ಪರ್ವತ ದಿನವೆಂದರೆ, ಪರ್ವತಗಳಿಗೆ ಮಾತ್ರ ಸೀಮಿತವಲ್ಲ. ಈಗಾಗಲೇ ಹೇಳಿದಂತೆ ನಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿ ಒಂದು ಪುಟ್ಟಗುಡ್ಡವಿದ್ದರೂ ಸರಿ, ಅದಕ್ಕೂ ಕೂಡಾ ಪರ್ವತದಷ್ಟೆಮಹತ್ವವಿದೆ. ಅಂತಾರಾಷ್ಟ್ರೀಯ ಪರ್ವತ ದಿನದ ನಿಮಿತ್ತ ಈ ಬರಹ
ಸುಮಂಗಲಾ.ಎಸ್.ಮುಮ್ಮಿಗಟ್ಟಿ
ಪರ್ವತಗಳು ಎಂದಾಕ್ಷಣ ಮನಸ್ಸಿನ ಪರದೆಯ ಮುಂದೆ ಬರುವುದು ಭಾರತದ ಕಿರೀಟದಂತೆ ಹೊಳೆಯುತ್ತಿರುವ ಹಿಮಾಲಯದ ಪರ್ವತ ಶ್ರೇಣಿಗಳು. ಇವು ಕೇವಲ ನೋಟಕ್ಕೆ ಚೆಂದ ಕಾಣುವ, ಟ್ರೆಕ್ಕಿಂಗ್‌ಗೆ, ಪ್ರವಾಸೋದ್ಯಮಕ್ಕೆ ನೆರವಾಗುವ ತಾಣಗಳಲ್ಲ. ನಿಸರ್ಗದಲ್ಲಿಅದಕ್ಕೂ ಮೀರಿದ ಪಾತ್ರ ಈ ಪರ್ವತಗಳಿಗಿದೆ. ಪರಿಸರ ವ್ಯವಸ್ಥೆಯಲ್ಲಿ,ಜೀವಿವಿಕಾಸದಲ್ಲಿ, ಹವಾಮಾನ, ಮಳೆಯ ಸುರಿಯುವಿಕೆಯಲ್ಲಿ ಪರ್ವತಗಳು ನಿರ್ವಹಿಸುವ ಪಾತ್ರ ಮಹತ್ವ ಪೂರ್ಣವಾಗಿವೆ.. ಈ ತಿಳಿವಳಿಕೆಯನ್ನು ಜನ ಸಾಮಾನ್ಯರಲ್ಲಿ ಮೂಡಿಸಲು ವಿಶ್ವಸಂಸ್ಥೆ 2001 ಡಿಸೆಂಬರ್ 11 ರಂದು ನಡೆದ ಸರ್ವದೇಶಗಳ ಸಭೆಯಲ್ಲಿ ಆ ದಿನವನ್ನು ಅಂತಾರಾಷ್ಟ್ರೀಯ ಪರ್ವತಗಳ ದಿನವನ್ನಾಗಿ ಆಚರಿಸಲು ತೀರ್ಮಾನಿಸಿತು. 2002 ನ್ನು ಪರ್ವತಗಳ ವರ್ಷ ಎಂದು ಘೋಷಿಸಲಾಯಿತು.
undefined
ಪರ್ವತಗಳು ಎಂದಾಕ್ಷಣ ಎತ್ತರದ ಗಿರಿ ಶಿಖರಗಳೇ ಆಗಬೇಕಿಲ್ಲ. ನಿಮ್ಮ ಮನೆಯ ಹಿಂದೆ ಅಥವಾ ಊರಿನಾಚೆ ಇರುವ ಸಣ್ಣ ಗುಡ್ಡವೂ ಕೂಡ ಅಷ್ಟೇ ಮಹತ್ವ ಪೂರ್ಣ.ಸಾಮಾನ್ಯವಾಗಿ ಸುತ್ತಲಿನ ಭೂ ಪ್ರದೇಶಕ್ಕಿಂತ ಹೆಚ್ಚು ಎತ್ತರವಿರುವ ಪ್ರದೇಶವನ್ನು ಬೆಟ್ಟ, ಗುಡ್ಡ, ಮಲೆ, ಎಂದೆಲ್ಲ ಕರೆದರೆ, ಸಮುದ್ರಮಟ್ಟಕ್ಕಿಂತ ಅತಿ ಹೆಚ್ಚು ಎತ್ತರವಿರುವ ಬೆಟ್ಟವನ್ನು ಪರ್ವತ ಎಂದು ಕರೆಯುತ್ತಾರೆ.
