಿ, ಇತರ ದೇಶಗಳಿಗೆ ಭೇಟಿಯಿತ್ತರೆ ತಮ್ಮ ಧೋರಣೆ ಬದಲಿಸುತ್ತಾರೆ. ಈ ತಲೆಮಾರಿನಷ್ಟು, ಹಿಂದಿನ ತಲೆಮಾರಿನವರು ಸಂಕುಚಿತ ಮನೋಭಾವದವರಾಗಿರಲಿಲ್ಲ!’’ ಎಂದು ಬರೆದುಬಿಟ್ಟ!

ಆಲ್‌ಬೆರೂನಿ ಭಾರತಕ್ಕೆ ಬಂದಿದ್ದಾಗ ಪರಿಸ್ಥಿತಿ ಹಾಗಿತ್ತೋ ಏನೋ, ಆದರೆ ಈಗಂತೂ ಜಗತ್ತು ಚಿಕ್ಕದಾಗಿ ಬಿಟ್ಟಿದೆ. ಭಾರತೀಯರು ಚೀನಿಯರಷ್ಟಲ್ಲದಿದ್ದರೂ, ಹೆಚ್ಚಾಗಿಯೇ ಎಲ್ಲೆಡೆ ಕಾಣುತ್ತಿದ್ದಾರೆ. ಲಂಡನ್‌ನಲ್ಲಿ ಅತ್ಯಂತ ಹೆಚ್ಚು ಕೇಳಿ ಬರುವ ಅಡ್ಡ ಹೆಸರು ‘ಪಟೇಲ್‌’ ಎನ್ನುವಷ್ಟರ ಮಟ್ಟಿಗೆ. ಹಾಗೆಯೇ ಭಾರತೀಯರು ಇಂದು ‘ದೇಶ ಸುತ್ತು’ವುದರಲ್ಲಿಯೂ ‘ಕೋಶ ಓದು’ವಷ್ಟೇ ಮುಂದೂ ಆಗಿಬಿಟ್ಟಿದ್ದಾರೆ. ಒಟ್ಟಿನಲ್ಲಿ ನಾವು ಆಲ್‌ ಬೆರೂನಿಯ ಸಲಹೆಯನ್ನು ಚೆನ್ನಾಗಿಯೇ ಪಾಲಿಸಿದ್ದೇವೆ!

ಈ ಚಾರಿತ್ರಿಕ ಪ್ರವಾಸ ಕಥನಗಳ ನಂತರ, ಬಾಲ್ಯದಲ್ಲಿ ನನ್ನ ಗಮನ ಸೆಳೆದದ್ದು ಜೊನಾಥಾನ್‌ ಸ್ವಿಫ್ಟ್‌ ಎಂಬ ಐರಿಷ್‌ ಲೇಖಕನಿಂದ ಬರೆಯಲ್ಪಟ್ಟ‘ಗಲಿವರನ ಸಾಹಸಗಳು’. ಚಂದಮಾಮದಲ್ಲಿ ಈ ಪ್ರವಾಸ ಕಥನ ಬರೀ ವರದಿಯಲ್ಲ. ನಿಜ ವಿವರಗಳು-ಕಲ್ಪನೆಯೊಂದಿಗೆ ಹೆಣೆದುಕೊಂಡ, ಆದರೆ ಪ್ರವಾಸವನ್ನೇ ಕೇಂದ್ರವಾಗಿಟ್ಟುಕೊಂಡ ಕಥೆ. ಗಲೀವರ ಭೇಟಿ ನೀಡುವ ಪ್ರತಿ ದೇಶವೂ ವಿಭಿನ್ನ ಸರಳ /ಸಂಕೀರ್ಣ/ವೈಜ್ಞಾನಿಕ /ಪ್ರಾಕೃತಿಕ ಪರಿಸರಗಳಿಂದ ವೈವಿಧ್ಯಮಯ ಅನುಭವ ನೀಡುತ್ತವೆ. ಇದನ್ನು ಹೋಲುವಂಥದ್ದು ‘ಸಿಂದಾಬಾದ್‌ ನಾವಿಕನ ಕಥೆ’. ಪರ್ಷಿಯಾದ ನಾವಿಕ ಸಿಂದಾಬಾದ್‌ನ ಏಳು ಪ್ರವಾಸಗಳು ಒಂದೊಂದಾಗಿ ಕಥೆಯ ಮೂಲಕ ತೆರೆಯುತ್ತಾ ಸಾಗುತ್ತವೆ.