ಶುದ್ಧವಾಯ್ತು ಗಾಳಿ, 200 ಕಿ. ಮೀ ದೂರದವರೆಗೆ ಕಾಣಿಸ್ತಿದೆ ಹಿಮಾಚಲದ ಬ್ಯೂಟಿ!
ಬೆಟ್ಟಗುಡ್ಡಗಳು ಎಂದರೆ ನಿರ್ಜೀವ ಬಂಡೆಗಳಲ್ಲ. ಅವು ತಾವಿರುವ ಪರಿಸರದ ಗುಣ ಲಕ್ಷಣಗಳ, ಸೂಚಕಗಳು.ಇವು ನಮಗೆ ನೀರೊದಗಿಸುವ ನೀರಿನ ಮೂಲಗಳು, ಇಲ್ಲಿ ವಾತಾವರಣದ ಹವಾಮಾನವನ್ನು ನಿರ್ಧರಿಸುವ ಕಾಡುಗಳಿವೆ, ಅವುಗಳಲ್ಲಿ ವನ್ಯ ಜೀವಿಗಳಿವೆ,ಔಷಧೀ ಸಸ್ಯಗಳಿವೆ, ಹುಲ್ಲೂ ಸೇರಿದಂತೆ ಕಾಡಿನ ಉಪ ಉತ್ಪನ್ನಗಳಿವೆ. ಹೀಗೆ ಬೆಟ್ಟಗುಡ್ಡ, ಪರ್ವತಗಳು, ತಮ್ಮ ಸುತ್ತಲಿರುವ ಜೀವ ಜಗತ್ತಿನ ಪೋಷಕಗಳು. ಹಾಗೆಂದೇ ಈ ಬಾರಿಯ ‘ಅಂತಾರಾಷ್ಟ್ರೀಯ ಪರ್ವತ ದಿನ’ ದ ಧ್ಯೇಯ ವಾಕ್ಯ ‘ಪರ್ವತಗಳ ಜೈವಿಕವೈವಿಧ್ಯ’ .
ಜಗತ್ತಿನಅತಿಎತ್ತರದಪರ್ವತ ಎವರೆಸ್ಟ್ ಪರ್ವತ (8848 ಮೀಟರ್) ಹಿಮಾಲಯದಲ್ಲಿದೆ. ಹಾಗೆಯೇ ಅತಿ ಹೆಚ್ಚು ಎತ್ತರದ 10 ಪರ್ವತಗಳನ್ನು ಪಟ್ಟಿಮಾಡಿದರೆ ಎಲ್ಲವೂ ಹಿಮಾಲಯ ಪರ್ವತ ಶ್ರೇಣಿಗಳಲ್ಲಿವೆ. ಇನ್ನೂ ಮುಂದುವರಿದು ಜಗತ್ತಿನ ಅತಿ ಹೆಚ್ಚು ಎತ್ತರದ 50 ಪರ್ವತಗಳನ್ನು ಪಟ್ಟಿಮಾಡಿದರೆ, ಅವು ಕೂಡಾ ಹಿಮಾಲಯದಲ್ಲಿವೆ. ಇಷ್ಟಕ್ಕೆ ನಿಲ್ಲಲಿಲ್ಲ , ಜಗತ್ತಿನ ಅತಿ ಹೆಚ್ಚು ಎತ್ತರದ 100 ಪರ್ವತಗಳನ್ನು ಪಟ್ಟಿಮಾಡಿದರೂ ಸಹ ಅವೂ ಕೂಡಾ ಹಿಮಾಲಯದಲ್ಲಿವೆ! ಜಗತ್ತಿನ ಅತಿ ಹೆಚ್ಚು ಎತ್ತರದ ಸಾವಿರ ಪರ್ವತಗಳನ್ನು ಹುಡುಕಿದರೆ ಅವೂ ಕೂಡಾ ಹಿಮಾಲಯದಲ್ಲಿಯೇ ಇವೆ. ಇವು ಭಾರತ, ನೇಪಾಳ, ಟಿಬೆಟ್, ಮಯನ್ಮಾರ್,ಚೀನಾ, ಪಾಕಿಸ್ತಾನ, ಕಿರ್ಗಿಸ್ತಾನ ಮುಂತಾದ ದೇಶಗಳಲ್ಲಿ ವ್ಯಾಪಿಸಿವೆ. ಇವು ಈ ಪ್ರದೇಶಗಳ ಹಲವಾರು ಅಂಶಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.
ಹಾಗೆಂದು ಪರ್ವತ ದಿನವೆಂದರೆ, ಪರ್ವತಗಳಿಗೆ ಮಾತ್ರ ಸೀಮಿತವಲ್ಲ. ಈಗಾಗಲೇ ಹೇಳಿದಂತೆ ನಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿ ಒಂದು ಪುಟ್ಟಗುಡ್ಡವಿದ್ದರೂ ಸರಿ, ಅದಕ್ಕೂ ಕೂಡಾ ಪರ್ವತದಷ್ಟೆಮಹತ್ವವಿದೆ.
ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಬೆಟ್ಟಗುಡ್ಡಗಳು ನದಿಗಳ ಮೂಲಗಳು. ಅದ್ಭುತ ಜೈವಿಕ ಸಂಪತ್ತು ಅದರಲ್ಲೂ ವಿಶೇಷವಾಗಿ ಅಲ್ಲಿಗೆ ಮಾತ್ರ ಸೀಮಿತವಾದ ಜೀವಿಗಳನ್ನು ಹೊಂದಿವೆ. ಕರ್ನಾಟಕದ ಬ್ರಹ್ಮಗಿರಿ, ಕುಮಾರಪರ್ವತ,ಕುದುರೆಮುಖ,ಕೆಮ್ಮಣ್ಣುಗುಂಡಿ,ಕೊಡಚಾದ್ರಿ.ಇವೆಲ್ಲವೂ ಪಶ್ಚಿಮ ಘಟ್ಟದ ಬೆಟ್ಟಗಳೇ. ಎಲ್ಲವೂ ನಿಸರ್ಗದ ಆಭರಣಗಳಂತೆ ನೋಡಲು ಸುಂದರ ಮಾತ್ರವಲ್ಲ ಅದ್ಭುತವಾದ ಜೈವಿಕ ಸಂಪತ್ತನ್ನು ಹೊಂದಿರುವ ಶ್ರೀಮಂತ ತಾಣಗಳು. ಬಳ್ಳಾರಿ,ಹೊಸಪೇಟೆ, ಹಂಪೆ, ಚಿತ್ರದುರ್ಗ, ರಾಮನಗರ, ತುಮಕೂರು ಮುಂತಾದ ಕಡೆ ನಿರ್ಜೀವ ಬಂಡೆಗಳಂತೆ ಕಾಣುವ ಬೆಟ್ಟಗಳಲ್ಲೂ ಕೂಡಾ ಜೀವ ಸಂಪತ್ತು, ಖನಿಜ ಸಂಪತ್ತು ಹೇರಳವಾಗಿದ್ದು ಜೀವಿಗಳನ್ನು ಪೊರೆಯುತ್ತವೆ. ಬಯಲು ಸೀಮೆಯ ಊರುಗಳ ಅಂಚಿಗೆ ಸಹ ಒಂದು ದೇವರಗುಡ್ಡ, ಸೀತೆ ಬೆಟ್ಟ, ರಾಮನ ಬೆಟ್ಟ, ಸಿದ್ಧರ ಬೆಟ್ಟ, ಇಲ್ಲವೇ ಹುಲ್ಲುಗುಡ್ಡಗಳಿರುತ್ತವೆ. ಹಿಮಾಲಯ ಪರ್ವತ ಶ್ರೇಣಿಗಳಿಂದ ಹಿಡಿದು ನಮ್ಮೂರ ಸಣ್ಣ ಬೆಟ್ಟದವರೆಗೂ ಎಲ್ಲವೂ ಇಂದು ಅಪಾಯಕ್ಕೆ ಸಿಲುಕಿವೆ.