ಯಾವುದೇ ಪ್ರವಾಸ ಕಥನ ಮೂರು ಮುಖ್ಯ ಸಾಧ್ಯತೆಗಳನ್ನು ಹೊಂದಿರುತ್ತದೆ. ಪುರವಣಿಗಳಲ್ಲಿ ಕಡ್ಡಾಯವಾಗಿ ಪ್ರವಾಸ ಕಥನವನ್ನೋ/ ಪ್ರವಾಸಕ್ಕೆ ಮೀಸಲಾದ ಪುರವಣಿಯನ್ನೋ ಏಕೆ ಲೇಖಕರು ಬರೆಯುತ್ತಾರೆ, ಪತ್ರಿಕೆಯವರು ಪ್ರಕಟಿಸುತ್ತಾರೆ ಮತ್ತು ಓದುಗರು ಅದನ್ನು ಓದುತ್ತಾರೆ ಎಂಬುದು ಕುತೂಹಲ ಮೂಡಿಸುವ ಪ್ರಶ್ನೆ. ಪ್ರವಾಸ ಕಥನಗಳನ್ನು ಎಲ್ಲರೂ ಬರೆಯಲು ಸಾಧ್ಯವಿಲ್ಲವಷ್ಟೆ. ಆಸಕ್ತಿಯಿಂದ ಹಲವು ವಿಷಯಗಳನ್ನು ಗಮನಿಸುವ ಗುಣ, ಮತ್ತಷ್ಟುಜನರೊಂದಿಗೆ ಅವನ್ನು ಹಂಚಿಕೊಳ್ಳುವ ಹಂಬಲ, ಸ್ವಾರಸ್ಯಕರವಾಗಿ ಬರೆಯುವ ಸಾಮರ್ಥ್ಯ ಇವು ಬರೆಹವನ್ನು ಹೊರತರುತ್ತದೆ. ಯಾರು ಈಗಾಗಲೇ ಅದೇ ಸ್ಥಳಗಳನ್ನು ನೋಡಿರುತ್ತಾರೆಯೋ, ಅವರಿಗೆ ಪ್ರವಾಸ ಕಥನಗಳ ಓದು ತಮ್ಮ ಅನುಭವವೇ ಮತ್ತೊಬ್ಬರಿಗೂ ಆಯಿತೆಂಬ ತಾದಾತ್ಮ್ಯದ ಭಾವವನ್ನೋ, ಅಥವಾ ಅದೇ ಸ್ಥಳದ ಹೊಸತೊಂದು ಅನುಭವದ ಚಿತ್ರಣವನ್ನೋ ಅಥವಾ ಮರಳಿ ಆ ಜಾಗದಲ್ಲಿರುವ ನೆನಪಿನ ಪಯಣವನ್ನೋ ನೀಡಬಹುದು. ಸ್ಥಳ ನೋಡದವರಿಗೆ ಕುತೂಹಲ ಮೂಡಿ ನೋಡಬೇಕೆಂಬ ತವಕ ತರಬಹುದು, ನೋಡಿದ ಅನುಭವವೂ ಸಾಧ್ಯವಾಗಬಹುದು. ಇವೆಲ್ಲವೂ ಕಾರಣಗಳಾಗಿ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರವಾಸ ಕಥನ ಸಾಹಿತ್ಯ ಎಂಬುದು ಗಮನಾರ್ಹ ಸ್ಥಾನವನ್ನು ಪಡೆದುಕೊಂಡಿದೆ ಎನ್ನಬಹುದು.

ಪ್ಲ್ಯಾಸ್ಟಿಕ್‌ಗೆ ಬದಲಿ ಪರಿಸರ ಸ್ನೇಹಿ ಬಿದಿರಿನ ಬಾಟಲ್ ತಂದ ಸಿಕ್ಕಿಂ

ರಾಷ್ಟ್ರಕವಿ ಡಾ ಜಿ.ಎಸ್‌. ಶಿವರುದ್ರಪ್ಪನವರು ಕವಿಯಾಗಿ, ಬರೆಹಗಾರರಾಗಿ ಎಷ್ಟುಪ್ರಸಿದ್ಧರೋ, ಅವರ ‘ಪ್ರವಾಸ ಚಕ್ರ’ ಎಂಬ ಪ್ರವಾಸ ಕಥನಗಳ ಸಂಪುಟವೂ ಅಷ್ಟೇ ಸೊಗಸಾಗಿ ಮೂಡಿ ಬಂದಿದೆ.