ಪರ್ವತಗಳು ಅಪಾಯವನ್ನು ಎದುರಿಸುತ್ತಿವೆ
ಮಳೆ, ಗಾಳಿ,ಬಿಸಿಲಿಗೆ ಮಿಸುಕದೆ ಗಟ್ಟಿಯಾಗಿ ನೆಲೆ ನಿಂತಿರುವಂತೆ ಕಾಣುವ ಈ ಪರ್ವತಗಳು, ಬೆಟ್ಟಗುಡ್ಡಗಳು ಅಪಾಯದಲ್ಲಿವೆ ಎಂದರೆ ನಂಬಲಸಾಧ್ಯ. ಆದರೆ ಮಾನವನ ಚಟುವಟಿಕೆಗಳಿಂದಾಗಿ ಅವಿಂದು ಅಪಾಯವನ್ನು ಎದುರಿಸುತ್ತಿವೆ. ಜಾಗತಿಕ ತಾಪಮಾನದ ಏರಿಕೆ ಮತ್ತು ಬದಲಾಗುತ್ತಿರುವ ಹವಾಮಾನದ ಬಿಸಿ ಇವುಗಳಿಗೂ ತಲುಪಿದೆ.
ಇದು ರಿಯಲ್ ಹನುಮಂತನಾ?: ಫೋಟೋ ತೆಗೆದವ ಇನ್ನಿಲ್ಲ!
ನಮ್ಮೆಲ್ಲರ ಅನುಭವಕ್ಕೆ ಬಂದಿರುವಂತೆ ಬೆಟ್ಟಗುಡ್ಡಗಳೆಂದರೆ ತಂಪಾದ, ಮನಸ್ಸಿಗೆ ಹಿತ ನೀಡುವ ಮೋಡಗಳು ಕೈಗೆಟಕುವಂತೆ ತೋರುವ ತಾಣಗಳು. ಅಂತಹ ಎತ್ತರದ ಪ್ರದೇಶದಲ್ಲಿಯೂ ಸದಾ ತಂಪಾದ ನೀರು ಜಿನುಗುವ ತಾಣಗಳಿರುತ್ತವೆ. ಮಳೆ ಮೋಡಗಳನ್ನು ತಡೆದು ಇವು ಮಳೆ ಸುರಿಸುತ್ತವೆ. ಹಲವಾರು ಎತ್ತರದ ಬೆಟ್ಟಗುಡ್ಡಗಳು ಅಲ್ಲಿರುವ ದೇವಾಲಯಗಳಿಂದ ಪವಿತ್ರ ಸ್ಥಾನಗಳೂ, ಯಾತ್ರಾ ಪ್ರದೇಶಗಳೂ ಆಗಿರುತ್ತವೆ. ಕೆಲವಂತೂ ಖನಿಜಗಳು ಮತ್ತು ಔಷಧಿ ಸಸ್ಯಗಳ ಸಿರಿದಾಣಗಳು.
ಈ ಪರ್ವತ ಮತ್ತು ಬೆಟ್ಟಗುಡ್ಡಗಳಿಗೆ ಬಂದಿರುವ ಮೊಟ್ಟಮೊದಲ ಅಪಾಯವೆಂದರೆ, ಅಲ್ಲಿಗೆ ಭೇಟಿ ಕೊಡುವ ಜನರಿಂದಾಗಿ ಅವು ಕೊಳಕು ಪ್ರದೇಶಗಳಾಗಿ ಮಾರ್ಪಾಟಾಗುತ್ತಿವೆ. ಪರ್ವತಾರೋಹಿಗಳು ಕೊಂಡೊಯ್ದ ಆಹಾರದ ಪೊಟ್ಟಣಗಳು, ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಔಷಧಿಯ ಕವರ್‌ಗಳು, ಕೊನೆಗೆ ಅವರು ಅಲ್ಲಿ ವಿಸರ್ಜಿಸುವ ತ್ಯಾಜ್ಯಗಳು ಎಲ್ಲವನ್ನೂ ಶುದ್ಧಗೊಳಿಸಲು ಅಲ್ಲಿ ಯಾರೂ ಇಲ್ಲ. ಹಿಮಾಲಯವೂ ಕೂಡಾ ಈ ಮಾಲಿನ್ಯದಿಂದ ಬಳಲುತ್ತಿದೆ. ನೈಸರ್ಗಿಕವಾಗಿ ಅದು ತನ್ನನ್ನು ತಾನು ಶುದ್ಧಗೊಳಿಸುವ ಮಟ್ಟವನ್ನು ಮೀರಿ ಮಾಲಿನ್ಯ ಅಲ್ಲಿ ಸಂಗ್ರಹವಾಗುತ್ತಿದೆ. ಇದರಿಂದ ಅಲ್ಲಿ ಯ ಪಕ್ಷಿ ಪ್ರಾಣಿಗಳಿಗೆ ಅಪಾಯ ಮಾತ್ರವಲ್ಲ ಅವು ನಶಿಸಿ ಹೋಗುತ್ತಿವೆ ಸಹ.
ಖನಿಜಗಳ ಮೂಲಗಳಾದ ಬೆಟ್ಟಗುಡ್ಡಗಳನ್ನು ಮನುಷ್ಯ ಕರಗಿಸುತ್ತಿದ್ದಾನೆ. ಇದರಿಂದ ಅಲ್ಲಿದ್ದ ಕಾಡು ಮತ್ತು ಅದರೊಂದಿಗೆ ಜೀವಿಗಳು ನಾಶವಾಗುತ್ತಿವೆ. ಕಾಡಿನ ನಾಶದೊಂದಿಗೆ ಅಲ್ಲಿಯ ನೀರೂ ಬತ್ತುತ್ತದೆ. ಪರಿಣಾಮವಾಗಿ ಆ ಆವಾಸವೇ ನಾಶವಾಗುತ್ತದೆ. ಕುದುರೆಮುಖದಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಿದ ಮೇಲೆ ಅಲ್ಲಿಯ ಮಳೆ ಕಾಡು ಮತ್ತೆ ಚೇತರಿಸಿಕೊಂಡಿದೆ. ಹಿಂದೊಮ್ಮೆ ಜನ ವಸತಿ ಇದ್ದ ಪ್ರದೇಶಗಳೆಲ್ಲ ಮತ್ತೆ ಸಸ್ಯ ಸಂಪತ್ತಿನಿಂದ ತುಂಬುತ್ತಿದೆ. ನದಿಯ ನೀರು ಶುದ್ಧವಾಗಿದೆ. ನಾವು ಮೊದಲು ಭೇಟಿ ಕೊಟ್ಟಕುದುರೆಮುಖಕ್ಕೂ, ಇಂದಿನ ಕುದುರೆಮುಖಕ್ಕೂ ವ್ಯತ್ಯಾಸ ಸ್ಪಸ್ಟವಾಗಿ ಕಂಡು ಬರುತ್ತದೆ. ಸುತ್ತಲಿನ ಶೋಲಾ ಕಾಡುಗಳು (ಶೋಲಾ ಕಾಡುಗಳೆಂದರೆ, ಎರಡು ಗುಡ್ಡಗಳ ಮೇಲೆ ಹುಲ್ಲು ಬೆಳದಿದ್ದರೆ ಅವುಗಳಿಂದ ಹರಿದು ಬರುವ ನೀರು ಕಣಿವೆಯಲ್ಲಿ ಸಂಗ್ರಹವಾಗಿ ಮಳೆಕಾಡುಗಳನ್ನು ಬೆಳೆಸುತ್ತದೆ. ಹಾಗಾಗಿ ಇಲ್ಲಿ ಶ್ರೀಮಂತವಾದ ಜೈವಿಕ ವೈವಿಧ್ಯ ಕಂಡು ಬರುತ್ತದೆ.) ಮತ್ತೆ ಚೇತರಿಸಿಕೊಂಡಿವೆ.