‘ಪ್ರವಾಸಗಳಿಂದ ನನಗೆ ಪರಿಚಯವಾದ ಅನುಭವ ಪ್ರಪಂಚ ಹಾಗೂ ನನ್ನ ವ್ಯಕ್ತಿತ್ವಕ್ಕೆ ಅದು ತಂದುಕೊಟ್ಟಜೀವನೋತ್ಸಾಹ ವಿಶೇಷ ರೀತಿಯದು. ನಾನು ಹೀಗೆ ಸುತ್ತುವಾಗಲೇ ಬಹಳ ಓದುವುದು. ಓದುವುದೆಂದರೆ ಪುಸ್ತಕದಿಂದ ಅಲ್ಲ, ಪ್ರಯಾಣ ಮಾಡುವಾಗ ತೆರೆದ ಕಿಟಕಿಯಾಚೆಗೆ ನಿಮಿಷಕ್ಕೊಮ್ಮೆ ಸರಿದು ಹೋಗುವ ದೃಶ್ಯ ಪರಂಪರೆಗಳು ನೀಡುವ ಸೊಗಸು, ಸುತ್ತಣ ಬದುಕು ತಂದುಕೊಡುವ ಜೀವಂತವಾದ ಅನುಭವ, ನನಗೆ ಯಾವ ಪುಸ್ತಕದ ಓದಿನಿಂದಲೂ ಬರಲಾರದು ಎಂದು ಅನ್ನಿಸಿದೆ. ಪ್ರಯಾಣ ಮಾಡುವಾಗ ಹೇಗೋ ಮಾಡಿ ಕಿಟಕಿಯ ಪಕ್ಕದ ಜಾಗವನ್ನು ಹಿಡಿಯುವಲ್ಲಿ ನಾನು ಮೊದಲಿಗ!’ ಎಂಬ ಮಾತುಗಳು ಪ್ರವಾಸ ಏಕೆ ಮಾಡಬೇಕೆಂಬುದನ್ನು ಸೂಚಿಸಿದರೆ, ಹಲವು ಒಳನೋಟಗಳಿಂದ ಅವರು ಬರೆದಿರುವ ಪ್ರವಾಸ ಕಥನಗಳು, ಪ್ರವಾಸ ಕಥನವನ್ನು ಹೇಗೆ ಬರೆಯಬೇಕೆಂಬುದಕ್ಕೆ ಮಾರ್ಗದರ್ಶಕವಾಗಿವೆ.

ಮನೆಯಲ್ಲಿಯೇ ‘ಲಾಕ್‌ಡೌನ್‌’ ಪರಿಸ್ಥಿತಿಯಲ್ಲಿರುವ ನಾವು ಇಂದು ಮನೆಯಲ್ಲಿದ್ದುಕೊಂಡೇ, ಪ್ರವಾಸಕಥನಗಳ ಮೂಲಕ ಇಡೀ ಜಗತ್ತು ಸುತ್ತಾಡಲು ಸಾಧ್ಯವಿದೆ. ವಾಟ್ಸ್‌ ಆ್ಯಪ್‌-ಟಿ.ವಿ.ಗಳ ಅದದೇ ಸುದ್ದಿಗಳನ್ನು ನೋಡುತ್ತಾ ಚಡಪಡಿಸುವ ಬದಲು, ಕಂಪ್ಯೂಟರ್‌ನಲ್ಲಿ ಒಂದಿಷ್ಟುಜಾಲಾಡಿ ಪ್ರವಾಸ ಕಥನಗಳನ್ನು ಡೌನ್ಲೋಡ್‌ ಮಾಡಿಕೊಂಡು ಓದಬಹುದು. ಅಥವಾ ಕಪಾಟಿನಲ್ಲಿ ಎಲ್ಲೋ ಇಟ್ಟಿರುವ, ಯಾರೋ ಕೊಟ್ಟಪ್ರವಾಸ ಕಥನವನ್ನು ಓದಬಹುದು. ಅಥವಾ ನಿಮ್ಮದೇ ಪ್ರವಾಸದ ಅನುಭವವನ್ನು ಬರೆಹಕ್ಕಿಳಿಸುವ ಪ್ರಯತ್ನ ಮಾಡಬಹುದು. ಹಿಂದಿನ ಪ್ರವಾಸಗಳ ಛಾಯಾಚಿತ್ರಗಳನ್ನು ಮೊಬೈಲ್‌ನಿಂದ ಡ್ರೈವ್‌ಗೆ ಹಾಕಿ ‘ದೃಶ್ಯಯಾನ’ ವಾಗಿಸಿ, ಮನೆಮಂದಿಯೆಲ್ಲಾ ಕುಳಿತು ನೋಡಿ ಆನಂದಿಸಬಹುದು. ಕೋಶ ಓದುವುದರಿಂದಲೇ ದೇಶ ಸುತ್ತಬಹುದು! ಬೇಸರ ಹೊಡೆದೋಡಿಸಿ, ಮುಂದಿನ ರಜೆಯ ಪ್ರವಾಸಕ್ಕೆ ತಯಾರಿ ನಡೆಸಬಹುದು!

click me!