ದಶಕಗಳ ನಂತ್ರ ಜಲಂಧರ್ ನಿವಾಸಿಗಳಿಗೆ ಹಿಮಾಚಲ ಪರ್ವತ ಶ್ರೇಣಿ ದರ್ಶನ
ಹೆಚ್ಚುತ್ತರುವ ಜಾಗತಿಕ ತಾಪಮಾನ, ಪರ್ವತಗಳ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತಿದೆ. ಹಿಮ ಪರ್ವತಗಳ ಹಿಮ ಕರಗುತ್ತಿದೆ. ಕರಗಿದ ಹಿಮ ಕೊಳಗಳಾಗಿ, ಬಿಸಿನೀರು ಮತ್ತಷ್ಟುಹಿಮವನ್ನು ಕರಗಿಸುತ್ತಿದೆ. ಮೈದೆರೆದುಕೊಂಡ ಹಿಅದ ಅಡಿಯಲ್ಲಿರುವ ಕಲ್ಲು ಬಂಡೆಗಳು ಕಾಯ್ದು ಸಹ ಹಿಮ ಕರಗುತ್ತಿದೆ. ಹಿಮಾಲಯದ ನದಿ ಮೂಲಗಳ ಹಿಮಾನಿಗಳ ಕರಗುವ ಬಿಂದು ಹಿಂದಕ್ಕೆ ಸರಿಯುತ್ತಿದೆ. ಧೂಳು, ಕೃಷಿ ತ್ಯಾಜ್ಯಗಳ ಸುಡುವಿಕೆಯ ಹೊಗೆ ಎಲ್ಲವೂ ಸೇರಿಕೊಂಡು ಹಿಅಮಾಲದ ಹಿಮ ಪರ್ವತಗಳು ತಮ್ಮ ಶ್ವೇತತೆಯನ್ನು ಕಳೆದು ಕೊಳ್ಳುತ್ತಿವೆ. ಇದರಿಂದಲೂ ಕೂಡಾ ಹಿಮ ಕರಗುತ್ತದೆ. ಏಕೆಂದರೆ, ಶುಭ್ರವಾದ ಬಿಳಿಯ ಹಿಮ ಕನ್ನಡಿಯಂತೆ ಕೆಲಸ ಮಾಡಿ ತನ್ನ ಮೇಲೆ ಬಿದ್ದ ಸೂರ್ಯನ ಬಿಸಿಲಿನ ಶೇಕಡಾ 90ರಷ್ಟನ್ನು ಹಿಂದಿರುಗಿಸುತ್ತದೆ. ಆದರೆ ಅದು ತನ್ನ ಬಿಳುಪನ್ನು ಕಳೆದುಕೊಂಡಾಗ, ಅದನ್ನು ಹೀರಿಕೊಳ್ಳುತ್ತದೆ ಮತ್ತು ಅದರಿಂದ ಮತ್ತಷ್ಟುಮಂಜು ಕರಗುತ್ತದೆ. ಅಧ್ಯಯನಗಳ ಪ್ರಕಾರ ಜಾಗತಿಕ ತಾಪಮಾನದ ಏರಿಕೆ ಭೂ ಮಟ್ಟದ ಸರಾಸರಿಗಿಂತ ಪರ್ವತಗಳಲ್ಲಿ ಅಧಿಕವಾಗಿದೆ.
ಈ ಎಲ್ಲ ಅಂಶಗಳು ಒಟ್ಟಾಗಿ ಪರ್ವತಗಳು ಬೆಟ್ಟಗುಡ್ಡಗಳ ಜೈವಿಕ ವೈವಿಧ್ಯ ಕಡಿಮೆಯಾಗುತ್ತದೆ. ಇದರಿಂದ ಜೀವ ಸರಪಳಿಯ ಮೇಲೆ ಪರಿಣಾಮವಾಗುತ್ತದೆ. ಪರ್ವತಗಳು, ಬೆಟ್ಟಗುಡ್ಡಗಳ ಪಾದದಲ್ಲಿರುವ ಜನರ ಜೀವನ ದುಸ್ತರವಾಗುತ್ತಿದೆ. ಅವರ ದನಕರುಗಳಿಗೆ ಮೇವಿನ ಕೊರತೆ ಕಂಡು ಬರುತ್ತಿದೆ. ತೊಂದರೆ ಆಗುತ್ತಿರುವುದು ಅವರಿಗೆ ತಾನೇ ನಮಗೇನಾಗ ಬೇಕಾಗಿದೆ ಎಂದು ನಾವು ಸುಮ್ಮನೇ ಕೂಡುವಂತಿಲ್ಲ. ಕೊಡಗಿನ ಬ್ರಹ್ಮ ಗಿರಿಯಲ್ಲಿ ಹುಲಿಯಿಲ್ಲವೆಂದರೆ, ಬೆಂಗಳೂರಿನ ಜನರಿಗೆ ಕುಡಿಯುವ ನೀರು ದೊರಕುವುದಿಲ್ಲ. ಪಶ್ಚಿಮ ಘಟ್ಟಗಳ ಪರ್ವತಗಳು ನಮ್ಮ ರಾಜ್ಯದ ಹವಾಮಾನವನ್ನು ನಿಯಂತ್ರಿಸುತ್ತವೆ. ದಕ್ಷಿಣ ಭಾರತದ ಎಲ್ಲ ದೊಡ್ಡ ನದಿಗಳ ಉಗಮವಾಗುವುದು ಪಶ್ಚಿಮ ಘಟ್ಟಗಳಲ್ಲಿ. ಸುಮಾರು 90 ಕಿರುತೊರೆಗಳು ಇಲ್ಲಿಯೇ ಜನ್ಮ ತಳೆಯುತ್ತವೆ. ಇಲ್ಲಿರುವ ಜೀವ ಸಮೂಹ ಮತ್ತು ಬೆಟ್ಟಗಳ ನಡುವೆ ನೇರ ಸಂಬಂಧವಿದೆ. ಅವಿಲ್ಲವೆಂದರೆ ಬೆಟ್ಟಗುಡ್ಡಗಳಿಲ್ಲ. ಬೆಟ್ಟಗುಡ್ಡಗಳಿಲ್ಲವೆಂದರೆ ನಾವಿಲ್ಲ. ಪರಿಸರದ ಎಲ್ಲ ವಿದ್ಯಮಾನಗಳಿಗೆ ಬೇಲಿಗಳಿಲ್ಲ. ಎಲ್ಲೂ ಯಾರೋ ಮಾಡಿದ ಅನಾಹುತ, ಯಾವುದೋ ಜೀವಿಯ ಕಣ್ಮರೆ ನಮ್ಮ ಊಟದ ತಟ್ಟೆಯ ಮೇಲೆ ಪರಿಣಾಮ ಬೀರಬಹುದು. ನಮ್ಮ ಆಹಾರ ಧಾನ್ಯವೊಂದರ ಮೂಲತಳಿ ಯಾವುದೋ ಬೆಟ್ಟದ ಮೇಲಿರಬಹುದು. ನಾವು ಬಳಸುವ ತಳಿಯ ಧಾನ್ಯ ರೋಗ ಬಂದು ನಾಶವಾದರೆ, ಅದರ ವನ್ಯ ತಳಿ ನಮ್ಮಲ್ಲಿದ್ದರೆ ಮರು ಪಡೆಯಬಹುದು. ಇಲ್ಲವಾದಲ್ಲಿ ಅದು ಸಂಪೂರ್ಣವಾಗಿ ಭೂಮಿಯಿಂದಲೇ ಇಲ್ಲವಾಗಬಹುದು.
ಹೇಗೆ ಈ ಬೆಟ್ಟಗುಡ್ಡಗಳು ಮಾನವ ಜನಾಂಗವನ್ನು ಉಳಿಸಬಲ್ಲವೋ ಹಾಗೆಯೇ ಈ ನಮ್ಮ ಬೆಟ್ಟಗುಡ್ಡಗಳ ಅಳಿವು ಉಳಿವು ನಮ್ಮ ಕೈಯಲ್ಲಿದೆ. ಅದನ್ನು ನೆನಪು ಮಾಡಿಕೊಡಲೆಂದೇ ಬಂದಿದೆ. ಅಂತಾರಾಷ್ಟಿಯ ಪರ್ವತ ದಿನ ನಮ್ಮೂರ ಬೆಟ್ಟವನ್ನಾದರೂ ಉಳಿಸಲು ಕೈಜೋಡಿಸೋಣವೇ?